ಜಗದ ಜಗುಲಿಯ ದಾಹ
3:17 pm by shashi sampalli
ಭುವಿಯೊಡಲ ಒಳಗೆ
ಅನಾಮಿಕ ಕಾಳು
ಮೊಳೆಯುವ ಘಳಿಗೆ;
ಜೀವದ ಒಸಗೆಗೆ
ಜಗ ಹೊಸ ಜನ್ಮಕೆ ಹೊರಳುವ ಬಗೆ.
ಒರಟು ಕಾಳಿನ
ಮುರುಟು ಬಸಿರಲಿ
ಅರಳುವ ನವಿರ ಹಸಿರು;
ಬಾಣಂತಿ ನೆಲಕೆ
ಕಸ ಕಳೆದು ಕಸುವು.
ನಾಜೂಕು ಎಳೆ ಬೇರು
ಹೂ ಜೀಕುವ ಚಿಗುರು;
ಒಂದು ಕತ್ತಲೆಯತ್ತ,
ಮತ್ತೊಂದು ಬೆಳಕ ಬ್ರಹ್ಮಾಂಡದತ್ತ,…
ಜೀವ ಜಾಲದ ಜೋಕಾಲಿ ನಿರಂತರ ಲಾಲಿ.
ಕತ್ತಲೆಗಿಳಿದಷ್ಟೂ ಬೇರು
ಎದೆಗೆ ಪೂರಾ ಬಸಿಯುವುದು ಬೆಳಕು.
ಕಾಳ ಕಳಚಿದ ಸಸಿ
ಬೇರು-ಬೊಡ್ಡೆ ಬಲಿತ ಕಸುವು
ಚಿಗುರು, ಹೂ, ಹಣ್ಣು, ಬೀಜ, ಸಸಿ,…
ಜೀವ ಜಾತ್ರೆಗೆ ತಾಯಿ
ಒಲುಮೆ ಯಾತ್ರೆಗೆ ಆಯಿ.
ಜನ್ಮ-ಜನ್ಮದ ಮೋಹ
ಜಗದ ಜಗುಲಿಯ ದಾಹ.
ತುಂಬಾ ಇಷ್ಟವಾಯ್ತು… ಚೆನ್ನಾಗಿದೆ ಕವಿತೆ.
http://nagenagaaridotcom.wordpress.com