ಸಣಕಲು ಗಿಡದ
ಸವೆದ ಹಸಿರಿನ ಆಳದಿಂದ
ಹೂವೆಂಬ ಚೆಲುವು ಉಕ್ಕಿ ಬಂದರೆ
ಅದು ಸಖತ್ ಹಾಟ್ ಮಗಾ!
ಹೊಗೆ ಕುಡಿದು ಸುಸ್ತಾಗಿ
ಹೊಯ್ದಾಡಿ, ಹೊರಳಾಡಿ ನಿದ್ದೆಗೆಟ್ಟ
ನಗರದೆದೆಯ ಮೇಲೆ ಕುಡಿಬಿಸಲು ಕುಣಿದರೆ,…
ಸಖತ್ ಹಾಟ್ ಮಗಾ!
ಕಸದ ತೊಟ್ಟಿಯಲ್ಲಿ ಚೀರುವ
ಹಸುಗೂಸಿಗೆ ಪರಿತ್ಯಕ್ತೆ
ಹಾಲುಣಿಸಿ ಅಮ್ಮನಾದರೆ
ಆಗ ಸಖತ್ ಹಾಟ್ ಮಗಾ!
ಕಣ್ಣ ಹೊಳಪ ಸೆಳೆತ ಕಳೆದು
ಮೈಯ ಅಂದದ ಮಿಂಚು ಮರೆಯಾಗಿ
ಮಾಗಿದೆದೆಯಲ್ಲೂ ಮತ್ತೊಂದು ಜೀವವ ಕಂಡು
ಪ್ರೀತಿ ಉಕ್ಕಿದರೆ,… ಮಗಾ
ಅದು ಸಖತ್ ಹಾಟ್ !
Posted by shashi sampalli