ತಪ್ಪುಗಳ ಪಹರೆಯಲಿ….
8:33 am by shashi sampalli
ಇಡಿಯಾಗುವುದೊಂದು
ಮೆಲುನಡಿಗೆಯ ಸಾವು.
ನಾನಂದುಕೊಂಡ, ಕನಸಿದ
ಎಲ್ಲವೂ ತದ್ರೂಪದಂತೆ
ನಿಜವಾದರೆ,…..
ಬದುಕೊಂದು ಕೊನೆಯಿಲ್ಲದ
ಯಶಸ್ಸುಗಳ ಹಳಸಲು ಪಲ್ಲವಿ.
ತಪ್ಪು;
ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.
ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ
ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….
ಆದರೂ,
ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,
ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ
ಭ್ರಮೆಯ ಕೂಸು;
ತಪ್ಪಿಗೆ ನಾನೇ ಅಂಜುವ ಪರಿ.
ಕೊನೆಗೂ ತಪ್ಪು-
ನಾನಿರುವ ಪರಿಗೊಂದು ರುಜುವಾತು,
ನಾನಾಗುವ ಸ್ಥಿತಿಗೊಂದು ಕದಲಿಕೆ
ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.
ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ
ನಾನು ಇಂಚಿಂಚೇ ಬೆಳೆದೆ!
(ಇದು ಹ್ಯೂ ಪ್ರಾಥರ್ ಎಂಬ ಅಮೆರಿಕನ್ ಲೇಖಕನ ‘ನೋಟ್ಸ್ ಟು ಮೈಸೆಲ್ಫ್’ ಕೃತಿಯಲ್ಲಿನ ಒಂದು ‘ನೋಟ್’ನ ಭಾವಾನುವಾದ ಕಾವ್ಯ ರೂಪ 2000ನೇ ಸಾಲಿನಲ್ಲಿ ಅನುವಾದಿಸಿದ್ದು)
ಸರ್,
ಚೆನ್ನಾಗಿದೆ ಕವನ
“ಕನಸಿದ
ಎಲ್ಲವೂ ತದ್ರೂಪದಂತೆ
ನಿಜವಾದರೆ,…..
ಬದುಕೊಂದು ಕೊನೆಯಿಲ್ಲದ
ಯಶಸ್ಸುಗಳ ಹಳಸಲು ಪಲ್ಲವಿ”- ಈ ಸಾಲು ನಂಗೆ ತುಂಬಾ ಇಷ್ಟವಾಯಿತು. ಮನುಷ್ಯ ಕನವರಿಸಿದ ‘ಮಾತು’ಗಳೆಲ್ಲಾ ‘ನನಸಾದರೆ’ ಜೀವನದಲ್ಲಿ ಕಷ್ಟ ಅನ್ನೋದೇ ಇರುತ್ತಿರಲಿಲ್ಲ. ಬದುಕಿನ ನಗ್ನ ಸತ್ಯಗಳಿಗೆ ಕೈಗನ್ನಡಿಯಂತಿದೆ ಈ ಕವನ. ಕೃತಜ್ಞತೆಗಳು ಸರ್
”ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ
ನಾನು ಇಂಚಿಚೇ ಬೆಳೆದೆ’
ಬಹಳ ಅರ್ಥಪೂರ್ಣ ಸಾಲುಗಳು.
ಕವಿತೆ ಸರಳ, ಸುಂದರವಾಗಿದೆ ಶಶಿ.
ಓದುತ್ತ ಇದು ನನಗೆ ನಾನೆ ಹೇಳಿಕೊಂಡಂತೆ ಇದೆಯಲ್ಲ ಅನ್ನಿಸಿಬಿಟ್ಟಿತು.
Simply good.
ಹ್ಯೂ ಪ್ರಾಥರನನ್ನು ನಮಗೆ ಇನ್ನಷ್ಟು ಪರಿಚಯಿಸು. ಆಯಿತ?
- ಟೀನಾ.
ನಿಮ್ಮ ಅನುವಾದ ನನ್ನ ಓದನ್ನು ಹೆಚ್ಚಿಸಿತು.
‘ಇಡಿಯಾಗುವುದೊಂದು
ಮೆಲುನಡಿಗೆಯ ಸಾವು’
ನನಗೆ ಹಿಡಿಸಿದ ಸಾಲುಗಳು.
ನಾವಡ
ಚಿತ್ರಾ, ಟೀನಾ ಮತ್ತು ನಾವುಡರಿಗೆ ಧನ್ಯವಾದಗಳು. ನಿಮ್ಮ ಪ್ರತಿಕ್ರಿಯೆಗಳು ನನಗೆ ಇನ್ನಷ್ಟು ಅನುವಾದಗಳಿಗೆ ಪ್ರೇರಣೆಯಾಗಲಿ..