ವ್ಯಾಮೋಹಿಯ ಮೆಸೇಜುಗಳು…

June 30, 2008

 

ನನ್ನ ಇಷ್ಟದ ಲೇಖಕ ಮಿಲನ್ ಕುಂದೇರಾನ ‘unbearable lightness of being’ ಓದ್ತಾ ಆತನ, “metaphors are dangerous… a single metaphor can give birth to love” ಸಾಲು ತಲೆ ಸುತ್ತು ಬರಿಸಿಬಿಟ್ಟಿತು! ಹಾಗೇ ‘ನೀಲು’ ಸಹವಾಸ ಮಾಡಿ ಕಲಿತ ಕೆಲವು ‘ಮೋಹ’ಕ ಮಾತುಗಳೂ ಸೇರಿ ಒಟ್ಟಾರೆ ಕೆಲವು ದಿನಗಳಿಂದ ಹುಟ್ಟಿಕೊಂಡಿರುವ ಕೆಲವು ಮೆಸೇಜು, ಮೇಲ್ (!) ಸ್ಟೇಟಸ್ ಮೆಸೇಜುಗಳು ಇಲ್ಲಿವೆ.

 

* ಈ ಸಂಜೆಗೆ

ನಿನ್ನ ಮಾತು-ಕತೆ

ತರುವ

ರಂಗಿಗೆ ಕಾಮನ

ಬಿಲ್ಲು ಕೂಡ ನಾಚಿ

ನೀರಾಗುವುದು ಎಂದರೆ

ನಂಬುವೆಯಾ?

…….

* ಮಿಂಚಿನ ನಿಚ್ಛಳ

ರೋಷವನ್ನೂ

ಬೆಳದಿಂಗಳಾಗಿಸುವ

ಚಂದ್ರನಿಗೆ

ಸೋಲದಿರಲಿ ಹೇಗೆ?

……

* ಅಲ್ಲಿ

ಅವಳ ಕಣ್ಣ

ಬಾನಲ್ಲಿ ಮಿಂಚು…

ಇಲ್ಲಿ

ಈ ಎದೆಯ

ಅಂಗಳದಲ್ಲಿ

ಮೋಹಕ ಮುಂಗಾರು!

……

* ಬಸವನಹುಳು

-ವಿನ ಬೆನ್ನೇರಿದ

ಅದರ ನೆಲೆ

ಅಂತೆ

ನನಗವಳು!

……

* ನಿನ್ನ ತುಂಬು

ಕೆನ್ನೆಗೆ ಮುತ್ತಿಡುವ

ಬೆಳಗಿನ

ಎಳೆಬಿಸಿಲು ನನ್ನಲ್ಲಿ

ಹುಟ್ಟಿಸುವ ಅಸೂಯೆಯ

ಆಳ ತಿಳಿದರೆ

ನೀ ಬಿಚ್ಚಿಬೀಳುವೆ!

.……

 

 


ವ್ಯಾಮೋಹಿಯ ಹಾಡು-2

June 21, 2008

 

  • ಬಂಧೀಖಾನೆ

ಅವಳ ಕಣ್ಣುಗಳ

ದಟ್ಟಡವಿಯಲಿ

ದಿಕ್ಕುಗೆಟ್ಟು

ಅಲೆಯುವ

ಮರಿಜಿಂಕೆ

ನಾನು.

ಬಿಡುಗಡೆಯ

ಬಯಲ

ದಾರಿಯ

ಹುಡುಕಾಟ

ಕಣ್ಣ ಸೆರೆಯಿಂದ

ಯಾವ ಶಿಕ್ಷೆಗೆ

ದೂಡುವುದೋ

ತಿಳಿಯದಾಗಿದೆ!

……….

  •  ಬೆಚ್ಚನೆ ನಿಟ್ಟುಸಿರು

ಕಾಫಿ ಡೇನ

ಆರಾಮ ಚೇರಿನಲಿ

ಕೂತಾಗಲೂ,…

ಮಿಂಚುಗಣ್ಣಿನ

ಅವಳ ಬೆಚ್ಚನೆ

ಮಾತು

‘ಕೋಲ್ಡ್ ಕಾಫಿ’ಯನ್ನೂ

ತಣಿಸುತ್ತದೆ!

ತಾಸುಗಟ್ಟಲೆ

ಕ್ರಮಿಸಿ

ಹಿತವಾದ

ಮಾಧುರ್ಯ

ಆಳಕ್ಕಿಳಿಯುತ್ತದೆ.

ಆದರೂ,

ಎದೆಯ ಚಡಪಡಿಕೆ,

ಆತಂಕ,

ಆರಿ ಹೋಗುವ

ನಿಟ್ಟುಸಿರು

ಮಾತ್ರ

ಹಬೆಯಾಡುತ್ತಲೇ ಇರುತ್ತವೆ

ಅವಳ ಕೆಣಕು ನೋಟದಂತೆ!!


ವ್ಯಾಮೋಹಿಯ ಹಾಡು

June 20, 2008

ಹಾಯ್, ಮೊನ್ನೆ ಒಂದು ವಾರ ಮಾಯಾನಗರಿಯಿಂದ ದೂರ, ನಮ್ಮೂರು ಮಲೆನಾಡಿನ ಸಾಗರಕ್ಕೆ ಹೋಗಿದ್ದೆ. ಅಲ್ಲಿ ಸುರಿವ ಮಳೆ, ಚಿಮ್ಮುವ ಹಸಿರ ನಡುವೆ ಕಳೆದ ದಿನಗಳಲ್ಲಿ ಬರೆದ ತೀವ್ರ ವ್ಯಾಮೋಹದ ಪದ್ಯಗಳಲ್ಲಿ ಎರಡು ಇಲ್ಲಿವೆ. ಇವನ್ನು ಬೇಕಾದರೆ ವ್ಯಾಮೋಹಿಯ ಹಾಡುಗಳು ಎನ್ನಲೂಬಹುದು.

ಪದ್ಯ 1. ತಿಂಗಳ ಕೈದಿ

ನನಗೋ

ಚಂದ್ರನೆಂದರೆ

ತಣಿಯದ ಮೋಹ.

ಅವಳೋ ಹಠಮಾರಿ,..

ಒಬ್ಬಳೇ ಬಾ

ಎಂದರೆ;

ಬೇಕೆಂದೇ

ಬೆಳದಿಂಗಳನ್ನೂ

ಜತೆ ಕರೆತರುತ್ತಾಳೆ!

ನಾನೀಗ…

ತಿಂಗಳಲ್ಲಿ

ಸಿಕ್ಕ ಮೊದ್ದು ಮೊಲ!!

…..

ಪದ್ಯ 2. ಹಂಗು ಮೀರಿದ ಹಾಡು

ಕಣ್ಣೆರಡ ಮಿಂಚು

ಹೊಳೆಯಿತು

ಅಂದು,…

ಆ ಬೆಳಕಲ್ಲಿ

ನಾಕು ಸಾಲುಗಳು

ಪಲ್ಲವಿಸಿದವು,…

ಕವಿಯ

ಎದೆ ಭಾರವಿಳಿಸಿ

ಕವಿತೆಯೊಂದು

ಹಾರಿತು ಬಾನಿಗೆ,…

 

ಈಗ,

ಗೂಡಿಗೇಕೆ,

ತಾಯಿ ಹಕ್ಕಿಗೂ ಇಲ್ಲ

ಹಾರಿಹೋದ ಮರಿಗಳ

ಹಂಗು!!

…..