ಹಾಯ್, ಮೊನ್ನೆ ಒಂದು ವಾರ ಮಾಯಾನಗರಿಯಿಂದ ದೂರ, ನಮ್ಮೂರು ಮಲೆನಾಡಿನ ಸಾಗರಕ್ಕೆ ಹೋಗಿದ್ದೆ. ಅಲ್ಲಿ ಸುರಿವ ಮಳೆ, ಚಿಮ್ಮುವ ಹಸಿರ ನಡುವೆ ಕಳೆದ ದಿನಗಳಲ್ಲಿ ಬರೆದ ತೀವ್ರ ವ್ಯಾಮೋಹದ ಪದ್ಯಗಳಲ್ಲಿ ಎರಡು ಇಲ್ಲಿವೆ. ಇವನ್ನು ಬೇಕಾದರೆ ವ್ಯಾಮೋಹಿಯ ಹಾಡುಗಳು ಎನ್ನಲೂಬಹುದು.
ಪದ್ಯ 1. ತಿಂಗಳ ಕೈದಿ
ನನಗೋ
ಚಂದ್ರನೆಂದರೆ
ತಣಿಯದ ಮೋಹ.
ಅವಳೋ ಹಠಮಾರಿ,..
ಒಬ್ಬಳೇ ಬಾ
ಎಂದರೆ;
ಬೇಕೆಂದೇ
ಬೆಳದಿಂಗಳನ್ನೂ
ಜತೆ ಕರೆತರುತ್ತಾಳೆ!
ನಾನೀಗ…
ತಿಂಗಳಲ್ಲಿ
ಸಿಕ್ಕ ಮೊದ್ದು ಮೊಲ!!
…..
ಪದ್ಯ 2. ಹಂಗು ಮೀರಿದ ಹಾಡು
ಕಣ್ಣೆರಡ ಮಿಂಚು
ಹೊಳೆಯಿತು
ಅಂದು,…
ಆ ಬೆಳಕಲ್ಲಿ
ನಾಕು ಸಾಲುಗಳು
ಪಲ್ಲವಿಸಿದವು,…
ಕವಿಯ
ಎದೆ ಭಾರವಿಳಿಸಿ
ಕವಿತೆಯೊಂದು
ಹಾರಿತು ಬಾನಿಗೆ,…
ಈಗ,
ಗೂಡಿಗೇಕೆ,
ತಾಯಿ ಹಕ್ಕಿಗೂ ಇಲ್ಲ
ಹಾರಿಹೋದ ಮರಿಗಳ
ಹಂಗು!!
…..
Posted by shashi sampalli