ಹನಿ ಡ್ಯೂ ಕಣ್ಣಿನ ಹುಡುಗಿ!

October 27, 2008

836 ಕಿ.ಮೀ. ದೂರವನ್ನು ಒಂದೇ ಉಸಿರಿಗೆ ಅವಡುಗಚ್ಚಿಕೊಂಡು ಕ್ರಮಿಸಿದ್ದೆ.

ಸಿಲಿಕಾನ್ ಸಿಟಿಯಿಂದ ರಾತ್ರಿ ಎಡಿಷನ್ ವರ್ಕ್ ಮುಗಿಸಿ ಕಣ್ಣ ರೆಪ್ಪೆ ಜೋಡಿಸದೇ ಕಾರು ಏರಿದ್ದೆ. ತುಮಕೂರಿನಲ್ಲಿ ತಟ್ಟೆ ಇಡ್ಲಿ, ಕೊಪ್ಪಳದಲ್ಲಿ ಜೋಳದ ರೊಟ್ಟಿ ಊಟ, ಸಂಜೆ ಹುಮ್ನಾಬಾದ್ನಲ್ಲಿ ಟೀ ಕುಡಿದದ್ದು ಬಿಟ್ಟರೆ ಉಳಿದದ್ದೆಲ್ಲಾ ನಿದ್ದೆ, ನಡು- ನಡುವೆ ಪಿಚ್ಚಳ್ಳಿ ಶ್ರೀನಿವಾಸ್, ಮುಂಗಾರು ಮಳೆ, ಗೆಳೆಯದ ಈ ಸಂಜೆ ಯಾಕಾಗಿದೆ,… ಹೀಗೆ ಹಾಡು. ಡ್ರೈವರ್ ರವಿ ಒಂದೇ ಸಮನೆ ಕಲ್ಲುಗುಂಡಂತೆ ಕೂತು 100ರ ಮೇಲೇ ಗಾಡಿ ಓಡಿಸುತ್ತಿದ್ದರು. ಅಂತೂ ಸಂಜೆ 5ಕ್ಕಾದರೂ ತಲುಪಬಹುದು ಎಂದುಕೊಂಡದ್ದು ಸುಳ್ಳಾಯಿತು. ದಾರಿಯಲ್ಲಿ ಕೊಪ್ಪಳದಲ್ಲಿ ಸಿಕ್ಕ ಮೆಡಿಸಿನ್ ಕಲ್ಲಂಗಡಿ ಹಣ್ಣಿನ ಹೊಲ, ಅದರ ಮಾಲೀಕ ಸುರೇಶ, ಆ ಊರನ್ನೇ ಗುಳೇ ಕಳಿಸಿದ್ದ ಬರ,.. ಹೀಗೆ ಎಲ್ಲವುಗಳ ದರ್ಶನ ಪಡೆಯುವ ಹೊತ್ತಿಗೆ ಅಲ್ಲೇ ಸಂಜೆಯಾಗಿತ್ತು.

ಅಂತೂ ಕೋಟೆ- ಕೊತ್ತಲಗಳ ನಗರ ಬೀದರ್ ತಲುಪುವ ಹೊತ್ತಿಗೆ ರಾತ್ರಿ 11. ರಾತ್ರಿ ಲಾಜ್ನಲ್ಲಿ ಮಲಗಿ, ಬೆಳಿಗ್ಗೆ ಆರಕ್ಕೇ ಎದ್ದು ಹೊರಟದ್ದು ಗುಂಬಜ್ಗಳ ದಾರಿಯಲ್ಲಿ. ಗತಕಾಲದ ಹತಾಶ ಅವಶೇಷಗಳಂತಹ ಅವುಗಳನ್ನು ಹಾದುಕೊಂಡು ಅಲ್ಲಿನ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿ ನೋಡಿ ಮುಂದೆ ಹೋದರೆ ಸಿಕ್ಕದ್ದೇ ಆ ಊರು, … ಊರಿನ ಯಜಮಾನ ಯಾದಗೀರರ ಮನೆಗೆ ಹೋಗಿ ಊರಿನ ಮಳೆ- ಬೆಳೆ ಕೇಳುತ್ತಲೇ, ಬೆಂಗಳೂರಿನ ಮಂದಿ ಎಂದು ನಮ್ಮನ್ನು ಒಳ ಕರೆದು ಕುಡಿಯಲು ತಣ್ಣನೆ ಮಜ್ಜಿಗೆ ಕೊಟ್ಟು, ಜೊತೆಗಿದ್ದ ಗೆಳೆಯ ದೇವು ಪಕ್ಕಾ ಬೀದರ್ ಮಾತನ್ನೇ ಉಸಿರಾಡುವವನಾದ್ದರಿಂದ ಅವರೊಂದಿಗೆ ಮಾತನಾಡುವುದು ನಮಗೆ ಸಮಸ್ಯೆಯಾಗಲಿಲ್ಲ! ನಿಧಾನಕ್ಕೆ ಮಾತು ಮುಂದುವರಿಯುತ್ತಿದ್ದಂತೆ ಕ್ಯಾಮರಾ ತೆಗೆದು ಯಾದಗೀರರ ಚಿತ್ರ ಕ್ಲಿಕ್ಕಿಸಿದೆ. ಕ್ಯಾಮರಾ ಫ್ಲಾಷ್ ಹೊಳಪಿಗೆ ಒಳಗಿದ್ದ ಅವಳು ಹೊರಬಂದಳು!

ಸಹಜವಾಗಿ ತಿರುಗಿ ನೋಡಿದೆ! ಒಂದು ಕ್ಷಣ ದಂಗಾದೆ, ಅವಳ ಬುರ್ಖಾದೊಳಗಿಂದ ಅರ್ಧವೇ ಕಾಣುತ್ತಿದ್ದ ಹೊಳೆಯ ಕೆನ್ನೆಗಳ ಕಂಡು! ಆಕೆಯ ಆ ನೋಟ, ನಗು, ಕಣ್ಣ ಮಿಂಚು; ಮೊದಲ ನೋಟದಲ್ಲೇ ಎಂತಹವರನ್ನೂ ಥಟ್ಟಂತೆ ಹಿಡಿದಿಡಬಲ್ಲ ಕಣ್ಣುಗಳಲ್ಲಿ ಎಂತದೋ ಮಾರ್ದವತೆ, ಥೇಟ್ ಜೇನು ತೊಟ್ಟಿಕ್ಕುವಂತೆ! ಜೇನ ಹನಿಯೊಂದು ಸೂರ್ಯಪ್ರಭೆಗೆ ಹೊಳೆಯುವ ಘಳಿಗೆಯನ್ನೇ ತಂದು ಆಕೆಯ ಕಣ್ಣಿಗೆ ಕಟ್ಟಿದಂತೆ ಹೊಳಪು! ಗುಲಾಬಿ ಕೆನ್ನೆಯ ಜೊತೆ ಕಡುಗಪ್ಪು ಕಣ್ಣರೆಪ್ಪೆಯ ಸಾಲು…. ನೀಳ ಮೂಗು,…

ಆ ಕ್ಷಣ ನನ್ನನ್ನೇ ನಾನು ಎಷ್ಟೊಂದು ಮರೆತೆನೆಂದರೆ, ಒಂದೇ ಏಟಿಗೆ ಒಂದು ದಿನ ಪ್ರಯಾಣದ ದಣಿವು, ಎರಡು ದಿನದ ನಿದ್ದೆಯಿಲ್ಲದ ಸುಸ್ತು,.. ಬೀದರ್ ಬಿಸಿಲ ಧಗೆ,.. ಊಹುಂ ಯಾವುದೂ ಸುಳಿವೂ ಇಲ್ಲದಂತೆ ಮಾಯವಾಗಿದ್ದವು. ಈ ಕ್ಷಣಕ್ಕೇ ಆಕೆಯನ್ನು ಅಪ್ಪಿ ಮುದ್ದಾಡದೇ ಜೀವವೇ ತಾಳದು ಎಂಬಷ್ಟರಮಟ್ಟಿಗೆ ಸೆಳೆತ! ಆ ಸಳೆತ, ಆಕರ್ಷಣೆಯ ಭರದಲ್ಲಿ ಕ್ಯಾಮರಾದಿಂದ ಫೋಟೋ ಕ್ಲಿಕ್ಕಿಸುವುದನ್ನೂ ಮರೆತುಬಿಟ್ಟೆ…

ಗುಂಬಜ್ ಹಾದಿಗುಂಟ..

 

 

 

 

 

 

 

 

 

 

ಆಮೇಲೆ ನಾವು ಮಾತುಕತೆಯ ಬಳಿಕ ಯಾದಗೀರ ಸಾಹೇಬರಿಗೆ ನಮಸ್ಕಾರ ಹೇಳಿ ಹೊರಟೆವು.. ಆದರೆ, ಆಕೆಯ ಕಣ್ಣಿನ ಆ ಹನಿ ಡ್ಯೂ ನೋಟ ಮಾತ್ರ ಹಾಗೇ ಕಣ್ಣ ಕೋಣೆಯಲ್ಲಿ ಅಳಿಸಲಾರದ ಚಿತ್ರಪಟ!

ಮತ್ತೆ ಮೂರೂವರೆ ದಿನ ಅಲ್ಲೇ ಸುಲ್ತಾನರ ಆ ಕೋಟೆಯ ಆಸುಪಾಸಿನ ಊರುಗಳಲ್ಲೇ ಸುತ್ತಾಡಿಕೊಂಡಿದ್ದೆ. ಪ್ರತಿ ದಿನ ರಾತ್ರಿ ವಾಸ್ತವ್ಯಕ್ಕೆ ಬೀದರ್ ಹಗಲಿನ ಓಡಾಟಕ್ಕೆ ಹಳ್ಳಿಗಳು.. ಆದರೆ, ಕಣ್ಣೊಗೆ ಕೂತ ಆಕೆಯ ಚಿತ್ರ ಮಾತ್ರ ಬದಲಾಗದು. ಬೆಳಗಿನ ಕೆಂಪು ಸೂರ್ಯನಿಗೆ ಕ್ಯಾಮರಾ ಹಿಡಿಯಲಿ, ಉರಿಬಿಸಿಲಲಿ ಕಮರಿದ ಹೊಲಗಳ ಕ್ಲಿಕ್ಕಿಸಲಿ, ಸಂಜೆಗೆ ಬತ್ತಿದ ಕೆರೆ- ಕಟ್ಟೆಗಳ ದಂಡೆಯ ಒಂಟಿ ಗೊರವಗಳ ಸೆರೆ ಹಿಡಿಯಲಿ ಆಕೆಯ ನೋಟದಲ್ಲಿ ಬಂದಿಯಾದ ಕಣ್ಣಿಗೆ ಮಾತ್ರ ಬಿಡುಗಡೆಯಿಲ್ಲ!

ಮತ್ತದೇ ಕಣ್ಣು, ರಾತ್ರಿ ದಣಿದು ಬಂದು ಲಾಜಿನ ಲಾಂಜ್ನಲ್ಲಿ ಕೂತು ಹರಟುವಾಗ, ರಾತ್ರಿ ದಣಿವಾರಿಸಿಕೊಳ್ಳಲು ಕಿಕ್ ಏರಿಸುವಾಗ, ಮತ್ತೆ- ಮತ್ತೆ ಅದೇ ಅವಳು! ಉಕ್ಕುವ ಬಿಯರಿನ ನೊರೆಯಂತೆ ಎದೆಯೊಳಗಿನಿಂದ ಚಿಮ್ಮಿ ಬರುವ ಚಿತ್ರ ಅವಳೊಂದೇ!…

ಕೊನೆಗೂ ಎಲ್ಲವನ್ನೂ ಮರೆತೆನೆಂದರೂ ನೋಡು- ನೋಡುತ್ತಿದ್ದಂತೆಯೇ ಯಾವ ಮಾಯೆಯೆಲ್ಲೋ ಅಮ್ಮ ಕರೆದ ದನಿಗೆ ಓಗುಡುತ್ತಾ ಓಡಿದ ಆಕೆಯ ಪುಟ್ಟ- ಪುಟ್ಟ ಪಾದಗಳ ಹೆಜ್ಜೆ ಗುರುತುಗಳನ್ನಂತೂ ಮರೆಯಲು ಸಾಧ್ಯವೇ ಇಲ್ಲ, ಅದೇ ಹನಿ ಹನಿ ಕಣ್ಗಳಂತೆಯೇ… !


ನಿಮಗೆ ಅಧಿಕಾರ ಕೊಟ್ಟವರಾರು?

October 4, 2008

 

 

 

 

 

 

 

 

ಮೊನ್ನೆ ಮಂಗಳೂರಿನಲ್ಲಿ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಮಂಗಳೂರು ಎಂದಾಕ್ಷಣ ಯಾವುದೋ ಕೋಮು ವಿಚಾರ ಎಂದುಕೊಳ್ಳುವುದೇನೂ ಬೇಕಿಲ್ಲ. ಅವರು ಪ್ರತಿಭಟನೆ ನಡೆಸಿದ್ದು ದಿನಗೂಲಿ ಹೆಚ್ಚಳವೋ, ಸೇವೆ ಖಾಯಂಗೋ ಒತ್ತಾಯಿಸಿ ಅಷ್ಟೆ. ತೀರಾ ಕಟ್ಟಕಡೆಯ ಸಮುದಾಯದ ಅವರಿಗೆ ಧರ್ಮದ ಮಹಾನ್ ಗೌರವ ಉಳಿಸುವ ಮಹತ್ತರ ಉದ್ದೇಶವಾಗಲೀ ಇರಲಿಲ್ಲ. ಅಂತಹ ಉದಾತ್ತ ವ್ಯಕ್ತಿಗಳೂ ಅವರಲ್ಲ(!) ಬಿಡಿ, ಪಾಪ, ಹುಲು ಮಾನವರು.

ಆದರೆ, ಅವತ್ತು ಅವರ ಪ್ರತಿಭಟನೆಗೆ, ತೀರಾ ಬದುಕಿನ ಕನಿಷ್ಠ ಭದ್ರತೆಯ ಅವರ ಬೇಡಿಕೆಗೆ ದನಿಗೂಡಿಸಿದವರು ಮಾತ್ರ ಯಾರೂ ಇರಲಿಲ್ಲ. ಚರಂಡಿ ಬಳಿಯುವ, ಕಕ್ಕಸ್ಸು ಹರಿಯುವ ಒಳಚರಂಡಿ ಕಟ್ಟಿಕೊಂಡರೆ ಬರಿಗೈಲಿ, ಬರಿಗಾಲಲ್ಲಿ ಇಳಿದು ಸ್ವಚ್ಛಗೊಳಿಸುವ ಅವರಿಗೆ ಸೌಲಭ್ಯ ನೀಡಿ, ನೌಕರಿ ಖಾಯಂಗೊಳಿಸುವುದರಿಂದ ಯಾವ ಧರ್ಮಕ್ಕೆ ತಾನೆ ಲಾಭ? ಅಥವಾ ಹಾಗೆ ಮಾಡದಿದ್ದರೆ ಯಾವ ಧರ್ಮಕ್ಕೆ ತಾನೆ ನಷ್ಟ? ಹಾಗಾಗಿ ಅವರ ಬೆಂಬಲಕ್ಕೆ ಯಾರೂ ಬರದಿದ್ದರಲ್ಲಿ ಅಚ್ಚರಿಯೇನಿಲ್ಲ ಬಿಡಿ.

ಆದರೆ, ಅದೇ ಮಂಗಳೂರಿನಲ್ಲಿ ಕೆಲವು ದಿನಗಳ ಹಿಂದೆ ಹಿಂದೂ ಧರ್ಮದವರನ್ನು ಮತಾಂತರ ಮಾಡಿದ್ದಾರೆ ಎಂದು ಕ್ರಿಶ್ಚಿಯನ್ನರ ಚರ್ಚುಗಳ ಮೇಲೆ ದಾಳಿ ಮಾಡಿದ ಹಿಂದೂಗಳ ವಾರಸುದಾರರಾಗಲೀ, ದಲಿತರ ಹೆಸರು ಹೇಳಿಕೊಂಡು 60 ವರ್ಷದಿಂದ ಆಡಳಿತ ನಡೆಸಿದ ಜಾತ್ಯತೀತ ದೇಶಭಕ್ತರಾಗಲೀ ಯಾರೂ ಎಲ್ಲಾ ರೀತಿಯಲ್ಲೂ ನೆರವು, ಬೆಂಬಲ ಬೇಕಿದ್ದ, ಹಿಂದೂಗಳಾದ ಪೌರ ಕಾರ್ಮಿಕರ ನ್ಯಾಯಯುತವಾದ ಬೇಡಿಕೆಗಳ ಪರವಾಗಿ ಚಕಾರವೆತ್ತಲಿಲ್ಲ!

ಆದರೆ, ಶತ-ಶತಮಾನಗಳಿಂದ ಜಾತಿ ವ್ಯವಸ್ಥೆಯ ಕಪಿಮುಷ್ಟಿಯಲ್ಲಿ ಸಾಕುನಾಯಿಗಳಿಗಿಂತ ಕಡೆಯಾಗಿ ಬದುಕಿದ ಅವಮಾನ ಮತ್ತು ತುಚ್ಛೀಕರಣವನ್ನು ಸಹಿಸಿಕೊಳ್ಳದೆ, ತಾರತಮ್ಯ ಭಾವನೆಗೆ ಬಲಿಯಾಗಿ ಕನಿಷ್ಠ ಸ್ವಾಭಿಮಾನವನ್ನೂ ಬಿಟ್ಟು ಬದುಕಬೇಕಾದ ಸ್ಥಿತಿಯಿಂದ ಪಾರಾಗಲು, ಇನ್ನಾವುದೋ ಧರ್ಮವನ್ನು ಅಲ್ಲಾದರೂ ಗೌರವಯುತ ಬದಕು ಸಿಗಬಹುದು (ಅದು ಭ್ರಮೆಯೇ ಇರಬಹುದು) ಎಂದು ಮತಾಂತರವಾಗುವುದನ್ನೇ ತಪ್ಪು (ಹಾಗಿದ್ದರೆ !)ಎಂದು ಅವರ ವಾರಸುದಾರರು ಎಂಬ ಸ್ವಘೋಷಿತ ಜನರು ಹಿಂಸಾಚಾರಕ್ಕೆ ಇಳಿದರು.

ಮತ್ತೊಂದು ಕಡೆ ಕ್ರೈಸ್ತರಲ್ಲೂ ಕೂಡ ಇಂತಹದ್ದೇ ವಿರೋಧಾಭಾಸ. ಅಲ್ಲಿ ಕೂಡ ದಲಿತರು ಮತ್ತು ಭಾಷೆಯ ಕಾರಣಕ್ಕಾಗಿ ಮತಾಂತರಗೊಂಡವರನ್ನು ಅಸ್ಪೃಶ್ಯರಂತೆ ಕಾಣುವ ಬಗ್ಗೆ ಕೂಡ ದಲಿತ ಕ್ರೈಸ್ತರೇ ಹೇಳುತ್ತಾರೆ. ಇನ್ನು ಧರ್ಮ ರಕ್ಷಣೆಯ ಜಿಹಾದಿ ನಡೆಸುವವರಲ್ಲಿ ಕೂಡ ತಮ್ಮವರೇ ಆದ ಜನ ಆಫ್ರಿಕಾ ದೇಶಗಳಲ್ಲಿ, ಅಷ್ಟೇಕೆ ನಮ್ಮ ಸುತ್ತಮುತ್ತಲೇ ತಿನ್ನುವ ಅನ್ನಕ್ಕೂ ಗತಿಯಿಲ್ಲದ ಚಿಂದಿ ಆಯ್ದು, ಗುಜರಿ ಮಾರಿ ಜೀವ ಸಾಗಿಸುತ್ತಿದ್ದರೂ ಅವರ ಏಳಿಗೆಯ ಬಗ್ಗೆ ಯಾವ ಜಿಹಾದಿಯೂ ಹೋರಾಡುವುದಿಲ್ಲ. ಅಂದರೆ, ತಮ್ಮ ಲಾಭಕ್ಕಾಗಿ ಧರ್ಮವನ್ನು, ಅದನ್ನು ಉದ್ದೇಶಪೂರ್ವಕವಾಗಿಯೋ, ಅನಿವಾರ್ಯವಾಗಿಯೋ ಅಥವಾ ಮುಗ್ಧವಾಗಿಯೋ ಅನುಸರಿಸುವವರನ್ನು ದಾಳವನ್ನಾಗಿ ಮಾಡಿಕೊಂಡು ಬೇಳೆಬೇಯಿಸಿಕೊಳ್ಳುವುದೇ ಈ ಧಾರ್ಮಿಕ ಸಂಘಟನೆಗಳು, ಮತಾಂತರ ಮಿಷನರಿಗಳು ಮತ್ತು ಜಿಹಾದಿಗಳ ಏಕೈಕ ಉದ್ದೇಶಗಳೆಂಬುದನ್ನು ಇಂತಹ ಸಣ್ಣಪುಟ್ಟ ನಿದರ್ಶನಗಳ ಮೂಲಕವೇ ಅರಿಯಬಹುದು.

ಹಿಂದೂ ಧರ್ಮ ರಕ್ಷಕರನ್ನೇ ಗಮನಿಸುವುದಾದರೆ, ಈಗ್ಗೆ 15-20 ವರ್ಷಗಳ ಹಿಂದೆ ಹಿಂದೂ ಸಂಘಟನೆಗಳಲ್ಲಿ ಒಂದೆರೆಡು ಮೇಲ್ಜಾತಿಗಳವರನ್ನು ಹೊರತುಪಡಿಸಿದರೆ ಉಳಿದ ಹಿಂದುಳಿದ ವರ್ಗದವರಿಗಾಗಲೀ, ದಲಿತರಿಗಾಗಲೀ ಸ್ಥಾನವೇ ಇರಲಿಲ್ಲ. ಆದರೆ, ಕ್ರಮೇಣ ಕರ್ನಾಟಕದಲ್ಲಿ ಅದರಲ್ಲೂ ಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ ಈಗ ಆ ಸಂಘಟನೆಗಳಲ್ಲಿ ಬಹುಪಾಲು ಹಿಂದುಳಿದ ಮತ್ತು ದಲಿತರಿದ್ದಾರೆ. ಹಾಗಾದರೆ, ವೈದಿಕಶಾಹಿ ಪ್ರೇರಿತ ಧರ್ಮರಕ್ಷಕರು ಮನುವಾದಿ ಸಿದ್ಧಾಂತದಿಂದ ಹೊರಬಂದು ಶೂದ್ರ ಮತ್ತು ಅಸ್ಪೃಶ್ಯರನ್ನು ಅಪ್ಪಿಕೊಳ್ಳುವಷ್ಟು ಸುಧಾರಿಸಿಬಿಟ್ಟರೆ ಎಂದು ಹುಬ್ಬೇರಿಸಬೇಕಾದ ಅಗತ್ಯವೇನಿಲ್ಲ. ಏಕೆಂದರೆ, ಐಟಿ- ಬಿಟಿ ಮತ್ತು ಔದ್ಯಮಿಕ ವಲಯದಲ್ಲಿ ಆ ಹೊತ್ತಿಗೆ ಆದ ಬದಲಾವಣೆಗಳು ಅಂತಹ ಎಂತಹ ಅನಿವಾರ್ಯ ಪರಿಸ್ಥಿತಿಯನ್ನು ಸೃಷ್ಟಿಸಿದವು ಎಂದರೆ ಆ ಸಂಘಟನೆಗಳಿಗೆ ತಾವು ಯಾರನ್ನು ಇಲ್ಲೀತನಕ ದೂರವಿಟ್ಟಿದರೋ ಅವರನ್ನು ಒಳಗೊಳ್ಳದೇ ಅಸ್ತಿತ್ವ ಉಳಿಸಿಕೊಳ್ಳುವುದೇ ದುಸ್ತರ ಎಂಬ ಸ್ಥಿತಿ ನಿರ್ಮಾಣವಾಯಿತು. ಐಟಿ- ಬಿಟಿ, ಮ್ಯಾನೇಜಿಂಗ್ ಶಿಕ್ಷಣ ಮುಂತಾದ ಶಿಕ್ಷಣ ಪಡೆದು ಗ್ರಾಮೀಣ ಮತ್ತು ಸಣ್ಣ ಪಟ್ಟಣಗಳ ಮೇಲ್ಜಾತಿ ಯುವಕರೆಲ್ಲಾ ಮಹಾನಗರಗಳು, ವಿದೇಶಗಳ ಪಾಲಾದಾಗ ತಮ್ಮ ಸಂಘಟನೆಯನ್ನು ಉಳಿಸಿಕೊಳ್ಳಲು, ಮುಂದುವರಿಸಿಕೊಂಡು ಹೋಗಲು ಮತ್ತು ಅದೇ ಹೊತ್ತಿಗೆ ಪಂಚಾಯ್ತಿ ಮಟ್ಟದಲ್ಲೀ ಜಾತಿವಾರು ಮೀಸಲಾತಿ ಪದ್ಧತಿ ಕಡ್ಡಾಯವಾದಾಗ ಬಿಜೆಪಿಯಂತಹ ಸಂಘ- ಪರಿವಾರ ಆಧಾರಿತ ಪಕ್ಷ ಕೂಡ ಶೂದ್ರರಿಗೆ ಮೀಸಲಾತಿ ನೀಡಬೇಕಾಗಿದ್ದರಿಂದ ಚುನಾವಣೆಗಳಲ್ಲಿ ತಮ್ಮ ಪರವಾಗಿ ಹೋರಾಡಲು ಯುವಕರ ಪಡೆ ಬೇಕಾಯಿತು. ಆ ಕಾರ್ಯಕ್ಕೆ ತಮ್ಮ ತೋಟ, ಹೊಲಗಳಲ್ಲಿ ಹಿಂದೆ ಕೂಲಿಗಳಾಗಿ ದುಡಿಯುತ್ತಿದ್ದಂತೆಯೇ ಈಗಲೂ ರಸ್ತೆಯಲ್ಲಿ ನಿಂತು ಬಡಿದಾಡಲು, ಸಂಘಟನೆ, ಪಕ್ಷದ ಪರ ಉಗ್ರ ಸ್ವರೂಪದ ಹೋರಾಟ ನಡೆಸಲು ಶೂದ್ರರು ಮತ್ತು ದಲಿತರನ್ನು ಸೇರಿಸಿಕೊಳ್ಳಲಾಯಿತು. ಅದು ಚಾರಿತ್ರಿಕ ಅನಿವಾರ್ಯತೆ ಕೂಡ ಆಗಿತ್ತು. ಅಲ್ಲೂ ಕೂಡ ಬಜರಂಗ ದಳದಂತಹ ಉಗ್ರ ಹೋರಾಟದಲ್ಲಿ ನಂಬಿಕೆ ಇಟ್ಟ ಸಂಘಟನೆಯಲ್ಲಿ ಸಿಕ್ಕಷ್ಟು ಪ್ರವೇಶ ವಿಎಚ್ ಪಿಯಂತಹ ಕೋರ್ ಸಂಘಟನೆಯಲ್ಲಿ ಈ ಇತರರಿಗೆ ಸಿಕ್ಕಿಲ್ಲ ಎಂಬುದು ಕೂಡ ಈ ಅನಿವಾರ್ಯತೆಯನ್ನೇ ಸೂಚ್ಯವಾಗಿ ಹೇಳುತ್ತದೆ.

ಇನ್ನು ಮತಾಂತರವಾಗುವವರ ಬಗ್ಗೆ ಮಾತನಾಡುವ ಈ ಸಂಘಟನೆಗಳು, ಮತಾಂತರಕ್ಕೆ ಇರುವ ಕಾರಣಗಳು ಎಂದೂ ಹಣ ಅಥವಾ ನೌಕರಿಯಂತಹ ಆಮಿಷಗಳಷ್ಟೇ ಆಗಿರಲಿಕ್ಕಿಲ್ಲ ಎಂಬುದನ್ನು ಮರೆಯುತ್ತವೆ. ಹಾಗೆ ಆಮಿಷಕ್ಕಾಗಿಯೇ ಮತಾಂತರಗೊಳ್ಳುವುದು ಸಾಧ್ಯವಿದ್ದಿದ್ದರೆ ಎಷ್ಟು ಮಂದಿ ಆರ್ಥಿಕವಾಗಿ ದುರ್ಬಲರಾದ ಮೇಲ್ಜಾತಿಯವರು ಮತಾಂತರಗೊಂಡಿದ್ದಾರೆ? ಏಕೆ ಹಿಂದುಳಿದವರು ಅದರಲ್ಲೂ ತೀರಾ ಕೆಳಸ್ಥರದವರು ಮತಾಂತರವಾಗುತ್ತಾರೆ, ದಲಿತರು ಮತಾಂತರಗೊಳ್ಳುತ್ತಾರೆ? ಅದಕ್ಕೆ ಸಾಮಾಜಿಕ ವ್ಯವಸ್ಥೆಯಲ್ಲಿನ ತಾರತಮ್ಯ, ಅವಮಾನ, ಶೋಷಣೆಗಳು ಕಾರಣವಲ್ಲವೆ? ಅಷ್ಟಕ್ಕೂ ದಲಿತರು, ಹಿಂದುಳಿದ ಬಹಳಷ್ಟು ಜಾತಿಗಳು ಮತ್ತು ಗುಡ್ಡಗಾಡು ಮತ್ತು ಬುಡಕಟ್ಟು ಜನರು ಇವರು ಹೇಳುವ ವೈದಿಕಶಾಹಿ ಪ್ರೇರಿತ ಹಿಂದೂ ಆಚರಣೆ, ಸಂಪ್ರದಾಯಗಳನ್ನು ಎಷ್ಟರಮಟ್ಟಿಗೆ ಅನುಸರಿಸುತ್ತಿದ್ದಾರೆ. ಆ ಅರ್ಥದಲ್ಲಿ ಅವರೆಲ್ಲರನ್ನೂ ಇವರು ಹಿಂದೂಗಳೆಂದು ಘೋಷಿಸುವ ಮೂಲಕ ಭಿನ್ನ ದೇವರು, ಭಿನ್ನ ಆಚರಣೆ, ಸಂಪ್ರದಾಯಗಳಲ್ಲಿ ನಂಬಿಕೆಯುಳ್ಳವರ ಮೇಲೆ ಹಿಂದೂ ಧರ್ಮವನ್ನು ಹೇರಿದಂತಲ್ಲವೇ?

ಹಾವೇರಿಯಲ್ಲಿ ಕೆಲ ವರ್ಷಗಳ ಹಿಂದೆ ದಲಿತ ಹೆಣ್ಣು ಮಗಳಿಗೆ ಕೆರೆ ನೀರನ್ನು ಪಡೆಯಲು ನಿರಾಕರಿಸಿದ ಘಟನೆ, ಚಿಕ್ಕಮಗಳೂರು ಜಿಲ್ಲೆಯ ಹಳ್ಳಿಯೊಂದರಲ್ಲಿ ಮೇಲ್ಜಾತಿಯವರು ದಲಿತರಿಗೆ ಮೂತ್ರ ಕುಡಿಸಿ ಅವಮಾನಿಸಿದ್ದು, ಅಷ್ಟೇಕೆ ಕರಾವಳಿ ಮತ್ತು ಮಲೆನಾಡಿನ ಬಹುತೇಕ ಕಡೆ ಈಗಲೂ ತೆಂಗಿನ ಗರಟೆಯಲ್ಲಿ ದಲಿತರಿಗೆ ನೀರು ಕೊಡುವ ಪದ್ಧತಿ,.. ಕೊಲ್ಲೂರು, ಶ್ರೀರಾಮಚಂದ್ರಾಪುರಮಠ ಮುಂತಾದ ಕಡೆ ಬ್ರಾಹ್ಮಣರಿಗೆ ಮತ್ತು ಉಳಿದವರಿಗೆ ಪಂಕ್ತಿಬೇಧ ಮಾಡುವುದು,.. ಇಂತಹ ಅಮಾನವೀಯ ಮತ್ತು ಸಂವಿಧಾನ ವಿರೋಧಿ ಕೃತ್ಯಗಳ ಬಗ್ಗೆ ಮನುಷ್ಯರನ್ನು ಮನುಷ್ಯರಂತೆ ಕೂಡ ಕಾಣಲಾರದ, ಕನಿಷ್ಠ ಗೌವರ ಕೂಡ ನೀಡದ ಇಂತಹ ಆಚರಣೆಗಳ ಬಗ್ಗೆ ಮಾತನಾಡದವರಿಗೆ ದಲಿತರ, ಹಿಂದುಳಿದವರ ಪರ ವಕಾಲತ್ತು ವಹಿಸುವ ಮತ್ತು ಅವರ ಉದ್ಧಾರಕರಂತೆ ವರ್ತಿಸುವ ಅಧಿಕಾರ ಕೊಟ್ಟವರಾರು?

ಇನ್ನು ಇಂತಹದ್ದರೆಲ್ಲದರ ಬಗ್ಗೆ ಮಾತನಾಡಬೇಕಾದ ದಲಿತ ಸಂಘಟನೆಗಳಾಗಲೀ, ಹಿಂದುಳಿದ ಜನಾಂಗಗಳ ಸಂಘಟನೆಗಳಾಗಲೀ ಬಹುತೇಕ ಪುಢಾರಿಗಳು, ಪುಂಡರ ಅಡ್ಡಗಳಾಗಿದ್ದು, ಇಂತಹ ಹುನ್ನಾರಗಳನ್ನು ಅರ್ಥಮಾಡಿಕೊಳ್ಳುವ ಸೂಕ್ಷ್ಮತೆಯನ್ನೇ ಕಳೆದುಕೊಂಡಿವೆ. ಸಾಹಿತಿ- ಬುದ್ಧಿಜೀವಿಗಳು ಬಿಡಿಎ ಸೈಟು, ವಾರ್ಷಿಕ ಪ್ರಶಸ್ತಿ- ಅಕಾಡೆಮಿ, ಪರಿಷತ್ಗಳ ನೇಮಕಕ್ಕೆ ನರಿಗಳಂತೆ ಕಾದುಕುಳಿತಿದ್ದಾರೆ. ಅಥವಾ ಇನ್ನಾವುದೋ ಮರ್ಜಿಗಳಿಗೆ ಬಲಿಯಾಗಿ ಮೌನವಾಗಿದ್ದಾರೆ.

ಇದೇ ಸ್ಥಿತಿ ಜಿಹಾದಿ ಅಮಲೇರಿಸಿಕೊಂಡಿರುವವರ ವಿಷಯದಲ್ಲೂ ಇದೆ. ಮೂರು ಹೊತ್ತು ಅನ್ನಕ್ಕೂ ಗತಿಯಿಲ್ಲದೆ ಬುದ್ಧಿವಂತನಿದ್ದರೂ ಓದು ಅರ್ಧಕ್ಕೇ ಬಿಟ್ಟು ಅಪ್ಪನೊಂದಿಗೆ ಗುಜರಿ ಅಂಗಡಿ ಕೆಲಸ ಮಾಡುವ, ಬೀದಿಯಲ್ಲಿ ಚಿಂದಿ ಆಯ್ದು ಕತ್ತಲೆಯನ್ನೇ ಬೆಳಕೆಂದು ಸಂಭ್ರಮಿಸುವ ತೀರಾ ದುರಂತದ ಸ್ಥಿತಿಯಲ್ಲಿ ಬಹುತೇಕ ಮುಸ್ಲಿಂ ಮಕ್ಕಳ ಪ್ರತಿಭೆ ಹಾಳಾಗುತ್ತಿದೆ. ಶಿಕ್ಷಿತರಾಗಿ, ಉನ್ನತ ಶಿಕ್ಷಣ ಪಡೆದು ಸಮಾಜ ಮತ್ತು ನಾಡಿಗೆ ಬೆಳಕು ತರಬಲ್ಲ ಶಕ್ತಿ ಮತ್ತು ಪ್ರತಿಭೆಯಿದ್ದವರ ಮೇಲಿನ ಕನಸುಗಳು ಕೂಡ ಈಗ ಭೀಕರ ದುಸ್ವಪ್ನಗಳಾಗುತ್ತಿವೆ. ಏಕೆಂದರೆ, ಜಿಹಾದಿ ಭಯೋತ್ಪಾದನೆಯ ಮುಂದಾಳುಗಳೆಲ್ಲಾ ಇದೀಗ ಉನ್ನತ ಶಿಕ್ಷಣ ಪಡೆದ ಮತ್ತು ಸಾಕಷ್ಟು ಆರ್ಥಿಕ ಅನುಕೂಲತೆ ಉಳ್ಳವರೇ ಎಂಬುದು ವಿಚಿತ್ರ. ಅಂದರೆ, ಶಿಕ್ಷಣವೆನ್ನುವುದು ಅವರನ್ನು ಮತ್ತಷ್ಟು ಧರ್ಮಾಂಧರನ್ನಾಗಿ ಮಾಡಿದೆ. ಅದೂ, ಧರ್ಮವನ್ನೂ ಮೀರಿ ಕಟ್ಟರ್ ಧರ್ಮೀಯರನ್ನು ಹೊರತುಪಡಿಸಿ ಉಳಿದ ಸುಧಾರಣಾವಾದಿ ಮುಸ್ಲೀಮರು ಕೂಡ ಅವರಿಗೆ ಗುರಿಯಾಗಿದ್ದಾರೆ(ಅಹಮದಾಬಾದ್ ಬಾಂಬ್ ದಾಳಿಯಲ್ಲಿ ನೊಂದವರಲ್ಲಿ ಬಹುತೇಕ ಮಂದಿ ಮುಸ್ಲಿಮರೇ!)

ಆ ಬಗ್ಗೆ ಕೂಡ ಮುಸ್ಲಿಂ ಲೇಖಕರು, ಚಿಂತಕರು ಮತ್ತು ರಾಜಕಾರಣಿಗಳದ್ದು ಮೌನವೇ. ಏಕೆ ಹೀಗೆ? ಧರ್ಮಾಂಧತೆಯ ಅಮಲೇರಿಸಿಕೊಂಡ ಕೆಲವರಿಂದಾಗಿ ಇಡೀ ಸಮುದಾಯವನ್ನು ಮತ್ತೊಂದು ಸಮುದಾಯ ಅನುಮಾನದಿಂದ, ದ್ವೇಷದಿಂದ ನೋಡುವ ಸ್ಥಿತಿ ನಿರ್ಮಾಣವಾಗುತ್ತಿದ್ದರೂ ಆ ಸಮುದಾಯದ ವಿವೇಕವಂತರು ಅಂತಹ ಧರ್ಮಾಂಧತೆಯನ್ನು ಏಕೆ ಖಂಡಿಸುತ್ತಿಲ್ಲ. ಅಂತಹವರು ತಮ್ಮ ವಾರಸುದಾರರಾಗಬೇಕಿಲ್ಲ ಎಂದು ಬಹಿರಂಗವಾಗಿ ಏಕೆ ಹೇಳುತ್ತಿಲ್ಲ?

ಹೀಗೆ ಒಟ್ಟಾರೆ, ಯಾರು ಯಾರೋ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ತಮ್ಮದೇ ಕಲ್ಪಿತ ಧರ್ಮವನ್ನು ಉಳಿದವರ ಮೇಲೆಲ್ಲಾ ಹೇರುವುದು ಮತ್ತು ಅವರನ್ನು ನಂಬಿಸಲು, ನಿಮ್ಮ ರಕ್ಷಕರು ನಾವೇ ಎಂದು ಬಿಂಬಿಸಿಕೊಳ್ಳಲು ಮತ್ತೊಂದು ಕಲ್ಪಿತ ವಿರೋಧಿ ಸಮುದಾಯವನ್ನು ಹೆಸರಿಸುವುದು, ಅದರ ಮೇಲೆ ದಾಳಿ ನಡೆಸುವುದು,… ಇದೆಲ್ಲ ಷಢ್ಯಂತ್ರಗಳನ್ನು, ಹುನ್ನಾರಗಳನ್ನು, ಹುಚ್ಚುತನಗಳನ್ನು ನಂಬಿಕೊಂಡು, ಕೇಳಿಸಿಕೊಂಡು ಹೋಗುವಷ್ಟು ಮಂಕು, ಬುದ್ಧಿಗೇಡಿಯಾಗಿ ಹೋಯ್ತೆ ನಮ್ಮ ಸಮಾಜ?!

ಯಾಕೆ ಯಾರೂ ಮೂಲಭೂತ ಪ್ರಶ್ನೆಗಳನ್ನು ಕೇಳುತ್ತಿಲ್ಲ… ದಯೆ ಇಲ್ಲದ ಧರ್ಮ ಅದಾವುದಯ್ಯಾ?