ಅಂಗುಲ ಹುಳುವಿನ ವಿನಯ

February 11, 2009

history1

ನೆಲದೆದೆಯ ಮೇಲೆ

ಕಲ್ಲು, ಮಣ್ಣು, ಕಸ, ಕಡ್ಡಿ,

ಹುಳ-ಹುಪ್ಪಟೆ, ಹಣ್ಣಲೆ, ಕೊರಡು,…

 

ಹಚ್ಚನೆ ಗರುಕೆ, ಅರಳು ಹೂ,

ತೊನೆವ ಬಳ್ಳಿ, ನಿಲುಕದ ಹೆಮ್ಮರ

ಹಬ್ಬುವ ಹರೆ, ಹನಿಯುವ ಜೇನು,…

 

ಪಲ್ಲವಿಸುವ ಚೆಲುವು

ಪಸರಿಸುವ ಗಂಧ

ಜೀವ ಸಂಭ್ರಮದ ಜಾತ್ರೆಯಲಿ…

 

ಮೈಮರೆಯುವ ಮನದ

ಮೂಲೆಯಿಂದ ಎದ್ದುಬರುವ

ಚರಿತ್ರೆಯ ನೆನಪು!

 

ಕಲ್ಲಿಗಂಟಿದ ನೆತ್ತರು,

ಮಣ್ಣಿಗಂಟಿದ ಬೆವರು,

ಕಾಲ ಹರಿವಿನಲಿ ಕೊಚ್ಚಿಹೋಗದ ಕಲೆ..!

 

ಹಸಿರ ನಲಿವು, ಹೂವ ಒಲವು

ಮರದ ಹಮ್ಮು, ಜೇನ ಹಿತ…

 

ಎಲ್ಲವ ತೂಗುವ ಕೈಗೆ

ಕಸುವು ಕೊಟ್ಟ ಪ್ರಾಚ್ಯ ನಿಟ್ಟುಸಿರು

 ತಿದಿಯೊತ್ತುತ್ತಿದೆ ತಣ್ಣಗೆ

ಸರಿವ ಅಂಗುಲ ಹುಳುವಿನ

ಪುರಾತನ ವಿನಯದಲ್ಲೂ…!