
ಅವನಲ್ಲದೆ ದೇವರು
ಮತ್ತೊಬ್ಬನಿಲ್ಲವೆಂದೇ
ನಂಬಿದವರೆಂದರು:
ಅವನೆಂದರೆ ವಿಶ್ವರೂಪ!
ಅವನೇ ವಿಶಿಷ್ಟ, ಅವನಲ್ಲದ
ದೈವ ದೈವವೇ ಎಂದು
ಜರೆದವರೆಂದರು:
ಅವನೆಂದರೆ ಸರ್ವಶಕ್ತ!
ಅದೆಲ್ಲ, ದ್ವೈತ-
ಅದ್ವೈತ-
ವಿಶಿಷ್ಟಾದ್ವೈತದ ಮಾತಾಯಿತು…
ರಾಧೆಯಂಥ ಮುಗುದೆಗೆ
ಅವನು ದೇಹಗೊಳಲಿನ ಜೀವನಾದದ ಉಸಿರು…
ಯಶೋಧೆಯಂಥ ಅಮ್ಮಗೆ
ಅವನು ಬಾಯಲ್ಲೇ ಬ್ರಹ್ಮಾಂಡ ತೋರುವ ಮಹಾತುಂಟ…
ಯುದ್ಧ ಕಲಿ ಅರ್ಜುನಗೆ- ಶಪಥನಿಷ್ಠೆ ಕೃಷ್ಣೆಗೆ
ಅವನು ಜೀವ- ಸಖ…
ಪುಟದ ನಡುವಿನ ನವಿಲುಗರಿಯಲ್ಲೇ ಅವನ
ಕಾಣುವ ಪೋರಿಗೆ ಸೆಳೆವ ಸೂಜಿಗಲ್ಲು…
… ಬಳಿ ಸುಳಿದವರಿಗೆಲ್ಲ
ಬಗೆ- ಬಗೆಯ ಬಾಂಧವ್ಯದ ಬಯಲು…
ಒಳ-ಬಗೆಗೆ ದಕ್ಕಷ್ಟು ಭಾವ-ಜೀವ,
ಏರುವೆತ್ತರದ ಹಂಬಲದ ಮಿಂಚು
ಈ ಗೊಲ್ಲರ ಹುಡುಗ…!