Feed on
Posts
Comments

ಇಡಿಯಾಗುವುದೊಂದು

ಮೆಲುನಡಿಗೆಯ ಸಾವು.

ನಾನಂದುಕೊಂಡ, ಕನಸಿದ

ಎಲ್ಲವೂ ತದ್ರೂಪದಂತೆ

ನಿಜವಾದರೆ,…..

ಬದುಕೊಂದು ಕೊನೆಯಿಲ್ಲದ

ಯಶಸ್ಸುಗಳ ಹಳಸಲು ಪಲ್ಲವಿ.

ತಪ್ಪು;

ನನ್ನೆಲ್ಲಾ ಅನಿರೀಕ್ಷಿತ ಅನುಭವದಾಗರ.

ಅದಕ್ಕೆಂದೇ ನನಗೆ ನಾನೇ ವಂಚಿಸಿಕೊಂಡಂತೆ

ತಪ್ಪುಗಳಿಗೆ ಒಡ್ಡಿಕೊಳ್ಳುತ್ತೇನೆ ಸದಾ….

ಆದರೂ,

ನಾ ಸರ್ವಶಕ್ತ, ತುಸು ಜಾಗ್ರತೆ ಜತೆಗಿದ್ದರೆ,

ನಾನೀ ಸ್ವರ್ಗದ ಮೆಟ್ಟಿಲು ಜಾರಲಾರೆನೆನ್ನುವ

ಭ್ರಮೆಯ ಕೂಸು;

ತಪ್ಪಿಗೆ ನಾನೇ ಅಂಜುವ ಪರಿ.

ಕೊನೆಗೂ ತಪ್ಪು-

ನಾನಿರುವ ಪರಿಗೊಂದು ರುಜುವಾತು,

ನಾನಾಗುವ ಸ್ಥಿತಿಗೊಂದು ಕದಲಿಕೆ

ವಾಸ್ತವದ ಹೊರಗುಳಿವ ನನಗೊಂದು ಕಣ್ಗಾವಲು.

ತಪ್ಪುಗಳಿಗೆ ಕಿವಿಯೊಡ್ಡಿದಾಗೆಲ್ಲಾ

ನಾನು ಇಂಚಿಂಚೇ ಬೆಳೆದೆ!

(ಇದು ಹ್ಯೂ ಪ್ರಾಥರ್ ಎಂಬ ಅಮೆರಿಕನ್ ಲೇಖಕನ ‘ನೋಟ್ಸ್ ಟು ಮೈಸೆಲ್ಫ್’ ಕೃತಿಯಲ್ಲಿನ ಒಂದು ‘ನೋಟ್’ನ ಭಾವಾನುವಾದ ಕಾವ್ಯ ರೂಪ 2000ನೇ ಸಾಲಿನಲ್ಲಿ ಅನುವಾದಿಸಿದ್ದು)

Shaded with lazy sun light

rushing hurry travelers….

On the busy hi-tech road,

hectic run,…

the slow, steady crawl ling life! 

Speedy wheels, noisy horns

tremuoring grounds,

there crawls a silent life

as if The Almighty is walking! 

Like a sleepy- forest

itself came to metro,…

this fragile beauty is moving…

inch by inch towards endless goal! 

Like the life

Which cralls on reality helplessly!?

(ಇದು ನನ್ನದೇ ಪದ್ಯವೊಂದರ (ಕೆಟ್ಟ!) ಅನುವಾದ)

 ಸಣಕಲು ಗಿಡದ

ಸವೆದ ಹಸಿರಿನ ಆಳದಿಂದ

ಹೂವೆಂಬ ಚೆಲುವು ಉಕ್ಕಿ ಬಂದರೆ

ಅದು ಸಖತ್ ಹಾಟ್ ಮಗಾ! 

ಹೊಗೆ ಕುಡಿದು ಸುಸ್ತಾಗಿ

ಹೊಯ್ದಾಡಿ, ಹೊರಳಾಡಿ ನಿದ್ದೆಗೆಟ್ಟ

ನಗರದೆದೆಯ ಮೇಲೆ ಕುಡಿಬಿಸಲು ಕುಣಿದರೆ,…

ಸಖತ್ ಹಾಟ್ ಮಗಾ! 

 

ಕಸದ ತೊಟ್ಟಿಯಲ್ಲಿ ಚೀರುವ

ಹಸುಗೂಸಿಗೆ ಪರಿತ್ಯಕ್ತೆ

ಹಾಲುಣಿಸಿ ಅಮ್ಮನಾದರೆ

ಆಗ ಸಖತ್ ಹಾಟ್ ಮಗಾ! 

 

ಕಣ್ಣ ಹೊಳಪ ಸೆಳೆತ ಕಳೆದು

ಮೈಯ ಅಂದದ ಮಿಂಚು ಮರೆಯಾಗಿ

ಮಾಗಿದೆದೆಯಲ್ಲೂ ಮತ್ತೊಂದು ಜೀವವ ಕಂಡು

ಪ್ರೀತಿ ಉಕ್ಕಿದರೆ,… ಮಗಾ

ಅದು ಸಖತ್ ಹಾಟ್ !  

 bison1.jpg 

ಮೂಗಿಗೆ ಅಡರುತ್ತಿತ್ತು ಹೆಜ್ಜೇನಿನ ಸುವಾಸನೆ. ಅದೂ ತಾರಿ ಮರದ ಹೂವಿನ ಮಕರಂಧ ಕದ್ದು ಜೇನು ಹುಳುಗಳು ಕೂಡಿಟ್ಟ ಗಂಧ ಇನ್ನೇನು ತುಪ್ಪವಾಗಲು ಕಾಯುತ್ತಿದ್ದ ಘಳಿಗೆ. ಮುಂಗಾರಿನ ಮೊದಲ ಮಳೆ ಹನಿಯುತ್ತಲೇ ನಾಲ್ಕೇ ಹನಿಗೆ ಗಂಧ ಮಧುವಾಗುತ್ತದೆ. ತೀಡುವ ಜೇನ ಗಂಧದ ನಡುವೆ ತೇಲಿ ಬರುವ ಲಂಟಾನದ ಹೂವುಗಳನ್ನು ಹಾದುಕೊಂಡೇ ನುಗ್ಗುತ್ತಿದ್ದರು ಆ ಹೈಕಳು.

ಇನ್ನೇನು ಬೇಸಿಗೆಯ ತುದಿಗಾಲವೂ ಮುಗಿಯುವ ಹೊತ್ತು, ಮಳೆಗಾಲದಲ್ಲಿ ಎತ್ತಿನ ಬಂಡಿಯ ದಾರಿ, ಜಾನುವಾರು-ಕಾಡುಪ್ರಾಣಿಗಳ ಕಾಲುಹಾದಿಗಳನ್ನು ಬಿಟ್ಟರೆ ಇನ್ನೆಲ್ಲೂ ನಾಲ್ಕು ಹೆಜ್ಜೆ ಇಡಲೂ ಆಗದಷ್ಟು ಇಕ್ಕಾಟಾಗಿ ಹಬ್ಬುವ ಲಂಟಾನ ಇದೀಗ ಹೂ ಬಿಟ್ಟು, ಒಣಗಿ ನಿಂತಿದೆ. ಹಾಗಾಗಿ ಈಗ ತುಸು ತೆಳು ಮೆಳೆಗಳಿದ್ದ ಕಡೆ ಕಡ್ಡಿ ಮುರಿದುಕೊಳ್ಳುತ್ತಲೇ ನುಗ್ಗುವುದು ಸುಲಭ. ಇವರೂ ಹಾಗೇ ನುಗ್ಗುತ್ತಿದ್ದರು. ಅವರಿಗಿಂತಲೂ ಜತೆಯಲ್ಲಿದ್ದ ನಾಯಿಗಳು ಹತ್ತಾರು ಹೆಜ್ಜೆ ಮುಂದೆಯೇ ಗುಂಪಾಗಿ ಸಾಗುತ್ತಿದ್ದವು. ಅವುಗಳ ಉತ್ಸಾಹಕ್ಕಂತೂ ಪಾರವೇ ಇರಲಿಲ್ಲ. ನಾಲ್ಕು ಹೆಜ್ಜೆ ಓಡುವುದು, ಹಾಗೆ ಓಡುತ್ತಲೇ ಒಂದಿಷ್ಟು ದೂರ ಹೋಗಿ ಸುತ್ತೆಲ್ಲಾ ಪೊದೆಗಳನ್ನು ನುಗ್ಗಿ ಕಾಡುಪ್ರಾಣಿಗಳಿಗಾಗಿ ಹುಡುಕಾಡಿ ಮತ್ತೆ ಈ ಐವರು ‘ಸರದಾರ’ ಒಡೆಯರ ಬಳಿ ಬಂದು ತನ್ನ ಸಾಹಸದತ್ತ ಗಮನಸೆಳೆಯಲು ಕುಯ್ಯುಂಗುಟ್ಟುವುದು ನಡೆದೇ ಇತ್ತು.

ನೆತ್ತಿ ಮೇಲೆ ಸೂರ್ಯ ಬಂದಿದ್ದರೂ ಕಾಡಿನ ದೊಡ್ಡ-ದೊಡ್ಡ ಮರಗಳೆಲ್ಲಾ ಅದಾಗಲೇ ವಸಂತನ ಪ್ರೇರಣೆಯಿಂದ ಚಿಗುರಿಕೊಂಡಿದ್ದರಿಂದ ನೆರಳು ಆಹ್ಲಾದಕರವಾಗೇ ಇತ್ತು. ಹೋಗುತ್ತಿದ್ದಂತೆಯೇ ಎಂದಿನ ಅಭ್ಯಾಸದಂತೆ ಬಿದಿರು ಮೆಳೆಗಳನ್ನು ಹಣಕು ಹಾಕುವುದು ಯಾಂತ್ರಿಕವಾಗಿ ನಡೆದೇ ಇತ್ತು. ಅದು ಅಲ್ಲಿ ಬೇಟೆಯ ಪ್ರಾಣಿಗಳು ಇರಬಹುದು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಬಿದಿರು ಮೆಳೆಗಳಲ್ಲೇ ವಿಶೇಷವಾಗಿ ಕಟ್ಟುವ ಕೋಲು ಜೇನು ಹುಡುಕುವುದಕ್ಕಾಗಿ. ಪ್ರತಿ ಬಾರಿ ಹೀಗೆ ಕಾಡಿಗೆ ಬಂದಾಗಲೂ ಅವರು ಕನಿಷ್ಠ ಒಂದಾದರೂ ಕೋಲು ಜೇನು ಕೀಳದೆ ಮನೆಗೆ ಮರಳುವುದು ಅಪರೂಪವೇ ಸರಿ. ಹಾಗೇ ಹೋಗುತ್ತಿರುವಾಗ- ಮನೆಯಿಂದ ಇನ್ನೂ ಒಂದೂವರೆ ಮೈಲಿಯಷ್ಟು ದೂರವೂ ಕಾಡಿನೊಳಗೆ ಬಂದಿರಲಿಲ್ಲ- ನಾಯಿಗಳೆಲ್ಲಾ ಒಮ್ಮೆಗೇ ಜಿಂಕೆಯೋ, ಕಾಡು ಹಂದಿಯೋ ಕಂಡಂತೆ ಉಸಿರುಕಟ್ಟಿಕೊಂಡು ಬೆನ್ನಟ್ಟಿದವು.

ಅವರ ಗುಂಪಿನಲ್ಲೇ ತುಸು ದೊಡ್ಡವನಾದ ರಮೇಶ್ ಕೈಯಲ್ಲಿದ್ದ ಬಂದೂಕು ಹಿಡಿದುಕೊಂಡೇ ನಾಯಿಗಳು ಹೋದ ದಿಕ್ಕಿನತ್ತ ದೌಡಾಯಿಸಿದ. ಲಂಟಾನದ ಮೆಳೆ, ಕಲ್ಲು-ಮುಳ್ಳು ಏನೊಂದನ್ನೂ ಲೆಕ್ಕಿಸದೆ ಓಡಿದ ಅವರ ದಾರಿಯನ್ನೇ ಉಳಿದ ಕೃಷ್ಣ, ಕೇಶವ, ಕಿರಣರೂ ಅನುಸರಿಸಿದರು. ಗುಂಪಿನಲ್ಲಿ ಕಿರಿಯವನೂ ಕಾಡಿನ ಅನುಭವವಾಗಲಿ, ಶಿಕಾರಿಯ ಸೂಕ್ಷ್ಮಗಳಾಗಲಿ ಅಷ್ಟೊಂದು ಅರಿಯದ ಶ್ರೀಧರ ಮಾತ್ರ ಅವರೆಲ್ಲಾ ಓಡುತ್ತಲೇ ಕಾಲು ನಡುಗುತ್ತಾ ಇನ್ನೇನು ಮಾಡಲು ಗತ್ಯಂತರವಿಲ್ಲ ಎಂಬಂತೆ ಅಣ್ಣಾ… ಎನ್ನುತ್ತಾ ಅವರನ್ನು ಹಿಂಬಾಲಿಸಿದ. ಹಾಗೆ ಓಡಿ ಸಾಕಷ್ಟು ದೂರ ಹೋದರೂ ನಾಯಿಗಳು ಮಾತ್ರ ನುಗ್ಗುತ್ತಲೇ ಇದ್ದವು. ಇದು ಜಿಂಕೆಯೇ ಇರಬೇಕು ಎಂದುಕೊಂಡ ರಮೇಶ ಹಿಂದಿನವರಿಗೆಲ್ಲಾ ಏಯ್ ಬರ್ರೋ ಬೇಗ, ಜಿಂಕೆ ಕಣ್ರೋ ಎಂದು ಹುರಿದುಂಬಿಸುತ್ತಿದ್ದ. ಆದರೂ ಹಿಂದಿದ್ದವರಿಗೆ ಭಯ, ಅದು ಜಿಂಕೆಯೇ ಎಂದು ನೋಡಿದವರಾರು, ಕಾಡು ಹಂದಿಯಾಗಿದ್ದರೆ, ನಾಯಿಗಳ ಮೇಲಿನ ಸಿಟ್ಟಿಗೆ ನಮ್ಮ ಮೇಲೆ ನುಗ್ಗಿದರೆ! ಯೋಚಿಸುತ್ತಲೇ ಒಬ್ಬೊಬ್ಬರೇ ಬೆವರ ತೊಡಗಿದರು. ಹಾಗಂತ ನಿಂತುಕೊಳ್ಳುವ ಹಾಗೂ ಇಲ್ಲ, ಕಾಡು ಬೇರೆ, ಆ ಪ್ರಾಣಿ ಎತ್ತ ಹೋಗಿ, ಎತ್ತಲಿಂದ ಬರುತ್ತದೆಯೋ ಹೇಗೆ ಗೊತ್ತು? ರಮೇಶನ ಹಿಂದೆ ಓಡಿದರೆ ಕನಿಷ್ಠ ಅವನ ಬಳಿ ಬಂದೂಕಾದರೂ ಇದೆ. ಗುಂಡು ಹಾರಿಸಿಯಾದರೂ ಹೆದರಿಸಬಹುದು ಎಂದುಕೊಂಡು ಕುರುಡಾಗಿ ಅವನು ಹೋದ ಕಡೆ ಓಡತೊಡಗಿದರು. ಅವರ ಸ್ಥಿತಿ ಹೇಗಾಗಿತ್ತೆಂದರೆ, ಶಿಕಾರಿ ಮಾಡುವುದಿರಲಿ, ಅಲ್ಲಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಮನೆ ಸೇರಿದರೆ ಸಾಕಪ್ಪಾ ಎನ್ನುವಂತಾಗಿತ್ತು.

ಒಂದಷ್ಟು ದೂರದಲ್ಲಿ ಒಂದು ಎತ್ತಿನ ಗಾಡಿಯ ರಸ್ತೆ ಕಂಡಿತು. ಸರಿ, ರಸ್ತೆಯಾದರೂ ಸಿಗ್ತು ಎಂದುಕೊಂಡು ಧೈರ್ಯ ತಂದುಕೊಂಡು ತುಸು ನಿಧಾನಿಸಿದರು. ನಾಯಿಗಳು ಅಲ್ಲೇ ಸಮೀಪದ ಪೊದೆಯ ಬಳಿ ನಿಂತುಬಿಟ್ಟವು! ಓಹೋ ಆ ಪೊದೆಯಲ್ಲೇ ಇರಬೇಕು ಜಿಂಕೆ ಎಂದುಕೊಂಡು ಅವರು ನಿಧಾನಕ್ಕೆ ಬಳಿ ಸಾರಿದರು! ಇಲ್ಲ? ನಾಯಿಗಳು ಪೊದೆಯ ಬಳಿ ನಿಂತಿದ್ದರೂ ನೋಡುತ್ತಿದ್ದುದು ಮಾತ್ರ ಆ ದಾರಿಯ ಆಚೆ ಬದಿಯ ಕಡೆಗೆ! ಸರಿ ಎಂದು ತುಸು ಮುಂದೆ ಬಾಗಿ ರಸ್ತೆಯ ತಿರುವಿನ ಆಚೆ ಬದಿಗೆ ಕಣ್ಣು ಹಾಯಿಸಿದ ರಮೇಶ ಒಂದೇ ಸಮನೆ ಬಿಳಿಚಿಕೊಂಡು “ಓ… ಓಡ್ರೋ ಕಾಡುಕೋಣ….” ಎಂದು ಎದ್ನೋಬಿದ್ನೋ ಎಂದು ಹಿಂತಿರುಗಿ ಓಟಕಿತ್ತ!!

ಮೊದಲೇ ಅಂಜಿ ಕೈಕಾಲು ನಡುಕದಿಂದ ಕಂಗೆಟ್ಟು ಹೋಗಿದ್ದ ಇತರ ನಾಲ್ವರು ‘ಶಿಕಾರಿಧಾರ’ರಿಗೆ ಜಂಘಾಬಲವೇ ಉಡುಗಿ ಹೋಯಿತು. ಅವರಿಗೆ ಏನಾಗುತ್ತಿದೆ ಎಂಬುದು ಅರಿವಿಗೆ ಬರುವ ಮುನ್ನವೇ ಬೆನ್ನು ತಿರುಗಿಸಿ ಹತ್ತಾರು ಗಜ ದೂರಕ್ಕೆ ಬಂದಿದ್ದರು. ಸಾಕಷ್ಟು ದೂರಕ್ಕೆ ಬಂದ ನಂತರ ಒಮ್ಮೆ ಹಿಂತಿರುಗಿ ನೋಡಿ ‘ಅದು’ ಬಂದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ‘ಮರ ಹತ್ರೋ ಮರ ಹತ್ರೋ’ ಎಂದು ಒಬ್ಬರಿಗೊಬ್ಬರು ಆಪತ್ಕಾಲದ ಉಪಾಯ ನೆನಪಿಸಿಕೊಂಡು ಹತ್ತಿರದಲ್ಲೇ ಇದ್ದ ಚಿಕ್ಕ ಆಲದ ಮರವೇರಿದರು. ರಮೇಶ, ಕೃಷ್ಣ, ಕೇಶವ ಮತ್ತು ಕಿರಣ ಏನೋ ಮರ ಹತ್ತಿಯೇ ಬಿಟ್ಟರು. ಮರ ಹತ್ತುವುದು ಅಭ್ಯಾಸವಿರದ ಶ್ರೀಧರ ಮಾತ್ರ ಅಳುವುದೊಂದು ಬಾಕಿ. “ಏಯ್ ನನ್ನೂ ಕರೆದುಕೊಳ್ರೋ” ಎನ್ನುತ್ತಾ ಬಿಳಿಲು ಹಿಡಿದುಕೊಂಡು ನೇತಾಡುತ್ತಿದ್ದ, ಕೈ ಜಾರುತ್ತಲೇ ನೆಲಕ್ಕೆ ದೊಪ್ಪನೆ ಬೀಳುವುದು, ಮತ್ತೆ ಬಿಳಿಲು ಹಿಡಿದು ಗುದ್ದಾಡುವುದು… ಅಷ್ಟರಲ್ಲಿ ರಮೇಶ ನಿಧಾನಕ್ಕೆ ಮರದ ಬೊಡ್ಡೆಯ ಬಳಿ ಬಂದು ಅಂತೂ ಕೈ ನೀಡಿ ಶ್ರೀಧರನನ್ನು ಮೇಲಕ್ಕೆ ಎಳೆದುಕೊಂಡ.

ಎಲ್ಲರೂ ಮರವೇರಿದ ಮೇಲೆ ನಾಯಿಗಳನ್ನು ಕರೆದರು. ಅವು ಒಂದೆರೆಡು ಹೆಜ್ಜೆ ಹಿಂದಕ್ಕೆ ಬರುವುದು ಮತ್ತೆ ಗುರ್ ಎನ್ನುತ್ತಾ ಆ ಪ್ರಾಣಿಯತ್ತ ನುಗ್ಗುವುದು, ಅತ್ತ ಹೋಗಿ ಎರಗಲೂ ಆಗದೆ, ಇತ್ತ ಬಿಟ್ಟು ಬರಲೂ ಆಗದೆ ನಾಯಿಗಳೂ ವಿಚಿತ್ರ ಸಂದಿಗ್ಧತೆಯಲ್ಲಿದ್ದಂತಿತ್ತು. ಮುಂದಕ್ಕೆ ಹೋಗಲೂ ಧೈರ್ಯವಿಲ್ಲದೆ, ಹಿಂದಕ್ಕೂ ಬರಲೂ ಆಗದೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ ಜೋರಾಗಿ ಕೂಗುವುದು, ಮತ್ತೆ ವಾಪಸ್ ಕುಯ್ಯುಂಗುಟ್ಟುಕೊಂಡು ಚಡಪಡಿಸುವುದು ಮಾಡುತ್ತಿದ್ದವು.

ಕೃಷ್ಣ “ಅದನ್ನು ನೀನು ನೋಡಿದ್ಯಾ…. ಕಾಡುಕೋಣನೇನಾ…” ಎಂದ. “ನಿಜವಾಗ್ಲೂ ಕಾಡುಕೋಣನೇನೋ…” ಎಂದ ಕಿರಣ. ಎಂದೂ ತಾವು ಹುಡುಗರೇ ಸೇರಿ ಶಿಕಾರಿಗೆ ಬಂದಿರದಿದ್ದ ಅವರಿಗೆ ಅಂದು ಮೊದಲ ಬಾರಿ ಮನೆಯವರ ಕಣ್ಣು ತಪ್ಪಿಸಿ ಬಂದೂಕು ಹಿಡಿದುಕೊಂಡು ಬಂದು ಸಿಕ್ಕಿಬಿದ್ದಿವೆಲ್ಲಾ ಎಂಬ ದಿಗಿಲು ಶುರುವಾಗಿತ್ತು. ರಮೇಶ “ಹ್ಞೂಂ ಕಣ್ರೋ ಅದು ಕಾಡುಕೋಣನೇ… ಕೊಂಬು ಹೆಂಗಿದ್ವು ಗೊತ್ತಾ… ಒಂಟಿ ಕಣ್ರೋ, ಗಮಯ… ಮೈಯೆಲ್ಲಾ ಎಣ್ಣೆ ಹಾಕಿದಂಗೆ ಹೊಳೀತಿತ್ತು…. ” ಎಂದು ತಾನು ಕಂಡ ಪ್ರಾಣಿ ಕಾಡುಕೋಣವೇ ಎಂದು ವಿವರಿಸಿದ. “ಹಾಗಾದರೆ ಏನು ಮಾಡೋದು… ಒಂಟಿ ಬೇರೆ ಅಂದ್ರೆ ಅದು ಗಾಯಗೊಂಡಿದ್ದೇ ಇರಬೇಕು. ಕೆಳಗೆ ಇಳಿದ್ರೆ ನಮ್ಮನ್ನು ಬಿಡಲ್ಲ…” ಎಂದು ಕೇಶವ ದಿಗಿಲಾದ. ಶ್ರೀಧರನ ಕತೆಯಂತೂ ಅಯೋಮಯ!

ಮರವೇರಿ ಕೂತು ಒಂದು ತಾಸಾಯಿತು. ನಾಯಿಗಳು ಮಾತ್ರ ಎಷ್ಟು ಕೂಗಿದರೂ ಬರಲೊಲ್ಲವು.. ಮತ್ತೂ ಅರ್ಧ ತಾಸು ಕಳೆಯಿತು… ಕೊನೆಗೆ ಇನ್ನೇನು ಮಾಡುವುದು ಕಾಡಿಗೆ ಬಿದಿರು ಬೊಂಬಿಗೋ, ಕಟ್ಟಿಗೆ ಕಡಿಯಲೋ ಬಂದವರು ಯಾರಾದರೂ ಇರಬಹುದು ಎಂದು ಜೋರಾಗಿ ಒಮ್ಮೆ ಕೂಗಿದ ರಮೇಶ. ಯಾರೂ ಓಗೊಡಲಿಲ್ಲ. ಮತ್ತೆ ಕೂಗಿದ… ಯಾರೋ ಕೂಗಿದಂತಾಯಿತು. ಮತ್ತೆ ಕೂಗಿದ. ಅತ್ತ ಕಡೆಯಿಂದ “ಯಾರೋ…” ಎಂಬ ಧ್ವನಿ ಕೇಳಿತು. ಜತೆಗೆ ಮತ್ತೊಂದು ಧ್ವನಿಯೂ ಮಾತನಾಡುವುದು ಕೇಳಿಸಿತು. ಅವರೆಡೂ ಧ್ವನಿಗಳು ಕರೆಯುತ್ತಲೇ ಇವರತ್ತ ಅದೇ ರಸ್ತೆ ಕೂಡಿ ಬರುತ್ತಿದ್ದವು. ನಂತರ ಹತ್ತಿರಕ್ಕೆ ಬಂದ ಅವರು ಹೇಳಿದ್ದು, “ಅಲ್ರೋ ಹುಚ್ಚು ಹುಡುಗರಾ ಅದು ಕಾಡುಕೋಣ ಅಲ್ರೋ…. ಇಲ್ಲೇ ಆಚೆ ದಿಬ್ಬದ ಮನೆಯ ಕೋಣ. ನಿಮ್ಮ ನಾಯಿ ಕೂಗಿದ್ದು, ಕೋಣನ್ನ ನೋಡಿ ಅಲ್ಲಾ,.. ಯಾವುದೋ ಓತಿನೋ, ಹಾವುರಾಣಿಯನ್ನೋ ಇರಬೇಕ್ರೋ” ಎಂದು!

ಭಯದಲ್ಲಿ ಏನು, ಎತ್ತ ಎಂದೂ ಪರಾಂಬರಿಸಿದ ಹುಡುಗರ ಮೊದಲ ಶಿಕಾರಿಯೇ ಹುಸಿಯಾಗಿತ್ತು! ಅಂತೂ ಮರವಿಳಿದು ನಿಧಾನಕ್ಕೆ ಎಲ್ಲರೂ ಮನೆಯ ಕಡೆ ಹೆಜ್ಜೆಹಾಕಿದರು!! ನಾಯಿಗಳ ಆಟಕ್ಕೆ ತಾವೇ ಶಿಕಾರಿಯಾದಂತೆ.

_thy-will-be-done.jpg

ಒಂಟಿ, ಒಬ್ಬೊಂಟಿ.

ಸುತ್ತೆಲ್ಲಾ; ಎದೆ ನಡುಗಿಸುವ ಸದ್ದು-

ಭರ್ರನೆ ಎರಗುವ ಬಸ್ಸು-ಕಾರು-ಸ್ಕೂಟರು,

ಸರ್ರನೆ ಮೇಲೇರಿ ಬರುವ ಚಕ್ರ ಪ್ರವಾಹ,

ಹೆಜ್ಜೆಯೂರಲೂ ಆಗದ ನಡುಗುವ ನೆಲ…

ನಡುವೆ ತೆವಳುವ ಒಂಟಿ ಜೀವ…

ಭಸ್ಮಮಾಡುವ ಪ್ರಖರ ಬೆಳಕು

ನಕ್ಷತ್ರಪುಂಜವೇ ಕಳಚಿದಂತೆ,

ಮೇಲೆ ಉರಿವ ಬೀದಿಗಳು,

ಬೆಳಕಿನ ಸುಳಿಯಲಿ ಮಂದ ನಡಿಗೆ,

ಕಣ್ಣ ಆಸರೆಯೂ ಕುರುಡು

ದಾರಿ ಸಾಗಲೇಬೇಕು, ಒಂಟಿ ಬೇರೆ…..

ಭೂಮಿ ಬಿರಿವ ಭೀತಿ,

ಬೆಚ್ಚಿ ಬೀಳಿಸುವ ಕೂಗು,

ಗುಡುಗು-ಸಿಡಿಲಿನ ಬೆದರಿಕೆ,

ಹನಿಯೊಡೆದರೆ ಹೊಳೆ ಬರುವ ಹೆದರಿಕೆ

ಇಂಚಿಂಚಾಗಿ ಸರಿಯುತಿದೆ

ಸದ್ದಿಲ್ಲದೆ ನುಗ್ಗುತಿದೆ ಏಕಾಂಗಿ…

ಕಿಕ್ಕಿರಿದ ಹೈಟೆಕ್ ರಸ್ತೆಯ

ನಡುವೆ ಶರವೇಗದ ಉರುಳು

ನಡುವೆ ಮಂದಗತಿ;

ಮೆಟ್ರೋ ಫ್ಲೈ-ಓವರ್ ಮೇಲೆ ಸಹ್ಯಾದ್ರಿ!

ಮೃದು ಚೆಲುವಿನ ಧ್ಯಾನ್ಯಸ್ಥ ನಡೆ…

ನಿಜದಂಗಳದಲ್ಲಿ ಬದುಕು

ಸಾವಿನ ಜೂಜಿಗಿಟ್ಟ ಕವಡೆ!

dropನೀರ ಮೇಲೆ ಅಲೆಯ ಉಂಗುರ…

ಅವಳ ಕಣ್ಣಿನ ತುಂಬ

ಮಿಂಚು ಮಿನುಗುವ ಬೆಳಕು…

ಹನಿಒಡೆದ ಬಳಿಕದ ಹೊಂಬಿಸಿಲ

ಎಸಳು ಕಿರುನಗೆಯ ಮಂದಲೆ.

ಅವನ ಕುಡಿನೋಟದ

ಸಿಡಿಲ ತಾಕಿದ ಕ್ಷಣ

ಪ್ರೀತಿಯ ಮಳೆ…. ಧೋ…

ಮಳೆ-ಮನಸ್ಸುಗಳ

ಪುಲಕ- ಮೈಯೊಳಗೆ!!

ಜೀವ ಪ್ರೀತಿಯ

ಘಳಿಗೆಗೆ ಹನಿಯ ಬೆಳಗು!!

 ರಶ್ಮಿ ಕಣ್ಣು ತೆರೆದಾಗ ಸುತ್ತಲೂ ಒಮ್ಮೆ ನೋಡಿ ಏನೊಂದೂ ತಿಳಿಯದೆ ಮಂಕಾದಳು. ತಾನು ಇಲ್ಲೇಕೆ ಇದ್ದೇನೆ, ಏನು ಈ ನೋವು, ಇದೇನು ಆಸ್ಪತ್ರೆಯೇ.. ಅಯ್ಯೋ ಏಕೆ, ಈ ಡ್ರಿಪ್ ಹಾಕಿದ್ದಾರೆ… ಎಂದುಕೊಳ್ಳುತ್ತಲೇ ಗಾಬರಿಯಾಗಿ ಮತ್ತೆ ಪ್ರಜ್ಞೆ ಕಳೆದುಕೊಂಡಳು. ಯಾರನ್ನಾದರೂ ಕೇಳೋಣ ಎಂದರೆ ಸ್ಪೆಷಲ್ ವಾರ್ಡಿನಲ್ಲಿ ಒಂಟಿ ಬೆಡ್ ಮೇಲಿನ ತಾನು ಮಾತ್ರ. ಪಕ್ಕದಲ್ಲಿ ಹಣ್ಣು-ಎಳೆನೀರುಗಳನ್ನು ಜೋಡಿಸಿಟ್ಟಿದ್ದ ಟಿಪಾಯಿ, ಎದುರಿಗೆ ನೆಟ್ಟಗೆ ನಿಂತಿದ್ದ ಕಬ್ಬಿಣದ ಸರಳಿಗೆ ತಲೆಕೆಳಗಾಗಿ ನೇತುಬಿದ್ದ ಡ್ರಿಪ್ ಸ್ಯಾಚೆ, ಅದರಿಂದ ಸಪೂರ ಕೊಳವೆಯುದ್ದಕ್ಕೂ ಹನಿಯಿಕ್ಕುತ್ತಿದ್ದ ಜೀವ ಜಲ! ಎಲ್ಲವನ್ನೂ ನೋಡುತ್ತಿದ್ದಂತೆ ಅರ್ಥವಾಗತೊಡಗಿತು. ಅಶೋಕನ ನೆನಪಾಯಿತು. ಕನಸಿನಲ್ಲೆಂಬಂತೆ ಅವನ ಹೆಸರನ್ನು ಗುನುಗಿದಳು. ತುಟಿ ಬಿಚ್ಚುತ್ತಿದ್ದಂತೆ ತಲೆಯಲ್ಲಿ ಸಿಡಿಲು ಸಿಡಿದಂತಾಯಿತು. ಅಷ್ಟರಲ್ಲಿ ಅಸಾಧ್ಯ ನೋವು ಆಕೆಯ ಪ್ರಜ್ಞೆಯನ್ನು ಕಿತ್ತುಕೊಂಡಿತ್ತು.

****

ಆಲನಹಳ್ಳಿ ಕೃಷ್ಣರ ಗೀಜಗನ ಗೂಡಿನ ಮುಂದೆ ನೀನೇನು ಕಥೆ ಬರೀತೀಯಾ ಬಿಡೋ ಎಂದು ರಶ್ಮಿ ಹೇಳಿದಾಗ ಅಶೋಕ, ತಗಡು ಕಥೆಗಳನ್ನು ಬರಿಯೋನು ಅನ್ನೋ ಥರ ನನ್ನನ್ನ ಹಂಗಿಸ್ತೀಯಾ. ಆಲನಹಳ್ಳಿ ಗ್ರೇಟ್ ಬಿಡು. ಆದ್ರೆ ನಮ್ಮ ಕಾಲದ ತುರ್ತುಗಳೇ ಬೇರೆ ಅಲ್ವಾ ಎಂದು ಥೇಟು ಅನಂತಮೂರ್ತಿ ಥರ ಡೈಲಾಗ್ ಹೊಡ್ದ. ಮಾತು ಕಥೆಯ ಸುತ್ತ ಸುತ್ತುತ್ತಿದ್ರೂ ಬ್ರಿಗೇಡ್ ರಸ್ತೆಯ ಫುಟ್ಪಾತ್ನಲ್ಲಿ ಹೆಜ್ಜೆ ಹಾಕ್ತಿದ್ದ ಅವರಿಬ್ಬರ ಮನಸ್ಸುಗಳು ಮಾತ್ರ ಬೇರೆಯದೇ ಜಗತ್ತಿನಲ್ಲಿ ವಿಹರಿಸುತ್ತಿದ್ದವು.

ಆಕೆಯ ಹೆಗಲ ಬಳಸಿದ ಆತನ ಕೈ ಅವಳ ತೋಳಿನ ಸುತ್ತ ಚಿತ್ತಾರ ಬಿಡಿಸುತ್ತಿದ್ದರೆ, ಅವನ ಸೊಂಟ ಬಳಸಿದ್ದ ಆಕೆಯ ಬೆರಳುಗಳು ಪಕ್ಕೆಲುಬುಗಳ ಜತೆ ಲಾಸ್ಯವಾಡುತ್ತಿದ್ದವು. ಮೂರು ವರ್ಷಗಳ ಹಿಂದೆ ಪಠ್ಯವಾಗಿದ್ದ ತೇಜಸ್ವಿ ಅವರ ಚಿದಂಬರ ರಹಸ್ಯದ ಪಾಠ ಕೇಳುತ್ತಾ, ಕೇಳುತ್ತಾ ಅದರಲ್ಲಿನ ಜಯಂತಿ-ರಫಿ ಜೋಡಿ ನಾವೇ ಎಂದು ಅನ್ನಿಸಿದ ಕ್ಷಣವೇ ಆಚೀಚೆ ಡೆಸ್ಕಗಳ ತುದಿಯಲ್ಲಿ ಕೂತಿದ್ದ ರಶ್ಮಿ- ಅಶೋಕರ ಕಣ್ಣುಗಳು ಕಲೆತಿದ್ದವು.

ಅಂದಿನಿಂದ ರಫಿ ಅಶೋಕನಾಗಿ, ಅಶೋಕ ರಫಿಯಾಗಿ, ರಶ್ಮಿ ಜಯಂತಿಯಾಗಿ, ಜಯಂತಿ ರಶ್ಮಿಯಾಗಿ ಕ್ಯಾಂಪಸ್ಸಿನಿಡಿ ಅವರಿಬ್ಬರ ಜೋಡಿ ಚಿದಂಬರ ರಹಸ್ಯದಂತಹ ಕುತೂಹಲಕ್ಕೆ, ಪ್ರಶಂಸೆಗೆ ಕೊನೆಗೆ ಹೊಟ್ಟೆಕಿಚ್ಚಿಗೂ ಕಾರಣವಾಗಿತ್ತು. ಕಲ್ಲು ಬೆಂಚುಗಳಿಂದ ರಸ್ತೆಯಂಚಿನವರೆಗೆ ಚಿದಂಬರ ರಹಸ್ಯವನ್ನು ಪರಸ್ಪರರು ಕೆದಕುವ ಆಟವಾಡುತ್ತಲೇ ಇದ್ದರು. ಕಾಲೇಜಿನ ಸಹಪಾಠಿಗಳಿಂದ ಉಪನ್ಯಾಸಕರವರೆ, ಕ್ಲರ್ಕ್- ಅಟೆಂಡ್ರು ಕೊನೆಗೆ ಕಾಲೇಜ್ ಬಸ್ಸಿನ ಕಂಡಕ್ಟರನ ವರೆಗೆ ಎಲ್ಲರಿಗೂ ಇವರು ಜನುಮದ ಜೋಡಿಯಾಗಿಬಿಟ್ಟಿದ್ದರು.

ಈಗ ಬೆಂಗಳೂರಿನ ಕಂಪನಿಯೊಂದರಲ್ಲಿ ಅಶೋಕ ಭಾಷಾ ವಿಶ್ಲೇಷಕ. ಅವಳು ಬಿಪಿಒ ಎಂಪ್ಲಾಯಿ. ಕೈತುಂಬ ಸಂಬಳ, ಎದೆ ತುಂಬ ಪ್ರೀತಿ-ಪ್ರೇಮದ ಘಮ. ಇನ್ನೇನು ಬೇಕು ಮದುವೆಯ ಬಂಧನಕ್ಕೆ? ಅಶೋಕನೇನೋ ಹೀಗೇ ತುಂಟಾಟವಾಡಿಕೊಂಡು ಇನ್ನಷ್ಟು ದಿನ ಇದ್ದುಬಿಡುವ, ಆಮೇಲೆ ಮದುವೆ-ಗಿದುವೆ ಇದ್ದದ್ದೇ ಎಂಬ ಆಕಾಂಕ್ಷೆಯಲ್ಲಿದ್ದ. ಆದರೆ, ರಶ್ಮಿಯ ಸ್ಥಿತಿ ಬೇರೆಯದೇ ಆಗಿತ್ತು. ಅವಳಿಗೂ ಇಂತಹ ತುಂಟಾಟಗಳ ತುಡುಗಿನ ಹುಡುಗನ ಚೇಷ್ಟೆಗಳಲ್ಲಿ ದಿನ ಕಳೆಯುವುದೇ ಮೋಜು ಎನಿಸುತ್ತಿತ್ತು. ಆದರೆ, ಮನೆಯವರು ಬಿಡಬೇಕಲ್ಲ.

ಪ್ರತಿ ಬಾರಿ ಸಕಲೇಶಪುರಕ್ಕೆ ಹೋದಾಗಲೂ ಮದುವೆಗೆ ಗೊತ್ತು ಮಾಡೋಣ ಎಂಬುದು ಅಪ್ಪ- ಅಮ್ಮನ ವರಾತ. ಜತೆಗೆ ಅಶೋಕನ ಜತೆ ರೋಡ್ ರೋಮಿಯೋ ಆಟ ಅತಿಯಾಗಿರುವುದೂ ಅವರ ಕಿವಿಗೆ ಬಿದ್ದಿದೆ. ಕಾಲೇಜು ದಿನದಿಂದಲೂ ಅನುಮಾನವಿದ್ದ ಅವರಿಗೆ ಈಗ ಎಲ್ಲವೂ ಖಾತ್ರಿಯಾಗಿಬಿಟ್ಟಿದೆ. ಹೋದ ತಿಂಗಳು ಊರಿಗೆ ಹೋದಾಗ ಅವನ್ಯಾರೋ ಲೆಕ್ಷರ್ ಮಗ ಪೆದ್ದುಗುಂಡನಂತಹವನಿಗೆ ತೋರಿಸಿದ್ದರು. ಮೊನ್ನೆ ತಾನೆ ಅಮ್ಮ, ‘ಅವನು ಒಪ್ಪಿದ್ದಾನೆ. ಎಂಗೇಜ್ಮೆಂಟ್ ಮಾಡೋಣ ಅಂತಿದ್ದಾರೆ. ಮುಂದಿನ ವಾರ ನಾಲ್ಕು ದಿನ ರಜೆ ಹಾಕಿ ಬಾ’ ಎಂದಿದ್ದರು. ಅದಕ್ಕೆ ರಶ್ಮಿ ಹೋಗಮ್ಮ, ನನಗೆ ಅವ ಇಷ್ಟವಿಲ್ಲ ಎಂದೂ ಹೇಳಿದ್ದಳು. ಆದರೆ, ಇವರ ರಫಿ-ಜಯಂತಿ ಕಥೆ ಅವರಿಗೆ ಗೊತ್ತಿಲ್ಲದ್ದೇನಲ್ಲವಲ್ಲ, ಹಾಗಾಗೆ ಅವಳು ಹತ್ತನ್ನೆರಡು ಹುಡುಗರನ್ನ ಬೇಡ ಎಂದಿದ್ದು ಎಂಬುದೂ ಅರ್ಥವಾಗಿತ್ತು. ಅದಕ್ಕಾಗೆ ಅವರು ಈ ಸಂಬಂಧವನ್ನು ಹೇಗಾದರೂ ಮಾಡಿ ಗಟ್ಟಿಮಾಡಿಕೊಂಡು ಇವಳನ್ನು ಹೆದರಿಸಿ-ಬೆದರಿಸಿಯಾದರೂ ಒಪ್ಪಿಸಿ ಮದುವೆ ಮಾಡಿಸಬೇಕು. ಮುಂದೆ ದಿನ ಕಳೆದಂತೆ ಎಲ್ಲಾ ಸರಿ ಹೋಗುತ್ತದೆ ಎಂದು ನಿರ್ಧರಿಸಿಯೇ ಆಕೆಗೆ ಫೋನ್ ಮಾಡಿದ್ದರು.

ಅದನ್ನೆಲ್ಲಾ ಅಶೋಕನಿಗೆ ಹೇಳಿದರೆ, ಆತ ಅದಕ್ಯಾಕೆ ಅಷ್ಟೊಂದು ತಲೆ ಬಿಸಿ. ಆಯ್ತು ಬಿಡು. ನಾಡಿದ್ದು ಬುಧವಾರ ನಮ್ಮ ಆಪತ್ಭಾಂಧವ ಇದ್ದಾನಲ್ಲ. ಸಬ್ ರಿಜಿಸ್ಟ್ರಾರ್ ಅವರತ್ರ ಹೋಗಿ ರಿಜಿಸ್ಟರ್ ಆಗಿಬಿಡೋಣ. ಅದಕ್ಕೇನೂ ಏರ್ಪಾಡು ಬೇಕೋ ಅದನ್ನೆಲ್ಲಾ ರಮೇಶ ನಾನೂ ಮಾಡ್ತೀವಿ. ನೀನೇನೂ ತಲೆ ಕೆಡಿಸಿಕೊಳ್ಳಬೇಡ ಎಂದಿದ್ದ.

ಅದೇ ಖುಷಿಯಲ್ಲೇ ಆಕೆ, ಈಗ ಬ್ರಿಗೇಡ್ ರೋಡ್ ರೋಮಿಂಗಿಗೆ ಅವನ ಜತೆ ಹೆಜ್ಜೆ ಹಾಕ್ತಾ ಇದ್ದಳು. ಕಣ್ಣ ತುಂಬ ಮದುವೆಯ ಕನಸು, ಅದೂ ಸಂಬಂಧದ ಹೊಸತನವಲ್ಲದಿದ್ರೂ ಬದುಕಿನ ಘಟ್ಟದ ನಿರೀಕ್ಷೆ ಅವಳನ್ನು ಬೇರೆಯದೇ ಜಗತ್ತಿಗೆ ಕೊಂಡೊಯ್ದಿತ್ತು.

ಒಂದು ದೀರ್ಘ ಓಡಾಟದ ಬಳಿಕ ಇಬ್ಬರೂ ರಾತ್ರಿ ಎಂಟರ ಹೊತ್ತಿಗೆ ಭೀಮಾಸ್ ನಲ್ಲಿ ಚಿಕನ್ ಬಿರಿಯಾನಿ ತಿಂದು ಎಂಜಿ ರಸ್ತೆಯಲ್ಲಿ ಆಟೋ ಹಿಡಿಯಲು ಹೊರಟರು. ಎಂಟು ಗಂಟೆಯ ಟ್ರಾಫಿಕ್ ಬುಸಿಯಲ್ಲಿ ರಸ್ತೆಯ ಆಚೆ ಬದಿಗೆ ದಾಟುವುದೇ ಕಷ್ಟವಾಗಿತ್ತು. ಬರ್ರನೆ ಎರಗುವ ಬಸ್ಸು-ಕಾರುಗಳ ನಡುವೆ ಒಂದಿಷ್ಟು ಜಾಗ ಸಿಕ್ಕಿದ್ದೇ ತಡ ಅಶೋಕ, ರಶ್ಮಿಯ ಕೈ ಹಿಡಿದು ಎಳೆದುಕೊಂಡ ನುಗ್ಗಿದ. ಕ್ಷಣ ಉರುಳುವ ಮೊದಲೇ ಯರ್ರಾಬಿರ್ರಿ ಸ್ಪೀಡಲ್ಲಿ ಬಂದ ಸ್ಕಾರ್ಫಿಯೋ ದಡ್ ಎಂದು ಬಡಿಯಿತು. ಅಶೋಕ ಹಾರಿಬಿದ್ದ. ರಶ್ಮಿ ಸರಕ್ಕನೆ ಹಿಂದಕ್ಕೆ ಜರಿದರೂ ಹಿಂದಿನಿಂದ ಬಂದ ಆಟೋ ತಾಗಿ ಕುಸಿದಳು. ಅಶೋಕನ ತಲೆಗೆ ಬಡಿದ ರೋಡ್ ಡಿವೈಡರ್ ರಕ್ತದ ಮಡುವಲ್ಲಿ ಒದ್ದೆಯಾಗಿತ್ತು. ಬಿಟ್ಟ ಕಣ್ಣು ಬಿಟ್ಟಂತೆಯೇ ಇತ್ತು. ಉಸಿರು ನಿಂತಿತ್ತು.

****

ಆಸ್ಪತ್ರೆಯ ಬೆಡ್ ಮೇಲೆ ರಶ್ಮಿ ಮಲಗಿದ್ದಳು. ಪ್ರಜ್ಞೆಯ ಯಾವುದೋ ಆಳದಲ್ಲಿ ಆಕೆ, ಅಶೋಕ ಜತೆ-ಜತೆಯಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಅಶೋಕ ‘ಅಂತೂ ತಗಡು ಕಥೆ ಬರೆಯಲೇ ಇಲ್ಲ ನೋಡು ನಾನು. ಹ್ಞಾಂ, ಏನಂದ್ಕೊಂಡಿದಿಯಾ ನನ್ನನ್ನ’  ಎಂದು ಛೇಡಿಸುತ್ತಿದ್ದ.

**** 

ಮಳೆ ಬಂದ ಘಳಿಗೆಮಳೆಯ ನೆನಪು, ನೇವರಿಕೆಗಳು ಜೀವಪ್ರೀತಿಯ ಮನಸ್ಸುಗಳಿಗೆ ಎಂದೂ ಚೈತನ್ಯದಾಯಕವೇ. ಮಲೆನಾಡಿಗರ ಪಾಲಿಗೆ ಮಳೆ ಎಂದರೆ ಬರಿ ಒಂದು ಕಾಲವಲ್ಲ, ಬದಲಾಗಿ ಅದು ಬದುಕಿನ ಒಂದು ನಿಯಮಿತ ಆಚರಣೆ.

ಮುಂಗಾರು ಆರಂಭವಾಗುತ್ತಲೇ ಗಂಡಸರು ಕಂಬಳಿ, ಕೊಡೆ (ಈಗೀಗ ರೇನ್ ಕೋಟ್)ಗಳನ್ನು ಒಟ್ಟುಮಾಡುವ ಜತೆಗೆ ಕೃಷಿಕರಾದರೆ ಮುಂಗಾರಿ ಬಿತ್ತನೆ, ನಾಟಿ, ತೋಟದ ಕೆಲಸಗಳಿಗೆ ಬೇಕಾದ ನೇಗಿಲು-ನೊಗ, ಹಾರೆ-ಪಿಕಾಸಿ, ಗುದ್ದಲಿ, ಕುಳ, ಕುಂಟೆ, ಕೊಲ್ಡುಗಳ ತಯಾರಿ/ ಸಂಗ್ರಹದತ್ತ ಚಿತ್ತ ಹರಿಸುತ್ತಾರೆ.

ಹೆಂಗಳೆಯರು ಮಳೆಗಾಲದ ಚಳಿ ನಡುಕಕ್ಕೆ ಪೂರಕವಾಗಿ ದೇಹ ಮತ್ತು ಮನಸ್ಸನ್ನು ಉಲ್ಲಸಿತಗೊಳಿಸುವ ಖಾದ್ಯ ಪದಾರ್ಥಗಳ ಒಟ್ಟು ಮಾಡತೊಡಗುತ್ತಾರೆ. ಅವರ ಆಣತಿಯ ಮೇಲೆ ಜಾರು ಸೇರುವ, ಅಟ್ಟ ಏರುವ ಸರದಿಯಲ್ಲಿ ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಹುಳಿ, ವಿವಿಧ ಕಾಳು-ಬೇಳೆಗಳು ಇರುತ್ತವೆ. ಜತೆಗೆ ಅಮ್ಮಂದಿರ ಕಾಳಜಿಯ ಇಷ್ಟಿಷ್ಟು ಕೂಡ. ಅಂತಹ ಚಿಕ್ಕಪುಟ್ಟ ಜತನದ ಮೂಲಕ ಹೆಂಗಳೆಯರು ಕಾಪಿಡುವುದು ಬರಿ ತಿನಿಸು- ಖಾದ್ಯಗಳನ್ನಷ್ಟೇ ಅಲ್ಲ, ಕುಟುಂಬವನ್ನು ಪೊರೆಯುವ ಪ್ರೀತಿ, ಮಮತೆಯನ್ನೂ. ಹಾಗಾಗಿ ಹಾಗೆ ಕೂಡಿಟ್ಟ ಎಲ್ಲವೂ ತಿಂಗಳ-ಕೆಲವೊಮ್ಮೆ ವರುಷ- ಬಳಿಕವೂ ನಳನಳಿಸುವ ಪ್ರೀತಿಯಂತೆಯೇ ತಾಜಾ ಆಗಿರುತ್ತವೆ!

ಇನ್ನು ಶಾಲೆಯ ಹುಡುಗರ ಪಾಲಿಗೆ ಮಳೆಗಾಲ ಎಂಬುದು ಅಪರಿಮಿತ ಕುತೂಹಲಗಳ ಕಾಲ. ಬರಿಗಾಲಿನಲ್ಲಿ ಒದ್ದೆ ನೆಲದ ಬೆಚ್ಚನೆ ಸ್ಪರ್ಶಕ್ಕೆ ಮೈಯೊಡ್ಡುತ್ತಾ ಮಣ್ಣಿನ ರಸ್ತೆಗಳಲ್ಲಿ ನಡೆದಾಡುವ ಪುಳಕಕ್ಕೆ ಇನ್ನಾವುದೂ ಸಮನಾಗದು. ದಾರಿಗುಂಟ ಬೆರಗುಗಣ್ಣಿಗೆ ಬೀಳುವ ಬಸವನಹುಳು, ಸಹಸ್ರಪದಿ, ಚಕ್ಕುಲು ಹುಳು, ಸಗಣಿ ಉಂಡೆಗಳನ್ನು ಉರುಳಿಸಿಕೊಂಡು ಹೋಗುವ ‘ಹರ್ಕ್ಯೂಲಸ್’ ಸಂಬಂಧಿ ಹುಳುಗಳು,… ಒಂದೇ-ಎರಡೆ ಜೀವ ಜಗತ್ತಿನ ವಿಸ್ಮಯದ ಜಾತ್ರೆ. ಕಂಡಷ್ಟೂ ಕಾಣುವುದು ಮಿಕ್ಕುವುದು. ಜತೆಗೆ ಸುರಿವ ಮಳೆಯ ನಡುವೆ ಒದ್ದೆಯಾಗುವ, ಕಾಲು ಸಂಕಗಳ ಮೇಲೆ ಆರಂಭದಲ್ಲಿ ಭಯದಿಂದ ತೆವಳುತ್ತಾ, ಬರುಬರುತ್ತಾ ಆಟವಾಡುವ  ದಾಟುವ ಮಜಾ… ಓಹೋ.. ಅದು ಕಿನ್ನರ ಲೋಕ!

ಇಂತಹ ಮಳೆಗಾಲ ಇತ್ತೀಚಿನ ದಿನಗಳಲ್ಲಿ ಕುತೂಹಲ, ಖುಷಿಗಿಂತ ಮಲೆನಾಡಿನ ಜನರ ಪಾಲಿಗೆ ಪ್ರವಾಹ, ನೆರೆಯ ಆತಂಕಕ್ಕೆ ಕಾರಣವಾಗುತ್ತಿದೆ. ನಿಸರ್ಗದ ಇಂತಹ ವೈಪರೀತ್ಯಕ್ಕೆ ನಾವೆಷ್ಟು ಹೊಣೆ. ಲೆಕ್ಕಾಚಾರ ಮೀರಿದ ಜಗದ ಬಗೆ ಎಷ್ಟು ಹೊಣೆ?

—-

ಬೆಂಗಳೂರಿನ ಮಲ್ಟಿನ್ಯಾಷನಲ್ ಮಯ ಕೋರಮಂಗಲದ ಪ್ರಮುಖ ರಸ್ತೆಯಲ್ಲಿ ಹೋಗುತ್ತಿದ್ದಾಗ ರಸ್ತೆಯಂಚಿನ ಪುಟ್ಟ ಗುಡಿ ಮುಂದೆ ಕೈಮುಗಿದು ನಿಂತ ಟೈಟ್ಸ್ ತೊಟ್ಟ ಮಾಡ್ ಯುವತಿ ಕಣ್ಣಿಗೆ ಬಿದ್ದಳು. ನೋಡುತ್ತಲೇ ಆಕೆ ಯಾವುದೋ ಸಾಫ್ಟ್ ವೇರ್ ಅಥವಾ ಬಿಪಿಒ ನೌಕರಳು ಎಂಬುದು ಗೊತ್ತಾಗುತ್ತಿತ್ತು. ಲೋ ವೇಸ್ಟ್ ಜೀನ್ಸ್, ಡೀಪ್ ನೆಕ್ ಟಾಪ್ ಅದನ್ನು ಖಾತ್ರಿಪಡಿಸುವಂತಿದ್ದವು. ಆದರೆ, ಆಶ್ಚರ್ಯವಾಗಿದ್ದು ಅದಕ್ಕಲ್ಲ! ಅತ್ಯಾಧುನಿಕ ಯುವತಿಯಾಗಿದ್ದ ಆಕೆ ಕಲ್ಲಿನ ಎದುರು ನಿಂತು ಅಷ್ಟೊಂದು ಭಯ-ಭಕ್ತಿಯಿಂದ, ದೈನ್ಯದಿಂದ ನಿಂತಿರುವ ಭಂಗಿ ಒಮ್ಮೆಲೇ ನಗು ಮತ್ತು ಕನಿಕರ ಹುಟ್ಟಿಸಿತು.

ನಗು ಏಕೆಂದರೆ ಆಕೆ ನಿಂತಿರುವ ತಾಣಕ್ಕೂ, ಭಾವಕ್ಕೂ ಆಕೆಯ ವೇಷಭೂಷಣಕ್ಕೂ ವ್ಯತಿರಿಕ್ತ ಸ್ಥಿತಿ. ಕನಿಕರ ಏಕೆಂದರೆ, ತಂತ್ರಜ್ಞಾನದ ಕೀಲಿ ಕೈ ಹಿಡಿದುಕೊಂಡ ಆ ಶಿಕ್ಷಿತ ಯುವತಿ ಅಷ್ಟೊಂದು ದೈನೇಸಿ ಸ್ಥಿತಿಯಲ್ಲಿರುವುದು ಆಕೆಯ ಬೌದ್ಧಿಕ ಭೋಳೇತನವನ್ನು ಅನಾವರಣಗೊಳಿಸುತ್ತಿತ್ತು.  ಆಕೆ ಪ್ರತಿನಿಧಿಸುತ್ತಿರುವ ಜಗತ್ತಿನ ಹಿನ್ನೆಲೆಯಲ್ಲಿ ಅದು ಕೇವಲ ಆಕೆಯೊಬ್ಬಳ ವೈಯಕ್ತಿಕ ಸಂಗತಿ ಎಂದುಕೊಳ್ಳುವುದು ಕೂಡ ಸಾಧ್ಯವೇ ಇರಲಿಲ್ಲ.

ವೈಚಾರಿಕತೆಯ ಸ್ಪರ್ಶವೇ ಇಲ್ಲದ ಮೊದ್ದುಮಣಿಗಳನ್ನು ತಯಾರು ಮಾಡುವುದು ಒಂದು ಶಿಕ್ಷಣವೇ? ವ್ಯಕ್ತಿಗೆ ಸಿದ್ಧ ಸೂತ್ರಗಳ ಗಿಣಿಪಾಠ ಒಪ್ಪಿಸುವುದನ್ನು ಕಲಿಸುವುದನ್ನು ಶಿಕ್ಷಣ ಎನ್ನಲು ಸಾಧ್ಯವೇ? ಎಂಬಂತಹ ಮೂಲಭೂತ ಪ್ರಶ್ನೆಗಳನ್ನು ಆ ನೋಟ ಎತ್ತಿದ್ದರಿಂದ ಇಲ್ಲಿ ಇಷ್ಟು ಹೇಳಬೇಕಾಯಿತು.

ಭುವಿಯೊಡಲ ಒಳಗೆ
ಅನಾಮಿಕ ಕಾಳು
ಮೊಳೆಯುವ ಘಳಿಗೆ;
ಜೀವದ ಒಸಗೆಗೆ
ಜಗ ಹೊಸ ಜನ್ಮಕೆ ಹೊರಳುವ ಬಗೆ.
 
ಒರಟು ಕಾಳಿನ
ಮುರುಟು ಬಸಿರಲಿ
ಅರಳುವ ನವಿರ ಹಸಿರು; 
ಬಾಣಂತಿ ನೆಲಕೆ
ಕಸ ಕಳೆದು ಕಸುವು.
 
ನಾಜೂಕು ಎಳೆ ಬೇರು
ಹೂ ಜೀಕುವ ಚಿಗುರು;
ಒಂದು ಕತ್ತಲೆಯತ್ತ,
ಮತ್ತೊಂದು ಬೆಳಕ ಬ್ರಹ್ಮಾಂಡದತ್ತ,…
ಜೀವ ಜಾಲದ ಜೋಕಾಲಿ ನಿರಂತರ ಲಾಲಿ.
 
ಕತ್ತಲೆಗಿಳಿದಷ್ಟೂ ಬೇರು
ಎದೆಗೆ ಪೂರಾ ಬಸಿಯುವುದು ಬೆಳಕು.
 
ಕಾಳ ಕಳಚಿದ ಸಸಿ
ಬೇರು-ಬೊಡ್ಡೆ ಬಲಿತ ಕಸುವು
ಚಿಗುರು, ಹೂ, ಹಣ್ಣು, ಬೀಜ, ಸಸಿ,…
ಜೀವ ಜಾತ್ರೆಗೆ ತಾಯಿ
ಒಲುಮೆ ಯಾತ್ರೆಗೆ ಆಯಿ.
 
ಜನ್ಮ-ಜನ್ಮದ ಮೋಹ
ಜಗದ ಜಗುಲಿಯ ದಾಹ.
 
————–
 

« Newer Posts - Older Posts »