ಮಳೆಯ ಹನಿಯ ಮುದ

ಮಳೆ ಬಂದ ಘಳಿಗೆಮಳೆಯ ನೆನಪು, ನೇವರಿಕೆಗಳು ಜೀವಪ್ರೀತಿಯ ಮನಸ್ಸುಗಳಿಗೆ ಎಂದೂ ಚೈತನ್ಯದಾಯಕವೇ. ಮಲೆನಾಡಿಗರ ಪಾಲಿಗೆ ಮಳೆ ಎಂದರೆ ಬರಿ ಒಂದು ಕಾಲವಲ್ಲ, ಬದಲಾಗಿ ಅದು ಬದುಕಿನ ಒಂದು ನಿಯಮಿತ ಆಚರಣೆ.

ಮುಂಗಾರು ಆರಂಭವಾಗುತ್ತಲೇ ಗಂಡಸರು ಕಂಬಳಿ, ಕೊಡೆ (ಈಗೀಗ ರೇನ್ ಕೋಟ್)ಗಳನ್ನು ಒಟ್ಟುಮಾಡುವ ಜತೆಗೆ ಕೃಷಿಕರಾದರೆ ಮುಂಗಾರಿ ಬಿತ್ತನೆ, ನಾಟಿ, ತೋಟದ ಕೆಲಸಗಳಿಗೆ ಬೇಕಾದ ನೇಗಿಲು-ನೊಗ, ಹಾರೆ-ಪಿಕಾಸಿ, ಗುದ್ದಲಿ, ಕುಳ, ಕುಂಟೆ, ಕೊಲ್ಡುಗಳ ತಯಾರಿ/ ಸಂಗ್ರಹದತ್ತ ಚಿತ್ತ ಹರಿಸುತ್ತಾರೆ.

ಹೆಂಗಳೆಯರು ಮಳೆಗಾಲದ ಚಳಿ ನಡುಕಕ್ಕೆ ಪೂರಕವಾಗಿ ದೇಹ ಮತ್ತು ಮನಸ್ಸನ್ನು ಉಲ್ಲಸಿತಗೊಳಿಸುವ ಖಾದ್ಯ ಪದಾರ್ಥಗಳ ಒಟ್ಟು ಮಾಡತೊಡಗುತ್ತಾರೆ. ಅವರ ಆಣತಿಯ ಮೇಲೆ ಜಾರು ಸೇರುವ, ಅಟ್ಟ ಏರುವ ಸರದಿಯಲ್ಲಿ ಹಪ್ಪಳ-ಸಂಡಿಗೆ, ಉಪ್ಪಿನಕಾಯಿ, ಹುಳಿ, ವಿವಿಧ ಕಾಳು-ಬೇಳೆಗಳು ಇರುತ್ತವೆ. ಜತೆಗೆ ಅಮ್ಮಂದಿರ ಕಾಳಜಿಯ ಇಷ್ಟಿಷ್ಟು ಕೂಡ. ಅಂತಹ ಚಿಕ್ಕಪುಟ್ಟ ಜತನದ ಮೂಲಕ ಹೆಂಗಳೆಯರು ಕಾಪಿಡುವುದು ಬರಿ ತಿನಿಸು- ಖಾದ್ಯಗಳನ್ನಷ್ಟೇ ಅಲ್ಲ, ಕುಟುಂಬವನ್ನು ಪೊರೆಯುವ ಪ್ರೀತಿ, ಮಮತೆಯನ್ನೂ. ಹಾಗಾಗಿ ಹಾಗೆ ಕೂಡಿಟ್ಟ ಎಲ್ಲವೂ ತಿಂಗಳ-ಕೆಲವೊಮ್ಮೆ ವರುಷ- ಬಳಿಕವೂ ನಳನಳಿಸುವ ಪ್ರೀತಿಯಂತೆಯೇ ತಾಜಾ ಆಗಿರುತ್ತವೆ!

ಇನ್ನು ಶಾಲೆಯ ಹುಡುಗರ ಪಾಲಿಗೆ ಮಳೆಗಾಲ ಎಂಬುದು ಅಪರಿಮಿತ ಕುತೂಹಲಗಳ ಕಾಲ. ಬರಿಗಾಲಿನಲ್ಲಿ ಒದ್ದೆ ನೆಲದ ಬೆಚ್ಚನೆ ಸ್ಪರ್ಶಕ್ಕೆ ಮೈಯೊಡ್ಡುತ್ತಾ ಮಣ್ಣಿನ ರಸ್ತೆಗಳಲ್ಲಿ ನಡೆದಾಡುವ ಪುಳಕಕ್ಕೆ ಇನ್ನಾವುದೂ ಸಮನಾಗದು. ದಾರಿಗುಂಟ ಬೆರಗುಗಣ್ಣಿಗೆ ಬೀಳುವ ಬಸವನಹುಳು, ಸಹಸ್ರಪದಿ, ಚಕ್ಕುಲು ಹುಳು, ಸಗಣಿ ಉಂಡೆಗಳನ್ನು ಉರುಳಿಸಿಕೊಂಡು ಹೋಗುವ ‘ಹರ್ಕ್ಯೂಲಸ್’ ಸಂಬಂಧಿ ಹುಳುಗಳು,… ಒಂದೇ-ಎರಡೆ ಜೀವ ಜಗತ್ತಿನ ವಿಸ್ಮಯದ ಜಾತ್ರೆ. ಕಂಡಷ್ಟೂ ಕಾಣುವುದು ಮಿಕ್ಕುವುದು. ಜತೆಗೆ ಸುರಿವ ಮಳೆಯ ನಡುವೆ ಒದ್ದೆಯಾಗುವ, ಕಾಲು ಸಂಕಗಳ ಮೇಲೆ ಆರಂಭದಲ್ಲಿ ಭಯದಿಂದ ತೆವಳುತ್ತಾ, ಬರುಬರುತ್ತಾ ಆಟವಾಡುವ  ದಾಟುವ ಮಜಾ… ಓಹೋ.. ಅದು ಕಿನ್ನರ ಲೋಕ!

ಇಂತಹ ಮಳೆಗಾಲ ಇತ್ತೀಚಿನ ದಿನಗಳಲ್ಲಿ ಕುತೂಹಲ, ಖುಷಿಗಿಂತ ಮಲೆನಾಡಿನ ಜನರ ಪಾಲಿಗೆ ಪ್ರವಾಹ, ನೆರೆಯ ಆತಂಕಕ್ಕೆ ಕಾರಣವಾಗುತ್ತಿದೆ. ನಿಸರ್ಗದ ಇಂತಹ ವೈಪರೀತ್ಯಕ್ಕೆ ನಾವೆಷ್ಟು ಹೊಣೆ. ಲೆಕ್ಕಾಚಾರ ಮೀರಿದ ಜಗದ ಬಗೆ ಎಷ್ಟು ಹೊಣೆ?

—-

Advertisements

3 thoughts on “ಮಳೆಯ ಹನಿಯ ಮುದ

  1. ಸಂಜೆ ಶಾಲೆ ಬಿಡುತ್ತಿದ್ದಂತೆ ಧೋ ಎಂದು ಸುರಿಯುವ ಮಳೆಯಲ್ಲಿ ಒದ್ದೆಯಾಗುತ್ತಿದ್ದುದು, ಭಾನುವಾರದಲ್ಲೂ ಬಿಡದೆ ರಚ್ಚೆ ಹಿಡಿದು ಬರುತ್ತಿದ್ದ ಮಳೆಯನ್ನು ಮನೆಯ ಒಳಗೇ ಕೂತು ನೋಡಿ ಖುಷಿ ಪಡುತ್ತಿದ್ದುದು, ಮಳೆ ನಿಂತ ಬಹಳ ಹೊತ್ತಿನವರೆಗೂ ಮರಗಳಲ್ಲಿ ತೊಟ್ಟಿಕ್ಕುತ್ತಿದ್ದ ನೀರ ಹನಿಯ ಹಿಡಿದು ಖುಷಿ ಪಡುತ್ತಿದ್ದುದು… ಎಲ್ಲವೂ ನೆನಪಾಯಿತು.
    ಈಗಲೂ ಒಮ್ಮೊಮ್ಮೆ ಹಿಡಿದಿರುವ ತ್ರೀ ಫೋಲ್ಡೆಡ್ ಕೊಡೆ ಕಿತ್ತೆಸೆದು ಹಾಗೇ ಮಳೆಯಲ್ಲಿ ನೆನೆಯುವ ಮನಸಾಗುವುದಿದೆ, ಸುಮ್ಮನೆ ಕುಳಿತು ಮಳೆ ಹನಿಯನ್ನೇ ಲೆಕ್ಕ ಮಾಡುವ ಮನಸಾಗುವುದಿದೆ, ಎಲೆಯ ಮೇಲಿನ ನೀರ ಹನಿಯ ಬೊಗಸೆಯಲ್ಲಿ ಹಿಡಿವ ಮನಸಾಗುವುದಿದೆ…
    ಆದರೆ ಈಗ ಮಳೆಗೇ ಹಿಂದಿನ ಅಂದವಿಲ್ಲವೋ? ಅಥವಾ ನಮಗೇ ಸವಿಯುವ ಸಮಯವಿಲ್ಲವೋ? ತಿಳಿಯದು.
    ಮತ್ತೆ ಮಳೆ ಹೊಯ್ಯಲಿ.. ಎಲ್ಲರ ಮನಗಳಲ್ಲಿ!

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s