ಕಾಡುಕೋಣ ಏರಿ ಬಂದಿತ್ತಾ!

 bison1.jpg 

ಮೂಗಿಗೆ ಅಡರುತ್ತಿತ್ತು ಹೆಜ್ಜೇನಿನ ಸುವಾಸನೆ. ಅದೂ ತಾರಿ ಮರದ ಹೂವಿನ ಮಕರಂಧ ಕದ್ದು ಜೇನು ಹುಳುಗಳು ಕೂಡಿಟ್ಟ ಗಂಧ ಇನ್ನೇನು ತುಪ್ಪವಾಗಲು ಕಾಯುತ್ತಿದ್ದ ಘಳಿಗೆ. ಮುಂಗಾರಿನ ಮೊದಲ ಮಳೆ ಹನಿಯುತ್ತಲೇ ನಾಲ್ಕೇ ಹನಿಗೆ ಗಂಧ ಮಧುವಾಗುತ್ತದೆ. ತೀಡುವ ಜೇನ ಗಂಧದ ನಡುವೆ ತೇಲಿ ಬರುವ ಲಂಟಾನದ ಹೂವುಗಳನ್ನು ಹಾದುಕೊಂಡೇ ನುಗ್ಗುತ್ತಿದ್ದರು ಆ ಹೈಕಳು.

ಇನ್ನೇನು ಬೇಸಿಗೆಯ ತುದಿಗಾಲವೂ ಮುಗಿಯುವ ಹೊತ್ತು, ಮಳೆಗಾಲದಲ್ಲಿ ಎತ್ತಿನ ಬಂಡಿಯ ದಾರಿ, ಜಾನುವಾರು-ಕಾಡುಪ್ರಾಣಿಗಳ ಕಾಲುಹಾದಿಗಳನ್ನು ಬಿಟ್ಟರೆ ಇನ್ನೆಲ್ಲೂ ನಾಲ್ಕು ಹೆಜ್ಜೆ ಇಡಲೂ ಆಗದಷ್ಟು ಇಕ್ಕಾಟಾಗಿ ಹಬ್ಬುವ ಲಂಟಾನ ಇದೀಗ ಹೂ ಬಿಟ್ಟು, ಒಣಗಿ ನಿಂತಿದೆ. ಹಾಗಾಗಿ ಈಗ ತುಸು ತೆಳು ಮೆಳೆಗಳಿದ್ದ ಕಡೆ ಕಡ್ಡಿ ಮುರಿದುಕೊಳ್ಳುತ್ತಲೇ ನುಗ್ಗುವುದು ಸುಲಭ. ಇವರೂ ಹಾಗೇ ನುಗ್ಗುತ್ತಿದ್ದರು. ಅವರಿಗಿಂತಲೂ ಜತೆಯಲ್ಲಿದ್ದ ನಾಯಿಗಳು ಹತ್ತಾರು ಹೆಜ್ಜೆ ಮುಂದೆಯೇ ಗುಂಪಾಗಿ ಸಾಗುತ್ತಿದ್ದವು. ಅವುಗಳ ಉತ್ಸಾಹಕ್ಕಂತೂ ಪಾರವೇ ಇರಲಿಲ್ಲ. ನಾಲ್ಕು ಹೆಜ್ಜೆ ಓಡುವುದು, ಹಾಗೆ ಓಡುತ್ತಲೇ ಒಂದಿಷ್ಟು ದೂರ ಹೋಗಿ ಸುತ್ತೆಲ್ಲಾ ಪೊದೆಗಳನ್ನು ನುಗ್ಗಿ ಕಾಡುಪ್ರಾಣಿಗಳಿಗಾಗಿ ಹುಡುಕಾಡಿ ಮತ್ತೆ ಈ ಐವರು ‘ಸರದಾರ’ ಒಡೆಯರ ಬಳಿ ಬಂದು ತನ್ನ ಸಾಹಸದತ್ತ ಗಮನಸೆಳೆಯಲು ಕುಯ್ಯುಂಗುಟ್ಟುವುದು ನಡೆದೇ ಇತ್ತು.

ನೆತ್ತಿ ಮೇಲೆ ಸೂರ್ಯ ಬಂದಿದ್ದರೂ ಕಾಡಿನ ದೊಡ್ಡ-ದೊಡ್ಡ ಮರಗಳೆಲ್ಲಾ ಅದಾಗಲೇ ವಸಂತನ ಪ್ರೇರಣೆಯಿಂದ ಚಿಗುರಿಕೊಂಡಿದ್ದರಿಂದ ನೆರಳು ಆಹ್ಲಾದಕರವಾಗೇ ಇತ್ತು. ಹೋಗುತ್ತಿದ್ದಂತೆಯೇ ಎಂದಿನ ಅಭ್ಯಾಸದಂತೆ ಬಿದಿರು ಮೆಳೆಗಳನ್ನು ಹಣಕು ಹಾಕುವುದು ಯಾಂತ್ರಿಕವಾಗಿ ನಡೆದೇ ಇತ್ತು. ಅದು ಅಲ್ಲಿ ಬೇಟೆಯ ಪ್ರಾಣಿಗಳು ಇರಬಹುದು ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಬಿದಿರು ಮೆಳೆಗಳಲ್ಲೇ ವಿಶೇಷವಾಗಿ ಕಟ್ಟುವ ಕೋಲು ಜೇನು ಹುಡುಕುವುದಕ್ಕಾಗಿ. ಪ್ರತಿ ಬಾರಿ ಹೀಗೆ ಕಾಡಿಗೆ ಬಂದಾಗಲೂ ಅವರು ಕನಿಷ್ಠ ಒಂದಾದರೂ ಕೋಲು ಜೇನು ಕೀಳದೆ ಮನೆಗೆ ಮರಳುವುದು ಅಪರೂಪವೇ ಸರಿ. ಹಾಗೇ ಹೋಗುತ್ತಿರುವಾಗ- ಮನೆಯಿಂದ ಇನ್ನೂ ಒಂದೂವರೆ ಮೈಲಿಯಷ್ಟು ದೂರವೂ ಕಾಡಿನೊಳಗೆ ಬಂದಿರಲಿಲ್ಲ- ನಾಯಿಗಳೆಲ್ಲಾ ಒಮ್ಮೆಗೇ ಜಿಂಕೆಯೋ, ಕಾಡು ಹಂದಿಯೋ ಕಂಡಂತೆ ಉಸಿರುಕಟ್ಟಿಕೊಂಡು ಬೆನ್ನಟ್ಟಿದವು.

ಅವರ ಗುಂಪಿನಲ್ಲೇ ತುಸು ದೊಡ್ಡವನಾದ ರಮೇಶ್ ಕೈಯಲ್ಲಿದ್ದ ಬಂದೂಕು ಹಿಡಿದುಕೊಂಡೇ ನಾಯಿಗಳು ಹೋದ ದಿಕ್ಕಿನತ್ತ ದೌಡಾಯಿಸಿದ. ಲಂಟಾನದ ಮೆಳೆ, ಕಲ್ಲು-ಮುಳ್ಳು ಏನೊಂದನ್ನೂ ಲೆಕ್ಕಿಸದೆ ಓಡಿದ ಅವರ ದಾರಿಯನ್ನೇ ಉಳಿದ ಕೃಷ್ಣ, ಕೇಶವ, ಕಿರಣರೂ ಅನುಸರಿಸಿದರು. ಗುಂಪಿನಲ್ಲಿ ಕಿರಿಯವನೂ ಕಾಡಿನ ಅನುಭವವಾಗಲಿ, ಶಿಕಾರಿಯ ಸೂಕ್ಷ್ಮಗಳಾಗಲಿ ಅಷ್ಟೊಂದು ಅರಿಯದ ಶ್ರೀಧರ ಮಾತ್ರ ಅವರೆಲ್ಲಾ ಓಡುತ್ತಲೇ ಕಾಲು ನಡುಗುತ್ತಾ ಇನ್ನೇನು ಮಾಡಲು ಗತ್ಯಂತರವಿಲ್ಲ ಎಂಬಂತೆ ಅಣ್ಣಾ… ಎನ್ನುತ್ತಾ ಅವರನ್ನು ಹಿಂಬಾಲಿಸಿದ. ಹಾಗೆ ಓಡಿ ಸಾಕಷ್ಟು ದೂರ ಹೋದರೂ ನಾಯಿಗಳು ಮಾತ್ರ ನುಗ್ಗುತ್ತಲೇ ಇದ್ದವು. ಇದು ಜಿಂಕೆಯೇ ಇರಬೇಕು ಎಂದುಕೊಂಡ ರಮೇಶ ಹಿಂದಿನವರಿಗೆಲ್ಲಾ ಏಯ್ ಬರ್ರೋ ಬೇಗ, ಜಿಂಕೆ ಕಣ್ರೋ ಎಂದು ಹುರಿದುಂಬಿಸುತ್ತಿದ್ದ. ಆದರೂ ಹಿಂದಿದ್ದವರಿಗೆ ಭಯ, ಅದು ಜಿಂಕೆಯೇ ಎಂದು ನೋಡಿದವರಾರು, ಕಾಡು ಹಂದಿಯಾಗಿದ್ದರೆ, ನಾಯಿಗಳ ಮೇಲಿನ ಸಿಟ್ಟಿಗೆ ನಮ್ಮ ಮೇಲೆ ನುಗ್ಗಿದರೆ! ಯೋಚಿಸುತ್ತಲೇ ಒಬ್ಬೊಬ್ಬರೇ ಬೆವರ ತೊಡಗಿದರು. ಹಾಗಂತ ನಿಂತುಕೊಳ್ಳುವ ಹಾಗೂ ಇಲ್ಲ, ಕಾಡು ಬೇರೆ, ಆ ಪ್ರಾಣಿ ಎತ್ತ ಹೋಗಿ, ಎತ್ತಲಿಂದ ಬರುತ್ತದೆಯೋ ಹೇಗೆ ಗೊತ್ತು? ರಮೇಶನ ಹಿಂದೆ ಓಡಿದರೆ ಕನಿಷ್ಠ ಅವನ ಬಳಿ ಬಂದೂಕಾದರೂ ಇದೆ. ಗುಂಡು ಹಾರಿಸಿಯಾದರೂ ಹೆದರಿಸಬಹುದು ಎಂದುಕೊಂಡು ಕುರುಡಾಗಿ ಅವನು ಹೋದ ಕಡೆ ಓಡತೊಡಗಿದರು. ಅವರ ಸ್ಥಿತಿ ಹೇಗಾಗಿತ್ತೆಂದರೆ, ಶಿಕಾರಿ ಮಾಡುವುದಿರಲಿ, ಅಲ್ಲಿಂದ ತಪ್ಪಿಸಿಕೊಂಡು ಸುರಕ್ಷಿತವಾಗಿ ಮನೆ ಸೇರಿದರೆ ಸಾಕಪ್ಪಾ ಎನ್ನುವಂತಾಗಿತ್ತು.

ಒಂದಷ್ಟು ದೂರದಲ್ಲಿ ಒಂದು ಎತ್ತಿನ ಗಾಡಿಯ ರಸ್ತೆ ಕಂಡಿತು. ಸರಿ, ರಸ್ತೆಯಾದರೂ ಸಿಗ್ತು ಎಂದುಕೊಂಡು ಧೈರ್ಯ ತಂದುಕೊಂಡು ತುಸು ನಿಧಾನಿಸಿದರು. ನಾಯಿಗಳು ಅಲ್ಲೇ ಸಮೀಪದ ಪೊದೆಯ ಬಳಿ ನಿಂತುಬಿಟ್ಟವು! ಓಹೋ ಆ ಪೊದೆಯಲ್ಲೇ ಇರಬೇಕು ಜಿಂಕೆ ಎಂದುಕೊಂಡು ಅವರು ನಿಧಾನಕ್ಕೆ ಬಳಿ ಸಾರಿದರು! ಇಲ್ಲ? ನಾಯಿಗಳು ಪೊದೆಯ ಬಳಿ ನಿಂತಿದ್ದರೂ ನೋಡುತ್ತಿದ್ದುದು ಮಾತ್ರ ಆ ದಾರಿಯ ಆಚೆ ಬದಿಯ ಕಡೆಗೆ! ಸರಿ ಎಂದು ತುಸು ಮುಂದೆ ಬಾಗಿ ರಸ್ತೆಯ ತಿರುವಿನ ಆಚೆ ಬದಿಗೆ ಕಣ್ಣು ಹಾಯಿಸಿದ ರಮೇಶ ಒಂದೇ ಸಮನೆ ಬಿಳಿಚಿಕೊಂಡು “ಓ… ಓಡ್ರೋ ಕಾಡುಕೋಣ….” ಎಂದು ಎದ್ನೋಬಿದ್ನೋ ಎಂದು ಹಿಂತಿರುಗಿ ಓಟಕಿತ್ತ!!

ಮೊದಲೇ ಅಂಜಿ ಕೈಕಾಲು ನಡುಕದಿಂದ ಕಂಗೆಟ್ಟು ಹೋಗಿದ್ದ ಇತರ ನಾಲ್ವರು ‘ಶಿಕಾರಿಧಾರ’ರಿಗೆ ಜಂಘಾಬಲವೇ ಉಡುಗಿ ಹೋಯಿತು. ಅವರಿಗೆ ಏನಾಗುತ್ತಿದೆ ಎಂಬುದು ಅರಿವಿಗೆ ಬರುವ ಮುನ್ನವೇ ಬೆನ್ನು ತಿರುಗಿಸಿ ಹತ್ತಾರು ಗಜ ದೂರಕ್ಕೆ ಬಂದಿದ್ದರು. ಸಾಕಷ್ಟು ದೂರಕ್ಕೆ ಬಂದ ನಂತರ ಒಮ್ಮೆ ಹಿಂತಿರುಗಿ ನೋಡಿ ‘ಅದು’ ಬಂದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡು ‘ಮರ ಹತ್ರೋ ಮರ ಹತ್ರೋ’ ಎಂದು ಒಬ್ಬರಿಗೊಬ್ಬರು ಆಪತ್ಕಾಲದ ಉಪಾಯ ನೆನಪಿಸಿಕೊಂಡು ಹತ್ತಿರದಲ್ಲೇ ಇದ್ದ ಚಿಕ್ಕ ಆಲದ ಮರವೇರಿದರು. ರಮೇಶ, ಕೃಷ್ಣ, ಕೇಶವ ಮತ್ತು ಕಿರಣ ಏನೋ ಮರ ಹತ್ತಿಯೇ ಬಿಟ್ಟರು. ಮರ ಹತ್ತುವುದು ಅಭ್ಯಾಸವಿರದ ಶ್ರೀಧರ ಮಾತ್ರ ಅಳುವುದೊಂದು ಬಾಕಿ. “ಏಯ್ ನನ್ನೂ ಕರೆದುಕೊಳ್ರೋ” ಎನ್ನುತ್ತಾ ಬಿಳಿಲು ಹಿಡಿದುಕೊಂಡು ನೇತಾಡುತ್ತಿದ್ದ, ಕೈ ಜಾರುತ್ತಲೇ ನೆಲಕ್ಕೆ ದೊಪ್ಪನೆ ಬೀಳುವುದು, ಮತ್ತೆ ಬಿಳಿಲು ಹಿಡಿದು ಗುದ್ದಾಡುವುದು… ಅಷ್ಟರಲ್ಲಿ ರಮೇಶ ನಿಧಾನಕ್ಕೆ ಮರದ ಬೊಡ್ಡೆಯ ಬಳಿ ಬಂದು ಅಂತೂ ಕೈ ನೀಡಿ ಶ್ರೀಧರನನ್ನು ಮೇಲಕ್ಕೆ ಎಳೆದುಕೊಂಡ.

ಎಲ್ಲರೂ ಮರವೇರಿದ ಮೇಲೆ ನಾಯಿಗಳನ್ನು ಕರೆದರು. ಅವು ಒಂದೆರೆಡು ಹೆಜ್ಜೆ ಹಿಂದಕ್ಕೆ ಬರುವುದು ಮತ್ತೆ ಗುರ್ ಎನ್ನುತ್ತಾ ಆ ಪ್ರಾಣಿಯತ್ತ ನುಗ್ಗುವುದು, ಅತ್ತ ಹೋಗಿ ಎರಗಲೂ ಆಗದೆ, ಇತ್ತ ಬಿಟ್ಟು ಬರಲೂ ಆಗದೆ ನಾಯಿಗಳೂ ವಿಚಿತ್ರ ಸಂದಿಗ್ಧತೆಯಲ್ಲಿದ್ದಂತಿತ್ತು. ಮುಂದಕ್ಕೆ ಹೋಗಲೂ ಧೈರ್ಯವಿಲ್ಲದೆ, ಹಿಂದಕ್ಕೂ ಬರಲೂ ಆಗದೆ ಎರಡು ಹೆಜ್ಜೆ ಮುಂದಕ್ಕೆ ಹೋಗಿ ಜೋರಾಗಿ ಕೂಗುವುದು, ಮತ್ತೆ ವಾಪಸ್ ಕುಯ್ಯುಂಗುಟ್ಟುಕೊಂಡು ಚಡಪಡಿಸುವುದು ಮಾಡುತ್ತಿದ್ದವು.

ಕೃಷ್ಣ “ಅದನ್ನು ನೀನು ನೋಡಿದ್ಯಾ…. ಕಾಡುಕೋಣನೇನಾ…” ಎಂದ. “ನಿಜವಾಗ್ಲೂ ಕಾಡುಕೋಣನೇನೋ…” ಎಂದ ಕಿರಣ. ಎಂದೂ ತಾವು ಹುಡುಗರೇ ಸೇರಿ ಶಿಕಾರಿಗೆ ಬಂದಿರದಿದ್ದ ಅವರಿಗೆ ಅಂದು ಮೊದಲ ಬಾರಿ ಮನೆಯವರ ಕಣ್ಣು ತಪ್ಪಿಸಿ ಬಂದೂಕು ಹಿಡಿದುಕೊಂಡು ಬಂದು ಸಿಕ್ಕಿಬಿದ್ದಿವೆಲ್ಲಾ ಎಂಬ ದಿಗಿಲು ಶುರುವಾಗಿತ್ತು. ರಮೇಶ “ಹ್ಞೂಂ ಕಣ್ರೋ ಅದು ಕಾಡುಕೋಣನೇ… ಕೊಂಬು ಹೆಂಗಿದ್ವು ಗೊತ್ತಾ… ಒಂಟಿ ಕಣ್ರೋ, ಗಮಯ… ಮೈಯೆಲ್ಲಾ ಎಣ್ಣೆ ಹಾಕಿದಂಗೆ ಹೊಳೀತಿತ್ತು…. ” ಎಂದು ತಾನು ಕಂಡ ಪ್ರಾಣಿ ಕಾಡುಕೋಣವೇ ಎಂದು ವಿವರಿಸಿದ. “ಹಾಗಾದರೆ ಏನು ಮಾಡೋದು… ಒಂಟಿ ಬೇರೆ ಅಂದ್ರೆ ಅದು ಗಾಯಗೊಂಡಿದ್ದೇ ಇರಬೇಕು. ಕೆಳಗೆ ಇಳಿದ್ರೆ ನಮ್ಮನ್ನು ಬಿಡಲ್ಲ…” ಎಂದು ಕೇಶವ ದಿಗಿಲಾದ. ಶ್ರೀಧರನ ಕತೆಯಂತೂ ಅಯೋಮಯ!

ಮರವೇರಿ ಕೂತು ಒಂದು ತಾಸಾಯಿತು. ನಾಯಿಗಳು ಮಾತ್ರ ಎಷ್ಟು ಕೂಗಿದರೂ ಬರಲೊಲ್ಲವು.. ಮತ್ತೂ ಅರ್ಧ ತಾಸು ಕಳೆಯಿತು… ಕೊನೆಗೆ ಇನ್ನೇನು ಮಾಡುವುದು ಕಾಡಿಗೆ ಬಿದಿರು ಬೊಂಬಿಗೋ, ಕಟ್ಟಿಗೆ ಕಡಿಯಲೋ ಬಂದವರು ಯಾರಾದರೂ ಇರಬಹುದು ಎಂದು ಜೋರಾಗಿ ಒಮ್ಮೆ ಕೂಗಿದ ರಮೇಶ. ಯಾರೂ ಓಗೊಡಲಿಲ್ಲ. ಮತ್ತೆ ಕೂಗಿದ… ಯಾರೋ ಕೂಗಿದಂತಾಯಿತು. ಮತ್ತೆ ಕೂಗಿದ. ಅತ್ತ ಕಡೆಯಿಂದ “ಯಾರೋ…” ಎಂಬ ಧ್ವನಿ ಕೇಳಿತು. ಜತೆಗೆ ಮತ್ತೊಂದು ಧ್ವನಿಯೂ ಮಾತನಾಡುವುದು ಕೇಳಿಸಿತು. ಅವರೆಡೂ ಧ್ವನಿಗಳು ಕರೆಯುತ್ತಲೇ ಇವರತ್ತ ಅದೇ ರಸ್ತೆ ಕೂಡಿ ಬರುತ್ತಿದ್ದವು. ನಂತರ ಹತ್ತಿರಕ್ಕೆ ಬಂದ ಅವರು ಹೇಳಿದ್ದು, “ಅಲ್ರೋ ಹುಚ್ಚು ಹುಡುಗರಾ ಅದು ಕಾಡುಕೋಣ ಅಲ್ರೋ…. ಇಲ್ಲೇ ಆಚೆ ದಿಬ್ಬದ ಮನೆಯ ಕೋಣ. ನಿಮ್ಮ ನಾಯಿ ಕೂಗಿದ್ದು, ಕೋಣನ್ನ ನೋಡಿ ಅಲ್ಲಾ,.. ಯಾವುದೋ ಓತಿನೋ, ಹಾವುರಾಣಿಯನ್ನೋ ಇರಬೇಕ್ರೋ” ಎಂದು!

ಭಯದಲ್ಲಿ ಏನು, ಎತ್ತ ಎಂದೂ ಪರಾಂಬರಿಸಿದ ಹುಡುಗರ ಮೊದಲ ಶಿಕಾರಿಯೇ ಹುಸಿಯಾಗಿತ್ತು! ಅಂತೂ ಮರವಿಳಿದು ನಿಧಾನಕ್ಕೆ ಎಲ್ಲರೂ ಮನೆಯ ಕಡೆ ಹೆಜ್ಜೆಹಾಕಿದರು!! ನಾಯಿಗಳ ಆಟಕ್ಕೆ ತಾವೇ ಶಿಕಾರಿಯಾದಂತೆ.

Advertisements

3 thoughts on “ಕಾಡುಕೋಣ ಏರಿ ಬಂದಿತ್ತಾ!

 1. ಶಶಿ,

  ಚೆನ್ನಾಗಿದೆ. ಪ್ರಭಾಕರ ಶಿಶಿಲ ಅವರ “ಸದ್ದಡಗಿದ ಶಿಕಾರಿ ಕೋವಿ” ಓದುತ್ತಾ ಇದ್ದೇನೆ. ಹಾಗಾಗಿ ಚಿತ್ರ ಮತ್ತು ಟೈಟಲ್ ನೋಡಿದ ಕೂಡಲೆ ಹೊಟ್ಟೆಕಿಚ್ಚಾಗಿಬಿಟ್ಟಿತ್ತು.. 😀 ಕೊನೆಗೆ ಅದು ಊರಕೋಣ ಮತ್ತು ಯಾವ ಶಿಕಾರಿಯೂ ನಡೆಯಲಿಲ್ಲ ಅಂತ ಗೊತ್ತಾದ ಮೇಲೆ ಸ್ವಲ್ಪ ಸಮಾಧಾನ.

  ಬರಹ ತುಂಬ ಇಷ್ಟವಾಯಿತು. ವಿವರಗಳು ಕಣ್ಣಿಗೆ ಕಟ್ಟಿದಂತಿವೆ.

  ಪ್ರೀತಿಯಿಂದ
  ಸಿಂಧು

  Like

 2. ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದ. ನಾನು ಶಿಶಿಲ ಅವರ ಆ ಪುಸ್ತಕದ ಬಗ್ಗೆ ಕೇಳಿದ್ದೆ.
  ಬೇಟೆ- ಕಾಡಿನ ಕಥೆಗಳೆಂದರೆ ನನಗೆ ಜಿಮ್ ಕಾರ್ಬೆಟ್ ಮತ್ತು ನಾನು ನನ್ನ ಊರಿನಲ್ಲಿ ಕಂಡ ಬೇಟೆಯ ಚಿತ್ರಣವೇ ನೆನಪಾಗುವುದು. ನಮ್ಮ ತೇಜಸ್ವಿ, ಚಂದ್ರಪ್ಪಗೌಡರ ಕಥೆಗಳೂ ಅದ್ಭುತ. ಇದು ಮಾತ್ರ ಪಕ್ಕಾ ಕ್ರಿಯೇಟಿವ್ ರೆಸ್ಪಾನ್ಸ್. ಇದರಲ್ಲಿ ವನ್ಯಜೀವಿಗಳ ಕುರಿತ ವಾಸ್ತವ ಸ್ಥಿತಿ-ಗತಿ ಅಥವಾ ಸಮಕಾಲೀನ ಸಮಸ್ಯೆ ಎಂಬ ಪ್ರಶ್ನೆ ಇಲ್ಲ. ಇದೊಂದು ಸೃಜನಶೀಲ ಪ್ರತಿಕ್ರಿಯೆ ಅಷ್ಟೆ. ಎಲ್ಲಾ ಓದುಗರಿಗೂ ಇದು ನನ್ನ ಪುಟ್ಟ ಸೂಚನೆ!

  Like

 3. ಮಲೆನಾಡಿನ ರೋಚಕ ಅನುಭವಗಳು ಯಾವತ್ತೂ ಚೆನ್ನ. ನನಗೂ ಓದುತ್ತಿದ್ದಂತೆ ಜಿಮ್ ಬಾರ್ಬೆಟ್ ನೆನಪಾದರು. ಎಲ್ಲೋ ಹುಟ್ಟಿ, ಏನೋ ಆಗಿ, ಮತ್ತೆಲ್ಲಿಗೋ ತಲುಪುವ… ಕಾಂಕ್ರೀಟ್ ಕಾಡಿನಲ್ಲಿ ಕುಳಿತು ಹಿಂದಿನ ಮಧುರ ನೆನಪುಗಳಿಂದ ಕಾಲ ಕಳೆಯುವ (ಏನಿಲ್ಲವೆಂದರೂ ಹೀಗೆ ಬರಹ ರೂಪದಲ್ಲಿ) ರೀತಿಯೇ ಬದುಕಿನ ನಿಗೂಢ ಎನಿಸಿಬಿಡುತ್ತದೆ. ಓದಿ ತೇಜಸ್ವಿ ನೆನಪಾದರು. ಧನ್ಯವಾದಗಳು.

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s