ಇದು ಹಿಂಗಾರು ಮಳೆಯ ಲೀಲೆ….!!

ಮೊನ್ನೆ ಇದ್ದಕ್ಕಿದ್ದಂತೆ ಮಳೆ ಬಂದಾಗ ಏಕೋ ಕಳೆದ ಕಾಲದ ದಿನಗಳು ಬಿಚ್ಚಿಕೊಳ್ಳತೊಡಗಿದವು. ಹಾಗೇ ಮನಸ್ಸು ಕೂಡ ಮಳೆಯಲ್ಲಿ ನೆನೆದು ಒದ್ದೆಯಾದಂತೆನಿಸಿತು….

ವರುಷಗಳ ಹಿಂದೆ ಸಾಗರದ ಲಾಲ್ ಬಹಾದ್ದೂರ್ ಕಾಲೇಜಿನಲ್ಲಿ ಕಲಿಯುತಿದ್ದ ದಿನಗಳಲ್ಲಿ ಕೂಡ ಹೀಗೆ ಒಂದು ಚಳಿಗಾಲದಲ್ಲಿ ಬಂದ ಅನಿರೀಕ್ಷಿತ ಮಳೆ, ಅದು ಬಿಟ್ಟುಹೋದ ಅಕಾಲಿಕ ಪ್ರೀತಿಯ ನೆನಪು ದುತ್ತೆಂದು ಎದುರಾಯಿತು. ಅವತ್ತು ಶನಿವಾರದ ತರಗತಿಗಳನ್ನು ಮುಗಿಸಿಕೊಂಡು ಆಗ ತಾನೆ ಪರಮ ಪ್ರೇಮಿ ಡಬ್ಲ್ಯೂ.ಬಿ. ಏಟ್ಸ್ ಪದ್ಯವನ್ನು ಮುಗಿಸಿಕೊಂಡು ಹಾಸ್ಟೆಲ್ಲಿನ ದಾರಿ ತುಳಿಯುತ್ತಿದ್ದೆ. ಚಳಿಗಾಲದ ಗಾಳಿಯಂತೆ, ಚಳಿಯಂತೆ, ಸೂರ್ಯನಂತೆ ಕೊನೆಗೆ ಮರದಿಂದ ಉದುರಿ ನೆಲವನ್ನು ಅಪ್ಪುವ ತರಗೆಲೆಯಂತೆ ಮಳೆ ಕೂಡ ಜಿಟಿಜಿಟಿ ಎಂದು ಕೆಳಗಿಳಿಯಲೋ ಬೇಡವೋ ಎಂದು ಹನಿಯುತ್ತಿತ್ತು. ಆದರೂ ನನ್ನಂಥ ಪರಮ ವ್ಯಾಮೋಹಿಗೆ ಖುಷಿ ಕೊಡಲೋ ಎಂಬಂತೆ ಸೂರ್ಯ ಮಾತ್ರ ಫಳ-ಫಳಿಸುತ್ತಿದ್ದ. ಮಳೆ ನಡುವೆ ಕದ್ದು ಸೂರ್ಯನೂ ಆಟ ಶುರುವಿಟ್ಟುಕೊಂಡರೆ ಇನ್ನು ಕೇಳಬೇಕೆ ಕಣ್ಣೆದುರಿನ ಬೆಟ್ಟದ ಆಚೆ ಮಳೆಬಿಲ್ಲು ಕೂಡ ಗರಿಬಿಚ್ಚಿತ್ತು! ಇಷ್ಟು ಸಾಕಿತ್ತು ಮನಸ್ಸು ಲಗಾಮು ಕಿತ್ತ ಕುದುರೆಯಂತೆ ಕಲ್ಪನಾಲೋಕದಲ್ಲಿ ಘೂಳಿಡಲು.

ಸರಿ, ನನ್ನದೇ ಲಹರಿಯಲ್ಲಿ ಎಲ್ಲವನ್ನೂ ಗ್ರಹಿಸುತ್ತಾ ಪದ್ಯವಾಗಿಸಬಹುದೇ ಇದನ್ನು ಎಂದು ಲೆಕ್ಕಹಾಕುತ್ತಾ ಸಾಗುತ್ತಿದ್ದೆ. ಹಿಂದಿನಿಂದ ಯಾರೋ ಕರೆದಂತಾಗಿ ತಿರುಗಿ ನೋಡಿದೆ. ಹನಿಯುವ ಮಳೆಯಲ್ಲಿ ವೇಲ್ ತಲೆ ಮೇಲೆ ಹೊದ್ದು ಆಕೆ ಓಡಿ ಬರುತ್ತಿದ್ದಳು. ಇದೇನಿದು? ಕ್ಲಾಸಿನಲ್ಲಿ ಅಕ್ಕಪಕ್ಕದ ಬೆಂಚಲ್ಲಿ ಕೂತರೂ ಎಂದೂ ಮಾತಾಡದ ಈಕೆ ನನ್ನನ್ನ ಕರೆಯುತ್ತಿದ್ದಾಳೆ ಎಂದುಕೊಂಡೆ. ಆದರೂ ಕ್ಲಾಸಿಗೇ ಚೆಲುವೆ ಬೇರೆ, ಏನು ಎಂದು ಆತ್ಮೀಯವಾಗಿ ಕೇಳದೇ ಇರಲು ಸಾಧ್ಯವೇ? ಕೇಳಿದೆ. ….. ಏನು? ಎಂದು. ನನ್ನ ನಿರೀಕ್ಷೆ ಯಾವುದೋ ಕ್ಲಾಸಿಗೆ ಬಂದಿಲ್ಲ, ಅವತ್ತಿನ ನೋಟ್ಸ್ ಕೊಡೋ ಎಂದೋ, ಅಥವಾ ಯಾವುದೋ ಪುಸ್ತಕ ಬೇಕು ಎಂದು ಕೇಳಬಹುದು ಎಂಬುದಷ್ಟೇ… ಆದರೆ, ಆಕೆ ಹತ್ತಿರ ಬಂದವಳೆ, ಏನು ಮತ್ತೆ ಹಾಸ್ಟೆಲ್ಗೆ ಹೊರಟುಬಿಟ್ಟಿರಾ ಎಂದಳು. ನನಗೆ ಇದೇನಿದು, ದಿನಾ ಇಲ್ಲೇ ಓಡಾಡುತ್ತಿದ್ದರೂ ಪರಿಚಯವೇ ಇಲ್ಲದಂತೆ ಓಡಾಡುತ್ತಿದ್ದವಳು. ಇವತ್ತೇನು ವಿಶೇಷ.. ಎಂದು ವಿಚಿತ್ರ ಎನಿಸಿತು. ಆದರೂ, ಇರಲಿ ಎಂದುಕೊಂಡು, ಹ್ಞಾಂ, ಕ್ಲಾಸ್ ಮುಗೀತಲ್ಲ.. ಇನ್ನೇನು ಮಾಡೋದು.. ಎಂದೆ. ಅದಕ್ಕೆ ಮತ್ತೇನು ಬರೆದಿರಿ, ಎಲ್ಲೂ ಕವಿತೆ ಪ್ರಕಟವಾಗಿಲ್ಲವಾ ಎಂದೆಲ್ಲಾ ಕೇಳತೊಡಗಿದಳು. ಅರೆ, ನಾನು ಪದ್ಯ ಬರೆಯೋದು ಈಕೆಗೆ ಗೊತ್ತಾ? ಎಂದು ಆಶ್ಚರ್ಯವಾದರೂ, ಅದಕ್ಕಿಂತ ಆತಂಕವಾಗಿದ್ದು ಈ ಹುಡುಗಿ ಹೀಗೆ ನನ್ನ ಜೊತೆ ಹರಟೆ ಕೊಚ್ಚುತ್ತಿರುವುದೇಕೆ ಎಂಬುದಕ್ಕೆ! ಸರಿ, ಬರೆದಿದ್ದೇನೆ, ಒಂದೆರಡು ಕಳಿಸಿದ್ದೆ. ಪ್ರಕಟವಾಗಿಲ್ಲ… ಮತ್ತೇನು ನಿನ್ನೆ ಹಿಸ್ಟರಿ ಕ್ಲಾಸಲ್ಲಿ ಏನು ಆಯಿತು ಎಂದು ಮಾತು ತಿರುಗಿಸಿದೆ. ಏನಿಲ್ಲ, ಅದೇ ಎಂಎನ್ ಬಂದು ಕರ್ನಾಟಕ ಹಿಸ್ಟರಿನಲ್ಲಿ ಸ್ವಾತಂತ್ರ್ಯೋತ್ತರ ಕಾಲಘಟ್ಟ ಕುರಿತು ಹೇಳಿದರು. ಬೋರೋ ಬೋರು ಬಿಡು ಎಂದಳು. ಹೌದು, ನೀನೆಲ್ಲಿ ಹೋಗಿದ್ದೆ. ಅದಕ್ಕೂ ಮೊದಲಿನ ಟಿಪಿಎ ಆಪ್ಷನಲ್ ಕ್ಲಾಸಿಗೆ ಇದ್ದೆಯಲ್ವ ಎಂದಳು. ಇಲ್ಲಾ ನನಗೆ ಅವರ ಕ್ಲಾಸಿಗೆ ಕೂರೋಕೆ ಇಷ್ಟವಿರಲಿಲ್ಲ, ಅದಕ್ಕಿಂತ ಲೈಬ್ರರಿಯಲ್ಲಿ ಕೂತು ನಾಲ್ಕು ಪದ್ಯವನ್ನೋ, ಕಥೆಯನ್ನೋ ಓದಿದರೆ ಲೇಸು ಅನ್ಕೊಂಡು ಎಂಎನ್ಗೆ ಇಂಪಾರ್ಡೆಂಟ್ ನೋಟ್ಸ್ ಬರಿಯೋದಿದೆ. ದಯವಿಟ್ಟು ಇವತ್ತೊಂದಿನ ಅಟೆಂಡೆನ್ಸ ಕೊಡಿ ಎಂದು ಕೇಳಿಕೊಂಡು ಲೈಬ್ರರಿಯಲ್ಲಿ ಕೂತಿದ್ದೆ.. ಎಂದೆ. ಓಯೋ ನಿನ್ನದೆ ಅದೃಷ್ಟ ಬಿಡಪ್ಪಾ ಅಂದಳು. ಅರೆ ಇದೇನಿದು ಇಷ್ಟೊಂದು ಸಲುಗೆ! ಇದೇನೋ ಎಡವಟ್ಟಾಗ್ತಾಯಿದೆ ಎಂದುಕೊಂಡು ಹಾಗೇ ಹೆಜ್ಜೆ ಹಾಕಿದೆ. ಅಷ್ಟರಲ್ಲಿ ಸಾಕಷ್ಟು ದೂರ ಸಾಗಿತ್ತು. ಹಾಗೇ ಅದೂ- ಇದೂ ಮಾತಾಡ್ತಾ ಮಾತಾಡ್ತಾ ಆಕೆ ಮತ್ತೆ ನನ್ನ ಪದ್ಯದ ಕಡೆ ಹೊರಳಿದಳು.

ಕಳೆದ ತಿಂಗಳು ಪ್ರಕಟವಾಗಿತ್ತಲ್ಲ ನಿನ್ನ ಹೂ ಹುಡುಗಿ ಪದ್ಯ ಚೆನ್ನಾಗಿತ್ತು ಕಣೋ ಎಂದಳು! ಅರೆ, ಅಯ್ಯೋ ಆ ಪದ್ಯವನ್ನು ಇವಳು ಓದಿ ಚೆನ್ನಾಗಿತ್ತು ಅಂತಿದಾಳಲ್ಲಪ್ಪಾ ಎಂದುಕೊಂಡು ದಿಗಿಲಾದರೂ ತೋರಗೊಡದೆ ಹೌದಾ ಥ್ಯಾಂಕ್ಯೂ ಎಂದೆ ದಡ್ಡನಗೆ ನಕ್ಕು. ಆಕೆ ಅಲ್ಲೋ ಅಷ್ಟೊಂದು ಚೆಂದದ ಪದ್ಯ ಬರೆದಿದ್ದೀಯಲ್ಲ ಯಾರೋ ಅದು ಹೂ ಹುಡುಗಿ ಎಂದಳು. ಇದು ಇನ್ನಷ್ಟು ಫಜೀತಿಗಿಟ್ಟುಕೊಂಡಿತು ಎಂದು ಯಾರೂ ಇಲ್ಲಪ್ಪಾ,… ಸುಮ್ಮೆ… ಎಂದೆ. ನಾನು ಇವಳು ಕೈಯಲ್ಲಿ ಯಾಕಪ್ಪಾ ಸಿಕ್ಕಾಕೊಂಡೆ ಎಂದು ನಾನು ತಡಬರಿಸುತ್ತಿದ್ದರೆ, ಮಳೆ ಮತ್ತೆ ಜೋರಾಗತೊಡಗಿತು. ಅಷ್ಟೊತ್ತಿಗಾಗಲೇ ಸಾಕಷ್ಟು ಒದ್ದೆಯಾಗಿದ್ದ ಅವಳು ಬೇರೆ ಬದಿಯಲ್ಲಿ…

ಅಷ್ಟೊತ್ತಿಗೆ ರಸ್ತೆಯ ಹಿಂದಿನ ತುದಿಯಲ್ಲಿ ನನ್ನ ಪರಮ ದ್ವೇಷದ ಎಕಾನಮಿಕ್ಸ್ ಲೆಕ್ಚರ್ ವೆಸ್ಪಾ ಲ್ಯಾಂಬ್ರೆಟ ವೆಸ್ಪಾ ಬೆನ್ನನು ಏರಿ ಎಂಬ ನೆನಪು ತರಿಸುವಂತೆ ಬರುತ್ತಿತ್ತು. ಜೊತೆಗೆ ಆ ಸೋಶಿಯಾಲಜಿ ಮೇಡಂ ಬೇರೆ ಹಿಂದೆ ಕೂತಿದ್ದರು. ಶಿವಾ ಈ ಸ್ಥಿತಿಯಲ್ಲಿ ನನ್ನನ್ನೇದರೂ ಆ ಎಕನಾಮಿಕ್ಸ್ ಲೆಕ್ಚರ್ ನೋಡಿದ್ರೆ ಏನು ಗತಿ ಎಂದು ತಲೆ ಕೆಟ್ಟುಹೋಯ್ತು. ಮೊದಲೇ ಡಿಮಿನಿಷಿಂಗ್ ಮಾರ್ಜಿನಲ್ ಯುಟಿಲಿಟಿ, ಅದೂ ಇದೂ ಎಂದು ಯಾವ ಕರ್ವ್, ಸೂತ್ರವೂ ನೆನಪಿನಲ್ಲುಳಿಯದೆ ತರಗತಿಯಲ್ಲಿ ಅವರಿಂದ ಉಗಿಸಿಕೊಳ್ಳುತ್ತಿದ್ದ ನನಗೆ ಇದು ಭಲೇ ಇಕ್ಕಟ್ಟಿಗೆ ಸಿಕ್ಕಿಬೀಳುವ ಅಪಾಯಕಾರಿ ಸನ್ನಿವೇಶವಾಗಿ ಕಾಣಿಸಿತು. ನಾಳೆ ಇದನ್ನೇ ಇಡೀ ಕ್ಲಾಸಲ್ಲಿ ಹೇಳಿ, ಏನೋ ಹುಡಿಗೀರು ಜೊತೆ ಲಲ್ಲೆ ಹೊಡ್ಕೊಂಡು ಹೋಗೋಕಾಗುತ್ತೆ ಒಂದು ಸೂತ್ರ ನೆನಪಿಟ್ಕೊಳ್ಳೋಕೆ ಆಗೊಲ್ಲವೇನೋ ಎಂದು ಮರ್ಯಾದೆ ಮೂರು ಕಾಸು ಮಾಡ್ತಾನೆ ಎಂದುಕೊಂಡು ಪಾರಾಗುವುದು ಹೇಗೆ ಶಿವಾ ಎಂದು ಯೋಚಿಸಿದೆ. ಇನ್ನೇನು ವೆಸ್ಪಾ ಸಮೀಪಿಸುತ್ತಿದೆ ಎನ್ನುತ್ತಲೇ ರಸ್ತೆಯ ಬಲ ಬದಿಗೆ ದಾಟಿದೆ. ಸದ್ಯ ಅದೇ ಹೊತ್ತಿಗೆ ಬಸ್ ಒಂದು ಎದುರಿನಿಂದ ಬಂತು! ಅಬ್ಬಾ ಬಚಾವಾದೆ!! ಬಸ್ ನಮ್ಮನ್ನು ದಾಟಿ ಹೋಗುವಷ್ಟರಲ್ಲಿ ವೆಸ್ಪಾ ಕೂಡ ದಾಟಿತ್ತು. ಸದ್ಯ ದೊಡ್ಡ ಗಂಡಾಂತರ ತಪ್ಪಿತು ಎಂದುಕೊಂಡು ನಿಟ್ಟುಸಿರು ಬಿಟ್ಟೆ.

ಅಷ್ಟೊತ್ತಿನವರೆಗೂ ಆಕೆ ಮಾತ್ರ ಆ ಹೂ ಹುಡುಗಿಯ ಸುತ್ತಲೇ ಗಿರಕಿ ಹೊಡೆಯುತ್ತಲೇ ಇದ್ದಳು. ನಾನು ಎಕಾನಮಿಕ್ಸ್ ಲೆಕ್ಚರ್ ತಗಾದೆಯಲ್ಲಿ ಅವಳ ಪ್ರಶ್ನೆ, ಆಶ್ಚರ್ಯ, ವಿರಾಮ, ಕುತೂಹಲಗಳಿಗೆಲ್ಲಾ ಹಾಂ, ಊಂ ಎಂದಷ್ಟೇ ಹೇಳುತ್ತಿದ್ದೆ. ಇನ್ನೂ ಎಷ್ಟು ದೂರ ಈಕೆ ನನ್ನ ಬಿಡಲೊಲ್ಲಳು ಎಂದು ಯೋಚಿಸಿದೆ. ಆಕೆಯ ಊರಿಗೆ ಹೋಗುವ ಬಸ್ ನಿಲ್ಲುವುದು ಹೆಲಿಪ್ಯಾಡ್ ಕ್ರಾಸ್ನಲ್ಲಿ. ಅಲ್ಲೀತನಕ ನನಗೆ ಈ ಫಜೀತಿಯಿಂದ ಮುಕ್ತಿಯಿಲ್ಲ ಎಂದುಕೊಂಡೆ. ನಿಧಾನಕ್ಕೆ ಆಕೆ ಏನು ಗೊತ್ತಾ, ನನಗೆ ಆ ಪದ್ಯ ಎಷ್ಟು ಇಷ್ಟ ಅಂದ್ರೆ ಅದನ್ನ ಹಾಗೇ ಕಟ್ ಮಾಡಿ ನೋಟ್ ಪುಸ್ತಕದಲ್ಲಿಟ್ಟುಕೊಂಡಿದ್ದೀನಿ ಕಣೋ ಎಂದಳು. ಇದು ಏಕೋ ಅತಿಯಾಯ್ತು ಅನ್ನಿಸಿದರೂ ಹೇಳಲಾರದೆ. ಮತ್ತೇನು ವಿಶೇಷ, ನಾಳೆ ಆಫ್ಷನಲ್ ಇಂಗ್ಲಿಷ್ ಯಾರ ಕ್ಲಾಸ್? ಎಂದೆ ಮಾತು ಹೊರಳಿಸಲು. ಹ್ಞೂಂ, ಆಕೆ ಅದಕ್ಕೆ ಸಿದ್ಧಳಿರಲೇ ಇಲ್ಲ. ಮತ್ತೆ ಅದೇ ಹೂ…. ಇದೊಳ್ಳೆ ಕಷ್ಟವಾಯಿತಲ್ಲ, ಏಕಾದ್ರೂ ಆ ಪದ್ಯ ಬರೆದೆನಪ್ಪಾ ಎನಿಸತೊಡಗಿತು.

ಚೆಂದದ ಹುಡುಗಿ ಜೊತೆ ಬರುತ್ತಿದ್ದಾಳೆ ಎಂದು ಖುಷಿ ಪಡದೆ, ನಾನು ಭಯಬೀಳಲು ಕಾರಣ, ಹುಡುಗಿಯೊಬ್ಬಳೇ ನನ್ನೊಂದಿಗೆ ಮಾತನಾಡುತ್ತಾ ಬರುತ್ತಿದ್ದಾಳೆ ಎಂಬುದಾಗಿರಲಿಲ್ಲ, ಬದಲಾಗಿ ಆ ಕವಿತೆಯಾಗಿತ್ತು. ಏಕೆಂದರೆ ನಾನು ಅದನ್ನು ಬರೆದದ್ದು ನನ್ನ ಕ್ಲಾಸಿನ ಮತ್ತೊಬ್ಬ ಹುಡುಗಿಯನ್ನು ಕುರಿತು! ಆದರೆ, ಅದನ್ನು ಯಾರಿಗೂ ಹೇಳಿರಲಿಲ್ಲ! ಈಗ ಈಕೆ ಹೀಗೆ ಬೆನ್ನು ಹತ್ತಿರುವುದರ ಹಿಂದೆ ಏನೋ ಇದೆ ಎಂದುಕೊಂಡು ಸುಮ್ಮನೇ ನಡೆಯತೊಡಗಿದೆ. ಸಾಗರದವರಿಗೆ ಮಳೆ ಹೊಸತಲ್ಲವಾದ್ದರಿಂದ ಜಿಂಪರು ಮಳೆ ನಮ್ಮ ದಾರಿಗೆ ಅಡ್ಡವಾಗಿರಲಿಲ್ಲ. ಇನ್ನೇನು ಆಕೆಯ ಬಸ್ ನಿಲ್ದಾಣ ತುಸುವೇ ದೂರ ಎನ್ನುತ್ತಿದ್ದಂತೆ, …. ಮತ್ತೆ ಇದರಲ್ಲೇನೋ ಇದೆ,.. ತಗೋ… ನಾಳೆ ಅದಕ್ಕೆ ಉತ್ತರ ಹೇಳೋ… ಎಂದವಳೆ ನನ್ನ ಕೈಗೆ ಒಂದು ಲೆಟರ್ ಕೊಟ್ಟಳು. ಅಯ್ಯೋ! ಎಂದುಕೊಂಡು ಕಾಗದವನ್ನು ಸರಕ್ಕನೆ ಇಸಿದುಕೊಂಡು ಜೇಬಿಗೆ ಹಾಕಿಕೊಂಡು ಬಾಯ್ ಎಂದೂ ಹೇಳದೆ ಅವಳನ್ನು ಹಿಂದೆ ಬಿಟ್ಟು ಭರಭರ ಮುಂದೆ ನಡೆದೆ…

ಹಾಸ್ಟೆಲ್ಗೆ ಹೋದವನೆ ಒದ್ದೆ ಬಟ್ಟೆಯಲ್ಲೇ ಲೆಟರ್ ಬಿಚ್ಚಿದೆ. ಓದುತ್ತಾ ಹೋದಂತೆ ಮೈ ಬಿಸಿಯಾಯಿತು!!

ಅಷ್ಟಕ್ಕೂ ಆದದ್ದೇನೆಂದರೆ, ನಾನು ನಿಜವಾಗಿಯೂ ಯಾರ ಮೇಲೆ ಆ ಪದ್ಯ ಬರೆದಿದ್ದೆನೋ ಅದೇ ಹುಡುಗಿಯೇ ಈಕೆಗೆ, ಅವನು ನಿನ್ನನ್ನೇ ಉದ್ದೇಶಿಸಿ ಈ ಪದ್ಯ ಬರೆದಿದ್ದಾನೆ ಕಣೇ.. ಎಂದು ಏನೇನೋ ಹೇಳಿ ಮರ ಹತ್ತಿಸಿದ್ದಳು. ಅದನ್ನು ನಂಬಿಕೊಂಡು ಆಕೆ ನನ್ನನ್ನು ಬೆನ್ನುಬಿದ್ದಿದ್ದಳು. ಮಾರನೇ ದಿನ ಕ್ಲಾಸಿಗೆ ಹೋದರೆ, ನಿಜವಾದ ಹೂ ಹುಡುಗಿಯ ಮುಸಿನಗು ಕಾಡುತಿತ್ತು!!

ಇದೀಗ ಮಲೆನಾಡಿನ ಚೆಂದದ ಹಳ್ಳಿಯಲ್ಲಿ ಗೃಹಸ್ಥೆಯಾಗಿರುವ ಆಕೆ ಇದೀಗ ಅದು ಹೇಗೋ ನನ್ನ ಮೊಬೈಲ್ ನಂಬರ್ ಪತ್ತೆ ಮಾಡಿ ಕರೆ ಮಾಡಿದ್ದಳು. ಅದೂ ಮಳೆ ಬಂದ ದಿನವೇ! ಹಿಂಗಾರು ಮಳೆಯ ಲೀಲೆ!!

Advertisements

11 thoughts on “ಇದು ಹಿಂಗಾರು ಮಳೆಯ ಲೀಲೆ….!!

 1. @ ಹಾಯ್ ಹಕ್ಕಿ,

  ಎಲ್ಲವೂ ಮಳೆ ಲೀಲೆಯೇ ಅಲ್ಲವೇ!!

  @ ಚಿತ್ರಾ
  ಥ್ಯಾಂಕ್ಯೂ… ನಿಮ್ಮ ಬ್ಲಾಗ್ ನಿಜವಾಗಿಯೂ ಚೆನ್ನಾಗಿದೆ. ಹೀಗೇ ಬರೀತಿರಿ..!

  @ ಮುರಳಿ

  ಥ್ಯಾಂಕ್ಸ್ ಫಾರ್ ಯುವರ್ ಕಾಮೆಂಟ್!

  @ ನಾವುಡರೆ,
  ತುಂಬಾ ಧನ್ಯವಾದಗಳು…

  Like

 2. ಪ್ರೀತಿಯ ಶಶಿ,

  ತುಂಬ ಚೆನಾಗಿ ಬಂದಿದೆ. ಇವತ್ತು ಜೋಗಿ ಕತೆ ಓದಿ ಆಹಾ ಸಾಗರ ಅನ್ನೋಷ್ಟರಲ್ಲಿ, ನಿಮ್ಮ ಬರಹದಲ್ಲೂ ಸಾಗರ, ಕಾಲೇಜು, ಟಿಪಿಕಲ್ ಕಾಲೇಜು ಹುಡುಗನ ಹಳಹಳಿಕೆಗಳು ಎಲ್ಲವೂ ಚಳಿಯಲ್ಲಿ ಅಕಸ್ಮಾತ್ತಾಗಿ ಹನಿವ ಮಳೆಯ ಅನಿರೀಕ್ಷಿತ ಖುಷಿ ಮತ್ತು ಒದ್ದಾಟದಂತೆ ಸಹಜ, ಸರಳ, ಸ್ಪರ್ಶೀ ಯಾಗಿವೆ.

  ಹೂಹುಡುಗಿ ಕವಿತೇನೂ ಹಾಕಿಯಲ್ಲ ಪ್ಲೀಸ್..

  ಪ್ತೀತಿಯಿಂದ
  ಸಿಂಧು

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s