ಹೀಗೊಂದು ಮುಖಾಮುಖಿ!

ಹೀಗೆ ಸಾಗುತ್ತಾ ಸೀಗೆಮಟ್ಟಿ ದಾಟಿ ಎದುರಿನ ಬೂರುಗದ ಮರದ ಸಮೀಪಕ್ಕೆ ಬಂದಿದ್ದೆ ಅಷ್ಟೆ! ಗಿಡ-ಮರದ ನೆತ್ತಿಯಿಂದ ಕಣ್ಣುಗಳು ಅಚಾನಕ್ಕಾಗಿ ಎದುರಿನ ದಾರಿಯತ್ತ ಇಳಿದವು…. ಕ್ಷಣ ಜೀವ ಝಲ್ಲೆಂದಿತು!! ಹೌದು, ನಾನು ಕನಸಿನಲ್ಲೂ ಊಹಿಸಲಾಗದ ಸ್ಥಿತಿಯಲ್ಲಿ ನಾನಿದ್ದೆ!!

ಅವತ್ತು ಅದಾಗ ತಾನೆ ಮಳೆ ನಿಂತ ಹೊತ್ತು. ಸಂಜೆ ಐದರ ಬಿಸಿಲು ಹಸಿರ ಎಲೆಗಳ ತುದಿಯಲ್ಲಿ ಇನ್ನೇನು ನೆಲಕ್ಕೆ ಉದರಬೇಕು ಎಂಬ ತವಕದಲ್ಲಿದ್ದ ಹನಿಗಳ ಮೇಲೆ ಫಳಫಳಿಸುತ್ತಿತ್ತು. ಕಾಡಿನ ಕಾಲುದಾರಿಯಲ್ಲಿ ನಡೆಯುತ್ತಿದ್ದ ನನ್ನ ಬಟ್ಟೆಗಳೆಲ್ಲಾ ರಸ್ತೆಗೆ ಬಾಗಿದ್ದ ಲಂಟಾನದ ಗಿಡಗಳ ನೀರು ತಾಕಿ ಬಹುತೇಕ ಒದ್ದೆಯಾಗಿತ್ತು. ಸದ್ಯ ಮುಂಗಾರಿನ ಮಳೆಯಾದ್ದರಿಂದ ಬಂದದ್ದು, ಅಷ್ಟೇ ವೇಗವಾಗಿ ಹೋಗಿದ್ದರಿಂದ ಮತ್ತು ಅದರ ಹಿಂದೇ ಇಳಿಬಿಸಿಲ ಝಳ ಕಾಯತೊಡಗಿದ್ದರಿಂದ ಚಳಿಯಲ್ಲಿ ನಡುಗುವ ಸಂಕಷ್ಟ ಇರಲಿಲ್ಲ.

ಊರಿಗೆ ಹೋದಾಗೆಲ್ಲಾ ಒಬ್ಬನೇ ಮನೆ ಹಿಂದಿನ ಕಾಡನ್ನು ಸುತ್ತುವುದು ಅಭ್ಯಾಸವಾಗಿಹೋಗಿರುವುದರಿಂದ ಅವತ್ತು ಕೂಡ ಹಾಗೆ ಹೋದವನು ಮತ್ತೆ ಮನೆಯತ್ತ ಹೆಜ್ಜೆ ಹಾಕುತ್ತಿದ್ದೆ. ಮಧ್ಯಾಹ್ನ ಊಟ ಮುಗಿಸಿ ಹೊರಟವನು ಬರೋಬ್ಬರಿ ಮೂರೂವರೆ ತಾಸು ಕಾಡು ಸುತ್ತಿದ್ದರಿಂದ ಬೆಂಗಳೂರಿನಲ್ಲಿ ನೆಲವನ್ನೇ ತಾಕದ ಕಾಲುಗಳಿಗೆ ವಿಪರೀತ ದಣಿವಾಗಿತ್ತು. ಸರಿ, ಬೇಗೆ ಮನೆಗೆ ಹೋಗಿ ಒಂದೊಳ್ಳೆ ಟೀ, ಹಲಸಿನ ಹಪ್ಪಳ ತಿಂದು ತೋಟದತ್ತ ಮುಖಮಾಡಿ ಬಂದರೆ ಎಲ್ಲಾ ದಣಿವು ಮಾಯವಾಗಲಿದೆ ಬಿಡು ಎಂದುಕೊಂಡು ದಡದಡ ನಡೆಯುತ್ತಲೇ ಇದ್ದೆ. ಇನ್ನೇನು ಮನೆ ಒಂದು ಕಿ.ಮೀ. ದೂರದಲ್ಲಿತ್ತು. ಆ ಸೀಗೆ ಮಟ್ಟಿಯ ತಿರುವನ್ನು ತಿರುಗಿ ಇಳುಕಲು ಇಳಿದರೆ ಮನೆಗೇ ಹೋಗಿ ನಿಲ್ಲುವುದು ಎಂದುಕೊಂಡೆ.

ಸೀಗೆಮಟ್ಟಿ ಬಳಿಗೆ ಬರುತ್ತಿದ್ದಂತೆ ಪ್ರೈಮರಿ ಶಾಲೆಯಲ್ಲಿ ಓದುವಾಗ ಮಳೆ ನಿಂತ ಮೇಲೆ ನಿಲ್ಲುವ ಕಿರುದಾರಿಯ ನೀರಿನಲ್ಲಿ ಆಟವಾಡುತ್ತಾ, ನೀರ ನಡು-ನಡುವೆ ಇರುವ ಮಣ್ಣಿನ ಮೇಲೆ ಪಾದವೂರಿ ಅದು ತಕ್ಷಣವೇ ಆರಿದಂತೆ ಕಾಣುವುದನ್ನು ವಿಚಿತ್ರ ಖುಷಿಯಲ್ಲಿ ಅನುಭವಿಸುತ್ತಾ ಬರುತ್ತಿದ್ದಾಗ ಜಾರಿ ಬಿದ್ದದ್ದು, ಬೀಳುತ್ತಲೇ ಅಂಗೈ ಊರಿದ್ದರಿಂದ ಬಲಗೈ ಹಸ್ತಕ್ಕೆ ಕಲ್ಲು ಚುಚ್ಚಿ ಹದಿನೈದು ದಿನಗಟ್ಟಲೆ ಗಾಯದ ಆರೈಕೆ ಮಾಡಿಕೊಂಡಿದ್ದು, ಅದಕ್ಕಿಂತ ಹೆಚ್ಚಾಗಿ ಅಪ್ಪನ ಬಳಿ ಉಗಿಸಿಕೊಂಡಿದ್ದು,… ಎಲ್ಲಾ ನೆನಪುಗಳ ಮೆರವಣಿಗೆ ಸಾಗಿಯೇ ಇತ್ತು.

ಕಾಲುಗಳು ಮಾತ್ರ ಯಾಂತ್ರಿಕವಾಗಿ ಸಾಗುತ್ತಲೇ ಇದ್ದುವು. ಮನಸ್ಸು ಮಳೆಗಾಲದಲ್ಲಿ ಜಾರಿಬಿದ್ದ ಕಥೆಯನ್ನು ಮೆಲುಕು ಹಾಕುತ್ತಿದ್ದರೆ, ಕಣ್ಣುಗಳ ಸಹಜವಾಗೇ ಗಿಡ- ಮರಗಳ ತುದಿಯನ್ನೋ, ಬಿದಿರು ಮೆಳೆಗಳ ಮೇಲೆ ಆಗ ತಾನೆ ತಲೆಎತ್ತುತ್ತಿದ್ದ ಬಂಗಾರದ ಬಣ್ಣದ ಅಂಬಾರ-ಕಳಲೆಗಳನ್ನೋ ನೋಡುತ್ತಿದ್ದವು. ಕಿವಿಯಲ್ಲಿ ದೂರದಲ್ಲೆಲ್ಲೋ ಕೂಗುತ್ತಿದ್ದ ಜಿಂಕೆಯ ಧ್ವನಿ, ತುಸು ದೂರದಲ್ಲೇ ಕ್ಷಣ- ಕ್ಷಣಕ್ಕೂ ಉಲಿಯುತ್ತಿದ್ದ ಮಂಗೋಟೆ ಹಕ್ಕಿಯ ಕೂಗು, ಹತ್ತಿರದಲ್ಲೇ ಅರಚುತ್ತಿದ್ದ ಜೀರುಂಡೆಯ ಸದ್ದು,… ಮತ್ತೆ ಮಳೆನಿಂತು ಹೋದರೂ ಹನಿಯುತ್ತಲೇ ಇದ್ದ ಹನಿಗಳ ತಕಧಿಮಿತಾ…

ಹೀಗೆ ಸಾಗುತ್ತಾ ಸೀಗೆಮಟ್ಟಿ ದಾಟಿ ಎದುರಿನ ಬೂರುಗದ ಮರದ ಸಮೀಪಕ್ಕೆ ಬಂದಿದ್ದೆ ಅಷ್ಟೆ! ಗಿಡ-ಮರದ ನೆತ್ತಿಯಿಂದ ಕಣ್ಣುಗಳು ಅಚಾನಕ್ಕಾಗಿ ಎದುರಿನ ದಾರಿಯತ್ತ ಇಳಿದವು…. ಕ್ಷಣ ಜೀವ ಝಲ್ಲೆಂದಿತು!! ಹೌದು, ನಾನು ಕನಸಿನಲ್ಲೂ ಊಹಿಸಲಾಗದ ಸ್ಥಿತಿಯಲ್ಲಿ ನಾನಿದ್ದೆ!!

ಕಾಡಿನಲ್ಲಿ ನಡೆವಾಗ ಆಗಾಗ ಯಾವ ಜೀವವನ್ನು ನೆನೆಸಿಕೊಂಡು ಮನಸ್ಸು ತುಸು ಪುಕ್ಕಲಾಗುತ್ತಿತ್ತೋ ಅದೇ ಜೀವ ಕಣ್ಣೆದುರಿಗೆ ಕೂತಿದೆ! ಅದೂ ಕೇವಲ ಹತ್ತು ಹೆಜ್ಜೆ ದೂರದಲ್ಲೇ!! ಕಣ್ಣು ಅದನ್ನು ನೋಡುತ್ತಲೇ ಗಕ್ಕನೆ ಅಲ್ಲೇ ನಿಂತೆ. ಕೂಗಲು, ಕೈ ಎತ್ತಿ ಅದನ್ನು ಬೆದರಿಸಲು,… ಊಹ್ಞೂಂ ಏನೊಂದಕ್ಕೂ ಸಾಧ್ಯವಾಗುತ್ತಿಲ್ಲ! ಮಾತು ಹೊರಡುತ್ತಿಲ್ಲ, ಕೈ-ಕಾಲು ನಡುಗುತ್ತಿವೆ…. ಅಯ್ಯೋ… ರಾತ್ರಿ ಕನಸಲ್ಲಿ ಓಡುತ್ತಿರುವಂತೆ, ಹಾವಿನ ಮೇಲೆ ನಡೆದಂತಾಗುವ ಅನುಭವವೇ ಈಗಲೂ…. ಕಣ್ಣು ಮಾತ್ರ ರೆಪ್ಪೆ ಮಿಟುಕಿಸದೇ ಅದರತ್ತಲೇ ನೆಟ್ಟಿವೆ!

ಹಾಗೇ ನೋಡುತ್ತಲೇ,… ನನ್ನ ಕಡೆ ಬೆನ್ನು ಮಾಡಿಕೂತಿದ್ದ ಅದು ನಿಧಾನಕ್ಕೆ ಕತ್ತನ್ನಷ್ಟೇ ನನ್ನತ್ತ ತಿರುಗಿಸಿತು. ಇನ್ನೇನು ನನ್ನನ್ನು ಕಂಡರೆ ಮುಗೀತು ಕಥೆ ಎಂದುಕೊಂಡು ಬೆವರತೊಡಗಿದೆ. ನನ್ನ ಕಣ್ಣಿನೊಂದಿಗೆ ಅದರ ಕಣ್ಣುಗಳು ಸಂಧಿಸಿದ ಆ ಕ್ಷಣ ಅಬ್ಬಾ! ಮತ್ತೊಂದು ಕ್ಷಣಕ್ಕೆ ಆ ನೋಟವನ್ನು ಉಳಿಸಿಕೊಳ್ಳೋಣವೆಂದರೂ ಅದಕ್ಕೆ ಅವಕಾಶವಾಗದಂತೆ ಒಂದೇ ನೆಗೆತಕ್ಕೆ ದಾರಿಯಿಂದ ಆಚೆ ನೆಗೆದು ಲಂಟಾನದ ಪೊದೆಗಳ ನಡುವೆ ಮಾಯವಾಯಿತು.

ಅಂತಹ ರೌದ್ರ ಸೌಂದರ್ಯದ ಜೀವವನ್ನು ಕಣ್ಣಾರೆ ಕಂಡ ಖುಷಿ ಒಂದುಕಡೆಯಾದರೆ, ಅಲ್ಲಿವರೆಗೆ ಭಯದಿಂದ ನಿಂತೇಹೋದಂತಿದ್ದ ಎದೆಯ ಬಡಿತ ಈಗ ದಿಕ್ಕೆಡುವಂತೆ ಬಡಿದುಕೊಳ್ಳತೊಡಗಿತ್ತು. ಅದರ ಸೌಂದರ್ಯ, ಆ ಕಣ್ಣುಗಳಲ್ಲಿನ ತೀಕ್ಷ್ಣತೆ, ಅದರ ಮೈಬಣ್ಣ, ಪಟ್ಟೆಗಳ ವಿನ್ಯಾಸ, ಬಾಲದ ವೈಯಾರಗಳನ್ನೆಲ್ಲಾ ಕಣ್ಣು ಕಂಡದ್ದಿರೂ ಸವಿಯುವ ಮನಸ್ಥಿತಿ ಇರಲಿಲ್ಲ! ಮೊದಲು ಅಲ್ಲಿಂದ ಬೇಗ ಪಾರಾಗಿ ಮನೆ ಸೇರಿದರೆ ಸಾಕಿತ್ತು… ಓಡಿದಂತೆ ಹೆಜ್ಜೆ ಹಾಕುತ್ತಾ ಮನೆ ಸೇರಿದ ಮೇಲೆ ಮನೆಯಲ್ಲಿ ಹೇಳಿದರೆ, ತಮ್ಮ ನಂಬುತ್ತಲೇ ಇಲ್ಲ!?  “ಇಷ್ಟೊತ್ತಿನಲ್ಲಿ ಹುಲಿ, ಅದು ಪಟ್ಟೆ ಹುಲಿ ಕಾಣುವುದು ಉಂಟೇನೋ… ಹೋಗೋ ಮಾರಾಯ” ಎಂದ!! ಏನ ಹೇಳಲಿ?

5 thoughts on “ಹೀಗೊಂದು ಮುಖಾಮುಖಿ!

  1. ಶಶಿ ಸಂಪಳ್ಳಿಯವರೇ,

    ನಮಸ್ಕಾರ. ಹೇಗಿದ್ದೀರಿ?

    ನಿಮಗೂ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ‘ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ‘ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ‘ಸಂಪದ’ದ ಹರಿಪ್ರಸಾದ್ ನಾಡಿಗ್, ‘ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ‘ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    ಶ್ರೀನಿಧಿ.ಡಿ.ಎಸ್

    Like

  2. @ ಮಲ್ನಾಡ್ ಹುಡ್ಗಿ,

    ನಿನ್ನ ಆಸೆ ಈಡೇರಲ್ಲ! ಏಕೆಂದರೆ, ಆ ಹುಲಿ ಈಗಿಲ್ಲ… ಸ್ಸಾರಿ…!

    @ ಟೀನಾ

    ಥ್ಯಾಂಕ್ಯೂ…

    @ ಹಕ್ಕಿ

    ತೇಜಸ್ವಿಯವರ ಬರಹ ನೆನಪಾದರೆ, ಹೂವಿನೊಂದಿಗೆ ನಾರು ಸ್ವರ್ಗಕ್ಕೆ ಹೋದ ಖುಷಿ.. ಆದರೆ, ಈ ಲೇಖನ ಅಷ್ಟೊಂದೇನೂ ಚೆನ್ನಾಗಿಲ್ಲ ಅನಿಸುತ್ತೆ ನಂಗೆ..

    @ ಶ್ರೀನಿಧಿ
    ಥ್ಯಾಂಕ್ಯೂ….! ಓ… ಪ್ರಯತ್ನಪಟ್ತೀನಿ.. ನನ್ನ ಕೆಲಸದ ನಡುವೆ ಬಿಡುವು ಸಿಕ್ಕರೆ ಖಂಡಿತಾ ಬರ್ತೀನಿ…

    Like

ನಿಮ್ಮ ಟಿಪ್ಪಣಿ ಬರೆಯಿರಿ