ಕಾಡಿನೆದೆಯಲ್ಲಿ ನೂರೊಂದು ಜೋಗ!

ಮೊಬೈಲ್ ಮೆಸೇಜ್ ಅಲರ್ಟ್ ಸದ್ದಾಯಿತು. ಬೆಳಗಿನ ಜಾವ 5 ಗಂಟೆ! “ನಿನ್ನ ದಿನವೆಲ್ಲಾ ಎಳೆಬಿಸಿಲ ಕಿರಣಗಳಂತೆ ನಳನಳಿಸುತ್ತಿರಲಿ,… ಗುಡ್ ಮಾರ್ನಿಂಗ್” ಎಂದಿದ್ದಳು. ಎಳೆಬಿಸಿಲು, ಹೊರಗೆ ಅದಾಗ ತಾನೇ ನಿಂತ ಮುಂಗಾರಿನ ಮಳೆ, ಅವಳ ಆ ಪ್ರೀತಿ,… ಎಲ್ಲಾ ಸೇರಿ ಭಾನುವಾರ ಹೇಗೂ 9 ಗಂಟೆ ವರೆಗೆ ಗಡದ್ದಾಗಿ ಮಲಗಬೇಕು ಎಂದಿದ್ದವನಿಗೆ ನಿದ್ದೆಗೊಡಲೇ ಇಲ್ಲ. ಅವಳ ನೆನಪು, ಆ ಮೆಸೇಜುಗಳು ಎಳೆಬಿಸಿಲಿನಲ್ಲಿ ಭೋರ್ಗರೆಯುವ ಭಾವನೆಗಳ ಜೋಗದ ಎದುರು ನನ್ನನ್ನು ತಂದು ನಿಲ್ಲಿಸಿದ್ದರೆ ಜಲಪಾತದ ಎದುರು ನಿದ್ದೆ ಬರುವುದಾದರೂ ಎಲ್ಲಿಂದ?

ಎದು ಮುಖಕ್ಕೆ ನೀರು ಹಾಕಿ, ಮನೆಯ ಬಾಗಿಲು ತೆಗೆದು ಗೆಳೆಯ ಚಿದಾನಂದ ಸಾಲಿ ಅನುವಾದಿಸಿರುವ ಮೆಹಜಬೀನಳ ‘ಎಲೆಯುದುರೂ ಕಾಲ’ ಹಿಡಿದುಕೊಂಡು ಆಗಷ್ಟೇ ಕಣ್ಣುಜ್ಜಿಕೊಳ್ಳುತ್ತಿದ್ದ ಸೂರ್ಯನಿಗೆ ಮುಖಮಾಡಿ ಕೂತೆ. ಅವಳಷ್ಟೇ ಮೋಹಕ ಚೆಲುವಿನ ಕಾವ್ಯದ ಸಾಲುಗಳಲ್ಲಿ ಕಳೆದುಹೋಗುತ್ತಿದ್ದ ನನ್ನನ್ನು ಮತ್ತೆ ಸುರಿಯಲಾರಂಭಿಸಿದ ಮಳೆ ಇನ್ನೆಲ್ಲಿಗೋ ಕರೆದೊಯ್ದಿತು. ಹಾಗೇ ನನ್ನನ್ನು ಪರವಶಗೊಳಿಸಿ ಇನ್ನೆಲ್ಲಿಗೋ ಹಾರಿಸಿಕೊಂಡು ಹೋಗುತ್ತದೆ ಆ ಹರಾಮಿ ಮಳೆ ಎಂದು ಮೊದಲೇ ಗೊತ್ತಿದ್ದಿದ್ದರೆ ನಾನು ಅದರತ್ತ ನೋಡುವ ಸಾಹಸಕ್ಕೇ ಹೋಗುತ್ತಿರಲಿಲ್ಲವೇನೋ.. ಏಕೆಂದರೆ, ಈ ‘ಮಳೆ’ ಮತ್ತು ಆ ‘ಕೃಷ್ಣ’ (ಜೋರು ಮಳೆಯ ಕೃಷ್ಣಾಷ್ಟಮಿಯ ದಿನ ಈ ಭೂಮಿಗೆ ಬಂದ ಕಾರಣಕ್ಕೋ ಏನೂ!)ಎರಡೂ ಎಂಥೆಂಥ ಮೋಹ ಹುಟ್ಟುಹಾಕಿ, ಇಕ್ಕಟ್ಟಿಗೆ ಸಿಕ್ಕಿಸಿವೆ ಎಂಬುದು ನನಗೊಬ್ಬನಿಗೇ ಗೊತ್ತು!

ಮಳೆ ನೋಡುತ್ತಾ,.. ಮಲೆನಾಡು ನೆನಪಾಯಿತು,.. ಮನೆ ನೆನಪಾಯಿತು,.. ಗದ್ದೆ, ತೋಟ, ಕೆರೆ, ಕಾನು,.. ಒಂದೇ ಎರಡೇ? ಮತ್ತೆ ಮಳೆ ಹೊಯ್ಯುತ್ತಿದೆ ಎಲ್ಲ ನೆನಪಾಗುತ್ತಿದೆ,… ಸುಖ, ದುಃಖ,…..

ನಮ್ಮೂರಿನ ಸಹ್ಯಾದ್ರಿಯ ಅಂಚಿನ ಕಾಡು ಮಳೆಗೆ ಹೊಗರೇಳುವುದು ಎಂದರೆ, ಮಳೆ ಎಂಬ ಮಂತ್ರದಂಡದ ಮೋಡಿ ಫಲಿಸಿದೆ ಎಂದೇ ಅರ್ಥ. ಜೋರು ಮಳೆ ಆರಂಭವಾಗುತ್ತಲೇ ಕಾನಿನ ಸವಳು(ಬೆಟ್ಟಗಳ ನಡುವಿನ ನೀರು ಹರಿವ ಕಣಿವೆ) ನೀರಿನ ಝರಿಯಾಗುತ್ತದೆ. ಅಲ್ಲಿ ನಡೆವ ಕಾಲಿಗೆ ನೀರಿನ ಕಿಚಿ-ಪಿಚಿ ಮೋಜು, ಕೇಳುವ ಕಿವಿಗೆ ಎಲ್ಲೆಲ್ಲೂ ನೀರ ನಾದ. ಗೇಣುದ್ದದ ಜಲಪಾತದಿಂದ ಆಳುದ್ದದ ಜಲಪಾತಗಳವರೆಗೆ ಕಾಡಿನೆದೆಯಲ್ಲಿ ನೂರೊಂದು ಜೋಗಗಳೇ. ಹೊಳೆವ ಸ್ಪಟಿಕದಂತಹ ನೀರಿನ ನಡುವೆ ತೇಲಿ ಬರುವ ಯಾವುದೋ ಮರದ ಹೂವು, ಎಲ್ಲಿಯೋ ಮಾಗಿದ ಹಣ್ಣುಗಳು, ಎಲೆ, ಕುಡಿ ಬೆರೆತು ನೀರಿಗೆ ಎಲ್ಲೂ ಕಾಣದ ರುಚಿ!

ಮಳೆಯ ಹನಿಗಳ ಸಂದೇಶ ಸಿಗುತ್ತಲೇ ಅರಳುವ ಬಿದಿರ ಕಳಲೆ, ಬಿದಿರ ಮೆಳೆಯ ಬುಡದಲ್ಲಿ ಬೆಚ್ಚನೆ ಗೂಡಿಂದ ಹೊರ ಹೊರಡುವ ಕಾಳಿಂಗಸರ್ಪದ ಸಂತಾನ, ಎಳೆ ಕಳಲೆಗಾಗಿ ಮೆಳೆಗೆ ನುಗ್ಗಿ ಸಿಕ್ಕಿಹಾಕಿಕೊಂಡು ಅಂಬಾ ಎನ್ನುವ ತುಡುಗ ಮಣಕ,.. ಇನ್ನೆಲ್ಲೋ ತಗ್ಗಿನಲ್ಲಿ ಚಿಲ್ಲನೆ ಚಿಮ್ಮಲು ಕಾತರಿಸುತ್ತಿರುವ ಜಲದ ಬುಗ್ಗೆಯ ಜುಳು- ಜುಳು ಸದ್ದು,.. ಮತ್ತೆ ದೂರದಲ್ಲಿ ಎಳೆಬಿಸಿಲಿಗೆ ವಶವಾಗಿ ಮರಿಗಳನ್ನು ಕಟ್ಟಿಕೊಂಡು ಬಂದು ಆಡಿಸುವ ನವಿಲಿನ ಕೇಕೆ,..

ಅಂಚಿನ ಗದ್ದೆಯ ಬದುವಿನ ಅಗಳದಲ್ಲಿ ಮರಿಬಿಡುವ ಏಡಿ, ಕೆರೆಯ ಅಂಚಲ್ಲಿ ಹೊಸ ನೀರಿಗಾಗಿ ಹಂಬಲಿಸುತ್ತಾ ತತ್ತಿ ಬಿಡಲು ಚಡಪಡಿಸುತ್ತಾ ಸರಿದಾಡುವ ಮೀನಿನ ಹಿಂಡು, ಕೆಳಗೆ ತೋಟದ ಅಡಿಕೆ ಮರಗಳಗುಂಟ ಇಳಿವ ನೀರನ್ನೇ ಜಾರುಬಂಡಿಯಾಗಿಸಿಕೊಂಡು ತೆವಳುವ ಬಸವನಹುಳು, ವೆನಿಲಾ ಗಿಡಗಳ ನಡುವೆ ಅಂಜುತ್ತಾ ಬುಸುಗುಡುವ ನಾಗರ ಹಾವು,.. ಆಚೆ ದಿಬ್ಬದ ಕಡೆಯಿಂದ ಮಾರ್ದನಿಸುವ ದನದ ಘಂಟೆ- ಲೊಟ್ಟೆಗಳ ಸದ್ದು,…

ಅಲ್ಲಿ ಆ ಮಾಯಾಲೋಕದ ನಡುವೆ ಕಳೆದು ಹೋದವನನ್ನು ಮತ್ತೆ ವಾಪಸ್ ಕರೆತಂದದ್ದು ಮಳೆಯೇ.. ಒಮ್ಮೆಲೇ ಬರ್ ಎಂದು ಬಂದ ಜಡಿಮಳೆಯ ಹನಿಗಳು ಮುಖಕ್ಕೆ ರಾಚುತ್ತಲೇ ಕೈಯಲ್ಲಿನ ಮೆಹಜಬೀನ್ ನೆನಪಾದಳು… ಮಲೆನಾಡಿನ ನಡುವಿಂದ ಮತ್ತದೇ ಮಾಯಾನಗರಿಗೆ ದಿಢೀರನೇ ಮರಳಿದೆ!

Advertisements

6 thoughts on “ಕಾಡಿನೆದೆಯಲ್ಲಿ ನೂರೊಂದು ಜೋಗ!

 1. ಶಶಿ,

  ಎಕ್ಸಲೆಂಟ್ ಆಗಿದೆ.

  ಸುಮ್ಮನೆ ನಿದ್ದೆ ಹೋಗಿ ನೀವೊಬ್ಬರೇ ಕನಸು ಕಂಡುಬಿಡಬಹುದಾಗಿದ್ದನ್ನು ತಪ್ಪಿಸಿ ನಮಗೆಲ್ಲ ರಸದೌತಣ ಉಣಬಡಿಸಿದ ಅವಳ ಎಳೆಬಿಸಿಲಿನಂತ ಮೊಬೈಲ್ ಮೆಸೇಜಿಗೆ ಮತ್ತು ಕಳಿಸಿದವಳಿಗೆ ನನ್ನ ಧನ್ಯವಾದ ತಿಳಿಸಿ.
  ಓದುತ್ತ ಓದುತ್ತ ಕಳಲೆ ಕಿತ್ತು, ಬಿದಿರು ಮುಳ್ಳು ಚುಚ್ಚಿದ ಕಾಲನ್ನು, ಜಡ್ದಿನ ಮೇಲೆ ಹರಿವ ನೀರಿನಲ್ಲಿ ಅದ್ದಿಕೊಂಡು ಬರುತ್ತಾ ಮರಗಿಡಗಳಿಂದ ಮತ್ತೆ ಮಳೆಯಾಗುದುರಿದ ಹನಿಗಳಲ್ಲಿ ಒದ್ದೆಯಾಗಿಹೋಗಿದ್ದೇನೆ.

  ತುಂಬ ಚೆನಾಗಿತ್ತು.

  ಪ್ರೀತಿಯಿಂದ
  ಸಿಂಧು

  Like

 2. ಹ್ಮ್ ಮ್ ಮ್ ಮ್…. ಕಳಲೆ ಉಪ್ಪಿನಕಾಯಿಯ, ನಮ್ಮೂರಿನ ಕಾಡುಗಳ, ಜೋಗ್ ಗೆ ಹೋದಾಗ ಆ ಬಂಡೆ ಜಾರಿ ಆ ನೀರಿಗೆ ಬಿದ್ದ ಮತ್ತು ವಾಪಸಾಗುವಾಗ ಮೇಲೇರಲು ಸಹಾಯ ಮಾಡಿದ ಹೆಸರು ಗೊತ್ತಿಲ್ಲದ ಜೇನುಗಣ್ಣಿನ ಹುಡುಗ….ಎಲ್ಲವೂ ನಿಮ್ಮ ಬರಹದಿಂದ ನೆನಪಾಯಿತು….. ಮನಸ್ಸು ಒದ್ದೆ-ಒದ್ದೆ. ಅಂದಹಾಗೆ ಆ ಮೆಸೇಜು ಕಳುಹಿಸಿದ ಹುಡುಗಿಗೆ ನಾನು ಥ್ಯಾಂಕ್ಸ್ ಹೇಳಬೇಕಾ? 😉

  ಪ್ರೀತಿಯಿರಲಿ
  ಮಲ್ನಾಡ್ ಹುಡ್ಗಿ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s