ಗಣಿ ದೇಣಿಗೆಯೂ,… ಬಣ್ಣದ ಸೀರೆಯೂ..

ಸಮೀಕ್ಷೆಯ ದಾರಿಯಲ್ಲಿ...

ಸಮೀಕ್ಷೆಯ ದಾರಿಯಲ್ಲಿ...

 

ಆ ಊರಿನಲ್ಲಿ ಅವತ್ತು ಚುನಾವಣಾ ಪ್ರಚಾರ ಸಭೆ ನಡೆಯುವುದಿತ್ತು. ಗಣಿ ದಣಿಯೊಬ್ಬರು ಎಂಎಲ್ಎ ಯಾಗಿ ಹೋಗಲು ಆ ಊರನ್ನೇ ಆಯ್ಕೆಮಾಡಿಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಇಡೀ ಊರಿನ ತುಂಬ ವಿಚಿತ್ರ ಹುಮ್ಮಸ್ಸು ಕಾಣುತ್ತಿತ್ತು. ಚುನಾವಣಾ ಸಮೀಕ್ಷೆಗೆ ಹೋದ ನಾವು, ಸಹಜವಾಗಿ ರಸ್ತೆ, ಹೋಟೆಲ್, ಬೀಡಾ ಅಂಗಡಿ, ರೈತರು, ಕೂಲಿಕಾರ್ಮಿಕರನ್ನು ಮಾತನಾಡಿಸತೊಡಗಿದೆವು.

ಈ ಸಾರಿ ಬಿಡ್ರಿ ಸರ, ದುಡ್ಡು ಚೆಲ್ಲಾಡತೈತಿ,.. ಇನ್ನೂ ಚುನಾವಣಿ ಏಳೆಂಟು ದಿನ ಐತ್ರಿ, ಈಗಲೇ ಅವರು ಕರ್ಚು ಮಾಡಿದ್ದು ಏನಿಲ್ಲಂದ್ರೂ 20 ಕೋಟಿ ಮೀರಿರಬೈದ್ರಿ.. ಅಂದ ಬಾರ್ ಒಂದರ ಎದುರಿನ ಬೀಡಾ ಅಂಗಡಿಯಾತ. ಹೇಳಿಕೇಳಿ ಬಾರ್ ಎದುರಿನ ಬೀಡಾ ಅಂಗಡಿ ಎಂದರೆ ಅದು ಎಲ್ಲಾ ಸತ್ಯಗಳಿಗೆ ತುಸು ಹತ್ತಿರದ ಮೂಕಸಾಕ್ಷಿ! ಇರಬಹುದು ಎಂದುಕೊಂಡು ಮುಂದುವರಿದೆವು.

ಬಸ್ ನಿಲ್ದಾಣದಲ್ಲಿ ಹಳ್ಳಿಗೆ ಹೋಗಲು ಬಸ್ಸಿಗಾಗಿ ಕಾದು ನಿಂತಿದ್ದ ರೈತನೊಂದಿಗೆ ಮಳೆ- ಬೆಳಿ ವಿಚಾರ ಮಾತಾಡುತ್ತಾ, ನಮ್ಮ ದಾರಿಗೆ ಎಳೆದುಕೊಂಡೆವು. ಚುನಾವಣೆ ಬಿಗಿ ಐತ್ರಿ, ನನ್ ಜನ್ಮದಾಗೇ ಇಷ್ಟೊಂದು ದುಡ್ಡು, ಭರಾಟೆ ಕಂಡಿದ್ದಿಲ್ರಿ ಎಂದರು ಯಜಮಾನರು. ಸರಿ, ಏನಕ್ಕೆ ಕರ್ಚು ಮಾಡ್ತಾರ್ರಿ, ಆಯೋಗ ಈ ಬ್ಯಾನರು, ಕಟೌಟ್ ಹಾಕೋಂಗಿಲ್ಲ ಅಂದೈತಲ್ರಿ ಎಂದು ಹಣ ಹರಿಯುವ ದಾರಿಗಳ ಶೋಧನೆಗೆ ಚಾಲನೆ ಕೊಟ್ಟೆವು (ಮೊದಲೇ ಗೊತ್ತಿದ್ದರೂ ಕುತೂಹಲಕ್ಕಾಗಿ). ಆಗ ಅವರು, ಅಯ್ಯೋ ಆಯೋಗ ಮಾಡಿದ್ದು ಅಲ್ಲೇ ಇರ್ತೈತೆ, ಇವರು ಮಾಡೋದು ಮಾಡ್ತಾರ್ರಿ,.. ಮೊನ್ನೆ ನೋಡ್ರಿ ನಾಮಪತ್ರ ಹಾಕೋ ಸಭೆ ಮಾಡಿದ್ರಲ್ಲ ಆವಾಗ ಕನಿಷ್ಠ ಅಂದ್ರೂ 60 ಟ್ರ್ಯಾಕ್ಟರ್ ಜನ ಬಂದಿದ್ರಿ, ಒಂದೊಂದು ಟ್ರ್ಯಾಕ್ಟರಿಗೆ 10-12 ಸಾವಿರ ಕೊಟ್ಟಾರಿ, ಹಂಗೇ ಜೀಪು, ಕಾರು, ಬಸ್ ಬ್ಯಾರೆ ಲೆಕ್ಕಾರಿ, ಮತ್ತೆ ಹಳ್ಳಿಗಳಿಗೆ ಎಲ್ಲಾ ಮಹಿಳಾ ಸಂಘ, ಹುಡುಗರ ಸಂಘಗೊಳಿಗೆಲ್ಲಾ ತಲಾ ಒಂದೊಂದು ಲಕ್ಷ ಕೊಡ್ತೀವಿ ಅಂದಾರ್ರಿ,.. ಈಗಾಗಲೇ ಅಧ್ಯಕ್ಷರು, ಉಪಾಧ್ಯಕ್ಷರಿಗೆಲ್ಲಾ 10 ಸಾವಿರ ರೂಪಾಯಿ ಸ್ವಂತಕ್ಕೆ ಅಂತ ಕೊಟ್ಟಾರ್ರಿ… ಎಂದರು.

ಅವರ ಮಾತನ್ನ ಕೇಳಿ ನಗುಬಂತು. ನಾವಿದ್ದ ಸ್ಥಿತಿಯಲ್ಲಿ ನಗುವಲ್ಲದೆ ಇನ್ನೇನೂ ವ್ಯಕ್ತಪಡಿಸುವ ಸ್ಥಿತಿ ಇರಲಿಲ್ಲ!

ಮೂರು ವರ್ಷಗಳ ಹಿಂದೇ ಇದೇ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಬಗ್ಗೆ ವಾರಪತ್ರಿಕೆಯೊಂದಕ್ಕೆ ಲೇಖನ ಮಾಡುತ್ತಾ, ಮೌನಕ್ರಾಂತಿ ಎಂದು ಬಣ್ಣಿಸಿದ್ದೆವು. ಇದೀಗ ಅದೇ ಸಂಘಗಳೇ ಕಳೆದ ಚುನಾವಣೆಯಲ್ಲಿ ಸಾಕಷ್ಟು ಫಲಾನುಭವಿಗಳಾಗಿ ಹೊರಹೊಮ್ಮಿವೆ. ಯಾವ ಸಂಘಗಳು ಮಹಿಳಾ ಸ್ವಾವಲಂಬನೆಯ ವೇದಿಕೆಗಳಾಗಬೇಕಿತ್ತೋ ಅವೇ ಇಂದು ಕೇವಲ ಹಣದ ಆಮಿಷಕ್ಕೆ ಬಿದ್ದು ರಾಜಕೀಯ ಪ್ರಬುದ್ಧತೆ, ಸ್ವಾತಂತ್ರ್ಯವನ್ನು ಹರಾಜಿಗಿಟ್ಟಿವೆ. ಈ ಸಂಘಗಳು ಗ್ರಾಮೀಣ ಮಹಿಳೆಯರಿಗೆ ಒಂದಿಷ್ಟು ವ್ಯವಹಾರಿಕ ಜಾಣ್ಮೆಯನ್ನು ಕಲಿಸಿವೆ, ಕೆಲಮಟ್ಟಿಗೆ (ಕೆಲವಾದರೂ) ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸಿವೆ ಎಂಬುದು ನಿಜವಾದರೂ, ರಾಜಕೀಯ ಪಕ್ಷಗಳ ನೈತಿಕ ದಿವಾಳಿತನದ ಪ್ರತೀಕವಾಗಿ ಈ ಸಂಘಗಳೂ ಕೂಡ ಅವರ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ ಎಂಬುದಕ್ಕೆ ಕಳೆದ ಚುನಾವಣೆ ನಿದರ್ಶನವಾಯಿತು. ಮೊನ್ನೆ ಸದನದಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿದೆ. ಆದರೆ, ನಮ್ಮ ಶಾಸಕರುಗಳೇ ದುಡ್ಡು ಕೊಟ್ಟು ಸುಸ್ತಾಗಿದ್ದೇವೆ ಎಂದು ಅಲವತ್ತುಕೊಂಡಿರುವುದು ವಿಪರ್ಯಾಸ. ಬಹುಷಃ ಗೆದ್ದವರು ಯಾರೂ ಅದನ್ನು ಹೇಳಿಲ್ಲ!

ಗ್ರಾಮೀಣ ಮಹಿಳೆಯ ಸಂಘಟನೆಯೊಂದು (ಆರಂಭದಲ್ಲೇ ಸಾರಾಯಿ ಮತ್ತು ಮದ್ಯದ ಲಾಬಿಗಳ ಕೈಗೊಂಬೆಗಳಾಗಿ ದಿಕ್ಕುತಪ್ಪಿದ್ದವು ಎಂಬ ಮಾತು ಬೇರೆ) ಹೇಗೆ ರಾಜಕೀಯ ದಾಳವಾಗಿ ಬದಲಾಗುತ್ತದೆ ಎಂಬುದಕ್ಕೆ ನಿದರ್ಶನವಾದಂತೆಯೇ ಈ ಬೆಳವಣಿಗೆ ರಾಜಕೀಯ ಪಕ್ಷಗಳು ಹೇಗೆ ಎಂತಹ ಸಂಘಟನೆಯನ್ನೂ ಹಣಬಲದ ಮೇಲೆ ತಮ್ಮ ಹಿಡಿತಕ್ಕೂ ತೆಗೆದುಕೊಳ್ಳುತ್ತವೆ ಎಂಬುದಕ್ಕೂ ಉದಾಹರಣೆಯಲ್ಲವೇ?

ಹೀಗೆ ಏನೇನೋ ಯೋಚಿಸುತ್ತಿರುವಾಗಲೇ, ಚುನಾವಣಾ ಸಭೆಗಳಲ್ಲಿ ಯೂನಿಫಾರ್ಮನಂತೆ ಒಂದೇ ಬಗೆಯ ಸೀರೆಯುಟ್ಟು ಮುಂದಿನ ಸಾಲುಗಳಲ್ಲಿ ಕೂರುತ್ತಿದ್ದ ನೂರಾರು ಹೆಣ್ಣುಮಕ್ಕಳ ಚಿತ್ರ ನೆನಪಿಗೆ ಬರುತ್ತಿದೆ…. ಹಾಗೇ ಆ ರೈತ ಹೇಳಿದ ಸಂಘಗಳಿಗೆ ಗಣಿ ದಣಿ ನೀಡಿದ ದೇಣಿಗೆ ಕೂಡ…!

Advertisements

3 thoughts on “ಗಣಿ ದೇಣಿಗೆಯೂ,… ಬಣ್ಣದ ಸೀರೆಯೂ..

 1. ಶಶಿ ನೀನು ಹೇಳಿದ್ದು 101% ಸತ್ಯ. ನಿಜಕ್ಕೂ ಈ ಸಾರಿಯ ಚುನಾವಣೆಯಲ್ಲಿ ಸ್ತ್ರೀ ಶಕ್ತಿ ಸಂಘಗಳು ಹೊಸ ‘ಶಕ್ತಿ’ (?) ಕೇಂದ್ರಗಳಾಗಿ ಉದಯಿಸಿವೆ.
  ದೆಹಲಿಗೆ ಇತ್ತೀಚೆಗೆ ಬಂದಿದ್ದ ಎಂ.ಪಿ.ಪ್ರಕಾಶ್ ಜೊತೆ ಚಹಾ ಹೀರುತ್ತಾ ಚುನಾವಣೆ ಬಗ್ಗೆ ಮಾತನಾಡುತ್ತಿದ್ದೆವು. ಅವರು ಕುತೂಹಲಕಾರಿ ಘಟನೆ ಹೇಳಿದರು. ಅವರು ಯಾವ ಊರಿಗೆ ಪ್ರಚಾರಕ್ಕೆ ಹೋದರೂ, ನೂರಾರು ಹೆಣ್ಣು ಮಕ್ಕಳು ಸಾಲಾಗಿ ಆರತಿ ತಟ್ಟೆ ಹಿಡಿದುಕೊಂಡು ಬಂದು ಬಿಡುತ್ತಿದ್ದರಂತೆ. ಒಂದೊಂದು ತಟ್ಟೆಗೆ ಏನಿಲ್ಲವೆಂದರೂ 500 ರೂ.ಕಾಣಿಕೆ ಹಾಕಬೇಕು! ಇಲ್ಲದಿದ್ದರೆ ‘ಏನ್ಸಾರ್ ನೀವು… ಅವರು ಬಂದು ಹೋಲ್ ಸೇಲಾಗಿ ಇಷ್ಟು ಕೊಡ್ತಾರೆ. ನೀವು 500 ರೂ.ಕೊಡ್ಲಿಕ್ಕೆ ಮೀನ ಮೇಷ ಏಣಿಸ್ತೀರಲ್ಲ’ ಅಂತ ತರಾಟೆಗೆ ತೆಗೆದುಕೊಳ್ತಿದ್ದರಂತೆ. ಹೀಗಾಗಿ ಪ್ರತಿ ಊರಿನ ಪ್ರತಿ ಹೆಣ್ಣು ಮಕ್ಕಳು ಆರತಿ ತಟ್ಟೆ ಹಿಡಿಯೋದು ಸಾಮಾನ್ಯವಾಗಿತ್ತಂತೆ.
  ನಮ್ಮ ರಾಜಕಾರಿಣಿಗಳು ರೂಪಿಸೋ ಎಲ್ಲಾ ಯೋಜನೆಗಳೂ ಒಂದು ರೀತಿ ಭಸ್ಮಾಸುರನಂತಿರುತ್ತವೆ. ಅಧಿಕಾರ ವಿಕೇಂದ್ರೀಕರಣದ ಹೆಸರಲ್ಲಿ ಗ್ರಾಮಗಳಿಗೂ ರಾಜಕೀಯ ಕೊಂಡೊಯ್ದರು. ಇವತ್ತೇನಾಗಿದೆ? ಕಪಟ ಅರಿಯದ ಹಳ್ಳಿಗರು ಪಟ್ಟಣದವರಿಗಿಂತ ಹೆಚ್ಚಾಗಿ ಕಪಟಿಗಳಾಗುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳಲ್ಲಿ ಇರುವ ರಾಜಕೀಯ ಲೋಕಸಭೆಯಲ್ಲೂ ಇರಲಿಕ್ಕಿಲ್ಲ. ಒಂದಾಗಿ, ಒಗ್ಗಟ್ಟಾಗಿ ಇರುತ್ತಿದ್ದ ಹಳ್ಳಿಗರು ಇಂದು ಆಯಾ ಪಕ್ಷಕ್ಕೆ ಸೇರಿದ ಗುಂಪುಗಳಾಗಿ, ಒಡೆದು ಹೋಗಿದ್ದಾರೆ. ಹೊಡೆದಾಟ – ಮಾರಾಮಾರಿ ಖಾಯಂ. ಇನ್ನು ರೈತರಂತೂ ತಮ್ಮ ಶಕ್ತಿಯನ್ನೇ ಮರೆತು ನರಸತ್ತ ವಸೂಲಿಬಾಜಿ ರೈತ ನಾಯಕರುಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ. ದಾವಣಗೆರೆಯಲ್ಲಿದ್ದಾಗ ನೀನೇ ನೋಡಿದ್ದೀಯಲ್ಲ ಮಾರಾಯ! ಸೋ ಕಾಲ್ಡ್ ರೈತ ನಾಯಕರುಗಳ ಪ್ರತಾಪಗಳನ್ನು! ಈ ಅಧಿಕಾರ ವಿಕೇಂದ್ರೀಕರಣದಿಂದ ಕೊನೇ ಪಕ್ಷ ಸ್ತ್ರೀಯರು ದೂರ ಇದ್ದರು. ಗ್ರಾಮಗಳ ಆರೋಗ್ಯ ಕಾಪಾಡುವಲ್ಲಿ ಇವರ ಪಾತ್ರ ಪ್ರಮುಖವೂ ಆಗಿತ್ತು.
  ಆಗ ಬಂತು ನೋಡು ಸ್ತ್ರೀ ಶಕ್ತಿ ಗುಂಪುಗಳು! 4-5 ವಷಱದಲ್ಲೇ ಸ್ತ್ರೀ ಶಕ್ತಿ ಗುಂಪುಗಳು ತಮ್ಮ ಧ್ಯೇಯೋದ್ದೇಶ ಮರೆತು, ಹೊಸ ದಿಕ್ಕಿಗೆ ‘ಯು’ ಟನಱ್ ಹೊಡೆದಿವೆ. ಬರುವ ಚುನಾವಣೆ ಹೊತ್ತಿಗೆ ಈ ಸ್ತ್ರೀ ಶಕ್ತಿ ಗುಂಪುಗಳು ರಾಜಕಾರಿಣಿಗಳ ಪಾಲಿಗೆ ಮಿನಿ ಟೆರರಿಸ್ಟ್ ಗ್ರೂಪ್ ಗಳಂತೆ ಕಂಡು ಬಂದಲ್ಲಿ ಅಚ್ಚರಿಯಿಲ್ಲ. ಹಾದಿ ತಪ್ಪಿದ ಗಂಡಸನ್ನು, ಸಮಾಜವನ್ನು ಸರಿ ಹಾದಿಗೆ ತರುವ ಶಕ್ತಿ ಸ್ತ್ರೀಯರಿಗೆ ಇದೆ. ಆದರೆ ಅವರೇ ಹಾದಿ ತಪ್ಪಿದರೆ? ಒಂದು ಒಂದು ರೀತಿ ಧರೆ ಹತ್ತಿ ಉರಿದೊಡೆ ಎಂಬ ಮಾತನ್ನು ನೆನಪಿಸುತ್ತದೆ.
  ಹಾಗಂತ ಸ್ತ್ರೀ ಸಬಲಿಕರಣ ಸಲ್ಲದು, ಆಗಬಾರದು ಅಂತಲ್ಲ. ಆದರೆ ಅದಕ್ಕೆ ಬೇರೆಯದೇ ಆದ ರೀತಿಗಳಿವೆ. ಮಾಗಱಗಳಿವೆ. ಸಕಾರಾತ್ಮಕವಾಗಿ ಸ್ತ್ರೀ ಶಕ್ತಿ ಸಂಘಗಳನ್ನು ಬೆಳೆಸುವ ಸಾಧ್ಯತೆಗಳಿದ್ದವು. ಆದರೆ ಆಗಿದ್ದು ಮಾತ್ರ ಬೇರೆಯದೇ!
  ಆದರೆ ಒಂದಂತೂ ನಿಜ ಶಶಿ, ಹಳ್ಳಿಗಳ ಜನರು, ರೈತರು, ಈ ರಾಜಕೀಯ, ಗ್ರಾಮ ಪಂಚಾಯಿತಿಯ ವಿಷ ವತುಱಲದಿಂದ ಹೊರ ಬಂದು, ಹಿಂದಿನಂತೆ ಒಂದಾಗುವವರೆಗೆ ಈ ಸಮಸ್ಯೆ ತಪ್ಪಿದ್ದಲ್ಲ. ರೈತರು ತಮ್ಮ ಹಾದಿ ತಪ್ಪಿಸುತ್ತಿರುವ ಜಿಲ್ಲಾ ಮಟ್ಟದ ರೈತ ನಾಯಕರಿಂದ ಹಿಡಿದು, ರಾಜ್ಯ ಮಟ್ಟದ ನಾಯಕರ ವರೆಗೆ, ಅವರ ಹಿಂದಿರುವ ಸತ್ಯಗಳನ್ನು ಅರಿಯಬೇಕು. ಕೃಷಿ ಕುರಿತು ರೈತರು ಈಗ ಕೇಳಬೇಕಾದ್ದು ಯಶಸ್ವೀ ಸಾವಯವ ಕೃಷಿಕರ ಕಥೆಗಳನ್ನೇ ಹೊರತು, ರಸ ಗೊಬ್ಬರ ಇಲ್ಲ ಎಂದು ಕಲ್ಲು ಹೊಡೆಯಲು ಪ್ರೇರೇಪಿಸುವ ರೈತ ನಾಯಕರ ಮಾತುಗಳನ್ನಲ್ಲ!
  ಇಲ್ಲದಿದ್ದರೆ ನೀನು ಬರೆದಿರುವುದು ಏನೂ ಅಲ್ಲ. ಮುಂದಿನ ಚುನಾವಣೆ ಹೊತ್ತಿಗೆ ಒಂದು ಭಗವದ್ಗೀತೆಯನ್ನೇ ನೀನು ಬರೆಯಬೇಕಾದಿತು.
  ಹುಷಾರ್ !!!
  shivaprasadtr@gmail.com
  http://www.shivaprasadtr.wordpress.com

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s