ಕಳೆದುಕೊಂಡವ

ಕೇಶವನಿಗೆ ಬೆಳಗಿನ ಜಾವಕ್ಕೆ ಶುರುವಾದ ಎದೆನೋವು ನಿಲ್ಲುವಂತೆ ತೋರಲಿಲ್ಲ. ಎದೆಯ ಛಳಕು ವರ್ಷಗಳಿಂದಲೂ ಇತ್ತು. ಆದರೆ, ಇಂದ್ಯಾಕೋ ಅದು ವಿಚಿತ್ರ ಚಡಪಡಿಕೆಗೆ ತಿದಿಯೊತ್ತುತ್ತಲೇ ಇತ್ತು.

ಬೆಳಗಿನ ಜಾವದ ದುಃಸ್ವಪ್ನ ತರುವ ಹೆದರಿಕೆ, ವಿಹ್ವಲತೆಗಳೆಲ್ಲ ಈಗ ಎಚ್ಚರದಲ್ಲೂ ಕಾಡತೊಡಗಿತು. ಕಣ್ಣು ಮುಚ್ಚಿ ಕಾದರೆ ಬರುಬಹುದೆಂದುಕೊಂಡಿದ್ದ ನಿದ್ದೆಯೂ ಬರಲಿಲ್ಲ. ಬದಲಿಗೆ ಮುತ್ತುತ್ತಿದುದು ಬರಿ ನೆನಪುಗಳು, ಸಣ್ಣ ನೋವಂತೆ ಕೊರೆಯುವ ಮತ್ತದೇ ದುಗುಡ.

ನಿಧಾನವಾಗಿ ಬೆಳಗು ಆವರಿಸುತ್ತಿರುವಂತೆ ದೈಹಿಕ ನೋವನ್ನು ಮೀರಿದ ದುಗುಡವೂ ಕೇಶವನ ಮುತ್ತತೊಡಗಿತು. ಅದು ಬೆಳೆಯುತ್ತಾ, ಇಂಚಿಂಚಾಗಿ ಮನ- ಮೈಯನ್ನೆಲ್ಲಾ ಆವರಿಸುತ್ತಾ ಹೋದಂತೆಲ್ಲಾ ಮನಸ್ಸು ಹಿಡಿತ ತಪ್ಪತೊಡಗಿತು. ವರ್ಷಗಳ ಹಿಂದೆ ತಾನಿನ್ನೂ ಹೈಸ್ಕೂಲಿನಲ್ಲಿ ಓದುತ್ತಿದ್ದಾಗೊಮ್ಮೆ ಹೀಗೆ ಏನೇನೋ ಯೋಚನೆ ಮಾಡಿ, ಕೊನೆಗೆ ಮನೆಯನ್ನೇ ಬಿಟ್ಟು ಹೋದದ್ದು, ದೂರದ ಮಂಗಳೂರಿನಲ್ಲಿ ವಾರ ಕಳೆದ ಬಳಿಕ ಮತ್ತೆ ಅಮ್ಮನ ನೆನೆದು ಮನೆಗೆ ಮರಳಿದ್ದು ನೆನಪಾಗಿ ಚಡಪಡಿಕೆ. ಮನಸ್ಸನ್ನು ಸ್ಥಿಮಿತಕ್ಕೆ ತರಲು ಎಂಬಂತೆ ಯಾವಾಗಲೂ ಮಾಡುವಂತೆ ಸೂರ್ಯೋದಯದ ಚಿತ್ರವನ್ನು ಕಣ್ಣಿಗೆ ತಂದುಕೊಂಡ. ಆ ಹಸಿರು, ಗಿಡ-ಮರ, ಹೂ, ಜುಳುಜುಳಿಸುವ ತೊರೆ, ಸಮುದ್ರ, ಹಕ್ಕಿ-ಪಕ್ಷಿಗಳ ಕಲರವ, ಈ ಜನ, ಉದ್ದನೆ ಬೀದಿ, ಆ ಮಾಲ್, ಸಂತೆ, ಅಲ್ಲಿನ ಗದ್ದಲ, ಎಲ್ಲರ ಒಳ್ಳೆತನ, ಹೀಗೆ ಏನೋನೋ ಯೋಚಿಸುತ್ತಾ ತನ್ನ ದುಗುಡವನ್ನು ನೀಗಲು ಪ್ರಯತ್ನಿಸಿದ. ಹಾಗೇ ಅವಳ ಸೂಜಿಗಲ್ಲಿನ ವ್ಯಕ್ತಿತ್ವ ಕೂಡ ಅನಾಯಾಸವಾಗಿ ತೂರಿಬಂತು….

ಆದರೆ, ಅದಾವುದೂ ಎದೆಯಲ್ಲಿ ಕುದಿಯುತ್ತಿದ್ದ ಅದನ್ನು ಶಮನಗೊಳಿಸಲೇ ಇಲ್ಲ. ಬದಲಿಗೆ ನಾಲ್ಕು ದಿನಗಳಿಂದ ಮಾತಾಡದ, ಫೋನ್ ಮಾಡಿದರೂ ರಿಸೀವ್ ಮಾಡದೆ ಕಟ್ ಮಾಡುತ್ತಿದ್ದ, ಮೆಸೇಜ್ಗೆ ಪ್ರತಿಕ್ರಿಯಿಸದ ಅವಳ ಹಠಮಾರಿತನ ಮತ್ತೆ ಎದೆಗೆ ಕಿಚ್ಚಿಗೆ ತುಪ್ಪವಾಯಿತು. ಏನೋ ನೆನೆದದ್ದು ಇನ್ನೇನೋ ಆಗಿ ಮತ್ತಷ್ಟು ನೋವು ಮೀಟತೊಡಗಿತು. ನಾಭಿಯಾಳದಿಂದ ಉಕ್ಕಿಬರುವ ಸಂಕಟ ಹೊಟ್ಟೆಯಲ್ಲಿ ತಡೆಯಾರದ ತಳಮಳ ಹುಟ್ಟಿಸಿತು. ಹಾಗೆನಿಸುತ್ತಲೇ ಧಡಕ್ಕನೆ ಎದ್ದು ಬಾತ್ರೂಮ್ಗೆ ಓಡಿದ. ಎದೆ ಒತ್ತಿಹಿಡಿದುಕೊಂಡು ಕಾರಿಕೊಂಡ. ಎರಡು- ಮೂರು ಬಾರಿ ತಡೆ- ತಡೆದು ಬಂದ ವಾಂತಿ ಟಬ್ನ್ ನಿಂದ ಹಿಂತಿರುಗಿ ರೂಂಗೆ ಬರುವಾಗಲೂ ತಲೆ ಗಿಮ್ಮೆನ್ನಿಸುತ್ತಿತ್ತು. ನಿಧಾನಕ್ಕೆ ತಿರುಗಿ ಸಾವರಿಸಿಕೊಂಡು ಬಂದು ಹಾಸಿಗೆಯಲ್ಲಿ ಮತ್ತೆ ಒರಗಿದ. ಸುಸ್ತಾಗಿದ್ದರಿಂದ ಮನಸ್ಸಿನ ತಲ್ಲಣ ಬದಿಗೆ ಸರಿದು ನಿದ್ದೆ ಆವರಿಸತೊಡಗಿತು.

***

ಎಷ್ಟೋ ಹೊತ್ತಿನ ಮೇಲೆ ಎಚ್ಚರವಾದಾಗ;

ಗಂಟೆ ಹನ್ನೊಂದಾಗಿತ್ತು. ಕೇಶವನಿಗೆ ಎದೆಯ ನೋವು ಕನಸೋ- ನನಸೋ ಎಂದು ಅನುಮಾನವಾಯಿತು. ಹೊರಗೆ ಸುರಿಯುತ್ತಿದ್ದ ಮಳೆಯ ಸದ್ದು ಕಿಟಕಿನ್ನೂ ಸೀಳಿಕೊಂಡು ನುಗ್ಗುತ್ತಿತ್ತು. ಪಕ್ಕದ ಮನೆಯಿಂದ ‘ಅಳಬೇಡ ತಂಗಿ ಅಳಬೇಡ, ನಿನ್ನ ಕಳುಹಬಂದವರಿಲ್ಲಿ ಉಳುಹಿಕೊಂಬವರಿಲ್ಲ,..’ ಶರೀಫರ ಗೀತೆ ಕೂಡ ಮಳೆಗೆ ಪೈಪೋಟಿಯೆಂಬಂತೆ ತೂರಿಬರುತ್ತಿತ್ತು. ಮತ್ತೆ ಅದನ್ನೇ ಕೇಳುತ್ತಾ; ಶಾಲೆಗೆ ಹೋಗುತ್ತಿದ್ದಾಗ ಬೆಳಿಗ್ಗೆ ರೇಡಿಯೋದಿಂದ ತೇಲಿಬರುತ್ತಿದ್ದ ಭಕ್ತಿಗೀತೆಗಳನ್ನು ಕೇಳುತ್ತಾ ಕಣ್ಣುಮುಚ್ಚಿಕೊಂಡೇ ಏನೇನೋ ಅರೆ ನಿದ್ದೆ- ಅರೆ ಎಚ್ಚರದ ಕನಸು- ಕಲ್ಪನೆಗಳಲ್ಲಿ ತೇಲುತ್ತಿದುದು ನೆನಪಾಯಿತು.

ಹಾಡು ಮುಗಿದ ಬಳಿಕ ಎದ್ದು ಬಾತ್ ರೂಂ ಹೊಕ್ಕ. ಬ್ರಷ್ ಮಾಡುತ್ತಲೇ ಮತ್ತೆ ತಲೆ ತುಂಬ ಯೋಚನೆಗಳು ಸುಳಿಯತೊಡಗಿದವು. ಆಫೀಸಿಗಂತು ರಜೆ, ಇನ್ನಾರನ್ನೋ ಭೇಟಿಯಾಗಬೇಕಿತ್ತು, ಕರೆಂಟ್ ಬಿಲ್ ಕಟ್ಟಬೇಕಿತ್ತು,.. ತನ್ನ ಕಥೆ ಇದಾದರೆ, ಅವಳದ್ದೇನು ಫಜೀತಿಯೋ,.. ಎಂದುಕೊಂಡ. ಆದರೆ, ಅವಳ ಯೋಚನೆ ಸುಳಿಯುತ್ತಿದ್ದಂತೆಯೇ ಮತ್ತೆ ದುಗುಡ… ಹೈಸ್ಕೂಲ್ ದಿನಗಳಲ್ಲಿ ಮಾಡಿದ ಹಾಗೆ ಮತ್ತೆ ಎಲ್ಲಿಗಾದರೂ ಹೋಗಿಬಿಡಲೇ ಎನಿಸುತ್ತಿದ್ದಂತೆ ದುಗುಡ ಮತ್ತೆ ಉಕ್ಕೇರತೊಡಗಿತು. ಎಲ್ಲವನ್ನೂ ಬಿಟ್ಟು ಎಲ್ಲಿಗಾದರೂ ಸೈ, ಹಿಮಾಲಯವೋ, ಕೊಲ್ಕತ್ತವೋ,.. ಕಾಣದ ಕಡೆ ಹೋಗಿಬಿಡಬೇಕು. ಏನೊಂದೂ ಇಲ್ಲದೆ ಸುಮ್ಮನೆ ಸುತ್ತುತ್ತಾ, ಸುತ್ತುತ್ತಾ ಹೋಗಿ ಸುಮ್ಮನೆ ಇದ್ದುಬಿಡಬೇಕು,.. ಈ ಎಲ್ಲದರಿಂದ ದೂರವಾಗಿ ಬದುಕುವುದು ಸಾಧ್ಯವಾ ಎಂದು ನೋಡಬೇಕು..

ಕೇಶವ ನೀನು ಒಂದಲ್ಲಾ ಒಂದು ದಿನ ನಂಬಿದವರನ್ನೆಲ್ಲಾ ಬಿಟ್ಟು ಹೋಗಿಬಿಡ್ತೀಯ, ನಿನ್ನನ್ನ ಯಾವಾಗಲೂ ಜೀವನಪೂರ್ತಿ ನಂಬಿಕೊಂಡಿರಲು ಸಾಧ್ಯವೇ ಇಲ್ಲ. ನಿನ್ನ ಜನ್ಮರಾಶಿಯೇ ಅಂತಹದ್ದು ಎನ್ನುತ್ತಿದ್ದ ಅಮ್ಮನ ಮಾತಿನ ಸತ್ಯಾಸತ್ಯತೆ ನೋಡಿಬಿಡಬೇಕು ಎಂದುಕೊಂಡ. ಈ ಕೆಲಸ, ಆಫೀಸು, ಮನೆ, ಅವಳು, ಅಪ್ಪ- ಅಮ್ಮ, ಗೆಳೆಯರು ಎಲ್ಲರನ್ನೂ ಬಿಟ್ಟು ಹಾಗೆ ಎಲ್ಲ ಬಂಧಗಳನ್ನು ತುಂಡರಿಸಿಕೊಂಡು ಹೋಗುವುದು, ಮತ್ತೆ ಯಾವ ಸೆಳೆತವಿಲ್ಲದೆ ಬದುಕುವುದು ಸಾಧ್ಯವಾ ನನ್ನಂಥವನಿಗೆ ಎನಿಸದೇ ಇರಲಿಲ್ಲ. ಹೆಸರು, ಹಮ್ಮುಗಳಿಲ್ಲದೆ, ಕುಲ-ಗೋತ್ರಗಳ ಹಂಗಿಲ್ಲದೆ ತೀರಾ ಅನಾಮಿಕನಂತೆ, ದಿಕ್ಕುದೆಸೆಯಿಲ್ಲದೆ ಬದುಕನ್ನು ಬಂದಂತೆ ಸ್ವೀಕರಿಸಿ, ಕನಿಷ್ಠ ಊಟ, ನಿದ್ರೆಗಳ ನಿರೀಕ್ಷೆಗಳೂ ಇಲ್ಲದೆ ಇರುವುದು ಎಂತಹ ನಿಸೂರು ಅಲ್ಲವೆ? …

ಎಷ್ಟು ಹೊತ್ತು ಬ್ರಷ್ ಮಾಡಿದ್ದನೋ,.. ಹಲ್ಲು ಚುಳುಗುಟ್ಟತೊಡಗಿದವು. ಓ.. ಎಂದುಕೊಂಡು ದಿಢೀರನೇ ನೀರು ಹಾಕಿಕೊಂಡು ಬಾಯಿ ಮುಕ್ಕಳಿಸಿ ಹೊರಬಂದ. ಗೀಜರ್ ಆನ್ ಮಾಡಿಬಂದು ಬಾಗಿಲು ತೆರೆದು ಪೇಪರ್ ಎತ್ತಿಕೊಂಡರೂ ಓದಲು ಮನಸ್ಸಾಗದೇ ಟಿಪಾಯಿ ಮೇಲೆ ಎಸೆದು, ಮತ್ತೆ ಬಾತ್ರೂಂಗೆ ನುಗ್ಗಿದ. ಹತ್ತೇ ನಿಮಿಷದಲ್ಲಿ ಹೊರಬಂದವನು ಸೀದಾ ಡ್ರೆಸ್ ಮಾಡಿಕೊಂಡು ಬ್ಯಾಗ್ನಲ್ಲಿ ಎರಡು ಜೊತೆ ಬಟ್ಟೆ ತುಂಬಿಕೊಂಡು ಮನೆಯಿಂದ ಹೊರಬಿದ್ದ.

***

ಬೈಕನ್ನು ಮನೆಯಲ್ಲೇ ಬಿಟ್ಟು ಹೊರಟ ಕೇಶವ, ಎಲ್ಲವನ್ನೂ ನಿರ್ಧರಿಸಿದಂತೆ ಆಟೋ ಹತ್ತಿ ರೈಲ್ವೆ ಸ್ಟೇಷನ್ಗೆ ಎಂದ. ಸ್ಟೇಷನ್ ನಲ್ಲಿ ಆಟೋ ಇಳಿದವನೇ ಕೌಂಟರ್ ಬಳಿ ಓಡಿ ಮುಂಬೈ ಟ್ರೈನ್ ಹೊರಡ್ತಾ ಎಂದು ವಿಚಾರಿಸಿದ. ಹತ್ತು ನಿಮಿಷದಲ್ಲಿ ಹೊರಡುತ್ತೆ ಎಂಬ ಉತ್ತರದ ಬೆನ್ನಿಗೇ ದುಡ್ಡು ಕೊಟ್ಟು ಒಂದು ಟಿಕೆಟ್ ಎಂದ. ಟಿಕೆಟ್ ಕೈಗೆ ಬರುತ್ತಲೇ ಒಂದೇ ಉಸಿರಿಗೆ ಓಡಿ ಫ್ಲಾಟ್ ಫಾರಂ ತಲುಪುವಷ್ಟರಲ್ಲಿ ರೈಲು ನಿಧಾನಕ್ಕೆ ಚಲಿಸತೊಡಗಿತ್ತು. ಓಡುತ್ತಲೇ ಹೋಗಿ ಹತ್ತಿ ಯಾವುದೋ ಒಂದು ಕಡೆ ಸೀಟು ಹಿಡಿದ. ಜನರಲ್ ಭೋಗಿಯಾದ್ದರಿಂದ ಜನ ಇನ್ನೂ ತಮ್ಮ- ತಮ್ಮ ಲಗ್ಗೇಜು, ಮಕ್ಕಳ ಮರಿಗಳ ನಿಗಾದಲ್ಲೇ ಇದ್ದರು. ತಕ್ಷಣಕ್ಕೆ ಅವನ ಕಣ್ಣೆದುರಿಗೆ ಇದ್ದದ್ದು ಮುಂಬೈಗೆ ಹೋಗುವುದು, ಅಲ್ಲಿಂದ ದೆಹಲಿ,.. ಅಥವಾ ? ಗೊತ್ತಿಲ್ಲ! ಹಿಮಾಲಯಕ್ಕೆ ಹೋಗುವುದಾದರೆ ಯಾವ ಮಾರ್ಗ ಎಂಬುದೂ ಗೊತ್ತಿಲ್ಲ. ಕೇಳಿದರಾಯ್ತು ಯಾರನ್ನಾದರೂ ಎಂದುಕೊಂಡು ಸುಮ್ಮನಾದ. ಆದರೆ, ಮತ್ತೆ ಅವಳು, ಮನೆ, ಅಪ್ಪ- ಅಮ್ಮ ನೆನಪಾಗತೊಡಗಿದರು. ಕಣ್ಣು ನೀರಾಡತೊಡಗಿದವು.

ಪಕ್ಕದಲ್ಲಿದ್ದವರಿಗೆ ತಿಳಿಯದಿರಲೆಂದುಕೊಂಡು ಕಿಟಕಿಯತ್ತ ಮುಖಮಾಡಿ ಕಣ್ಣೊರೆಸಿಕೊಂಡ!

Advertisements

6 thoughts on “ಕಳೆದುಕೊಂಡವ

 1. I always wonder abouts this ಎಲ್ಲಾದ್ರೂ ದೂರ ಓಡಿ ಹೋಗಬೇಕೆನ್ನಿಸುತ್ತದಲ್ಲಾ ಯಾರೂ ಇಲ್ಲದ ಕಡೆಗೆ ಅದರ ಬಗ್ಗ್ಗೆ. ಹಾಗೆ ಹೋದಾಗಲೂ ಅವರಿಂದೆಲ್ಲಾ ದೂರ ಹೋದೆವು ಅನ್ನಿಸುತ್ತಾ?? story is in elijayic tone coulD have said more…. nice one

  Like

 2. ಕೇಶವನದ್ದು ಅನ್ವೇಷಣೇಯೋ, ಪಲಾಯನವೋ? ಅಸಲಿಗೆ ಎಲ್ಲಾ ಸಂಬಂಧಗಳನ್ನು (ಬರೀ ಮಾನವ ಸಂಬಂಧ ಮಾತ್ರ ಅಲ್ಲ) ಹಾಗೆ ಕಳಚಿಕೊಂಡು ಹೋಗಲು ಕೇಶವನಂಥ ಕೇಶವರು ಯಾಕಾದರೂ ಯೋಚಿಸುತ್ತಾರೋ…

  Like

 3. ಸರ್..ಕಥೆ ಚೆನ್ನಾಗಿದೆ. ಭಾಷೆ, ನಿರೂಪಣೆ ಮನಸ್ಸನ್ನು ತಟ್ಟುತ್ತದೆ. ಯಾಕ್ಸಾರ್, ಏನೋ ಅವಸರದಲ್ಲಿ ಕಥೆಯನ್ನು ಓಡಿಸಿಕೊಂಡು ಹೋದ ಹಾಗೆ..! ಇನ್ನು ಬರೆಯಬಹುದಿತ್ತು ಅನಿಸುತ್ತೆ.
  -ಚಿತ್ರಾ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s