ರಂಜನೆಯಾಗುತ್ತಿದೆ ಸಾಹಿತ್ಯ

crb2170061

ಕನ್ನಡದ ಇವತ್ತಿನ ಸಾಹಿತ್ಯದ ಕುರಿತು ಯೋಚಿಸುತ್ತಿರುವಾಗ ಯಾಕೋ ಮತ್ತೆ- ಮತ್ತೆ ಎಫ್.ಆರ್. ಲೆವಿಸ್ ಮಾತುಗಳು ನೆನಪಾಗುತ್ತವೆ. ಜನಪ್ರಿಯ ಸಾಹಿತ್ಯ ಯಾವಾಗಲೂ ಬಂಡವಾಳಶಾಹಿ ಶಕ್ತಿಗಳಿಂದಲೇ ಪ್ರೇರಿತವಾಗಿರುವುದರಿಂದ ಅದರ ಏಕೈಕ ಉದ್ದೇಶ ಸದಾ ಹಣವಷ್ಟೇ ಆಗಿರುತ್ತದೆ ಎಂಬ ಆತನ ಮಾತನ್ನು ಈಗಿನ ಸಂದರ್ಭದಲ್ಲಿ ತುಸು ಮಾರ್ಪಾಡು ಮಾಡಿ ಹೀಗೆ ಹೇಳಬಹುದೇನೋ.. ‘ಜನಪ್ರಿಯ ಸಾಹಿತ್ಯ ಈಗ ಸದಾ ದುಡ್ಡು ಮಾಡುವುದರ ಮೇಲೇ ಕಣ್ಣಿಟ್ಟು ತಾನೇ ಸ್ವತಃ ಬಂಡವಾಳಶಾಹಿಯಾಗಿ ವರ್ತಿಸುತ್ತಿರುವುದರಿಂದ ಅದರ ಕಣ್ಣಿಗೆ ಹಣವಲ್ಲದ ಬೇರೆ ಜಗತ್ತು ಕಾಣುತ್ತಿಲ್ಲ’!?

ಈ ಮಾತನ್ನು ಹೀಗೆ ಅಚಾನಕ್ಕಾಗಿ ಹೇಳುತ್ತಿಲ್ಲ, ಕಳೆದ ಏಳೆಂಟು ವರ್ಷಗಳಿಂದ ಕನ್ನಡದ ಬಹುತೇಕ ಲೇಖಕರನ್ನು ಗಮನಿಸಿದಾಗೆಲ್ಲಾ ಯೋಚನೆಗೆ ಹಚ್ಚಿದ್ದು ಎಫ್.ಆರ್. ಲೆವಿಸ್. ಆತನ ನಂತರ ಬಹಳಷ್ಟು ಸಾಹಿತ್ಯ ಥಿಯರಿಗಳು ಬಂದಿವೆ, ಪೋಸ್ಟ್ ಮಾರ್ಡನಿಸಂನಂತಹ ಆತನಿಗೆ ಬಹುತೇಕ ವಿರುದ್ಧವಾದ ಚಳವಳಿ ಕೂಡ ಬಂದಾಯಿತು. ಗಂಭೀರ ಮತ್ತು ಜನಪ್ರಿಯ ಎಂಬ ಪ್ರತ್ಯೇಕತೆಗಳನ್ನು ಅಳಿಸಿ ಹಾಕಿ ‘ಸೆಲೆಬ್ರೇಷನ್ ಆಫ್ ಫ್ರಾಗ್ಮಾಟಿಸಂ’ ಎಂದು ಹುಯಿಲೆದ್ದಿದ್ದೂ ಆಯಿತು. ಆದರೆ, ಈಗಿನ ಪ್ರಶ್ನೆಯೆಂದರೆ, ಸಾಹಿತ್ಯ ಎಲ್ಲರಿಗೂ ತಲುಪಬೇಕು, ಎಲ್ಲರೂ ಅರ್ಥಮಾಡಿಕೊಳ್ಳಬೇಕು ಎಂಬುದು ಯಾವ ಬೆಲೆ ತೆತ್ತು ಸಾಧಿಸಬೇಕಾಗಿರುವ ಉದ್ದೇಶ? ನಾನು ಬರೆದದ್ದನ್ನು ಸಾವಿರಾರು ಜನ ಓದಬೇಕು, ಟಾಪ್ಟೆನ್ ಎಂಬ ಪ್ರಹಸನಪಟ್ಟಿಯಲ್ಲಿ ಹೆಸರು ಕಾಣಿಸಿಕೊಳ್ಳಬೇಕು, ಪ್ರಕಾಶಕನ ಜೇಬು ತುಂಬಬೇಕು, ತಾನೂ ಬೇಡಿಕೆಯ ಬರಹಗಾರನಾಗಿ ಹಣ ಮಾಡಿಕೊಂಡು ಇರಬೇಕು,… ಎಲ್ಲದರ ಒಟ್ಟರ್ಥ ಬರವಣಿಗೆಯೆನ್ನುವುದೇ ಒಂದು ದಂಧೆ!

ಹಾಗೆ ದಂಧೆ ಮಾಡಿಕೊಳ್ಳುವುದರ ಬಗ್ಗೆಯಾಗಲೀ, ದುಡ್ಡು ಮಾಡುವುದರ ಬಗ್ಗೆಯಾಗಲೀ ಅಪರಾಧ ಎಂಬಂತೆ ಬಿಂಬಿಸುವುದು ಅಥವಾ ವಾದಿಸುವುದು ನನ್ನ ಉದ್ದೇಶವಲ್ಲ. ಆದರೆ, ಇಂದು ಕನ್ನಡದಲ್ಲಿ ‘ಜನಪ್ರಿಯ’ ಮತ್ತು ‘ಗಂಭೀರ’ ಎಂಬ ಮಾದರಿಗಳನ್ನು ಬದಿಗೊತ್ತಬೇಕಾದ ಕಾಲ ಇದು ಎಂಬುದನ್ನು ಒಪ್ಪುತ್ತಲೇ, ಅಂತಹ ಒಂದು ಸಮ್ಮಿಶ್ರ ಸಾಹಿತ್ಯದ ನೆಪದಲ್ಲಿ ಬದುಕಿನ ದೃಷ್ಟಿಕೋನವನ್ನೇ ಕಳೆದುಕೊಂಡ ಕೇವಲ ರಂಜನೆಯೊಂದನ್ನೇ ಮುಖ್ಯವಾಗಿಟ್ಟುಕೊಂಡ ಮೂರನೇ ದರ್ಜೆಯ ಸಾಹಿತ್ಯ ‘ಪ್ರಯೋಗಶೀಲ’ ಸಾಹಿತ್ಯದ ಮುಖವಾಡದಲ್ಲಿ ವ್ಯಾಪಿಸುತ್ತಿರುವುದರ ಬಗ್ಗೆ ಚರ್ಚೆ ಅಗತ್ಯವೆಂದುಕೊಂಡಿದ್ದೇನೆ.

 ಕನ್ನಡದಲ್ಲಿ ಇವತ್ತು ಏನಾಗುತ್ತಿದೆ ನೋಡಿ, ಒಬ್ಬ ಲೇಖಕ ಎರಡೋ- ಮೂರೋ ವರ್ಷಕ್ಕೆ ಒಂದು ಕಥೆ, ಕಾದಂಬರಿ ಪ್ರಕಟಿಸುತ್ತಾನೆ, ಉತ್ತಮ ತಾತ್ವಿಕತೆ, ಜೀವನದೃಷ್ಟಿಯೊಂದಿಗೆ, ಗಂಭೀರ ಓದನ್ನು ಬೇಡುವಂತಹ ಪುಸ್ತಕ ಅದಾಗಿರಬಹುದು. ಆದರೆ, ಆತನ ಆ ಪುಸ್ತಕ ಚರ್ಚೆಯ ವಿಷಯವಾಗುವುದು ಆತ ಬಹುತೇಕ ಬೆಂಗಳೂರೇತರ ಲೇಖಕರು ಹೇಳುವಂತೆ ಬೆಂಗಳೂರಿನ ‘ಸಾಫ್ಟ್ವೇರ್ ‘ಅಥವಾ ‘ಹಾರ್ಡ್ವೇರ್’ ಸಾಹಿತಿಗಳ ಪಡೆಯಲ್ಲಿ ಗುರುತಿಸಿಕೊಂಡಿದ್ದರೆ ಮಾತ್ರ. ಇಲ್ಲವಾದರೆ, ಅದು ಎಲ್ಲಿಯೂ ಚರ್ಚೆಯಾಗದೇ ಹೋಗಿಬಿಡುತ್ತದೆ. ಅದೇ ನೀವು ಯಾವುದಾದರೂ ‘ತುಂಬಾ ಇಷ್ಟವಾಗುವ’, ‘ಖುಷಿ ಕೊಡುವ’, ‘ಮಜಾ ಅನ್ನಿಸುವ’, ‘ಸಖತ್ ಆಗಿರುವ’, ‘ಥ್ರಿಲ್ಲಿಂಗ್’ ಆಗಿರುವ ಪುಸ್ತಕ ಪ್ರಕಟಿಸಿದರೆ ನಿಮಗೆ ಎಲ್ಲಿಲ್ಲದ ಹೊಗಳಿಕೆ, ಆನ್ ಲೈನ್ ಚರ್ಚೆ, ಟಾಪ್ಟೆನ್ ಪಟ್ಟ, ಬ್ಲಾಗ್ ಸಂಭ್ರಮ ಎಲ್ಲವೂ ಲಗ್ಗೆ ಇಡುತ್ತವೆ. ಅದೆಲ್ಲದರ ಹುಲುಸು ಫಸಲು ಪ್ರಕಾಶಕರಿಗೆ ಆದರೂ, ಲೇಖಕ ದಿನ ಬೆಳಗಾಗುವುದರಲ್ಲಿ ಕನ್ನಡದ ಮಹಾನ್ ಕಥೆಗಾರನೋ, ಕಾದಂಬರಿಕಾರನೋ ಆಗಿಬಿಡುತ್ತಾನೆ. ಹಾಗಾಗಿ, ಈಗೀಗ ಕನ್ನಡದ ‘ಬಹುಬೇಡಿಕೆ’ಯ ಬರಹಗಾರರೆಲ್ಲರ ನೆಟ್ಟನೇರ ದೃಷ್ಟಿ ಹಣದ ಮೇಲೇ ಎಂಬಂತಾಗಿಬಿಟ್ಟಿದೆ.

ಹಾಗಾಗಿ, 90ರ ದಶಕದಿಂದೀಚೆಗೆ ಬರೆಯುತ್ತಿರುವ ಹಲವರು (ಎಲ್ಲರನ್ನೂ ಈ ಕ್ಷಣಕ್ಕೆ ಹೆಸರಿಸುವುದು ಸಾಧ್ಯವಿಲ್ಲ!)ತಾತ್ವಿಕವಾಗಿ ಗಟ್ಟಿತನದ ಸಮಕಾಲೀನ ಬದುಕಿನ ಸೂಕ್ಷ್ಮಗಳನ್ನು ಅರ್ಥೈಸುವಂತಹ ಸತ್ವಶಾಲಿ ಕೃತಿಗಳನ್ನು ಕೊಡುತ್ತಿದ್ದರೂ ನಮ್ಮ ಜನಪ್ರಿಯ ಮಾಧ್ಯಮ(ಮುದ್ರಣ- ದೃಶ್ಯ)ಗಳಲ್ಲಿ ಅಂಥವರ ಬಗ್ಗೆ ಪ್ರಸ್ತಾಪವಾಗುವುದು ವಿರಳವೇ. ಆದರೆ, ಅದೇ ಹೊತ್ತಿಗೆ ಅಂತಹ ಸೂಕ್ಷ್ಮ ಬರವಣಿಗೆಯನ್ನೇನೂ ಹೊಂದದ ಆದರೆ, ನಿರೂಪಣೆಯ ತಂತ್ರಗಾರಿಕೆ, ಜನಪ್ರಿಯ ಶೈಲಿ, ಪತ್ತೇದಾರಿ ಅಂಶಗಳು, ಅವೈಚಾರಿಕವಾದ ಮತ್ತು ರಂಜನೀಯವಾದ ಬರಹಗಳ ಮೂಲಕ ಹಲವರು(ಅವರು ಹೆಸರು ಹೇಳುವುದು ಬೇಡ!) ‘ಪ್ರಚಾರ’ ಮತ್ತು ‘ಗಳಿಕೆ’ಯಲ್ಲಿ(ಎರಡೂ ಪದ ಜನಪ್ರಿಯ ಚಿತ್ರೋದ್ಯಮದ್ದವು!) ಮುಂದಿದ್ದಾರೆ!

ಈ ಸಾಲಿನ ಬರಹಗಾರರಲ್ಲಿ ಮುಖ್ಯವಾಗಿ ಕಾಣುವುದು ತನ್ನ ಕಣ್ಣೆದುರಿಗಿನ ಓದುಗ (ಒಂದು ರೀತಿಯಲ್ಲಿ ಫಾಸ್ಟ್ ಫುಡ್ ನಂತೆ ಸಾಹಿತ್ಯವನ್ನೂ ಧಾವಂತದಲ್ಲಿ ಮುಕ್ಕುವ, ರಂಜನೆಗಾಗಿಯೇ ಸಾಹಿತ್ಯವನ್ನು ಓದುವ ಮಂದಿ) ಹಸಿದಿದ್ದಾನೆ. ಆತನಿಗೆ ಈ ತಕ್ಷಣಕ್ಕೆ ಏನಾದರೂ ಕೊಡಲೇಬೇಕು. ಅವನ ತತಕ್ಷಣದ ಹಸಿವನ್ನು ನೀಗಿಸಿ ಸಂತೃಪ್ತಿಗೊಳಿಸಿದರೆ ಸಾಕು ಎಂಬಂತಹ ‘ದರ್ಶಿನಿ’ ಮಾದರಿಯ ಬರಹ. ಓದುಗನಿಗೆ ಒಂದು ಓದಿಗೆ ಎಲ್ಲವೂ ದಕ್ಕಿಬಿಡಬೇಕು. ಅದು ರಂಜನೀಯವಾಗಿರಬೇಕು, ಆತನಿಗೆ ಸಂತೃಪ್ತಿ, ಖುಷಿ ಕೊಡಬೇಕು, ವಾಹ್! ಎನ್ನುವಂತಿರಬೇಕು ಎಂಬಂತಹ ಸಿದ್ಧಸೂತ್ರಗಳು ಇಲ್ಲಿ ಕಾಣುತ್ತಿವೆ.

ಅಂದರೆ, ಸಾಹಿತ್ಯವೆಂಬುದು ಲೇಖಕ ಮತ್ತು ಓದುಗನ ಇಂಟ್ರೋಸ್ಪೆಕ್ಷನ್ ಗೆ ಸಾಧ್ಯವಾಗಬೇಕು, ಬದುಕನ್ನು ಅಥೈಸಿಕೊಳ್ಳುವ ಮನುಷ್ಯನ ನಿರಂತರ ಹುಡುಕಾಟದಲ್ಲಿ ಸಾಹಿತ್ಯ ಕೂಡ ಒಂದು, ಯಾವುದೇ ಕಲೆ ಅದರ ಕೇಳುಗ/ ನೋಡುಗ/ ಓದುಗನ ವ್ಯಕ್ತಿತ್ವದಲ್ಲಿ ಒಂದು ಸಣ್ಣ ಮಟ್ಟದ ಬದಲಾವಣೆಯನ್ನು ತರಬೇಕು ಎಂಬಂತಹ ನಿರೀಕ್ಷೆಗಳನ್ನು ಇಂತಹ ಕೃತಿಗಳಿಗೆ ಆರೋಪಿಸುವಂತಿಲ್ಲ. ಹಾಗಾಗಿ, ಇಂದು ಟಾಪ್ಟೆನ್ ಪಟ್ಟಿಗಳಲ್ಲಿ ಕಾಣುವುದೆಲ್ಲ ಇಂತಹ ಎರಡನೇ ದರ್ಜೆಯ ಸಾಹಿತ್ಯ ಕೃತಿಗಳೇ (ಸೃಜನಶೀಲ ಎನ್ನುವಂತಹ ಕೃತಿಗಳನ್ನು ಮಾತ್ರವೇ ಪರಿಗಣಿಸುವಾಗ). ಹಾಗಾದರೆ, ಇಂದು ಸಾಹಿತಿಯನ್ನು ಕಲೆ ಮತ್ತು ಏಸ್ತೆಟಿಕ್ ಪ್ರೇರಣೆಗಳಿಗಿಂತಲೂ ಮಾರುಕಟ್ಟೆಯ ಪ್ರೇರಣೆಯೇ ಹೆಚ್ಚು ಪ್ರಭಾವಿಸುತ್ತಿದೆಯೇ ಎಂಬ ಪ್ರಶ್ನೆಗೆ ಸದ್ಯಕ್ಕಂತೂ ಬಹುತೇಕ ಬಹುಬೇಡಿಕೆಯ ಬರಹಗಾರರ ಪೈಕಿ ಹೌದು ಎಂಬುದೇ ಉತ್ತರವಾಗುತ್ತದೆ.

ಆದರೆ, ಎಲ್ಲಾ ಕಾಲದಲ್ಲೂ ಬಹುಬೇಡಿಕೆಯ ಲೇಕಖರು ಜನಪ್ರಿಯರೇ ಆಗಿದ್ದರು ಮತ್ತು ಅವರು ಮಾರುಕಟ್ಟೆಕೇಂದ್ರಿತವಾಗೇ ಬರೆಯುತ್ತಿದ್ದರು ಎಂದು ಯಾರಾದರೂ ವಾದಿಸಬಹುದು. ಆದರೆ, ಈಗಿನ ಪರಿಸ್ಥಿತಿಗೂ ಆಗಿನ ಸ್ಥಿತಿಗೂ ಭಿನ್ನತೆ ಇತ್ತು. ಆಗ ಹಾಗೆ ಬರೆಯುವವರನ್ನು ಅಕಾಡೆಮಿಕ್ ವಲಯ ಅಘೋಷಿತ ನಿಯಮದಂತೆ ಹೊರಗಿಡುತ್ತಿತ್ತು. ಆದರೆ, ಇವತ್ತು ಹಾಗಾಗುತ್ತಿಲ್ಲ. ಇವತ್ತು, ಅಕಾಡೆಮಿಕ್ ಆದ ಮತ್ತು ಸಾಹಿತ್ಯದ ಆಳ ಅಧ್ಯಯನದ ಕೊರತೆಯಿರುವ ಒಂದು ಪೀಳಿಗೆ ಪವರ್ಧಮಾನಕ್ಕೆ ಬಂದಿದೆ. ಅದಕ್ಕೆ ಅಕಾಡೆಮಿಕ್ ಮಾನದಂಡಗಳ ಮೂಲಕ ಒಂದು ಕೃತಿಯ ನೈಜತೆಯನ್ನು ನಿಕಶಕ್ಕೆ ಒಡ್ಡುವ ಶಕ್ತಿಯಾಗಲೀ, ಸಾಮರ್ಥ್ಯವಾಗಲೀ ಇಲ್ಲ. ಇನ್ನೊಂದು ಕಡೆ ‘ಜನಪ್ರಿಯ’ ಮತ್ತು ‘ಗಂಭೀರ’ ಎಂಬ ಪ್ರತ್ಯೇಕತೆ ಬೇಡ ಎಂಬ ವಾದ ಬಲವಾಗಿದೆ. ಹಾಗಿರುವಾಗ, ಇಂತಹ ಸಂದರ್ಭದ ಲಾಭ ಪಡೆದು ಮುನ್ನೆಲೆಗೆ ಬರುತ್ತಿರುವ ಮೀಡಿಯಾಕರ್ ಸಾಹಿತ್ಯದ ಬಗ್ಗೆ ಮಾತನಾಡುವವರಾರು?

ಹಾಗಾಗಿ, ಇಂದು ಕನ್ನಡದಲ್ಲಿ ಸದ್ದು ಮಾಡುತ್ತಿರುವುದೆಲ್ಲಾ ಬಹುತೇಕ ‘ರಂಜನೆ’ಯ ಸಾಹಿತ್ಯವೇ ವಿನಃ  ಬದುಕಿನ ಅರಿವಿನ ಪರಿಧಿಯನ್ನು ವಿಸ್ತರಿಸುವ ಬಗೆಯದ್ದಲ್ಲ…

Advertisements

8 thoughts on “ರಂಜನೆಯಾಗುತ್ತಿದೆ ಸಾಹಿತ್ಯ

 1. ಯೋಚನೆಗೆ ಹಚ್ಚಿತು ಬರಹ.

  ಎಲ್ಲಾ ವರ್ಗದ ಓದುಗರನ್ನು ಸಾಹಿತ್ಯದೆಡೆಗೆ ಸೆಳೆದಿಟ್ಟುಕೊಳ್ಳಲು ಎಲ್ಲಾ ರೀತಿಯ ಸಾಹಿತ್ಯಗಳೂ ಬೇಕು ಅಂತ ಅನಿಸುತ್ತದೆ. ಅಧ್ಯಯನ ಶೀಲ ಕೃತಿಗಳು ಕಡಿಮೆ ಆಗಿವೆ ಎಂಬುದು ಒಪ್ಪತಕ್ಕಂತ ವಿಷಯ. ಆದರೂ ನೀವು ಈ ಮೊದಲನೇ , ಎರಡನೇ ಮುಂತಾದ ದರ್ಜೆಗಳ ವಿವರಣೆ ಹೇಗೆ ಅಂತಲೂ ಹೇಳಿದ್ರೆ ಚೆನ್ನಾಗಿರುತ್ತಿತ್ತು.

  thanx

  Like

 2. ಶಶಿ,
  ನಿಮ್ಮ ಬರಹದಲ್ಲಿ ಸಾಕಷ್ಟು ಸತ್ಯವಿದೆ. ನನಗನ್ನಿಸಿದ್ದು ಇಸ್ಟೇ…. ವೇದ ಸುಳ್ಳಾದರೂ ಗಾದೆ ಸುಳ್ಳಾಗುವುದಿಲ್ಲ. ಹಾಗೆ ” ಹಣಕ್ಕೆ ಹೆಣವು ಬಾಯ್ಬಿಡುತ್ತದಂತೆ” ಹಾಗಾಗಿದೆ ಇಂದಿನ ಜಾನಪದ ಸಾಹಿತ್ಯದ ಸ್ಥಿತಿ.

  Like

 3. ಬಹುತೇಕ ಸತ್ಯವೆನಿಸಿತು. ಹಳೆಯ ಕಾಲದವರ ಬರಹಗಳಲ್ಲಿದ್ದ ’ಗಟ್ಟಿತನ’ ಈಗ ಇಲ್ಲ ಅಂತ ನನಗೂ ಅನ್ನಿಸುತ್ತದೆ. ಮತ್ತೊಬ್ಬ ಬೇಂದ್ರೆ ಬರಲೇ ಇಲ್ಲವಲ್ಲ? ಡಿ.ವಿ.ಜಿ.ಯವರಂತೆ ಜೀವನ ದರ್ಶನ ಮಾಡಿಸುವ ಮತ್ತೊಬ್ಬ ಬರಹಗಾರ ಬರುವುದೇ ಇಲ್ಲವಾ? ಸಮರ್ಪಕ ಅಧ್ಯಯನ ಮತ್ತು ಜೀವನಾನುಭವ -ಎರಡೂ ಕೊರತೆಯಾಗಿ ಕಾಡುತ್ತಿರುವುದು ಸುಳ್ಳಲ್ಲ.

  Like

 4. ಶಶಿ ಅವರೆ ನಿಮ್ಮ ಲೇಖನದ ವಿಚಾರ ಸರಿಯಾಗಿದೆ. ನಮ್ಮಲ್ಲಿ ಬಹಳಷ್ಟು ಜನಕ್ಕೆ ಜನಪ್ರಿಯ ಸಾಹಿತಿಗಳು ಗೊತ್ತೆ ಹೊರತು, ಇಗ ಬರೆಯುತ್ತಿರುವ ಯುವ ಲೇಖಕರು ಯಾರು ಗೊತ್ತಿಲ್ಲ. ನಮ್ಮ ಕೆಲವು ಪತ್ರಿಕೆಗಳು ಕೂಡ ಹಾಗೇ ವರ್ತಿಸುತ್ತವೆ. ಮಹತ್ವದ ಬರಹಗಳು ಚರ್ಚೆಯಾಗುತ್ತಲ್ಲ.ಇದು ನಮ್ಮ ಕಾಲದ ದುರಂತವಲ್ಲದೆ ಮತ್ತೇನು?

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s