ಒಂದು ಪ್ರಶ್ನೆ ಮತ್ತು ನಿರೀಕ್ಷೆ….

shashi

shashi

 

 

 

 

 

 

 

 

 

 

ಸಾಹಿತ್ಯ ಎಂಬುದು ಆಯಾ ಕಾಲದ ಸಮಾಜದ ಪ್ರತಿಬಿಂಬವೇ ಆಗಿರುವುದರಿಂದ ಸಮಾಜದಲ್ಲಿ ಆಗುವ ಎಲ್ಲಾ ಬಗೆಯ ಬದಲಾವಣೆಗಳು ಅಲ್ಲೂ ಕಾಣಿಸಿಕೊಳ್ಳುತ್ತವೆ. ನವೋದಯದ ಕಾಲದ ರಾಷ್ಟ್ರೀಯತೆಯ ಆವೇಗದಲ್ಲಿ ಸಾಹಿತ್ಯ ಕೂಡ ವಸ್ತು ಮತ್ತು ಸ್ವರೂಪದಲ್ಲಿ ಅದನ್ನೇ ಪ್ರತಿಬಿಂಬಿಸುವಂತೆ ರೂಪುಗೊಂಡಿತ್ತು. ಹಾಗೇ ನವ್ಯದ ಹೊತ್ತಿಗೆ ಆಧುನೀಕತೆಯ ಪ್ರಭಾವದಿಂದಾಗಿ ಉಂಟಾದ ವೈಚಾರಿಕ ವ್ಯಕ್ತಿ ಮತ್ತು ಸಾಂಪ್ರದಾಯಿಕ ಸಮಾಜದ ನಡುವಿನ ಸಂಘರ್ಷ ಸಾಹಿತ್ಯದಲ್ಲೂ ಕಾಣಿಸಿಕೊಂಡಿತು. ವಸ್ತು ಆಯ್ಕೆಯಂತೆಯೇ ಅಭಿವ್ಯಕ್ತಿ ಮಾದರಿ ಕೂಡ ಬದಲಾವಣೆ ಕಂಡಿತು. ಹಾಗೇ ನವ್ಯೋತ್ತರ ಕಾಲಘಟ್ಟದ ಬಂಡಾಯ ಸಾಹಿತ್ಯದಲ್ಲೂ, ಆ ನಂತರದ ತಲೆಮಾರಿನ ಸಾಹಿತ್ಯದಲ್ಲೂ ಆಯಾ ಕಾಲಧರ್ಮವೇ ಸಾಹಿತ್ಯದಲ್ಲೂ ಪ್ರತಿಫಲಿಸಿತು.

ಹಾಗೇ, ಇಂದು ಕೂಡ ನಮ್ಮ ಕಾಲದ ಸಮಾಜ ಸಾಹಿತ್ಯದಲ್ಲೂ ಪ್ರತಿಫಲಿಸತೊಡಗಿದೆ. ಆದರೆ, ಒಂದೇ ವ್ಯತ್ಯಾಸವೆಂದರೆ; ಹಿಂದಿನೆಲ್ಲಾ ಸಾಹಿತ್ಯ ಚಳವಳಿಗಳ ಸಂದರ್ಭದಲ್ಲಿ ಬದಲಾದ ಸಮಾಜದೊಂದಿಗೆ ವ್ಯಕ್ತಿಯ ಗ್ರಹಿಕೆ ಮತ್ತು ಅಭಿವ್ಯಕ್ತಿಯನ್ನು ಪ್ರಭಾವಿಸುವಂತಹ ತಾತ್ವಿಕತೆಗಳು(ಫಿಲಾಸಫಿಗಳು) ಕೂಡ ಜೊತೆ- ಜೊತೆಗೇ ರೂಪುಗೊಂಡಿದ್ದವು. ಅವು ಪರಂಪರೆಯಿಂದಲೋ ಅಥವಾ ಪಾಶ್ಚಾತ್ಯರಿಂದ ಎರವು ಪಡೆದೋ ಅಂತೂ ಆಯಾ ಕಾಲದ ಬದುಕಿನಿಂದ ಪ್ರೇರಣೆ ಪಡೆದ ಸಾಹಿತ್ಯಕ್ಕೂ, ಹಾಗೇ ಸಾಹಿತ್ಯದಿಂದ ಪ್ರಭಾವಿತವಾದ ಬದುಕಿಗೂ ಒಂದು ನಿರ್ದಿಷ್ಟ ತಾತ್ವಿಕತೆಯ ಹಿನ್ನೆಲೆ ಇತ್ತು. ಹಾಗಾಗೇ ನವ್ಯದ ಹೊತ್ತಿಗೆ ನಮ್ಮ ಸಮಾಜದಲ್ಲೂ ಸಾಕಷ್ಟು ಪ್ರಗತಿಪರ ಚಳವಳಿಗಳು ಹುಟ್ಟಿಕೊಂಡವು. ಹೋರಾಟಗಳಿಗೆ ಆ ಸಾಹಿತ್ಯ ಪ್ರೇರಣೆಯಾಯಿತು. ವ್ಯಕ್ತಿಯ ಘನತೆ ಮತ್ತು ಸ್ವಾತಂತ್ರ್ಯ ಸಮುದಾಯಕ್ಕಿಂತ ಹೆಚ್ಚು ಮುಖ್ಯ ಮತ್ತು ಮೂಲಭೂತವಾದ ಸಾತಂತ್ರ್ಯದ ಪ್ರಶ್ನೆ ಎಂಬುದರ ಹಿನ್ನೆಲೆಯಲ್ಲೇ ರಾಜಕೀಯ ಮತ್ತು ಸಾಮಾಜಿಕ ರಂಗದಲ್ಲಿ ಹಲವು ಹೊಸ ಬೆಳವಣಿಗೆಗಳು ಸಂಭವಿಸಿದವು.

ಇದೇ ಮಾತು ನಂತರದ ಬಂಡಾಯಕ್ಕೂ, ದಲಿತ ಚಳವಳಿಯ ಸಂದರ್ಭಕ್ಕೂ ಅನ್ವಯವಾಗದೇ ಇರದು. ಆದರೆ, ಇಂದು ಅಂತಹ ‘ಒಂದು’ ಎನ್ನಬಹುದಾದ, ಮುಖ್ಯವಾಗಿ ಗುರುತಿಸಬಹುದಾದ ತಾತ್ವಿಕತೆ ನಮ್ಮನ್ನು ಆವರಿಸಿಲ್ಲ. ಸಾಮಾಜಿಕವಾಗಿಯಾಗಲೀ, ರಾಜಕೀಯವಾಗಲೀ ಒಂದು ಪ್ರಭಾವಶಾಲಿ ತಾತ್ವಿಕತೆ ಎಂಬುದು ಗೈರು ಹಾಜರಾಗಿದೆ. ಅದೇ ಸ್ಥಿತಿ ಸಾಹಿತ್ಯದಲ್ಲೂ ಇದೆ. ಇದೇ ಪೋಸ್ಟ್ ಮಾರ್ಡನ್ (ಆಧುನಿಕೋತ್ತರ) ಕಾಲಘಟ್ಟದ ಲಕ್ಷಣ ಎನ್ನಬಹುದು. ಆದರೆ, ಹಾಗೇ ಒಂದು ನಿರ್ದಿಷ್ಟವಾದ ತಾತ್ವಿಕತೆ ಎಂಬುದು ಇಲ್ಲದೇ ಇದ್ದರೂ ಎಲ್ಲೋ ಒಂದು ಸಮಾನ ಅಂಶದ ತಾತ್ವಿಕ ಸೆಳವುಗಳು ಈ ಕಾಲದ ಕೃತಿಗಳಲ್ಲಿ ಇರಬಹುದಲ್ಲವೆ? ಅದನ್ನ ಸ್ಪಷ್ಟವಾಗಿ ಗುರುತಿಸಿ ಚರ್ಚೆ ಮತ್ತು ಸಂವಾದದ ಮೂಲಕ ಸ್ಪಷ್ಟಪಡಿಸಿಕೊಳ್ಳುತ್ತಾ ಹೋಗುವುದು ಸಾಧ್ಯವಿಲ್ಲವೆ? ಹಾಗೆ ಮಾಡುತ್ತಲೇ ‘ಶೂನ್ಯ ಕಾಲ’ ಎಂಬ ಈ ಹೊತ್ತಿನ ಸಾಹಿತ್ಯಕ್ಕೆ ಒಂದು ತಾತ್ವಿಕತೆ ರೂಪಿಸುವುದು ಅಗತ್ಯವಲ್ಲವೆ? ಈ ನಿಟ್ಟಿನಲ್ಲಿ ನನ್ನ ಈ ಹಿಂದಿನ ಲೇಖನದಲ್ಲಿ ಹೇಳಿದಂತೆ, ಗಟ್ಟಿ ತಾತ್ವಿಕತೆಯ ಕೆಲವಾದರೂ ಕೃತಿಗಳು ಈ ಕಾಲದ ಹೊಸ ಲೇಖಕರಲ್ಲಿವೆ. ಅವುಗಳು ಇದೀಗ ವಿಮರ್ಶೆ ಅಥವಾ ಜಿಜ್ಞಾಸೆಯ ಮೂಲಕ ಬೆಸೆಯಬಹುದಾದ ತಂತುಗಳಿಗಾಗಿ ಕಾಯುತ್ತಿವೆ. ಆ ಮೂಲಕ ಗಂಭೀರವಾದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಕೆಲವರಾದರೂ ಕತೆಗಾರರು, ಕವಿಗಳು ಮತ್ತು ಕಾದಂಬರಿಕಾರರ ಕೃತಿಗಳಿಗೆ ಈ ಕಾಲಕ್ಕೆ ಸಲ್ಲಬೇಕಾದ ಅರ್ಥವಿಸ್ತಾರ ಮತ್ತು ಓದು ಸಲ್ಲುವಂತಾಗಬೇಕಿದೆ.

ಅದಕ್ಕೆ ವಿಮರ್ಶೆಯ ಹೊಣೆಗಾರಿಕೆ ಸಾಕಷ್ಟು ಇದೆ. ಹೊಸ ತಲೆಮಾರಿನ ಲೇಖಕರು ವಿಮರ್ಶೆಯತ್ತ ಗಮನಕೊಟ್ಟು ತಮ್ಮ ಕಾಲದ ಸಾಹಿತ್ಯಕ ಆಶಯ ಮತ್ತು ಹುಡುಕಾಟಗಳನ್ನು ಗುರುತಿಸಿ, ಜೀವನದೃಷ್ಟಿಯನ್ನು ಗ್ರಹಿಸಿ ನಿರ್ವಚಿಸುವ ಸವಾಲು ಸ್ವೀಕರಿಸಬೇಕು. ಆಗ ಒಂದೋ ಇನ್ನೂ ನವ್ಯ- ನವೋದಯ ಪರಿಕರಗಳನ್ನೇ ನೆಚ್ಚಿಕೊಂಡು ವಿಮರ್ಶೆ ಬರೆಯುವ ವಿಮರ್ಶಕರು ಅಥವಾ ಗುಂಪುಗಾರಿಕೆ ಮಾಡುತ್ತಾ ಪರಸ್ಪರರ ಬೆನ್ನು ತಟ್ಟಿಕೊಳ್ಳುತ್ತಾ ಕೇಕೆ ಹಾಕುವ ವಿ(ಕಟ)ಮರ್ಶಕರ ಹಂಗಿಲ್ಲದೆ ನಿಜವಾದ ಅರ್ಥದಲ್ಲಿ ನಮ್ಮ ಕಾಲದ ಸಾಹಿತ್ಯಕ್ಕೆ ನ್ಯಾಯ ಸಲ್ಲಿಸಿದಂತಾಗುತ್ತದೆ. ಜೊತೆಗೆ, ಮುಕ್ತ ವಿಮರ್ಶೆಯ ನಿಕಷವಿಲ್ಲದೆ ತೆಳು ನಿರೂಪಣೆ, ಮೇಲುಸ್ತರದ ಓದು, ರಂಜಕತೆಯ ದಾಟಿಗೆ ಬಿದ್ದಿರುವ ಸಾಹಿತ್ಯವನ್ನೂ ಅಂತಹ ಸ್ಪಷ್ಟ ತಾತ್ವಿಕತೆ ಕೈಹಿಡಿದು ಮೇಲೆತ್ತಬಲ್ಲದು.

ಆಗ, ಡಿ.ಆರ್. ನಾಗರಾಜ್ ಅವರು ಹೇಳಿದಂತೆ, ‘ಕನ್ನಡದಲ್ಲಿ ಇತ್ತೀಚಿನ ವರ್ಷಗಳಲ್ಲಿ ಒಂದು ರೀತಿಯ ಆಂಟಿ ಇಂಟೆಲೆಕ್ಚುವಲ್ ಮನಸ್ಥಿತಿ ಬೆಳೆಯುತ್ತಿದೆ. ಯಾವುದರ ಬಗ್ಗೆಯೇ ಆಗಲೀ ಗಂಭೀರವಾಗಿ ಯೋಚನೆ ಮಾಡುವುದು, ಬರೆಯುವುದೇ ಅಪಾಯ’ (ಹತ್ತು ವರ್ಷಗಳ ಹಿಂದಿನ ಡಿಆರ್ ಅವರ ಆ ಮಾತು ಎಷ್ಟು ನಿಜ ಎಂಬುದು ಹಿಂದಿನ ನನ್ನ ಲೇಖನ ಹಾಕಿದಾಗಲೇ ಮನದಟ್ಟಾಯಿತು!!)ಎನ್ನುವ ಸ್ಥಿತಿಗೆ ಇನ್ನಾದರೂ ಒಂದಿಷ್ಟು ವಿರಾಮ ಹಾಕುವುದು ಒಳಿತು. ಆ ನಿಟ್ಟಿನಲ್ಲಿ ನಮ್ಮ ಹೊಸ ತಲೆಮಾರಿನ ಲೇಖಕರು ಯೋಚಿಸಬಹುದೆ?!

ಇದೊಂದು ಪ್ರಶ್ನೆ ಮತ್ತು ನಿರೀಕ್ಷೆ….

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s