ಮಾನ್ಸೂನ್ ಮಂತ್ರದಂಡ

ಮಳೆ ಮಾಯೆಗೆ ಕಾದು

 ಮಳೆ ಮಾಯೆಗೆ ಕಾದು

ನಿನ್ನದೇ ಬರುವಿಕೆಗೆ ಕಾದಿರುವ ನಮಗೆ, ನೀನು ನಾಲ್ಕು ದಿನ ಮುಂಚಿತವಾಗೇ ಬರುತ್ತೀಯ ಎಂದು ಕೇಳಿ ಖುಷಿ! ಮೊನ್ನೆ, ಮೊನ್ನೆಯ ತನಕ ನೀನು ಯಾವಾಗ ಬರುತ್ತೀಯ, ಈ ಬಾರಿ ಎಷ್ಟು ದಿನ ಇರುತ್ತೀಯ ಎಂಬ ಬಗ್ಗೆ ಯಾರೂ ಸರಿಯಾಗಿ ಹೇಳಿರಲೇ ಇಲ್ಲ. ನಿನ್ನೆ ತಾನೆ ಗೊತ್ತಾಯ್ತಂತೆ, ನೀನು ಈ ಬಾರಿ ನಾವಂದುಕೊಂಡದ್ದಕ್ಕಿಂತ ನಾಲ್ಕು ದಿನ ಮುಂಚೆಯೇ ಬರುತ್ತೀಯ, ಮತ್ತು ಹೋದ ವರ್ಷಕ್ಕಿಂತ ಹೆಚ್ಚು ದಿನ ನಮ್ಮೊಂದಿಗೆ ಇರುತ್ತೀಯ ಎಂದು. ಆ ಸುದ್ದಿ ಕೇಳುತ್ತಲೇ ನಾವೆಲ್ಲ ಈ ಇಳೆಯೆಂಬ ಕನಸಲ್ಲಿ ಬಣ್ಣದ ಕಾಮನಬಿಲ್ಲು ನೋಡುವ ಕಾತರದಲ್ಲಿದ್ದೇವೆ.

ನೀನು ಬರುತ್ತೀಯ ತಾನೆ? ಹವಾಮಾನ ಇಲಾಖೆಯವರು ಯಾವಾಗಲೂ ಹಾಗೆ, ನೀರು ಬರುತ್ತೀಯ ಎಂದಾಗ ಬರುವುದಿಲ್ಲ, ಬರಲಾರೆ ಎಂದುಕೊಂಡಾಗ ದಿಢೀರನೇ ಮುನಿಸಿಕೊಂಡವಳು ಆಟೋ ನಿಲ್ದಾಣದವರೆಗೆ ಹೋಗಿ ಮತ್ತೆ ಮರಳಿದಂತೆ ಬಂದುಬಿಡುತ್ತೀಯ ಎಂದು ಪ್ರತಿಬಾರಿ ತಮ್ಮ ಲೆಕ್ಕಾಚಾರ ತಪ್ಪಿದಾಗಲೂ ನಿನ್ನನ್ನೇ ದೂರುತ್ತಾರೆ ಕಣೇ. ಹಾಗಂತ ನೀನು ಮುನಿಸಿಕೊಳ್ಳುವುದಿಲ್ಲ, ಮುನಿಸಿಕೊಂಡರೂ ಅದು ಹುಸಿಮುನಿಸು ತಾನೆ?! ನಿನ್ನ ಆಗಮನದ ಕ್ಷಣಕ್ಕಾಗಿ ಯಾರೆಲ್ಲಾ ಕಾದಿದ್ದಾರೆ, ಹೇಗೆಲ್ಲಾ ಪರಿತಪಿಸುತ್ತಿದ್ದಾರೆ ಗೊತ್ತೇನೇ ನಿನಗೆ? ಕನ್ಯಾಕುಮಾರಿಯ ತುದಿಯಿಂದ ಹಿಮಾಲಯದ ನೆತ್ತಿಯವರೆಗೆ ನಿನ್ನ ಬಳಗ ಎಷ್ಟು ವಿಸ್ತಾರವೇ? ಮನ್ನಾರಿನ ‘ಬೆಟ್ಟದ ಜೀವ’ದಿಂದ ಹಿಮಾಲಯದ ತಪ್ಪಲಿನ ನದೀವೈಯ್ಯಾರಿಯತನಕ ಎಲ್ಲರೂ ನಿನ್ನದೇ ಕನಸಿನಲ್ಲಿದ್ದಾರೆ.

ಮನ್ನಾರಿನ ಬೆಟ್ಟದ ಜೀವ ಎಂದರೆ ಯಾರು ಎನ್ನುತ್ತೀಯಾ? ನೆನಪುಮಾಡಿಕೋ.. ನಿನ್ನ ಕಾತರದಲ್ಲಿ ನಭಚುಂಬಿತ ಬೆಟ್ಟಗಳ ತುತ್ತತುದಿಯಲ್ಲಿ ಎದೆಸೆಟೆಸಿ, ಕತ್ತು ಕೊಂಕಿಸಿ ಕಾಯುವ ಧೀರ ಯಾರೆಂದು? ನೆನಪಾಯ್ತ,.. ನೀಲಗಿರಿ ಥಾರ್ ಕಾದಿಹನೆಂದು?! ಪೆರಿಯಾರ್ ನ ಕೆಂದಳಿಲು, ವೈನಾಡಿನ ನವಿಲು, ನಾಗರಹೊಳೆಯ ಹುಲಿ, ಬಂಡೀಪುರದ ಕಾಡೆಮ್ಮೆ, ನಮ್ಮೂರಿನ ಸತ್ತ ಹುಲಿಯ ಅನಾಥ ಮರಿಗಳು, ಮುತ್ತೋಡಿಯ ಆನೆ, ಸಕಲೇಶಪುರದ ಮುರುಗೋಡು ಮೀನು, … ಹೀಗೆ ಉತ್ತರೋತ್ತರಕ್ಕೆ ಸರಿದಂತೆ ನಿನ್ನ ಬಳಗದ ವೈವಿಧ್ಯ ಇಮ್ಮಡಿಸುತ್ತಲೇ ಇರುತ್ತದೆ. ಸಾರಿಸ್ಕಾದ ಹೊಸ ಅತಿಥಿ ಹುಲಿಗಳಾಗಲೀ, ಕಾಜಿರಂಗದ ಘೆಂಡಾಗಳಾಗಲೀ, ಕೊನೆಗೆ ಹಿಮಾಲಯದ ತಳದ ಗಂಗೆಯೊಡಲಿನ ನದೀವೈಯಾರಿ ಮಹಷೀರ್ ಮೀನಿನತನಕ ಯಾರೆಲ್ಲಾ ನಿನ್ನ ದಾರಿಯ ಕಾದಿದ್ದಾರೆಯೇ?

ನೀನು ಬರುವ ಹೊತ್ತಿಗೆ, ಎರಡು ಮಕ್ಕಳ ತಾಯಿ ನೀಲಗಿರಿ ಥಾರ್ ಹೊಟ್ಟೆ ಬೆನ್ನಿಗೆ ಅಂಟಿ ಹೋಗಿದೆ ಕಣೆ, ನೀ ಬರಬೇಕು, ಮನ್ನಾರಿನ ಬೆಟ್ಟಗಳಲ್ಲಿ ಗರುಕೆ ಕುಡಿಯೊಡೆಯಬೇಕು, ಥಾರ್ ಹೊಟ್ಟೆ ತುಂಬ ಮೇಯಬೇಕು, ಹಾಲು ಕೂಡಬೇಕು, ಮರಿಗಳಿಗೆ ಉಣಿಸಬೇಕು,… ಮರಿಗಳ ಕಣ್ಣಲ್ಲಿ ಜೀವ ಚೈತನ್ಯ ಚಿಮ್ಮುವುದು ನಿನ್ನಿಂದಲೇ,.. ಮರೆಯುದಿರೇ… ಬಂಕಾಪುರದ ಬಿರುಬಿಸಿಲ ಸೀಮೆಯಿಂದ ವೈನಾಡಿನ ದಟ್ಟ ಕಾಡಿನವರೆಗೆ ಮೊಟ್ಟೆ ಇಟ್ಟು’ಕಾದಿರುವ’ ನವಿಲ ಸಂಕುಲಕ್ಕೂ ನಿನ್ನದೇ ಕಾತರ. ಮೊಟ್ಟೆಯೊಡೆದು ಮರಿ ಮೂಡುವ ಹೊತ್ತಿಗೆ ನೀನು ಬಂದರೆ ಅವಕ್ಕೆ ಜೀವ ಹಗುರ. ನಿನ್ನ ಕಾಲ್ಗುಣದ ಪವಾಡಕ್ಕೆ ನೆರೆಯುವ ಹುಳ- ಹುಪ್ಪಟೆಗಳ ಜಾತ್ರೆಯೇ ತೊದಲು ನಡಿಗೆಯ ಮರಿಗಳಿಗೆ ಜೀವದಾನ. ಆಗುಂಬೆಯ ಮಳೆಕಾಡಿನ ನಡುವೆ ಬಿದಿರ ಮೆಳೆಯ ಅಡಿ ಮೆತ್ತನೆ ಎಲೆಹಾಸಿಗೆ ಮೇಲೆ ಉರುಳಾಡುತ್ತಿರುವ ಕಾಳಿಂಗನ ಮೊಟ್ಟೆಗಳಿಗೆ ನಿನ್ನ ಸ್ಪರ್ಶವಿಲ್ಲದೇ ಭೂಮಿಗೆ ಪ್ರವೇಶವಿಲ್ಲ ಕಣೇ. ತಿಂಗಳಿಂದ ಮೊಟ್ಟೆಯ ಕಾವಲು ಕೂತ ಅಮ್ಮ ಕಾಳಿಂಗನ ತಪಸ್ಸು ಕೊನೆಗಾಣಲು ನಿನ್ನ ಕರುಣೆ ಬೇಕು.. ಬೇಸಿಗೆಯ ಬಸವಳಿದು ಬಟಾಬಯಲಾದ ಕಾಡಿನ ನಡುವೆ ಬೇಟೆಯೇ ಸಿಗದೇ ಹಸಿದ ಹೊಟ್ಟೆಯ ದಿನಗಳನ್ನೇ ಕಂಡ ನಮ್ಮೂರಿನ ಅನಾಥ ಹುಲಿ ಮರಿಗಳೂ ಒಂದಿಷ್ಟು ಊಟ ಕಾಣಲು ನೀನು ಬರಬೇಕು. ಕಾಡಿನ ನಡುವೆ ಲಂಟಾನ ಬೆಳೆಯಬೇಕು, ಮೊಲವೋ, ಹಂದಿ ಮರಿಯೋ, ಜಿಂಕೆ ಪಿಳ್ಳೆಯೋ,.. ಕೊನೆಗೆ ಎಳೆಕರುವೋ ಯಾವುದಾದರೂ ಒಂದು ಜೀವ ಊಟಕ್ಕೆ     ದಕ್ಕಬೇಕು ಅವಕ್ಕೂ,…   

ಹಾಗೇ ನಮ್ಮೂರಿನ ಗದ್ದೆಯ ಬದುವಿನ ಗುಳಿಯ ಆಳದಲಿ ನೀರ ಹನಿಯ ಸೆಳಕಿಗಾಗಿ ಹೊಟ್ಟೆಯಲ್ಲಿ ರಾಶಿ ಮೊಟ್ಟೆಗಳ ಬಚ್ಚಿಟ್ಟುಕೊಂಡು ಕಾದಿರುವ ಏಡಿಗೆ, ಗದ್ದೆ ಅಂಚಿನ ಕೆರೆಯ ನೀರಿನಾಳದಲಿ ಒಡಲ ತುಂಬ ತತ್ತಿ ಹೊತ್ತುಕೊಂಡು ಈಜಲಾರದೆ ಈಜುವ ಮುರುಗೋಡು ಮೀನಿನ ಭಾರ ಇಳಿಯಲು, ಕಪ್ಪೆಯ ಪ್ರೇಮೋತ್ಸಾಹದ ನಿರೀಕ್ಷೆ ನಿಜವಾಗಲೂ ನೀನೇ ಬರಬೇಕು. ಉಳುಮೆ ಮಾಡಿಟ್ಟ ಗದ್ದೆಯ ಮಣ್ಣ ಹೆಂಟೆಗಳ ನಡುವೆ ಕಲ್ಲು- ಮಣ್ಣಿನ ಮನೆಮಾಡಿ ಮೊಟ್ಟೆಯಿಟ್ಟು ಕಾವಲು ಕಾದಿರುವ ಟಿಟ್ಟಿಬಾ ಕೂಡ ಮುದ್ದು ಮರಿಗಳ ಕಾಣಲು ನೀ ಬರುವ ಮುಹೂರ್ತಕ್ಕೆ ಕಾದಿದೆ. ನಂದಿ ಮರದ ಪೊಟರೆಯ ಉಸಿರುಗಟ್ಟಿಸುವ ಗೂಡಿನಲ್ಲಿ ಒತ್ತೊತ್ತಾಗಿ ಕೂತಿರುವ ಗಿಳಿ ಮರಿಗಳಿಗೆ ಅಮ್ಮನ ಮೇಲೇ ಕೋಪ. ಏಕೆಂದರೆ, ಅಮ್ಮ ಊಟ ಕೊಡುತ್ತಿಲ್ಲವೆಂದೇನಲ್ಲ, ಅಮ್ಮ- ಅಪ್ಪ ತಂದು ಉಣಿಸುವ ಊಟ ತಿಂದು ದಿನಗಳೆದಂತೆ ಊದಿಕೊಳ್ಳುತ್ತಿರುವ ತಮಗೆ ಗೂಡೇ ಚಿಕ್ಕದಾಗುತ್ತಿದೆ. ರೆಕ್ಕೆ ಬಲಿತರೂ ಹೊರಗೆ ಹಾರಲು ಹೋದರೆ ಅಮ್ಮ ಕಚ್ಚಿ ಗೂಡಿಗೇ ಅಟ್ಟುತ್ತಾಳೆ! ಅವಳಿಗೂ ತನ್ನ ಮರಿಗಳ ಹಾರಿಸುವ ಮೊದಲು ನೀನು ಬರಬೇಕಂತೆ!!

ಮಲಬಾರಿನ ಕಡಲ ಕಿನಾರೆಯ ತುತ್ತ ತುದಿಯಿಂದ ಗೌರೀಶಂಕರದ ನೆತ್ತಿಯ ವರೆಗೆ ಇಡೀ ಭರತಖಂಡದ ಜೀವ ಸಂಕುಲವೇ ನಿನ್ನ ಆಗಮನದ ತವಕದಲ್ಲಿದೆ. ಇನ್ನು ತಡಮಾಡಬೇಡ. ನಾಲ್ಕೇ ದಿನ ತಾನೇ? ಖಂಡಿತವಾಗಿಯೂ ಬರುತ್ತೀಯಲ್ಲ? ಬಾ… ಬಾ ಮಳೆಯೇ… ಜೀವ ಪ್ರೀತಿಯ ಹನಿಯೇ.. ಜೀವ ಜಾತ್ರೆಯ ಮಂತ್ರದಂಡವೇ ಬಾ…

ಹಾಗೇ, ನಿನ್ನ ಬರುವಿಕೆಯ ಕಾತರಕ್ಕೆ ಕವಿತೆಯೊಂದರ ನೆನಪು;

ಜೀವ ಪ್ರೀತಿಯ ಹನಿಯೆ..

ಕಾಡಿನೆದೆಗೆ ಸುರಿವ

ಜೀವ ಪ್ರೀತಿಯ ಹನಿಯೆ,

 

ಹೂತ ಕನಸ

ಬೀಜಗಳಿಗೆ ಕೂಡಲೇ

ಪ್ರಾಣವ ನಿಜ ತ್ರಾಣವ ಕೊಡು.

 

ನಾಳೆಯ ಹೂವಿಗೆ

ಈಗಲೇ ಬಣ್ಣವ,

ಬಿನ್ನಾಣವ ಕೊಡು.

 

ಖುಷಿಯ ಹಾಡುಹಕ್ಕಿಗೆ

ಇಂದೇ ದಣಿಯದ

ಇನಿದನಿಯ ಕೊಡು.

 

ಭೀತಿಯ ಹೆಬ್ಬುಲಿಗೂ

ಕಸುವ, ಮೃಗ- ಹಸಿವ

ತಪ್ಪದೇ ಕೊಡು.

 

ನಿನ್ನ ಕರುಣೆಯ ಆಟಕೆ

ಉರುಳಿಸು ದಾಳವ ಈ ಕ್ಷಣವೆ…

Advertisements

2 thoughts on “ಮಾನ್ಸೂನ್ ಮಂತ್ರದಂಡ

 1. ಸರ್…
  ತುಂಬಾ ಚೆನ್ನಾಗಿದೆ ಲೇಖನ..ಅದಕ್ಕಿಂತಲೂ ಚೆಂದ ನೆನಪು ಕವಿತೆಗಳ ಪುಟ್ಟ ಪುಟ್ಟ ಸಾಲುಗಳು…

  ಮಳೆಯೇ ಶಿವರಾಯ ಓ ತಂದೆ..
  ಯಾವ ದೇವರಿಲ್ಲ ನಿನ್ನ ಮುಂದೆ..
  ಹಬ್ಬ-ಹರಿದಿನ ಮದುವೆ-ಮುಂಜಿ
  ಎಲ್ಲಾ ನೀ ಬಂದಂದೆ..
  ಜನಪದ ಹಾಡು ನೆನಪಾಯ್ತು.

  ಇಳೆಗೆ ಬಿದ್ದ ಮೊದಲ ಮಳೆ ಹನಿಯಂತೆ… ಓದುಗರನ್ನೂ ಖುಷಿಗೊಳಿಸುತ್ತೆ ಮುತ್ತಿನಂತ ಅಕ್ಷರಗಳಿಂದ ಪೋಣಿಸಿದ ಈ ಸುಂದರ ಬರಹ!

  ಧನ್ಯವಾದಗಳು ಸರ್.

  -ಚಿತ್ರಾ

  Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s