ಸಂತೆ ನೆರೆದರೂ ಗಂಟು ಸಿಗಲಿಲ್ಲ!

moonlight-leaf

ದೊಡ್ಡ ಗುಂಪಲ್ಲಿ ಬರುತ್ತಿರುವ ಸೂಚನೆ ನೀಡುತ್ತಲೇ ನಮ್ಮ ಕುತೂಹಲವನ್ನು ಸ್ಫೋಟಿಸುತ್ತಿದ್ದ ಅವುಗಳ ಆಗಮನ ಅಂತೂ ಆಯಿತು. ನಾನು, ಅಣ್ಣಪ್ಪಣ್ಣ ಇಬ್ಬರೂ ಬಾಗಿ- ಬಾಗಿ ಕತ್ತು ನೀಚಿ ನೋಡಿ ಕತ್ತು ನೋವು ಬರುವಂತಾಗಿಬಿಟ್ಟಿತ್ತು. ಆದರೆ, ಒಮ್ಮೆ ಅವುಗಳ ದಂಡು ಕಂಡು ಎಲ್ಲ ನೋವೂ, ನಿರಾಶೆಗಳೂ ದೂರಾಗಿ, ನಾಟಕದ ಪರದೆ ಹಿಂದಿನಿಂದ ಪಾತ್ರದಾರಿಗಳು ರಂಗ ಪ್ರವೇಶಿಸಿದಂತೆ ಒಂದೊಂದೇ ಪ್ರತ್ಯಕ್ಷವಾಗುತ್ತಲೂ, ನಾವು ಅವುಗಳನ್ನು ಎಣಿಸುತ್ತಾ, ಅವುಗಳ ಆಕಾರದ ಮೇಲೆ ದೊಡ್ಡವು, ಮರಿ ಎಂದು ಅಂದಾಜಿಸತೊಡಗಿದೆವು. ಸುಮಾರು ಅರ್ಧ ಗಂಟೆ ಕಳೆದ ಮೇಲೆ ಅವುಗಳ ರೈಲು ಬೋಗಿಯಂತಹ ದಂಡಿನ ಯಾತ್ರೆ ಮುಕ್ತಾಯವಾಯಿತು. ಕಡಿಮೆ ಎಂದರೂ 30-35 ಹಂದಿಗಳಿದ್ದವು! ಅದರಲ್ಲೂ ಕೆಲವು ದಡಿಯಾ, ಕೆಲವು ಕುಳ್ಳಗೆ ಅಗಲಕ್ಕೆ ಬೆಳೆದಿದ್ದವು… ಅದಕ್ಕಿಂತ ಆಶ್ಚರ್ಯವೆನಿಸಿದ್ದೆಂದರೆ, ಒಂದೆರಡು ಬೂದು- ಬಿಳಿ ಹಂದಿಗಳೂ ಇದ್ದದ್ದು! ಜೊತೆಗೆ ಒಂದು ಕಂದು ಬಣ್ಣದ್ದು! ಅಲ್ಲಿಯವರೆಗೆ ಹಂದಿಗಳೆಂದರೆ ಕಪ್ಪಗೆ ಇರುತ್ತವೆ ಎಂದುಕೊಂಡಿದ್ದ ನನಗೆ ಬಿಳಿ- ಕಂದು ಹಂದಿ ನೋಡಿ, ವಿಚಿತ್ರ ಎನಿಸಿತು. ಮರುಕ್ಚಣವೇ ಯಾವುದೋ ದೆವ್ವ ಬೇರೆ- ಬೇರೆ ಪ್ರಾಣಿಗಳ ರೂಪದಲ್ಲಿ ಬಂದು ನಮ್ಮೂರಿನ ಕೆನತ್ ಆಂಡರ್ಸನ್ ಸಹಚರನೊಬ್ಬನಿಗೆ ಕಾಡಿಸಿದ ಕತೆ ನೆನಪಾಯಿತು. ಅರೆ,.. ಹೌದಲ್ಲ, ಇವು ನಿಜವಾದ ಹಂದಿಗಳೇ ಅಲ್ಲವಿರಬಹುದು, ನಮ್ಮೂರಿನ ಕೆರೆ ಎಂದರೆ ಮೊದಲೇ ಭೂತ- ದೆವ್ವಗಳ ಕಾಯಂ ಅಡ್ಡೆ,.. ಎಂದು ನೆನಪಾಗುತ್ತಲೇ ಮೈ ಜುಮ್ಮೆಂದಿತು.

ಅತ್ತ ಹಂದಿಯ ಹಿಂಡಿನಲ್ಲಿದ್ದ ಮರಿಗಳು ಚಿನ್ನಾಟ ಆಡುತ್ತಿದ್ದರೆ, ದೊಡ್ಡವು ಕೂಡ ಪರಸ್ಪರ ಕಚ್ಚುತ್ತಾ, ಒಂದನ್ನು ಇನ್ನೊಂದು ತಿವಿಯುತ್ತಾ ಕೆರೆಯ ನೀರಿಗಿಳಿದವು. ದೊಡ್ಡವು ನೀರಿಗಿಳಿದರೆ, ಚಿಕ್ಕ ಮರಿಗಳು ಮಾತ್ರ ದಂಡೆಯಲ್ಲೇ ಗಡ್ಡೆಗಳಿಗಾಗಿ ಉತ್ತುತ್ತಿದ್ದವು. ಹಂದಿಗಳೆಂದರೆ ಯಾವ ತಮಾಷೆ- ಮೋಜು ಇಲ್ಲದೆ ತಲೆ ಕೆಳಗೆ ಹಾಕಿಕೊಂಡು ಮುಸುಗುಡುತ್ತಾ ಹೋಗುವ ನೀರಸ ಪ್ರಾಣಿಗಳೆಂದುಕೊಂಡಿದ್ದ ನನಗೆ ಅವೂ ಇಷ್ಟೊಂದು ಮೋಜು ಮಾಡುತ್ತವಲ್ಲ ಎಂದು ಗೊತ್ತಾಗಿದ್ದೇ ಆಗ! ನಾನು ಹೀಗೆ ಅವುಗಳ ಮೋಜು- ಮಜಾ ಸವಿಯುತ್ತಿದ್ದರೆ, ಅಣ್ಣಪ್ಪಣ್ಣನ ಕೋವಿ ಸಿಡಿಯುವ ತವಕದಲ್ಲಿ ಗುರಿ ಕಾದಿತ್ತು… ನಮ್ಮಿಂದ ಸುಮಾರು 300 ಅಡಿ ದೂರದಲ್ಲಿ ಅವುಗಳ ಗುಂಪಿದ್ದರಿಂದ ಇನ್ನೂ ಹತ್ತಿರಕ್ಕೆ ಬರಲಿ, ಅದರಲ್ಲೂ ಭಾರೀ ಗಾತ್ರದ್ದಾಗಿದ್ದ ಬಿಳಿ ಒಂಟಿಗ ಸಿಗುತ್ತಾ ಎಂದು ಅವನು ಗುರಿ ಹಿಡಿಯುವುದು, ಬದಲಿಸುವುದು, ಕಾಯುವುದು ಮಾಡುತ್ತಿದ್ದ. ಬೆಳದಿಂಗಳ ರಾತ್ರಿಯ ನೀರವತೆಯಲ್ಲಿ ಹಂದಿ ಹಿಂಡಿನ ಗದ್ದಲ ಸೇರಿ ಇಡೀ ಕೆರೆಯಂಗಳ ಸಂತೆಯಂತಾಗಿತ್ತು. ಮೂರು ಎಕರೆ ವಿಸ್ತೀರ್ಣದ ಕೆರೆಯಂಗಳದಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಯ ವರೆಗೂ ಈ ಹಿಂಡುಗಳೇ ಹರಡಿಬಿಟ್ಟಿದ್ದವು. ನೀರಲ್ಲಿ ಓಡುವುದು, ಒಂದನ್ನೊಂದು ಅಟ್ಟಿಸಿಕೊಂಡು ಕಚ್ಚಾಡುವುದು, ಕಿರ್ರೋ-ಪರ್ರೋ, ಗುರ್- ಗುಟುರ್ ಎನ್ನುತ್ತಾ ಗದ್ದಲದ ಪೈಪೋಟಿಯೇ ಅಲ್ಲಿ ನಡೆದಿತ್ತು. ಅಷ್ಟರಲ್ಲಿ ಮತ್ತೊಂದು ದಿಕ್ಕಿನಿಂದ ಐದಾರು ಹಂದಿಗಳ ಮತ್ತೊಂದು ಗುಂಪು ಕೆರೆಯಂಗಳಕ್ಕೆ ಇಳಿಯಿತು. ಆ ಗುಂಪು ಇಳಿಯುತ್ತಲೇ ಈ ಗುಂಪಿನ ಕೆಲವು ನಾಯಕ ಹಂದಿಗಳು ಒಂದು ಗುಟುರು ಹಾಕಿ ತಾವಿದ್ದೇವೆ ಹುಷಾರ್ ಎಂಬಂತೆ ಸೂಚನೆ ಕೊಟ್ಟವು. ಅದು ಅರ್ಥವಾಯಿತು ಎಂಬಂತೆ ಬಂದ ಹೊಸ ಗುಂಪು ಈ ಬಿಗ್ ಫ್ಯಾಮಿಲಿ ಕಡೆ ಬರದೆ ತುಸು ದೂರದಲ್ಲೇ ತಮ್ಮ ಚಟುವಟಿಕೆ ಸೀಮಿತಗೊಳಿಸಿಕೊಂಡವು. ಇದನ್ನೆಲ್ಲಾ ನೋಡುತ್ತಾ ನನಗೆ ಇದೇನು ನಾನು ಕನಸು ಕಾಣುತ್ತಿದ್ದೇನೋ, ನಿಜವಾಗಿಯೂ ನಡೆಯುತ್ತಿದೆಯೋ ಎಂಬಂತಹ ಸ್ಥಿತಿ.

ಅದಕ್ಕೆ ಸರಿಯಾಗಿ, ಕೆರೆಯಂಗಳಕ್ಕೆ ಸದ್ದಿಲ್ಲದೆ ಇಳಿದ ಏಳೆಂಟು ಜಿಂಕೆಗಳಿದ್ದ ಗುಂಪು ಮತ್ತಷ್ಟು ಕುತೂಹಲ ಮೂಡಿಸಿತು. ಆ ಗುಂಪಲ್ಲಿ ಎರಡು ಹೋರಿಗಳಿದ್ದು, ಉದ್ದನೆ ಕೊಂಬುಗಳಿದ್ದವು. ಕೊಂಬಿನ ಹರೆಗಳನ್ನು ಬಳುಕಿಸುತ್ತಾ ಅವು ಮುಂದಾಳುಗಳಾಗಿ ನಡೆಯುತ್ತಿದ್ದರೆ, ಹಿಂದೆ ಮೂರು ಬೋಳಿ(ಹೆಣ್ಣು ಜಿಂಕೆ)ಗಳು ಹಿಂಬಾಲಿಸುತ್ತಿದ್ದವು. ಅವುಗಳಿಗೂ- ಹಂದಿಗಳಿಗೂ ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳಿದ್ದಂತೆ ಇರಲಿಲ್ಲ. ತಮ್ಮ ಪಾಡಿಗೆ ತಾವು ಬಂದು ನೀರು ಕುಡಿದು, ತಲೆ ಎತ್ತಿ ಒಮ್ಮೆ ಆಚೀಚೆ ಹಂದಿ ಹಿಂಡುಗಳ ಗಲಾಟೆಯನ್ನು ನೋಡಿ, ಗರುಕೆ ಹುಲ್ಲನ್ನು ನಿರ್ಭಯವಾಗಿ ಮೇಯತೊಡಗಿದವು. ಜಿಂಕೆಗಳ ಗುಂಪು ನಮ್ಮ ನೇರವಾಗಿ ಎದುರಿಗೇ ಮೇಯುತ್ತಿದ್ದವು, ಎಷ್ಟು ಸಮೀಪದಲ್ಲಿದ್ದವೆಂದರೆ, ಬೆಳದಿಂಗಳಲ್ಲಿ ಅವುಗಳ ಮೈಮೇಲಿನ ಚುಕ್ಕಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ನನಗೋ ಜಿಂಕೆಗಳ ಕಂಡಿದ್ದೇ ಖುಷಿ. ಆದರೆ, ಅಣ್ಣನ ಬಂದೂಕು ಈಗ ಹಂದಿಯ ಕಡೆಯಿಂದ ಜಿಂಕೆಯೆಡೆಗೆ ತಿರುಗಿತ್ತು. ಆದರೆ, ಜಿಂಕೆಗಳು ಇದ್ದಕ್ಕಿಂತ ಒಮ್ಮೆ ಬೆದರಿ ಚದುರಿದವು. ನಮ್ಮನ್ನು ಗಮಿಸಿಬಿಟ್ಟಿರಬೇಕು ಎಂದು ನಾವಂದುಕೊಂಡು ಅಯ್ಯೋ ಇನ್ನು ಮುಗೀತು, ಇವು ಓಡುತ್ತವೆ, ಇವನ್ನು ಕಂಡು ಹಂದಿಗಳೂ ಓಡುತ್ತವೆ… ಇವತ್ತು ಬರಿ ಜಾಗರಣೆ ಅಷ್ಟೇ ಎಂದು ಅಣ್ಣಗೆ ಚಿಂತೆ. ನನಗೋ ಇನ್ನಷ್ಟು ಹೊತ್ತು ಇವುಗಳ ಆಟ ನೋವುವುದೂ ಮಿಸ್ ಆಯ್ತಲ್ಲ ಅಂತ ಬೇಸರ. ಥೂ… ಮಾರಾಯ… ಎಂದುಕೊಂಡು ಮತ್ತೆ ಮೌನ… ಅಷ್ಟ್ರರಲ್ಲಿ ಜಿಂಕೆಗಳು ನಮ್ಮತ್ತ ನೋಡದೆ, ಕಾಡಿನ ತುದಿ ಕಡೆ ನೋಡುತ್ತಾ ಬೆದರಿದಂತೆ ಕಂಡವು. ಹಾಗೇ ಜಿಂಕೆಗಳು ಬೆದರಿದಾಗ ಹೊಮ್ಮಿಸುವ ಎಚ್ಚರಿಕೆಯ ಸದ್ದನ್ನೂ ಹೊಮ್ಮಿಸಿದವು. ಅತ್ತ ಕಡೆ ಯಾವ ಪ್ರಾಣಿಯೂ ಕಾಣದೇ ಇದ್ದರೂ, ಯಾವುದೋ ಪ್ರಾಣಿ ದರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಿದ್ದ ಸದ್ದು ಕ್ಷೀಣವಾಗಿ ಕೇಳಿತು. ಅಣ್ಣ ಅದು ಯಾವುದಾದರೂ ಹುಲಿಯೋ- ಚಿರತೆಯೋ ಇರಬಹುದು, ಇಷ್ಟೊಂದು ಪ್ರಾಣಿಗಳು ಕೆರೆಯಂಗಳದಲ್ಲಿ ನಿತ್ಯ ನೆರೆಯುವ ಸೂಚನೆ ತಿಳಿದ ಅದು ಬೇಟೆಗೆ ಹೊಂಚುತ್ತಿರಬಹುದು ಎಂದುಕೊಂಡು ಮತ್ತಷ್ಟು ಚುರುಕಾದ. ಇದು ನಿರ್ಣಾಯಕ, ಈಗ ಬಿಟ್ಟರೆ, ಆ ಪ್ರಾಣಿ ಏನಾದರೂ ಈ ಯಾವುದಾದರೂ ಪ್ರಾಣಿಯ ಮೇಲೆ ದಾಳಿ ಮಾಡಿದರೆ ಅಲ್ಲಿಗೆ ಎಲ್ಲವೂ ಮುಗಿದಂತೆ, ಕೈಬೀಸಿಕೊಂಡು ಮನೆಗೆ ಹೋಗುವುದಷ್ಟೇ ಉಳಿಯುತ್ತದೆ ಎಂದುಕೊಂಡ ಆತ, ನನ್ನನ್ನೊಮ್ಮೆ ಕೇಳಿದ; “ನೋಡು, ಈಗ ಬಿಟ್ಟರೆ ಆಗಲ್ಲ, ದೊಡ್ಡದು ಸಣ್ಣದು ಅಂತ ಕಾಯೋಕಾಗಲ್ಲ, ಯಾವುದು ಹತ್ತಿರ ಸಿಕ್ಕುತ್ತೋ ಅದಕ್ಕೆ ಹೊಡೀತೀನಿ..” ಆಯ್ತ ಎಂದ.

ನಾನು,.. ಏನೂ ಹೇಳದೆ, ಎದುರಿನ ಜೀವ ಲೋಕದ ಅಚ್ಚರಿಗಳ ನಡುವೆ ಕಳೆದುಹೋದಂತಾಗಿದ್ದೆ. ಇರುವುದರಲ್ಲೇ ತುಸು ಹತ್ತಿರಕ್ಕೆ ಕಾಣಿಸುತ್ತಿದ್ದ ಜಿಂಕೆ ಹೋರಿಯೊಂದಕ್ಕೆ ಗುರಿ ಮಾಡುತ್ತಿರುವಷ್ಟರಲ್ಲೇ ಕಾಡಿನ ತುದಿಯತ್ತ ಹೋಗಿದ್ದ ಹಂದಿ ಮರಿಯೊಂದು ಚಿರ್ರೋ ಎಂದು ಕೂಗುತ್ತಾ ಕೆರೆಯ ನೀರಿನತ್ತ ನುಗ್ಗಿಬಂತು. ಅಷ್ಟೇ.. ಸಾಕಾಯ್ತು ಇಡೀ ಕೆರೆಯನ್ನೇ ಒಮ್ಮೆ ಹಿಡಿದು ಎತ್ತಿ ಕೊಡವಿದಂತೆ ಝರರ್ರರ್ರ… ಸದ್ದಾಯಿತು. ನೀರಿಗಿಳಿದ, ದಡದಲ್ಲಿದ್ದ ಜಿಂಕೆ- ಹಂದಿಗಳೆಲ್ಲಾ ಹಂದಿ ಮರಿ ಬೆದರಿದ ದಿಕ್ಕಿನ ವಿರುದ್ಧ ದಿಕ್ಕಿನತ್ತಾ ಭರ್ರನೆ ನುಗ್ಗಿದವು. ಕೆಲ ಕ್ಷಣದ ಬಳಿಕ ಕೆಲವು ಹಂದಿಗಳು ಮತ್ತೊಂದು ಬದಿಯಲ್ಲಿ ಮತ್ತೆ ನೀರಿಗಿಳಿದವು. ಆದರೆ, ಜಿಂಕೆ ಹಿಂಡು ಮಾತ್ರ ಪರಾರಿಯಾಯಿತು. ಆದರೆ, ಈಗ ಹಂದಿಗಳಿರುವ ಜಾಗ ನಮ್ಮಿಂದ ತೀರಾ ದೂರ. ಇನ್ನೇನು ಮಾಡುವುದು ಸಾಧ್ಯವಿಲ್ಲ ಎಂದುಕೊಂಡು ನಾವು ಮರಸು ಬಿಟ್ಟು ನಿಧಾನಕ್ಕೆ ಕೆಳಗಿಳಿದು ಕೆರೆಯ ದಂಡೆಯ ಆಚೆ ಬದಿಯಿಂದ ಅರ್ಧ ಸುತ್ತು ಹಾಕಿ ಬಂದು ಈಗ ಹಂದಿಗಳಿರುವ ಕಡೆ ಸಾಗಲು ಹೆಜ್ಜೆ ಹಾಕಿದೆವು. ಕೆರೆಯ ಏರಿಯ ಕೆಳಗಿನ ಗದ್ದೆ ಬಯಲಿಗೆ ಇಳಿಯುತ್ತಿದ್ದಂತೆ ಅಲ್ಲೂ ಮೂರು ಹಂದಿಗಳು ನಮ್ಮ ಸುಳಿವರಿತು ಪೇರಿ ಕಿತ್ತವು. ನನಗೆ ಇದೇನಿದು ಇವತ್ತು ಎಲ್ಲಿ ಹೋದರೂ ಇಷ್ಟೊಂದು ಪ್ರಾಣಿಗಳು ಕಾಣುತ್ತಿವೆಯಲ್ಲ ಎಂಬ ಅಚ್ಚರಿ… ಈ ಪ್ರಾಣಿಗಳ ಆಟ, ಜಿಂಕೆಗಳ ವಿಹಾರ, ಹಂದಿಗಳ ಗದ್ದಲ, ಇದೀಗ ಮತ್ತೆ ಮೂರು ಹಂದಿಗಳು ಓಡಿದ್ದು,.. ಎಲ್ಲಾ ಸೇರಿ ನಾನು ಯಾವುದೋ ಪ್ರಾಣಿಗಳ ರಾಜ್ಯದಲ್ಲಿರುವಂತೆ ನನಗೆ ಅನಿಸತೊಡಗಿತ್ತು. ಶಾಲೆಯಲ್ಲಿ ಆನಂದಪುರಂ ಟೆಂಟಿಗೆ ಕರೆದುಕೊಂಡು ಹೋಗಿ ತೋರಿಸಿದ್ದ ಪ್ರಾಣಿಗಳ ಸಿನೆಮಾದಂತೆಯೇ ಇಲ್ಲಿ ಇಲ್ಲವೂ ನಡೆಯುತ್ತಿರುವ ನೆನಪು ನನಗೆ..!

ಗದ್ದೆ ದಾಟಿ ಆಚೆ ಬದಿಯಿಂದ (ನಾವು ಮೊದಲು ಕೂತ ಜಾಗಕ್ಕೆ ಎದುರು ಭಾಗದಲ್ಲಿ ಈಗ ನಾವಿದ್ದೆವು) ಹಂದಿಗಳನ್ನು ಸಮೀಪಿಸುತ್ತಿದ್ದೆವು. ಅಣ್ಣಪ್ಪಣ್ಣ ಮುಂದೆ, ನಾನು ಆತನ ಹಿಂದೆ,.. ನನ್ನ ಕೈಯಲ್ಲಿ ಬಂದೂಕಿನ ಮದ್ದುಗುಂಡುಗಳ ಪುಟ್ಟ ಚೀಲ ಮತ್ತು ಕತ್ತಿ,… ಆತನ ಕೈಯಲ್ಲಿ ಬರೋಬ್ಬರಿ ನಾಲ್ಕು ಗುಂಟುಗಳನ್ನು ಹೊತ್ತ ಈಡುಗೋವಿ…! ಒಂದೇ ಒಂದು ಕಡ್ಡಿ ಮುರಿದ ಸದ್ದಾದರೂ ಹಂದಿಗಳು ನಮಗೆ ಚಳ್ಳೇ ಹಣ್ಣು ತಿನ್ನಿಸುವುದು ಗ್ಯಾರಂಟಿ. ಹಾಗಾಗಿ ಸದ್ದಾಗದಂತೆ, ಸರಸರನೆ ಹಜ್ಜೆ ಹಾಕುತ್ತಾ ಆತ ನಡೆಯುತ್ತಲೇ ಇದ್ದ. ನನಗೆ ಆ ಜಾಗವೆಲ್ಲ ಅಷ್ಟೊಂದು ಪರಿಚಯವಿರಲಿಲ್ಲ, ಬೆಳದಿಂಗಳಿದ್ದರೂ ಗಿಡಮರಗಳ ನೆರಳು, ಮುಳ್ಳು- ಬೊಡ್ಡೆಗಳ ದಾರಿ,.. ಆದರೆ, ಆಗ ಕಾಲಿಗೆ ಮುಳ್ಳು ನಾಟಿದರೂ ನಿಲ್ಲುವಂತಿರಲಿಲ್ಲ… ಹಾಗೆ ನೂರು ಅಡಿ ಕ್ರಮಿಸುತ್ತಲೇ ಅವ ನಿಲ್ಲುವಂತೆ ನನಗೆ ಸನ್ನೆ ಮಾಡಿದ. ನಾನು ನಿಂತೆ.. ಆತ ಗುರಿ ಹಿಡಿದುಕೊಂಡು ನಿಧಾನಕ್ಕೆ ಕೂತುಕೊಂಡೇ ಮುಂದೆ ಸರಿಯುತ್ತಿದ್ದ… ಕೆರೆಯಲ್ಲಿ ತಾವರೆ ಗಡ್ಡೆ ಕೀಳುತ್ತಿದ್ದ ಒಂಟಿಗ ಹಂದಿ ಆತನ ಗುರಿ! ಇನ್ನೇನು ಆತನ ಬಂದೂಕಿನ ಕುದುರೆ ಅದುಮಬೇಕು,… ಅನ್ನುವಷ್ಟರಲ್ಲಿ ಹಿಂದಿನಿಂದ ದೊಪ್ಪನೆ ಸದ್ದಾಯಿತು! ಹಂದಿ ಹಾರಿ ಜಿಗಿದು ಓಡಿದವು…. ಬಂದೂಕಿನ ಕುದುರೆಯನ್ನೇನೋ ಅದುಮಿದ… ಗುಂಡೂ ಸಿಡಿಯಿತು. ಆದರೆ, ಬಡಿದದ್ದು ಮಾತ್ರ ಹಂದಿಗಲ್ಲ…! ಎದುರಿನ ಮರಕ್ಕೋ, ಕಲ್ಲಾರೆಯ ಅಂಚಿಗೋ ಬಡಿದಿರಲೂ ಬಹುದು…!!

ಏಕೆಂದರೆ, ಗುರಿ ಇಟ್ಟು ಅವನು ಇನ್ನೇನು ಗುಂಡು ಹಾರಿಸುತ್ತಾನೆ ಎನ್ನುವಷ್ಟರಲ್ಲಿ ನನಗೆ ನನ್ನದೇ ಕಲ್ಪನೆಯಲ್ಲಿ ಬೇರೆಯದೇ ಘಟನೆಗಳು ನಡೆಯತೊಡಗಿದ್ದವು; ಅವನು ಗುಂಡು ಹಾರಿಸುವುದು,… ಅದು ಹಂದಿಯನ್ನು ಸಂಪೂರ್ಣ ಸಾಯಿಸದೇ ಅರೆಜೀವ ಮಾಡಿಬಿಡುವುದು, ಅದು ಗಾಯಗೊಂಡು ನಮ್ಮತ್ತ ನುಗ್ಗುವುದು, ಆಗ,..!? ಅವನ ಕೈಯಲ್ಲಿ ಬಂದೂಕಿದೆ,.. ಅವನೇನೋ ಪಾರಾಗುತ್ತಾನೆ.. ನಾನು? ನನ್ನ ಕೈಯಲ್ಲಿ ಏನಿದೆ? ಬರಿ ಒಂದು ಕತ್ತಿ, ಹಂದಿಯೇನಾದರೂ ನೇರವಾಗಿ ನುಗ್ಗಿದರೆ, ಅವನು ತಪ್ಪಸಿಕೊಂಡು ನಾನು ಅದರ ಬಾಯಿಗೆ ಸಿಗುವುದು ಗ್ಯಾರಂಟಿ… ಅಯ್ಯಪ್ಪ, ಮೊದಲೇ ನನಗೆ ಹಂದಿಯೆಂದರೆ ಭಯ,.. ಸರಿ, ನಿಧಾನಕ್ಕೆ ಗುಂಡು ಹಾರುವ ಮೊದಲೇ ಹತ್ತಿರದಲ್ಲಿದ್ದ ನೇರಲೇ ಮರ ಏರಿ ಬಿಡುವ ಎಂದುಕೊಂಡು ನಾನು ಅವನಿಗೆ ಗೊತ್ತಾಗದಂತೆ ಮರವೇರತೊಡತೊಡಗಿದೆ. ಇನ್ನೇನು ಮೇಲಿನ ಹರೆಯನ್ನು ಹತ್ತಬೇಕು,.. ಅಷ್ಟರಲ್ಲಿ ಕಾಲು ಜಾರಿತು… ದೊಪ್ಪನೆ ಕೆಳಗೆ ಬಿದ್ದೆ!!!

ನಾನು ದೊಪ್ಪನೆ ಬಿದ್ದ ಸದ್ದು ಕೇಳಿ ಅವನೂ ಭಯಬಿದ್ದು, ಅಚಾನಕ್ಕಾಗಿ ಬಂದೂಕಿನ ಕುದುರೆ ಅದುಮಿಬಿಟ್ಟಿದ್ದ! ಗುಂಡು ಗುರಿ ತಪ್ಪಿತ್ತು,.. ಹಂದಿ ಸಲೀಸಾಗಿ ಮಾಯವಾಯಿತು,… ಆಮೇಲಿನದ್ದೇನಿದ್ದರೂ ವಾಚಾಮಗೋಚರ ಶಾಪ… ಇನ್ನೆಂದೂ ನೀನು ನನ್ನೊಂದಿಗೆ ಬರಬೇಡ ಎಂಬ ಕಟ್ಟಾಜ್ಞೆ ಕೇಳಿಸಿಕೊಂಡು ಇಳಿರಾತ್ರಿಯ ಹೊತ್ತಲ್ಲಿ ಮನೆ ಹಾದಿ ಹಿಡಿದೆ. ಮನೆ ತಲುಪುವವರೆಗೂ ಅಣ್ಣಪ್ಪಣ್ಣನ ಸಿಟ್ಟು, ಶಾಪ ಮುಗಿದಿರಲಿಲ್ಲ…


(ಮೊದಲರ್ಧ ಬರೆದು ತುಂಬಾ ದಿನಗಳ ನಂತರ ಈ ಭಾಗ ಸೇರಿಸಿದ್ದೇನೆ. ಈ ದೀರ್ಘ ವಿಳಂಬಕ್ಕೆ ಕ್ಷಮೆ ಇರಲಿ, ನಾನೀಗ ನಮ್ಮೂರು ಸಂಪಳ್ಳಿಗೆ ಹತ್ತಿರದ ಶಿರಾಳಕೊಪ್ಪಕ್ಕೆ ಸ್ಥಳಾಂತರಗೊಂಡಿರುವುದರಿಂದ ಆ ಬ್ಯುಸಿಯಲ್ಲಿ ಬರವಣಿಗೆ ಮಾಡಲಾಗಿರಲಿಲ್ಲ,.. ಇನ್ನು ಯಥಾ ಪ್ರಕಾರ ಬರಹ ಮುಂದುವರಿಯಲಿದೆ,.. ಸೋಮಾರಿತನ ಬ್ರೇಕ್ ಹಾಕದಿದ್ದರೆ,.. ಇನ್ನು ನಿರಂತರ…)

Advertisements

2 thoughts on “ಸಂತೆ ನೆರೆದರೂ ಗಂಟು ಸಿಗಲಿಲ್ಲ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s