ಮಠ-ಮಾನ್ಯಗಳಲ್ಲಿರುವುದೂ ಕಪ್ಪುಹಣವೇ ಅಲ್ಲವೇ?!

 

 

 

 

 

 

 

 

 

ಕಪ್ಪು ಹಣ…!

ದೇಶದಲ್ಲಿ ಕಳೆದ ಒಂದು ತಿಂಗಳಿಂದ ಕಿವಿ ಮುಚ್ಚಿದರೂ ಮಾರ್ದನಿಸುತ್ತಲೇ ಇರುವ ಪದಪುಂಜ… ಯಾರ ಬಾಯಲ್ಲಿ ಕೇಳಿದರೂ ಕಪ್ಪು ಹಣದ ಮಾತೇ! ಬಾಬಾ ರಾಮ ದೇವ ಎಂಬ ಮೂಲಿಕೆ ಹಿಡಿದುಕೊಂಡು ಯೋಗಾಯೋಗ ಪರೀಕ್ಷೆಗೆ ಬಂದ ವ್ಯಕ್ತಿ ರಾಜಕೀಯ ಪಕ್ಷ ಕಟ್ಟುವ ಪೂರ್ವ ತಯಾರಿಗಾಗಿ ನಡೆಸಿದ ತಾಲೀಮು ಇದೀಗ ದೇಶವ್ಯಾಪಿ ಮಾತು- ತರತರ ಕಥೆಯೂ ಆಗಿಬಿಟ್ಟಿದೆ. ಬಾಬಾನ ಅಸಲೀ-ನಕಲೀ ಮುಖಗಳ ಅನಾವರಣವೂ ದೈನಿಕ ಧಾರಾವಾಹಿಯ ಸ್ವರೂಪ ಪಡೆದುಕೊಂಡಿದೆ.

ಯಾವುದೇ ವ್ಯವಸ್ಥೆಯಲ್ಲಿ ತೀರಾ ಸುಲಲಿತವಲ್ಲದ ರಾಜಕೀಯ-ಆರ್ಥಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ತೀರಾ ಸಾಮಾನ್ಯನ ಹುಂಬತನದಿಂದ ಪ್ರಯತ್ನಿಸಿದರೆ ಎಂಥ ಎಡವಟ್ಟುಗಳು, ಪ್ರಹಸನಗಳಿಗೆ ಈಡಾಗಬಹುದು ಎಂಬುದಕ್ಕೆ ಈ ಬಾಬಾ ಸಾಕ್ಷಿಯಾಗಿ ನಿಂತಿದ್ದಾರೆ. ಸಂವಿಧಾನದ ಬಗ್ಗೆ ಸರಿಯಾದ ತಿಳಿವಳಿಕೆ ಇಲ್ಲದೆ, ದೇಶದ ಪ್ರಜಾತಂತ್ರದ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಇಲ್ಲದೆ ಈ ಬಾಬಾ ನಗೆಪಾಟಲಿಗೂ ಈಡಾಗಿಬಿಟ್ಟರು. ಅವರು ಎತ್ತಿಕೊಂಡ ವಿಷಯದ ಮಹತ್ವದ ಬಗ್ಗೆ ಅರಿವಿದ್ದ ಜನತೆ ಕೂಡ ಅವರ ಶಸಸ್ತ್ರ ಪಡೆ ರಚನೆ, ಹಣ ತರಲು ಇದೀಗಲೇ ನಿರ್ಧಾರ ಕೈಗೊಳ್ಳಬೇಕು ಎಂಬಂತಹ ಬಾಲಿಶಃ ಮತ್ತು ಪ್ರಾಯೋಗಿಕವಾಗಿ ಕಷ್ಟಸಾಧ್ಯವಾದ ನಿಲುವುಗಳನ್ನು ನೋಡಿ ಇದು ಮೂರ್ಖರ ಆಟ ಎಂದುಕೊಂಡರು.

ಈ ಬಾಬಾರ ಈ ಪ್ರಹಸನ (ಸತ್ಯಾಗ್ರಹ ಎಂಬ ಮೌಲಿಕ ಪದವನ್ನು ಬಳಸಲಾಗದ)ದಿಂದಾಗಿ ಬಾಬಾ ಅವರ ಸಣ್ಣತನ, ಅವರನ್ನು ಛೂ ಬಿಟ್ಟ (ಕಾಂಗ್ರೆಸ್ ವರಸೆ) ಸೂತ್ರಧಾರರ ತಂತ್ರದ ವೈಫಲ್ಯ,  ಇದೆಲ್ಲದರಿಂದಾಗಿ ದೇಶದ ಭವಿಷ್ಯದ ದೃಷ್ಟಿಯಿಂದ ತೀರಾ ಮಹತ್ವದ್ದಾಗಿದ್ದ ಕಪ್ಪುಹಣದ ಅಜೆಂಡಾ ಹಳಿತಪ್ಪಿದ್ದು ಎಲ್ಲರಿಗೆ ಈಗ ಮನವರಿಕೆಯಾಗುತ್ತಿದೆ. ಅದೇ ಹೊತ್ತಿಗೆ ಮತ್ತೊಂದು ಅವಘಡವೂ ಘಟಿಸಿಬಿಟ್ಟಿದೆ. ಭ್ರಷ್ಟಾಚಾರದ ವಿರುದ್ಧ ಹಜಾರೆ ಅವರು ಕೈಗೊಂಡಿದ್ದ ಸತ್ಯಾಗ್ರಹ(ಇಲ್ಲಿ ಸತ್ಯಾಗ್ರಹ ಪದಕ್ಕೆ ಸಲ್ಲುವ ಎಲ್ಲ ಮರ್ಯಾದೆಯೂ ಸಲ್ಲುತ್ತದೆ ಎನ್ನಬಹುದು) ಕೂಡ ತನ್ನ ಗಂಭೀರತೆಗೆ ಮುಕ್ಕು ತಂದುಕೊಂಡಿದೆ. ಬಾಬಾ ಅಂದು ಹಜಾರೆಯವರನ್ನು ಬೆಂಬಲಿಸಿದ್ದು, ಅದಕ್ಕೆ ಪ್ರತಿ

ಯಾಗಿ ಹಜಾರೆ ಬಾಬಾರನ್ನು ಬೆಂಬಲಿಸಿದ್ದು, ಈ ಸಂಬಂಧ ನಡೆದ ಹಲವು ಬೆಳವಣಿಗೆಗಳು ಜನಲೋಕಪಾಲ್ ಮಸೂದೆಯ ಕರಡು ಸಮಿತಿ ಪ್ರಕ್ರಿಯೆಗಳಿಗೆ ಕೂಡ ಹಿಂದೇಟು ನೀಡಿದವು.

ವಿವೇಚನೆ ಮತ್ತು ವಾಸ್ತವತೆ

ಯ ಅರಿವಿಲ್ಲದ ಒಬ್ಬ ವ್ಯಕ್ತಿಯಿಂದಾಗಿ ಒಂದು ಘನಗಂಭೀರ ವಿಷಯ ಮತ್ತು ಚಳವಳಿ ಹೇಗೆ ನಗೆಪಾಟಲಿನ ಸಂಗತಿಯಾಗಿ ಪರ್ಯಾವಸಾನ ಹೊಂದಬಹುದು ಎಂಬುದಕ್ಕೆ ಇತ್ತೀಚಿನ ದಿನಗಳಲ್ಲಿ ಈ ಬಾಬಾ ಪ್ರಹಸನಕ್ಕಿಂತ ಬೇರೊಂದು ನಿದರ್ಶನ ಸಿಗಲಾರದು. ಹೀಗೆ ಅನ್ನಿಸಲು ರಾಜನೀತಿ, ಸಂವಿಧಾನಿಕ ಅಂಶಗಳು, ಆಡಳಿತ ವ್ಯವಸ್ಥೆ ಮುಂತಾದ ಬಗೆಗಿನ ಬಾಬಾರ ತಿಳಿವಳಿಕೆಯ ಮಿತಿಯೊಂದೇ ಕಾರಣವಲ್ಲ. ಬದಲಾಗಿ, ಅವರು ಅನುಸರಿಸಿದ ಅನುಮಾನಾಸ್ಪದ ದಾಟಿ, ಬೇಡಿಕೆ ಮತ್ತು ಚಳವಳಿಯನ್ನು ಸಂಘಟಿಸಿದ ರೀತಿ ಕೂಡ ಕಾರಣ. ಕಪ್ಪುಹಣದ ಬಗ್ಗೆ ಮಾತನಾಡುವಾಗ, ದುಂದುವೆಚ್ಚ, ರಾಷ್ಟ್ರೀಯ ಆದಾಯ ನಷ್ಟ ಮುಂತಾದ ವಿಷಯಗಳು ಅದರೊಂದಿಗೇ ಮಿಳಿತವಾಗಿರುತ್ತವೆಯಾದ್ದರಿಂದ ಹಣಕಾಸಿನ ಬಗ್ಗೆ ತಾವು ಎಚ್ಚರದಿಂದರಬೇಕು, ಸರಳತೆ ಕಾಯ್ದುಕೊಳ್ಳಬೇಕು ಎಂಬ ಪ್ರಾಥಮಿಕ ತಿಳಿವಳಿಕೆ ಕೂಡ ಇಲ್ಲದೆ ಐಶಾರಾಮಿ ವ್ಯವಸ್ಥೆಯಡಿ ಚಳವಳಿ ಸಂಘಟಿಸಿ ದಿಗ್ವಿಜಯ ಸಿಂಗ್ ರಂಥವರ ಕಟು ಟೀಕೆಯನ್ನು ಕಟ್ಟಿಕೊಂಡೇ ‘ಉಪವಾಸ’ ಆರಂಭಿಸಿದ್ದು ಕೂಡ ಪ್ರಮಾದವೇ. ಇನ್ನು ತನ್ನ ಟ್ರಸ್ಟ್ನಲ್ಲೇ ಸಾವಿರಾರು ಕೋಟಿ ಹಣ ಇಟ್ಟುಕೊಂಡು ಗಾಜಿನ ಮನೆಯಲ್ಲಿದ್ದುಕೊಂಡು ಮತ್ತೊಬ್ಬರ ಮನೆಯತ್ತ ಕಲ್ಲು ಬೀಸುವ ಹುಚ್ಚುತನ ಬೇಡವಾಗಿತ್ತು. ಹಾಗೇ ಈ ಬಾಬಾ ಕೆಲವೇ ದಿನಗಳ ಹಿಂದೆ ನಡೆಸಿದ ರಾಷ್ಟ್ರವ್ಯಾಪಿ ಯೋಗ ಶಿಬಿರ ಯಾತ್ರೆಯ ಅಂಗವಾಗಿ ಕರ್ನಾಟಕಕ್ಕೆ ಬಂದಾಗ ಇಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಮುಖ್ಯವಾಗಿ ಪ್ರಸ್ತಾಪವನ್ನೇ ಮಾಡದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ ಕೂಡ.

ಅದಕ್ಕಿಂತ ಮುಖ್ಯವಾಗಿದ್ದು,

ದೇಶದ ಮಠ-ಮಾನ್ಯ, ದೇವಾಲಯ, ಚರ್ಚು, ಮಸೀದಿ- ದರ್ಗಾಗಳಲ್ಲಿ ಸಂಗ್ರಹವಾಗಿರುವ ಲೆಕ್ಕವಿಲ್ಲದಷ್ಟು ಹಣದ ಬಗ್ಗೆ ಈ ಬಾಬಾ ಆದಿಯಾಗಿ ಯಾರೂ- ಬಿಜೆಪಿಯವರಾಗಲೀ, ಸಂಘ-ಪರಿವಾರದವರಾಗಲೀ, ಕೊನೆಗೆ ಕಾಂಗ್ರೆಸ್ ಆಗಲೀ- ತುಟಿಬಿಚ್ಚದಿರುವುದು. ಈ ಧಾರ್ಮಿಕ ಕೇಂದ್ರಗಳಲ್ಲಿ ಸಂಗ್ರಹವಾಗುವ ದೇಣಿಗೆ, ಕಾಣಿಕೆ, ಕೊಡುಗೆ, ಬಹುತೇಕ ಸಂದರ್ಭದಲ್ಲಿ ರಾಜಕಾರಣಿಗಳ ಕಪ್ಪುಹಣ ಕೂಡ ದೇಶದ ತೆರಿಗೆ ವಂಚ

ನೆಯೊಂದಿಗೆ ಅಕ್ರಮವೇ ಅಲ್ಲವೇ? ತೆರಿಗೆ ಕಾನೂನಿನಡಿಯೇ ದೇಣಿಗೆ ನೀಡಿದ್ದರೂ ಅದು ದೇಶದ ತೆರಿಗೆಯಿಂದ ವಿನಾಯ್ತಿ ಪಡೆದ ಮೇಲೆ ಸಾರ್ವಜನಿಕ ಉದ್ದೇಶಕ್ಕೆ ಬಳಕೆಯಾಗಬೇಕಲ್ಲವೇ? ಆದರೆ, ಇವತ್ತು ಎಷ್ಟು ಧಾರ್ಮಿಕ ಸಂಸ್ಥೆಗಳು ತಮ್ಮಲ್ಲಿ ಕೊಳೆಯುತ್ತಿರುವ ಹಣವನ್ನು ‘ಶಿಕ್ಷಣವೆಂಬ ದಂಧೆ’ಯನ್ನು ಹೊರತುಪಡಿಸಿ ಇನ್ನಿತರ ಸಾರ್ವಜನಿಕ (ಅದರಲ್ಲೂ ಸಮಾಜದ ಎಲ್ಲ ಸ್ತರದ, ಸಮುದಾಯಗಳ ಜನ) ಉದ್ದೇಶಕ್ಕೆ ಬಳಸುತ್ತಿವೆ? ಇನ್ನು ಅಧಿಕಾರದಲ್ಲಿರುವ ರಾಜಕಾರಣಿಗಳು ಭ್ರಷ್ಟಾಚಾರದ ಹಣವನ್ನು ಮಠಗಳಲ್ಲಿ ಇಟ್ಟು ಭದ್ರಪಡಿಸುವ ಸಂಗತಿ ಕನ್ನಡಿಗರಿಗೆ ಹೊಸದೇನಲ್ಲ.

ಪರಿಸ್ಥಿತಿ ಹೀಗಿರುವಾಗ ಮಠ-ಮಂದಿರಗಳೂ (ಎಲ್ಲಾ ಧರ್ಮದ) ರಾಷ್ಟ್ರೀಕರಣಗೊಂಡರೆ ನಿಜವಾಗಿಯೂ ದೇಶದ ಹಣ ದೇಶದ ಸರ್ವಜನತೆಯ ಶ್ರೇಯೋಭಿವೃದ್ಧಿಗೆ ಬಳಕೆಯಾಗಬಹುದಲ್ಲವೆ? ಈ ನಿಟ್ಟಿನಲ್ಲಿ ಬಿಜೆಪಿ, ಸಂಘ-ಪರಿವಾರ, ಬಾಬಾಗಳು ಪರವಾಗಿ ಬರುವುದಿರಲಿ ಅದನ್ನು ವಿರೋಧಿಸಿ ಇದೇ ರಾಮ್ದೇವ್ ನೇತೃತ್ವದಲ್ಲೇ ಮತ್ತೊಂದು ಪ್ರಹಸನಕ್ಕೆ ಇಳಿದಾರು. ಆದರೆ, ನಮ್ಮ ಎಡ ಪಕ್ಷಗಳು, ಬ್ಯಾಂಕ್ ರಾಷ್ಟ್ರೀಕರಣದಂತಹ ಪ್ರಗತಿಪರ ನಿಲುವು ತೆಗೆದುಕೊಂಡಿದ್ದ ಕಾಂಗ್ರೆಸ್, ಎಸ್ಪಿ, ಬಿಎಸ್ಪಿ, ಆರ್ ಜೆಡಿ, ಡಿಎಂಕೆಯಂತಹ ಪಕ್ಷಗಳು ಏನು ಹೇಳಬಹುದು? !

Advertisements

One thought on “ಮಠ-ಮಾನ್ಯಗಳಲ್ಲಿರುವುದೂ ಕಪ್ಪುಹಣವೇ ಅಲ್ಲವೇ?!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s