ಪ್ರೇಮದ ಬಗ್ಗೆ…

ನಿನ್ನೆಯ ಸತ್ಯ ನಾಳೆಗೆ ಸುಳ್ಳಾಗುವುದೇ ದಿಟವಿರುವ

ಇಲ್ಲಿ;

ನಾವೆಲ್ಹ ಹಸಿ ಸುಳ್ಳರು.

ಆದರೆ, ಲಿಪಿಯ ಮಾತು ಬೇರೆ;

ಅದು ಅಳಿಸಲಾರದ್ದು, ಅಳಿಸಬಾರದ್ದು,

ನಾವು ಆ ದಿಟದ ಸಾಕ್ಷ್ಯವನ್ನೇ ನೆಚ್ಚಿದ್ದೇವೆ.

ನಿನ್ನ ಮೇಲಿನ ಈಗಿನ ನನ್ನ ಪ್ರೇಮ

ಕಳೆದ ವಸಂತಕ್ಕಿಂತ ಭಿನ್ನ,

ಅದು ಹಾಗಲ್ಲವೆಂದಾದರೆ, ಅದು ಪ್ರೇಮವೆಂಬುದೇ ಸುಳ್ಳು!

ಇದು ತಿಳಿದೂ,

ನಾವು ಪ್ರೇಮ-ಪ್ರೇಮವೆಂದು ಹಲಬುತ್ತೇವೆ,

ಹೊಸ ಮೊಗ್ಗಿಗೆ ತಾವು ನೀಡಿ

ಉದುರುವ ಹೂವೆಂದು ಅರಿಯದೆ,

ಕಿಲುಬು ಪ್ರೇಮವನ್ನೇ ಕಾಸಿನ ಬಿಲ್ಲೆಯಂತೆ ಜತನ ಮಾಡುತ್ತೇವೆ!

 

(ಡಿ.ಎಚ್. ಲಾರೆನ್ಸ್  Lies About Love ಪದ್ಯದ ಭಾವಾನುವಾದ ಇದು)

ಎರಡು ಪದ


ಕೃಷ್ಣ-ಚಂದ್ರ!

ಯಾರೋ ಹೇಳಿದರು;

ಮೊನ್ನೆ ನೀಲಿಚಂದ್ರ ಬಂದಿದ್ದನಂತೆ…

ಚಂದ್ರನಿಗೂ- ಕೃಷ್ಣನಿಗೂ

ಹೀಗೂ ಉಂಟೆ ಬಂಧ!?

ಕೃಷ್ಣನಿಲ್ಲದೆ ಪ್ರೀತಿ ಇಲ್ಲ…

ಚಂದ್ರನಿಲ್ಲದೆ ಅಂದವಿಲ್ಲ..

ಎಂದಾದ ಮೇಲೆ

ಕೃಷ್ಣ-ಚಂದ್ರರ ಸ್ನೇಹ ಹೊಸದಲ್ಲವಲ್ಲ..!

ಎನಿಸಿ ವೃಥಾ ಹೋಲಿಕೆಯ ಕಸರತ್ತು ವ್ಯರ್ಥವೆಂದುಕೊಂಡು ಸುಮ್ಮನಾದೆ!!

………

ಜಲದ ಆಲಯದೊಳಗೆ

ಹರಿವ ನೀರಿಗೆ ಮೈಯೆಲ್ಲಾ ಕಾಲು…

ಅಲ್ಲಮನ ಮಾತು ಮನದಲ್ಲಿ ಕೂತು;

ತೇಲುವ ಮೀನಿಗೂ ಮೈಯೆಲ್ಲಾ ಕಾಲೇ

ಅಲ್ಲವೇ ಎನಿಸಿತು…

ಜಂಗಮದ ಜಲದೊಳಗೆ

ಸ್ಥಾವರ ಯಾವುದು?

ಕಲ್ಲಂಥ ಕಲ್ಲೂ ದಿನಗಳೆದಂತೆ ಜಂಗಮವೇ!

ಆಲಯಜಲದ ಬಯಲೊಳಗೆ

ಬಂಧಿ ಯಾರು?

ಮುಕ್ತರಾರು?

ಎಂಬುದು ಮೀನಿಗೇಕೆ..

ನೀರಿಗೂ ಒಗಟೇ!

………..

ಅವನೆಂದರೆ ಸೂಜಿಗಲ್ಲು…

isp0802481

ಅವನಲ್ಲದೆ ದೇವರು

ಮತ್ತೊಬ್ಬನಿಲ್ಲವೆಂದೇ

ನಂಬಿದವರೆಂದರು:

ಅವನೆಂದರೆ ವಿಶ್ವರೂಪ!

ಅವನೇ ವಿಶಿಷ್ಟ, ಅವನಲ್ಲದ

ದೈವ ದೈವವೇ ಎಂದು

ಜರೆದವರೆಂದರು:

ಅವನೆಂದರೆ ಸರ್ವಶಕ್ತ!

ಅದೆಲ್ಲ, ದ್ವೈತ-

ಅದ್ವೈತ-

ವಿಶಿಷ್ಟಾದ್ವೈತದ ಮಾತಾಯಿತು…

ರಾಧೆಯಂಥ ಮುಗುದೆಗೆ

ಅವನು ದೇಹಗೊಳಲಿನ ಜೀವನಾದದ ಉಸಿರು…

ಯಶೋಧೆಯಂಥ ಅಮ್ಮಗೆ

ಅವನು ಬಾಯಲ್ಲೇ ಬ್ರಹ್ಮಾಂಡ ತೋರುವ ಮಹಾತುಂಟ…

ಯುದ್ಧ ಕಲಿ ಅರ್ಜುನಗೆ- ಶಪಥನಿಷ್ಠೆ ಕೃಷ್ಣೆಗೆ

ಅವನು ಜೀವ- ಸಖ…

ಪುಟದ ನಡುವಿನ ನವಿಲುಗರಿಯಲ್ಲೇ ಅವನ

ಕಾಣುವ ಪೋರಿಗೆ ಸೆಳೆವ ಸೂಜಿಗಲ್ಲು…

…  ಬಳಿ ಸುಳಿದವರಿಗೆಲ್ಲ

ಬಗೆ- ಬಗೆಯ ಬಾಂಧವ್ಯದ ಬಯಲು…

ಒಳ-ಬಗೆಗೆ ದಕ್ಕಷ್ಟು ಭಾವ-ಜೀವ,

ಏರುವೆತ್ತರದ ಹಂಬಲದ ಮಿಂಚು

ಈ ಗೊಲ್ಲರ ಹುಡುಗ…!

ಹಕ್ಕಿ, ಅವಳು ಮತ್ತು ನಕ್ಷತ್ರಮೀನು

ರೆಕ್ಕೆ ಬಿಚ್ಚಿ, ಬಾನಿಗೆ

ಚಿಮ್ಮಿದ ಹಕ್ಕಿ

ಕಂಪಾಸ್ ಮರೆತು

ಮತ್ತೆ ಗೂಡಿಗೂ

ಹಿಂತಿರುಗಲಿಲ್ಲ!!

***

 

ಕಾಮನಬಿಲ್ಲಿನ

ಹೂವ ಮುಡಿಯುವ

ಆಸೆ ಕೈಗೂಡದೆ

ಒಂದೇ ಸಮನೆ ರೋತೆ

ತೆಗೆದಿದೆ ಮೋಡ… !!

***

 

ಅವಳ ಮೆಸೇಜು

ಬರದೆ ಮೊಬೈಲ್ ಗೆ ಈಗ

ಸಿಟ್ಟು..

ಮೌನಕ್ಕೆ ನಿರ್ಜೀವ

ಬ್ಯಾಟರಿ ನೆಪ ಅಷ್ಟೆ!

***

 

ನಿನ್ನ ಪರೀಕ್ಷಿಸಲು

ನಾ ಕವಿತೆ

ಬರೆದೆ ಎಂದಳು ಅವಳು…

ನನಗೋ ಅವಳೇ

ಎಂದೆಂದೂ ಮುಗಿಯದ ಕಥೆ!!

***

 

ಮಳೆ ಬಿದ್ದ ಕ್ಷಣ

ಮಣ್ಣು ಒದ್ದೆ

ಕಣ್ಣಿನ ರೆಪ್ಪೆ

ತೆರೆದಂತೆ

ಅರಳುವ ಹಸಿರು

ಕಾಮನಬಿಲ್ಲು!

***

 

ಕಾಡಿನ ತುಂಬ

ಈಗ ಮಂಗನ ಮದುವೆ

ಆಕಾಶದಲ್ಲಿ

ಕಾಮನಬಿಲ್ಲು, ಮನ್ಮಥ ಲಾಸ್ಯ!!

***

 

ನನ್ನ ಕಣ್ಣ ದಿಟ್ಟಿಸಬೇಡ

ಎಂದಳು ಅವಳು…

ಕಡಲ ಒಡಲಾಳದ

ನಕ್ಷತ್ರಮೀನ

ತೋರಿ ನಸುನಕ್ಕೆ!!

***

ಅಂಗುಲ ಹುಳುವಿನ ವಿನಯ

history1

ನೆಲದೆದೆಯ ಮೇಲೆ

ಕಲ್ಲು, ಮಣ್ಣು, ಕಸ, ಕಡ್ಡಿ,

ಹುಳ-ಹುಪ್ಪಟೆ, ಹಣ್ಣಲೆ, ಕೊರಡು,…

 

ಹಚ್ಚನೆ ಗರುಕೆ, ಅರಳು ಹೂ,

ತೊನೆವ ಬಳ್ಳಿ, ನಿಲುಕದ ಹೆಮ್ಮರ

ಹಬ್ಬುವ ಹರೆ, ಹನಿಯುವ ಜೇನು,…

 

ಪಲ್ಲವಿಸುವ ಚೆಲುವು

ಪಸರಿಸುವ ಗಂಧ

ಜೀವ ಸಂಭ್ರಮದ ಜಾತ್ರೆಯಲಿ…

 

ಮೈಮರೆಯುವ ಮನದ

ಮೂಲೆಯಿಂದ ಎದ್ದುಬರುವ

ಚರಿತ್ರೆಯ ನೆನಪು!

 

ಕಲ್ಲಿಗಂಟಿದ ನೆತ್ತರು,

ಮಣ್ಣಿಗಂಟಿದ ಬೆವರು,

ಕಾಲ ಹರಿವಿನಲಿ ಕೊಚ್ಚಿಹೋಗದ ಕಲೆ..!

 

ಹಸಿರ ನಲಿವು, ಹೂವ ಒಲವು

ಮರದ ಹಮ್ಮು, ಜೇನ ಹಿತ…

 

ಎಲ್ಲವ ತೂಗುವ ಕೈಗೆ

ಕಸುವು ಕೊಟ್ಟ ಪ್ರಾಚ್ಯ ನಿಟ್ಟುಸಿರು

 ತಿದಿಯೊತ್ತುತ್ತಿದೆ ತಣ್ಣಗೆ

ಸರಿವ ಅಂಗುಲ ಹುಳುವಿನ

ಪುರಾತನ ವಿನಯದಲ್ಲೂ…!

ಹೇಗೆ ಭರವಸೆ ಇಡಲಿ ಹೇಳೆ?

 uncertain

 

 

 

 

 

 

 

 

ಗೆಳತಿ,

 

ಇಲ್ಲೀಗ ಚಳಿಯ ಕಾಲ;

ಚುಮು- ಚುಮು ಬೆಳಗು,

ಮಂಜು ಕವಿದ ಬೀದಿ,

ಮಂಕಾದ ಸೂರ್ಯ,

ಜಡ್ಡುಬೀಳುವ ಮನಸಿನ ಕಾಲ.

 

ಆದರೆ,

ಅದಾವುದೂ ಕಾಣದು ಇಂದೇಕೋ

ಮುತ್ತಿದ ಕಾರ್ಮೋಡ,

ಅಕಾರಣ ಸುರಿವ ಸೋನೆ,

ಬಿಸಿಲಿದ್ದರೂ ಥಳ-ಥಳಿಸದ ಬೆಳಗು,..

 

ರಾತ್ರಿ ಇಡೀ ರೆಪ್ಪೆ ಹಚ್ಚದೆ

ಮುಂಬೈ ದಾಳಿಯ ಸುದ್ದಿ ಬರೆದು

ಬಂದವಗೆ,

ಯಾಕೋ

ಇಂದು ನಿನ್ನೆಯಂತಿಲ್ಲ…

ಕಾಲದಂತೆಯೇ.

 

ಅಕಾಲ ಕಾಲದ ಹೊತ್ತಿನಲ್ಲಿ

ನಾಳೆಗಳ ಮೇಲೆ ಹೇಗೆ

ಭರವಸೆ ಇಡಲಿ ಹೇಳೆ?