ಕಣ್ಣೆದುರಿಗೆ ನೀಲ ನೀರ ರಾಶಿ…

 

pict3016

ಮೂರು ವರ್ಷದ ಹಿಂದೆ, ಅವತ್ತು ಶಿವಮೊಗ್ಗದಿಂದ ಬೈಕ್ ಏರಿದಾಗ ಬೆಳಿಗ್ಗೆ ಏಳರ ಆಸು-ಪಾಸು. ಚುಮು-ಚುಮು ಚಳಿಯ ಗಾಳಿಯನ್ನು ಸೀಳಿಕೊಂಡು ಎರಡು ಬೈಕಲ್ಲಿ ನಾವು ನಾಲ್ವರು ನುಗ್ಗಿದ್ದು ಸಾಗರದ ಕಡೆ. ಉಳ್ಳೂರು ಬಳಿ ಎಡಕ್ಕೆ ಹೊರಳಿ ನೇರ ಹೆಗ್ಗೋಡಿಗೆ ಹೋದರೆ ಅಲ್ಲಿನ ‘ಆಹಾರ್ಯ’ದಲ್ಲಿ ಟೀ ಕುಡಿಯದೇ ಮುಂದೆ ಸಾಗುವುದು ಸಾಧ್ಯವೇ ಇಲ್ಲ ಎನಿಸತೊಡಗಿತು. ಸರಿ ಎಂದುಕೊಂಡು ಮೊದಲು ನೀನಾಸಂ ಕಚೇರಿಗೆ ಹೊಕ್ಕರೆ ಅಕ್ಷರ ಅಲ್ಲೇ ಇದ್ದರು. ಜೊತೆಗೆ ಶ್ರೀಪಾದ್ ಕೂಡ ಇಬ್ಬರೊಂದಿಗೆ ಮಾತನಾಡುತ್ತಾ ಟೀ ಕುಡಿದು, ಅಕ್ಷರ ಅವರ ಎಲೆಯಡಿಕೆ ಚಂಚಿಯ ಕವಳ ಹಾಕಿ, ಆಗಷ್ಟೇ ಪುರುಜ್ಜೀವನ ಕಾಮಗಾರಿ ನಡೆಯುತ್ತಿದ್ದ ಶಿವರಾಮಕಾರಂತ ರಂಗಮಂದಿರ ಸುತ್ತಾಡಿಕೊಂಡು ಲಾಂಚ್ ತಪ್ಪಿ ಹೋದೀತೆಂದು ಹೊಳೆಬಾಗಿಲಿನತ್ತ ಹೆಜ್ಜೆ ಹಾಕಿದೆವು.

ಹೊಳೆಬಾಗಿಲಿಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರು. ಹಸಿವು. ಏನೋ ಒಂದಿಷ್ಟು ತಿಂಡಿ ತಿಂದು ಆಚೆ ದಡಕ್ಕೆ ಹೋದಕೂಡಲೇ ತುಮರಿಯಲ್ಲಿ ಊಟ ಮಾಡಿದರಾಯಿತು ಎಂದು ಲಾಂಚ್ ಕಾಯುತ್ತಾ ಎದುರಿಗೆ ರಾಶಿ ಬಿದ್ದಿದ ನೀಲ ನೀರಿನತ್ತ ಮುಖಮಾಡಿ ಹರಟೆಗೆ ತೊಡಗಿದೆವು. ದಾವಣಗೆರೆಯ ಶಫಿ, ಕಿತ್ತೂರಿನ ಸಚ್ಚಿ ಪಾಲಿಗೆ ಅಲ್ಲಿನ ಕಾಡು- ನೀರು- ಲಾಂಚ್ ಎಲ್ಲವೂ ಹೊಸತು. ನಾರಾಯಣಗೆ ಮಾತ್ರ ಬೆಂಗಳೂರಿಗರಾದರೂ ತುಮರಿ ಸಂಪರ್ಕ ಆ ಪರಿಸರವನ್ನು ಹಳತು ಮಾಡಿತ್ತು. ಒಂದು ತಾಸಿನ ಬಳಿಕ ಲಾಂಚ್ ಬಂತು. ತುಮರಿಗೆ ಹೋಗಿ ತಲುಪುವ ಹೊತ್ತಿಗೆ ಐದೂವರೆಯಷ್ಟಾಗಿತ್ತು. ಅಲ್ಲಿ ನೋಡಿದರೆ ಇರುವುದೇ ಮೂರು ಕ್ಯಾಂಟೀನ್. ಮೂರು ಗಂಟೆ ನಂತರ ಊಟವಿಲ್ಲ, ಏನಿದ್ದರೂ ಬರಿ ಬೋಂಡ, ಟೀ ಎಂಬ ಉತ್ತರ ಸಿಕ್ಕಾಗ ಅಲ್ಲಿನ ಪರಿಚಯಸ್ತರ ನೆರವು ಅಂತೂ ನಮಗಾಗಿಯೇ ಅಡುಗೆ ಮಾಡಿ ಬಡಿಸುವ ಮಟ್ಟಿಗೆ ಕ್ಯಾಂಟೀನ್ ಮಾಲೀಕರ ಮನವೊಲಿಸಿತು.

ಊಟ ಮಾಡಿ ಹೊರಡುವ ಹೊತ್ತಿಗೆ ತುಮರಿಯಲ್ಲೇ ಸಂಜೆಗತ್ತಲು ಆವರಿಸತೊಡಗಿತ್ತು. ಆದರೆ, ನಮ್ಮ ಗಮ್ಯ ಅಲ್ಲಿಂದ ಇನ್ನೂ 70 ಕಿ.ಮೀ. ದೂರದಲ್ಲಿತ್ತು. ಮತ್ತೆ ಬೈಕುಗಳ ಕಿವಿ ಹಿಂಡತೊಡಗಿದೆವು. ಅಲ್ಲಿನ ಕಡಿದಾದ, ಕಿರುದಾರಿಯಲ್ಲಿ ಬೆಟ್ಟ-ಗುಡ್ಡಗಳ ಬಳಸುತ್ತಾ ಅಂಕು-ಡೊಂಕಿನ ದಾರಿ ಸವೆಸುವಾಗ ಕತ್ತಲೆಯ ಕಾಡುಪ್ರಾಣಿಗಳ ಭೀತಿಯ ನಡುವೆಯೂ ಒಂದು ಮಜಾ ಇತ್ತು. ಎಷ್ಟು ಹೋದರೂ ದಾರಿ ಸಾಗುತ್ತಲೇ ಇತ್ತು. ನಮ್ಮ ಗುರಿ ಮಾತ್ರ ಇನ್ನೂ ಸುಳಿವು ಕೂಡ ಸಿಗದಷ್ಟು ದೂರದಲ್ಲಿತ್ತು!

ಕೋಗಾರ್ ರಸ್ತೆ ತಲುಪುವ ಹೊತ್ತಿಗೆ ರಾತ್ರಿ ಎಂಟು! ಎಂದೂ ಓಡಾಡಿ ಅನುಭವವಿರದ, ಜನರ ಪರಿಚಯವೂ ಇರದ ದಾರಿಯಲ್ಲಿ ಎರಡು ಬೈಕಿನಲ್ಲಿ ನಾವು ನಾಲ್ವರು ಆಗಂತುಕರಂತೆ ಸಾಗುತ್ತಿದ್ದೆವು! ಕಾಡುಕೋಣ, ಹುಲಿ, ಕರಡಿ, ಚಿರತೆ, ಕಾಳಿಂಗಸರ್ಪ ಮುಂತಾದ ಅಪಾಯಕಾರಿ ಜೀವಿಗಳ ಸ್ವೇಚ್ಛೆಯ ಬೀಡಿನಲ್ಲಿ ನಾವು ನಿರಾಯುಧರಾಗಿ ಸಾಗುತ್ತಿದ್ದೆವು. ನಮ್ಮ ಬಳಿ ಇದ್ದ ಅಸ್ತ್ರಗಳೆಂದರೆ ನಮ್ಮ ಬೈಕುಗಳು ಮಾತ್ರ!

ಅಂತೂ ರಾತ್ರಿ ಹತ್ತಕ್ಕೆ ಮುಪ್ಪಾನೆ ಎಂಬ ಬೋರ್ಡು ನಮ್ಮ ಬಲಬದಿ ರಸ್ತೆಯಂಚಿಗೆ ನಿಂತದ್ದು ಕಣ್ಣಿಗೆ ಬೀಳುತ್ತಲೇ ಬಾಣದ ಗುರುತಿನ ಸೂಚನೆಗೆ ಸೈ ಎಂದು ಮಣ್ಣಿನ ರಸ್ತೆಯತ್ತ ಬೈಕ್ ತಿರುಗಿಸಿದೆವು. ಅಲ್ಲಿಯವರೆಗೆ ಗುರಿ ತಲುಪುವು ಧಾವಂತದಲ್ಲಿದ್ದವರಿಗೆ ಈಗ ಮತ್ತೊಂದು ಆತಂಕ ಶುರುವಾಯಿತು. ನಾವು ಫಾರೆಸ್ಟ್ ಆಫೀಸರಿಗೆ ಹೇಳಿದ್ದು, ಅವರು ಇಲ್ಲಿನ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಗೆ ತಿಳಿಸುತ್ತೇನೆ ನೀವು ಹೋಗಿ ಯಾವ ಸಮಸ್ಯೆ ಇಲ್ಲ ಎಂದಿದ್ದೇನೋ ಸರಿ. ಆದರೆ, ಅವರು ಇಲ್ಲಿಗೆ ದೂರುವಾಣಿ ಸೌಲಭ್ಯವಿಲ್ಲ ಎಂದಿರುವಾಗ ಆತನಿಗೆ ವಿಷಯ ಹೇಗೆ ತಲುಪಿಸುತ್ತಾರೆ? ಒಂದು ವೇಳೆ ಆತ ಇಲ್ಲಿ ಇಲ್ಲದೇ ಇದ್ದರೆ ಏನು ಮಾಡುವುದು? ಯಾರನ್ನಾದರೂ ಕೇಳೋಣವೆಂದರೆ ಅಲ್ಲಿಂದ ಮೊಬೈಲ್ ನೆಟ್ವರ್ಕ್ ಕೂಡ ಇಲ್ಲ….!!

ಏನಾದರಾಗಲಿ ಎಂದು ನಿಸರ್ಗಧಾಮದ ಗೇಟ್ ದಾಡುತ್ತಲೇ ನಾಲ್ಕಾರು ಬಾರಿ ಹಾರನ್ ಮಾಡಿದೆವು. ಹತ್ತು- ಹದಿನೈದು ನಿಮಿಷ ಕಳೆದ ಬಳಿಕ ದೂರದಿಂದ ಯಾರೋ ಟಾರ್ಚ್ ಹಾಕಿಕೊಂಡು ಬರುತ್ತಿರುವುದು ಕಂಡಿತು. ಅಷ್ಟರಲ್ಲೇ’ ಹೋಯ್..’ ಎಂಬ ಮಲೆನಾಡಿನ ವಿಶಿಷ್ಟ ಕೂಗು ಕೇಳಿತು. ನನಗೆ ಧೈರ್ಯ ಬಂತು. ಹೋಯ್ ಎಂದು ಮಾರುತ್ತರ ನೀಡಿದೆ. ಆ ಕಡೆಯಿಂದ “ಶಿವಮೊಗ್ಗದವರ..” ಎಂದರು. “ಹೌದು ಮಾರಾಯ್ರೆ… ನೀವು ಫಾರೆಸ್ಟ್ ಡಿಪಾರ್ಟ್ಮೆಂಟ್ನವರಾ..” ಎಂದೆ. ಮಾತಾಡುತ್ತಲೇ ಸಮೀಪಿಸಿದ ಆತ “ಹೌದು ನಾನೇ ಇಲ್ಲಿನ ಉಸ್ತುವಾರಿ ನೋಡಿಕೊಳ್ಳೋದು.. ಆರು ಗಂಟೆಗೆ ಬರುತ್ತಾರೆ ಎಂದಿದ್ರು ಸಾಹೇಬರು.  ಏಕೆ ಇಷ್ಟೊಂದು ತಡ” ಎಂದಿತು ಅಸಾಮಿ. ಏನಿಲ್ಲ, ಲಾಂಚ್ ಮಿಸ್ ಆಗಿ ಲೇಟಾಯ್ತು ಎಂದು ಅವರ ಹಿಂದೆ ಸಾಗಲಾರಂಭಿಸಿದೆವು. ಸುಮಾರು ಎರಡು ಕಿ.ಮೀ. ಸಾಗಿದ ಬಳಿಕ ಅಂತೂ ಅಲ್ಲೊಂದು ಬೀದಿ ದೀಪ ಉರಿಯುತ್ತಿದ್ದದ್ದು ಕಂಡಿತು!

ಊಟ ಮಾಡುವುದು? ಅಲ್ಲಿವರೆಗೆ ದಾರಿಯ ಹೆದರಿಕೆ, ಜಾಗಕ್ಕೆ ತಲುಪುತ್ತೀವೋ ಇಲ್ಲವೋ ಎಂಬ ಭಯ, ಅಲ್ಲಿ ಯಾರಾದರೂ ಇದ್ದಾರೋ ಇಲ್ಲವೋ ಎಂಬ ಭೀತಿಗಳ ನಡುವೆ ಮರೆತೇಹೋಗಿದ್ದ ಹಸಿವು ಮತ್ತೆ ಊಟದ ನೆನಪಾಗಿಸಿತು. ಕೇಳಿದರೆ, ಇಲ್ಲೇನು ಸಿಗುವುದಿಲ್ಲ, 15 ಮಿ.ಮೀ. ಹೋದರೆ ಕಾರ್ಗಲ್ ಸಿಗುತ್ತೆ ಅಲ್ಲಿಂದ ಏನಾದರೂ ಪಾರ್ಸಲ್ ತರಬೇಕು! ಅದು ಅಷ್ಟೊತ್ತಲ್ಲಿ? ಬಾರ್-ರೆಸ್ಟೋರೆಂಟ್ ಒಂದಿದೆ ಅಲ್ಲಿ ಮಾತ್ರ 12ಗಂಟೆವರೆಗೆ ಏನಾದರೂ ಸಿಕ್ಕುತ್ತೆ ಎಂದರು! ಸರಿ ಎಂದು ಒಬ್ಬರು ಬೈಕ್ನಲ್ಲಿ ಆತನನ್ನು ಕರೆದುಕೊಂಡು ಕಾರ್ಗಲ್ಗೆ ಹೋಗಿ ಊಟ ತರುವುದು, ಉಳಿದವರು ಅಲ್ಲೇ ಎದುರಿನ ಹಿನ್ನೀರಿನಂಚಿನಲ್ಲಿ ಬೆಂಕಿಹಾಕಿ ನೀರು ಕಾಯಿಸಿಕೊಂಡು ಸ್ನಾನ ಮುಗಿಸುವುದು ಎಂದು ಪ್ರಯಾಣದ ಆಯಾಸದ ನಡುವೆಯೂ ಚಕಚಕ ಸಿದ್ಧರಾದೆವು.

ಕಾರ್ಗಲ್ನಿಂದ ಊಟ ಬರುವ ಹೊತ್ತಿಗೆ ಸ್ನಾನ ಮುಗಿಸಿದ್ದ ನಾವು ನೀರಲ್ಲಿ ಕಾಲು ಬಿಟ್ಟುಕೊಂಡು ಬಂಡೆ ಮೇಲೆ ಕೂತು ಅಮಾವಾಸ್ಯೆಯ ರಾತ್ರಿ ನಕ್ಷತ್ರ ಎಣಿಸುತ್ತಿದ್ದೆವು. ದೂರದಲ್ಲಿ ಹುಲಿ ಗರ್ಜನೆ ಮೊಳಗಿದ್ದನ್ನು ನಾನಷ್ಟೇ ಗುರುತಿಸಲು ಸಾಧ್ಯವಾಯಿತು. ಉಳಿದಿಬ್ಬರು ಬಯಲುಸೀಮೆಯವರಾದ್ದರಿಂದ ಅವರಿಗೆ ಅದು ಯಾವುದೋ ಪ್ರಾಣಿಯ ಕೂಗು ಎಂಬುದಷ್ಟೇ ಗೊತ್ತಾಗಿತ್ತು. ರಾತ್ರಿ ಊಟ ಮಾಡಿ ಮಲಗುವ ಹೊತ್ತಿಗೆ 2ಗಂಟೆ!

ಮಾರನೇ ದಿನ ಎದ್ದು ನೋಡಿದರೆ ಬಾಗಿಲು ತೆರೆಯುತ್ತಲೇ ಕಣ್ಣು ಹಾಯಿಸುವವರೆಗೆ ನೀರ ರಾಶಿ!! ರಾತ್ರಿಯ ಕತ್ತಲೆಯಲ್ಲಿ ನಾವು ಇಳಿದುಕೊಂಡಿದ್ದ ಬಿಡಾರದ ಎದುರು ನೀರಿದೆ ಎಂಬುದು ಗೊತ್ತಿತ್ತೇ ಹೊರತು ಅದರ ಆಳ- ವಿಸ್ತಾರಗಳ ಕಿಂತಿತ್ತೂ ಕಲ್ಪನೆಯೇ ಇರಲಿಲ್ಲ! ಬೆಳಿಗ್ಗೆಯ ತಿಂಡಿ ಮುಗಿಸಿಕೊಂಡು ಮತ್ತೆ ಹೊರಟದ್ದು ನೀರಿನ ತೀರದ ಗುಂಟ ಒಂದು ಲಾಂಗ್ ವಾಕ್! ಮಧ್ಯಾಹ್ನದ ಹೊತ್ತಿಗೆ ವಾಪಸ್ ಬಂದು ಮತ್ತೆ ಅಲ್ಲೇ ಇದ್ದ ಬೋಟನ್ನೇರಿ ಎದುರಿನ ದ್ವೀಪದತ್ತ ಹೊರಟರೆ ಅದರ ಅನುಭವವೇ ಬೇರೆ. ನಾವೇ ದೋಣಿಯ ಹರಿಗೋಲು ಹಾಕುತ್ತಾ ದ್ವೀಪ ಮುಟ್ಟಿ ಕಾಡುಹೊಕ್ಕರೆ ಅಬ್ಬಾ ಎಂತಹ ದಟ್ಟಣೆಯ ಕಾಡೆಂದರೆ ಕೆಲವು ಕಡೆ ನಾವು ಅಕ್ಷರಶಃ ನುಗ್ಗಿ ನಡೆಯುವುದೇ ಕಷ್ಟವಾಗುತ್ತಿತ್ತು! ದ್ವೀಪದ ಇನ್ನೊಂದು ಬದಿಗೆ ತಲುಪುವ ಹೊತ್ತಿಗೆ ಮಧ್ಯಾಹ್ನ ಮೂರೂವರೆ! ಆಚೆ ಬದಿಯ ಸಮತ್ತಟ್ಟಾದ ನೆಲದಾಳದ ನೀರಲ್ಲಿ ಒಂದು ತಾಸು ಈಜಾಡಿ ಮತ್ತೆ ದಡದಲ್ಲಿ ಸೂರ್ಯಸ್ನಾನ (!) ಮಾಡಿ ಮತ್ತೆ ದ್ವೀಪವೇರಿ ಇಳಿದು ಬೋಟನ್ನೇರಿ ವಾಪಸ್ ಬಂದಾಗ ನಮ್ಮೊಡನಿದ್ದ ಆತ ಹೇಳಿದ್ದು “ಅಲ್ಲಿ ಸಿಕ್ಕಾಪಟ್ಟೆ ಮೊಸಳೆ ಇರ್ತವೆ, ಜೊತಿಗೆ ಇದು ಹಿನ್ನೀರು ಅಲ್ವ ಸುಳಿ ಜಾಸ್ತಿ, ಎಲ್ಲಿ ಗಟ್ಟಿ ನೆಲ, ಎಲ್ಲಿ ಉಸುಕು ಎನ್ನೋದು ಗೊತ್ತಾಗಕ್ಕಿಲ್ಲ.. ನೀವು ಅಲ್ಲಿ ಈಜುವಾಗ ನನಗೆ ಎದೆ ಪುಕುಪುಕು ಅಂತಿತ್ತು… ” ಎಂದು!!

ನಮಗೆ ಅಲ್ಲಿನ ನೀರಿನ ಸುಳಿಯದ್ದಾಗಲೀ, ಮೊಸಳೆಯದ್ದಾಗಲೀ ಕಲ್ಪನೆಯೇ ಇರಲಿಲ್ಲ!! ಅಂತೂ ಮುಪ್ಪಾನೆಯ ಮರೆಯದ ಅನುಭವ ಜೀವನವಿಡೀ ಮೆಲುಕುಹಾಕುವಂತಾಗಿದ್ದು ಮಾತ್ರ ಅಂತಹ ಅಚ್ಚರಿ, ಭೀತಿಗಳಿಂದಲೇ!!

Advertisements

ಗಣಿ ದೇಣಿಗೆಯೂ,… ಬಣ್ಣದ ಸೀರೆಯೂ..

ಸಮೀಕ್ಷೆಯ ದಾರಿಯಲ್ಲಿ...

ಸಮೀಕ್ಷೆಯ ದಾರಿಯಲ್ಲಿ...

 

ಆ ಊರಿನಲ್ಲಿ ಅವತ್ತು ಚುನಾವಣಾ ಪ್ರಚಾರ ಸಭೆ ನಡೆಯುವುದಿತ್ತು. ಗಣಿ ದಣಿಯೊಬ್ಬರು ಎಂಎಲ್ಎ ಯಾಗಿ ಹೋಗಲು ಆ ಊರನ್ನೇ ಆಯ್ಕೆಮಾಡಿಕೊಂಡಿದ್ದರು. ಹಾಗಾಗಿ ಸಹಜವಾಗಿಯೇ ಇಡೀ ಊರಿನ ತುಂಬ ವಿಚಿತ್ರ ಹುಮ್ಮಸ್ಸು ಕಾಣುತ್ತಿತ್ತು. ಚುನಾವಣಾ ಸಮೀಕ್ಷೆಗೆ ಹೋದ ನಾವು, ಸಹಜವಾಗಿ ರಸ್ತೆ, ಹೋಟೆಲ್, ಬೀಡಾ ಅಂಗಡಿ, ರೈತರು, ಕೂಲಿಕಾರ್ಮಿಕರನ್ನು ಮಾತನಾಡಿಸತೊಡಗಿದೆವು.

ಈ ಸಾರಿ ಬಿಡ್ರಿ ಸರ, ದುಡ್ಡು ಚೆಲ್ಲಾಡತೈತಿ,.. ಇನ್ನೂ ಚುನಾವಣಿ ಏಳೆಂಟು ದಿನ ಐತ್ರಿ, ಈಗಲೇ ಅವರು ಕರ್ಚು ಮಾಡಿದ್ದು ಏನಿಲ್ಲಂದ್ರೂ 20 ಕೋಟಿ ಮೀರಿರಬೈದ್ರಿ.. ಅಂದ ಬಾರ್ ಒಂದರ ಎದುರಿನ ಬೀಡಾ ಅಂಗಡಿಯಾತ. ಹೇಳಿಕೇಳಿ ಬಾರ್ ಎದುರಿನ ಬೀಡಾ ಅಂಗಡಿ ಎಂದರೆ ಅದು ಎಲ್ಲಾ ಸತ್ಯಗಳಿಗೆ ತುಸು ಹತ್ತಿರದ ಮೂಕಸಾಕ್ಷಿ! ಇರಬಹುದು ಎಂದುಕೊಂಡು ಮುಂದುವರಿದೆವು.

ಬಸ್ ನಿಲ್ದಾಣದಲ್ಲಿ ಹಳ್ಳಿಗೆ ಹೋಗಲು ಬಸ್ಸಿಗಾಗಿ ಕಾದು ನಿಂತಿದ್ದ ರೈತನೊಂದಿಗೆ ಮಳೆ- ಬೆಳಿ ವಿಚಾರ ಮಾತಾಡುತ್ತಾ, ನಮ್ಮ ದಾರಿಗೆ ಎಳೆದುಕೊಂಡೆವು. ಚುನಾವಣೆ ಬಿಗಿ ಐತ್ರಿ, ನನ್ ಜನ್ಮದಾಗೇ ಇಷ್ಟೊಂದು ದುಡ್ಡು, ಭರಾಟೆ ಕಂಡಿದ್ದಿಲ್ರಿ ಎಂದರು ಯಜಮಾನರು. ಸರಿ, ಏನಕ್ಕೆ ಕರ್ಚು ಮಾಡ್ತಾರ್ರಿ, ಆಯೋಗ ಈ ಬ್ಯಾನರು, ಕಟೌಟ್ ಹಾಕೋಂಗಿಲ್ಲ ಅಂದೈತಲ್ರಿ ಎಂದು ಹಣ ಹರಿಯುವ ದಾರಿಗಳ ಶೋಧನೆಗೆ ಚಾಲನೆ ಕೊಟ್ಟೆವು (ಮೊದಲೇ ಗೊತ್ತಿದ್ದರೂ ಕುತೂಹಲಕ್ಕಾಗಿ). ಆಗ ಅವರು, ಅಯ್ಯೋ ಆಯೋಗ ಮಾಡಿದ್ದು ಅಲ್ಲೇ ಇರ್ತೈತೆ, ಇವರು ಮಾಡೋದು ಮಾಡ್ತಾರ್ರಿ,.. ಮೊನ್ನೆ ನೋಡ್ರಿ ನಾಮಪತ್ರ ಹಾಕೋ ಸಭೆ ಮಾಡಿದ್ರಲ್ಲ ಆವಾಗ ಕನಿಷ್ಠ ಅಂದ್ರೂ 60 ಟ್ರ್ಯಾಕ್ಟರ್ ಜನ ಬಂದಿದ್ರಿ, ಒಂದೊಂದು ಟ್ರ್ಯಾಕ್ಟರಿಗೆ 10-12 ಸಾವಿರ ಕೊಟ್ಟಾರಿ, ಹಂಗೇ ಜೀಪು, ಕಾರು, ಬಸ್ ಬ್ಯಾರೆ ಲೆಕ್ಕಾರಿ, ಮತ್ತೆ ಹಳ್ಳಿಗಳಿಗೆ ಎಲ್ಲಾ ಮಹಿಳಾ ಸಂಘ, ಹುಡುಗರ ಸಂಘಗೊಳಿಗೆಲ್ಲಾ ತಲಾ ಒಂದೊಂದು ಲಕ್ಷ ಕೊಡ್ತೀವಿ ಅಂದಾರ್ರಿ,.. ಈಗಾಗಲೇ ಅಧ್ಯಕ್ಷರು, ಉಪಾಧ್ಯಕ್ಷರಿಗೆಲ್ಲಾ 10 ಸಾವಿರ ರೂಪಾಯಿ ಸ್ವಂತಕ್ಕೆ ಅಂತ ಕೊಟ್ಟಾರ್ರಿ… ಎಂದರು.

ಅವರ ಮಾತನ್ನ ಕೇಳಿ ನಗುಬಂತು. ನಾವಿದ್ದ ಸ್ಥಿತಿಯಲ್ಲಿ ನಗುವಲ್ಲದೆ ಇನ್ನೇನೂ ವ್ಯಕ್ತಪಡಿಸುವ ಸ್ಥಿತಿ ಇರಲಿಲ್ಲ!

ಮೂರು ವರ್ಷಗಳ ಹಿಂದೇ ಇದೇ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಬಗ್ಗೆ ವಾರಪತ್ರಿಕೆಯೊಂದಕ್ಕೆ ಲೇಖನ ಮಾಡುತ್ತಾ, ಮೌನಕ್ರಾಂತಿ ಎಂದು ಬಣ್ಣಿಸಿದ್ದೆವು. ಇದೀಗ ಅದೇ ಸಂಘಗಳೇ ಕಳೆದ ಚುನಾವಣೆಯಲ್ಲಿ ಸಾಕಷ್ಟು ಫಲಾನುಭವಿಗಳಾಗಿ ಹೊರಹೊಮ್ಮಿವೆ. ಯಾವ ಸಂಘಗಳು ಮಹಿಳಾ ಸ್ವಾವಲಂಬನೆಯ ವೇದಿಕೆಗಳಾಗಬೇಕಿತ್ತೋ ಅವೇ ಇಂದು ಕೇವಲ ಹಣದ ಆಮಿಷಕ್ಕೆ ಬಿದ್ದು ರಾಜಕೀಯ ಪ್ರಬುದ್ಧತೆ, ಸ್ವಾತಂತ್ರ್ಯವನ್ನು ಹರಾಜಿಗಿಟ್ಟಿವೆ. ಈ ಸಂಘಗಳು ಗ್ರಾಮೀಣ ಮಹಿಳೆಯರಿಗೆ ಒಂದಿಷ್ಟು ವ್ಯವಹಾರಿಕ ಜಾಣ್ಮೆಯನ್ನು ಕಲಿಸಿವೆ, ಕೆಲಮಟ್ಟಿಗೆ (ಕೆಲವಾದರೂ) ಆರ್ಥಿಕವಾಗಿ ಮಹಿಳೆಯರನ್ನು ಸದೃಢಗೊಳಿಸಿವೆ ಎಂಬುದು ನಿಜವಾದರೂ, ರಾಜಕೀಯ ಪಕ್ಷಗಳ ನೈತಿಕ ದಿವಾಳಿತನದ ಪ್ರತೀಕವಾಗಿ ಈ ಸಂಘಗಳೂ ಕೂಡ ಅವರ ಅಸ್ತ್ರಗಳಾಗಿ ಬಳಕೆಯಾಗುತ್ತಿವೆ ಎಂಬುದಕ್ಕೆ ಕಳೆದ ಚುನಾವಣೆ ನಿದರ್ಶನವಾಯಿತು. ಮೊನ್ನೆ ಸದನದಲ್ಲಿ ಕೂಡ ಈ ವಿಷಯ ಪ್ರಸ್ತಾಪವಾಗಿದೆ. ಆದರೆ, ನಮ್ಮ ಶಾಸಕರುಗಳೇ ದುಡ್ಡು ಕೊಟ್ಟು ಸುಸ್ತಾಗಿದ್ದೇವೆ ಎಂದು ಅಲವತ್ತುಕೊಂಡಿರುವುದು ವಿಪರ್ಯಾಸ. ಬಹುಷಃ ಗೆದ್ದವರು ಯಾರೂ ಅದನ್ನು ಹೇಳಿಲ್ಲ!

ಗ್ರಾಮೀಣ ಮಹಿಳೆಯ ಸಂಘಟನೆಯೊಂದು (ಆರಂಭದಲ್ಲೇ ಸಾರಾಯಿ ಮತ್ತು ಮದ್ಯದ ಲಾಬಿಗಳ ಕೈಗೊಂಬೆಗಳಾಗಿ ದಿಕ್ಕುತಪ್ಪಿದ್ದವು ಎಂಬ ಮಾತು ಬೇರೆ) ಹೇಗೆ ರಾಜಕೀಯ ದಾಳವಾಗಿ ಬದಲಾಗುತ್ತದೆ ಎಂಬುದಕ್ಕೆ ನಿದರ್ಶನವಾದಂತೆಯೇ ಈ ಬೆಳವಣಿಗೆ ರಾಜಕೀಯ ಪಕ್ಷಗಳು ಹೇಗೆ ಎಂತಹ ಸಂಘಟನೆಯನ್ನೂ ಹಣಬಲದ ಮೇಲೆ ತಮ್ಮ ಹಿಡಿತಕ್ಕೂ ತೆಗೆದುಕೊಳ್ಳುತ್ತವೆ ಎಂಬುದಕ್ಕೂ ಉದಾಹರಣೆಯಲ್ಲವೇ?

ಹೀಗೆ ಏನೇನೋ ಯೋಚಿಸುತ್ತಿರುವಾಗಲೇ, ಚುನಾವಣಾ ಸಭೆಗಳಲ್ಲಿ ಯೂನಿಫಾರ್ಮನಂತೆ ಒಂದೇ ಬಗೆಯ ಸೀರೆಯುಟ್ಟು ಮುಂದಿನ ಸಾಲುಗಳಲ್ಲಿ ಕೂರುತ್ತಿದ್ದ ನೂರಾರು ಹೆಣ್ಣುಮಕ್ಕಳ ಚಿತ್ರ ನೆನಪಿಗೆ ಬರುತ್ತಿದೆ…. ಹಾಗೇ ಆ ರೈತ ಹೇಳಿದ ಸಂಘಗಳಿಗೆ ಗಣಿ ದಣಿ ನೀಡಿದ ದೇಣಿಗೆ ಕೂಡ…!

ಶೇಂಗಾ ರುಚಿ ಮತ್ತು ಅಭಿವೃದ್ಧಿ ಬೊಗಳೆ

ಅಂದಿಗೆ ಮನೆ ಬಿಟ್ಟು ಒಂಬತ್ತು ದಿನವಾಗಿತ್ತು. ಬೆಂಗಳೂರಿನ ಕೋರಮಂಗಲದಿಂದ ಮೇ 1ರಂದು ಆರಂಭವಾದ ನಮ್ಮ ಪಯಣ ಕಲ್ಪವೃಕ್ಷಗಳ ನಾಡು ತುಮಕೂರು, ನನ್ನೂರು ಮಲೆನಾಡಿನ ಶಿವಮೊಗ್ಗ, ಚಿಕ್ಕಮಗಳೂರು, ಕರಾವಳಿಯ ಮಂಗಳೂರು, ಉಡುಪಿ, ಕಾರವಾರ, ಶಿರಸಿಗಳನ್ನು ಹಾದುಕೊಂಡು ಗಡಿನಾಡು ಬೆಳಗಾವಿಗೆ ಬಂದು ಮುಟ್ಟಿತ್ತು.

ಬೆಳಗಾವಿ ಚೇತೋಹಾರಿ ಹವಾ, ಅಲ್ಲಿನ ‘ಕುಂದಾ’ದಂತೆಯೇ ಹುಮ್ಮಸ್ಸು ತುಂಬಿತ್ತು. ಆ ವರೆಗೆ ಸುಮಾರು 2000 ಕಿ.ಮೀ. ದೂರವನ್ನು ಸುತ್ತಿದ್ದರೂ ಬೆಳಗಾವಿಯ ನೆಲಕ್ಕೆ ಸಂಜೆ ಏಳರ ಹೊತ್ತಿಗೆ ಕಾಲಿಡುತ್ತಲೇ ಹಾಯ್ ಎನಿಸುವಂತಿತ್ತು. ಮಲೆನಾಡಿನ ಬಿರುಬೇಸಿಗೆಯ ಧಗೆ, ಕಾಫಿ ನಾಡಿನ ಉರಿಬಿಸಿಲು, ಕರಾವಳಿಯ ಕಸಿವಿಸಿಯ ಶೆಕೆಗಳ ಬಳಿಕ ಶಿರಸಿಯಲ್ಲಿ ಎರಡು ದಿನ ತಂಗಿ, ಅಲ್ಲಿಂದಲೇ ಸುದ್ದಿಗಳನ್ನು ನೆಟ್ ಮೂಲಕ ಸಿಲಿಕಾನ್ ವ್ಯಾಲಿಗೆ ತೇಲಿಬಿಟ್ಟು ಮೈ ಕೊಡವಿ ಬೆಳಗಾವಿಯತ್ತ ಹೊರಟಾಗ ಈತನಕ ನಮ್ಮದೇ ಮನೆ, ಹಿತ್ತಿಲಲ್ಲೇ ಇದ್ದೆವು, ಇದೀಗ ಬಿಸಿಲ ನಾಡಿಗೆ ಹೋಗಬೇಕಲ್ಲ, ಅದೂ ಕನ್ನಡಿಗರೇ ಅಪರೂಪದ ಗಡಿಯಂಚಿಗೆ ಎಂಬ ಸಣ್ಣ ಅಳುಕು ಇದ್ದದ್ದು ಸಹಜ. ಅದೇ ಹೊತ್ತಿಗೆ ಗಡಿನಾಡ ಬದುಕನ್ನು ಹತ್ತಿರದಿಂದ ಕಾಣುವ ಅವಕಾಶ ಸಿಕ್ಕ ಖುಷಿ, ಕುತೂಹಲವೂ ಇತ್ತು. ಯಲ್ಲಾಪುರ, ಖಾನಾಪುರಗಳ ದಟ್ಟ ಕಾಡಿನ ನಡುವೆ ಸಂಜೆಯ ಹೊತ್ತಲ್ಲಿ, ವಾಹನ ದಟ್ಟಣೆಯಿಲ್ಲದ ಸುಂದರ ರಸ್ತೆಯಲ್ಲಿ ಸಾಗುವುದೇ ಒಂದು ಹಿತಾನುಭವ. ಖಾನಾಪುರ ಸಮೀಪಿಸುತ್ತಿದ್ದಂತೆ ಕಾಡು ಕರಗುತ್ತಾ ಬಯಲನಾಡಿನ ಇಷ್ಟಿಷ್ಟೇ ದರ್ಶನವಾಗತೊಡಗಿತು. ಬೆಳಗಾವಿ ತಲುಪುವ ಹೊತ್ತಿಗೆ ಏಳು ಗಂಟೆ! ಅದೂ ನಮ್ಮ ರವಿಯ ಅಮೋಘ ಕಾರುಚಾಲನೆಯಿಂದಾಗಿ ಆ ಪಯಣ ಇನ್ನಷ್ಟು ಹಿತವಾಗಿತ್ತು. ಹೋಗಿ ಬೆಳಗಾವಿಯ ಪತ್ರಕರ್ತ ಮಿತ್ರರನೇಕರಿಗೆ ಮೊದಲು ಫೋನಾಯಿಸಿ ಮಾತಾಡಿಸಿ ಬೆಳಿಗ್ಗೆ ಸಿಗುವುದೆಂದು ತೀರ್ಮಾನಿಸಿ, ಖಾನಾವಳಿಯನ್ನು ಅರಸಿ ಹೊರಟೆವು.

ಬೆಂಗಳೂರಿನಲ್ಲಿ ಮಸಾಲೆಭರಿತ ಊಟ- ತಿಂಡಿಗಳದ್ದೇ ಕಾರುಬಾರಿನಿಂದ ಬಿಡುಗಡೆ ಎಂದು ರುಚಿ-ರುಚಿಯಾಗಿದ್ದ ಜೋಳದ ರೊಟ್ಟಿ, ಎಣ್ಣೆಗಾಯಿ ಪಲ್ಯದ ಭರ್ಜರಿ ಊಟ ಮಾಡಿ ಬಂದು ಮಲಗಿದರೆ ಬೆಳಗಾಗಿದ್ದು ಏಳು ಗಂಟೆಗೇ!

ಎದ್ದು ಗೆಳೆಯರನ್ನು ಭೇಟಿಯಾಗಿ, ತಿಂಡಿ ಮುಗಿಸಿ ನಮ್ಮ ಅಪರಿಚಿತ ದಾರಿಯ ಪಯಣಕ್ಕೆ ಆರಂಭ ನೀಡುವ ಹೊತ್ತಿಗೆ 10 ಗಂಟೆಯಾಗಿತ್ತು. ಅಲ್ಲಿಂದ ಹೋದದ್ದು ಯಮಕನಮರಡಿ ಎಂಬ ಊರಿಗೆ. ನಾನು ಆ ಊರಿನ ಹೆಸರನ್ನು ಮೊದಲ ಬಾರಿ ಕೇಳಿದಂದಿನಿಂದಲೂ ಅದೇನೋ ವಿಚಿತ್ರಹೆಸರು, ಊರು ಹೇಗಿರಬಹುದು ಎಂಬ ಕುತೂಹಲ ಹಾಗೇ ಇತ್ತು. ಬೆಳಗಾವಿ- ಪೂನಾ ಹೆದ್ದಾರಿಯಂಚಿನ ಈ ಊರು ವಿಧಾನಸಭಾ ಕ್ಷೇತ್ರದ ಕೇಂದ್ರವಾದರೂ ನಮ್ಮ ಕಡೆಯ ಚಿಕ್ಕ ಹೋಬಳಿ ಕೇಂದ್ರಕ್ಕಿಂತ ಚಿಕ್ಕದೇ. ಬಡತನವೇ ಮೈವೆತ್ತಿದಂತೆ ಕಾಣುವ ಊರಿನ ಜನರ ಹೃದಯ ಶ್ರೀಮಂತಿಕೆ ಮಾತ್ರ ದೊಡ್ಡದೇ! ಬೀದಿಯಂಚಿನ ಮರದ ನೆರಳಲ್ಲಿ ಚಪ್ಪಲಿ ರಿಪೇರಿ ಮಾಡಿಕೊಂಡಿದ್ದ ಮಲ್ಲಿಕಾರ್ಜುನನ ಬಳಿ ಹೋದವನೇ ಆತನ ಪಾಲಿಥಿನ್ ಹಾಸಿಗೆಯ ಮೇಲೆ ಕೂತು ಮಾತಿಗೆ ಆರಂಭಿಸಿದೆ. 20 ವರ್ಷದಿಂದ ಇಲ್ಲೇ ಈ ಕಾಯಕ ಮಾಡಿಕೊಂಡಿದ್ದೀನಿ. ಸರ್ಕಾರದ ಯಾವ ಯೋಜನೆಗಳಿಂದಲೂ ನನಗೆ ಬಿಡಿಗಾಸಿನ ಅನುಕೂಲವಾಗಿಲ್ಲ ಎಂದ ಆತನ ಮಾತಿನಲ್ಲಿ ವಂಚನೆ ಇಲ್ಲ ಎಂಬುದು ಅವನ ಸ್ಥಿತಿಯಿಂದಲೇ ಗೊತ್ತಾಗುತ್ತಿತ್ತು. ಆದರೂ, ಈ ಸಾರಿ ಓಟು ಹಾಕ್ತೀರಾ ಎಂದರೆ, ಅದಕ್ಕವರು, ಹೂನ್ರಿ ಸರ ನಮ್ಗೆ ಅನುಕೂಲವಾಗ್ಲಿ, ಇಲ್ದೆ ಇರ್ಲಿ, ಓಟು ಅಂತೂ ಹಾಕ್ಬೇಕಲ್ರಿ… ಎಂದರು! ಅಬ್ಬಾ ಜನಸಾಮಾನ್ಯರ ಸಾಕ್ಷಿಪ್ರಜ್ಞೆಯೇ… ಎನಿಸಿತು. ಒಳ್ಳೇದು ಬರ್ತೀನಿ ಎಂದು ಅಲ್ಲಿಂದ ಎದ್ದು ಹೊರಟಾಗಿ ಭಾರತದ ಪ್ರಜಾಪ್ರಭುತ್ವದ ಯಶಸ್ಸಿನ ಗುಟ್ಟು ತಲೆಯಲ್ಲಿ ಗಿರಕಿ ಹೊಡೆಯುತ್ತಿತ್ತು.

ಅಲ್ಲಿಂದ ಸೀದಾ ಹುಕ್ಕೇರಿಗೆ ಹೋಗಿ, ಅಲ್ಲಿನ ಮೂವರು ಸಚಿವರ ನಡುವಿನ ಚುನಾವಣಾ ಜಿದ್ದಾಜಿದ್ದಿ ಬಗ್ಗೆ ಮಾಹಿತಿ ಪಡೆದು, ಮುಲ್ಲಾ ಖಾನಾವಳಿಯಲ್ಲಿ ಜೀವಮಾನದ ಶ್ರೇಷ್ಠ ಜೋಳದ ರೊಟ್ಟಿ ಊಟ ಹೊಡೆದು ಅದನ್ನೇ ನೆನೆಯುತ್ತಾ ಚಿಕ್ಕೋಡಿಯತ್ತ ಹೊರಟೆವು.

ಹುಕ್ಕೇರಿಯಿಂದ ಎಂಟು ಕಿಮೀ ದೂರದ ದಿಬ್ಬದ ತಿರುವನ್ನು ಏರುತ್ತಿದ್ದ ಕಾರನ್ನು ದಿಡೀರ್ ನಿಲ್ಲಿಸುವ ಮನಸ್ಸಾಯಿತು. ರವಿ ಕಾರ್ ನಲ್ಸಿ ಎಂದೆ. ಯಾವಾಗ್ಲೂ ಭೂಮಿ ಉಳುವವರು, ಕುರಿಗಾಯಿಗಳು, ನೀರು ಹೊತ್ತುಕೊಂಡು ಹೋಗುವ ಹೆಂಗಳೆಯರು, ಬುತ್ತಿಹೊತ್ತುಕೊಂಡು ಹೊಲದತ್ತ ಹೊರಟ ಮಕ್ಕಳು, ಹೊಲದಲ್ಲಿ ದುಡಿಯುತ್ತಿದ್ದ ರೈತ ಮಹಿಳೆಯರು ಕಾಣುತ್ತಲೇ ಕಾರು ನಿಲ್ಲಿಸು ಎನ್ನುತ್ತಿದ್ದ ನನ್ನನ್ನು ಅಷ್ಟೊತ್ತಿಗಾಗಲೇ ಅರ್ಥಮಾಡಿಕೊಂಡಿದ್ದ ರವಿ, ಕಾರು ನಿಲ್ಲಿಸುವ ಮೊದಲು ಅಂಥವರು ಯಾರಾದರೂ ಇದಾರ ಎಂದು ಸುತ್ತಲೂ ನೋಡತೊಡಗಿದರು. ನಾನು ರೀ,.. ಇಲ್ಲೇ ನಿಲ್ಸಿ… ಎಂದು ಮತ್ತೆ ಹೇಳಿದೆ. ಕಾರು ನಿಲ್ಲುತ್ತಲೇ ಇಳಿದು ಎದುರಿನ ಪುಟ್ಟ ಹುಲ್ಲಿನ ಜೋಪಡಿಯತ್ತ ಹೆಜ್ಜೆ ಹಾಕತೊಡಗಿದೆ. ಜೋಪಡಿಯ ಎದುರಿನ ಜಾಲಿ ಮರದಡಿ ಆ ಅಜ್ಜ ಕೂತಿದ್ದರು. ಅವರು ಸಾವಂತ್ ಅಜ್ಜ. 80 ವರ್ಷದ ಇಳಿಪ್ರಾಯದಲ್ಲೂ ಆಗ ತಾನೆ ಕೂರಿಗೆ ಹೊಡೆದು ಬಂದಿದ್ದರು. ಬಂದು ಊಟ ಮಾಡಿ ಮರದ ನೆರಳಲ್ಲಿ ಎಲೆಯಡಿಕೆ ಬಾಯಾಡುತ್ತ ಕುಳಿತಿದ್ದರು. ನನ್ನನ್ನು ನೋಡಿದವರೆ ಏನೂ ಅರ್ಥವಾಗದವರಂತೆ ನಕ್ಕರು. ನಮಸ್ಕಾರ್ರಿ,.. ಯಜಮಾನ್ರೆ ನಿಮ್ಮೂರಲ್ಲಿ ಯಾವ ಪಕ್ಷ ಜೋರೈತ್ರಿ… ಎಂದು ಅವರದೇ ಮಾತಿನಂತೆ ಕುಶಲೋಪರಿಗೆ ಆರಂಭಿಸಿದೆ. ಅಜ್ಜ ಯಾವ ಪಕ್ಷ,.. ಅಂತೀರಾ ಎಲ್ಲಾ ಐತ್ರಿ.. ಎಂದರು. ಹ್ಯಾಂಗ ನಿಮ್ ಕಡಿ ಕೆಲಸ- ಕಾರ್ಯ ಛಲೋ ಆಗೇವೇನ್ರಿ,.. ಎಂದಾಗ,.. ಆಗ್ಯಾವೇ.. ಆಗ್ಯಾವೇ… ನೋಡ್ರಿ… ಹಿಂಗಾ… ಕುಡಿಯೂ ನೀರಿಗೆ ಮೂರು ಮೈಲ ಹೋಗಬೇಕಾಗೈತಿ… ಅಂದ್ರ ಗೊತ್ತಾಗ್ತದಲ್ರಿ… ಎಂದರು!

ಹೌದು, ಅಜ್ಜನ ಮನೆಯೊಂದೇ ಅಲ್ಲ, ಎಲಿ ಮುನವಳ್ಳಿ ಎಂಬ ಆ ಊರಿನ ಸರಿಸುಮಾರು 50ಕ್ಕೂ ಹೆಚ್ಚು ಮನೆಗಳಿಗೆ ಕುಡಿಯುವ ನೀರೊಂದೇ ಅಲ್ಲ, ದನಕರುಗಳಿಗೆ ಕೂಡ ಹನಿ ನೀರು ಬೇಕೆಂದರೆ ಕನಿಷ್ಠ 2 ಕಿ.ಮೀ. ಹೋಗಬೇಕು. ಅದೂ ಕೆಲವು ತೋಟದ ಬಾವಿಗಳ ಮಾಲೀಕರು ನೀರು ಕೊಟ್ಟರೆ, ಇಲ್ಲವಾದರೆ ನಾಲ್ಕು ಕಿ.ಮೀ. ದೂರದಿಂದ ನೀರು ತರಬೇಕು. ಅಜ್ಜನೊಂದಿಗೆ ಮಾತನಾಡಿ, ಅವರ ಕಷ್ಟ- ಸುಖ ಕೇಳಿದ ಮೇಲೆ, ಕಳೆದ ಐದು ವರ್ಷದಿಂದ 6 ಅಡಿ ಅಗಲ, 8 ಅಡಿ ಉದ್ದದ ಐದಡಿ ಎತ್ತರವೂ ಇಲ್ಲದ ಕಬ್ಬಿನ ರವುದೆಯ ಗುಡಿಸಲಿನಲ್ಲೇ ಕಾಲಕಳೆಯುತ್ತಿರುವುದಾಗಿಯೂ, ಹೆಂಡತಿ, ಮಗ, ಸೊಸೆಯ ತಮ್ಮ ಕುಟುಂಬಕ್ಕೆ ಹಸಿರು ಪಡಿತರ ಚೀಟಿ ಕೂಡ ಸಿಕ್ಕಿಲ್ಲ ಎಂಬುದೂ ಗೊತ್ತಾಯಿತು. ಅಂತಹ ಸ್ಥಿತಿಯಲ್ಲೂ ನಾವು ಬೆಂಗಳೂರಿನಿಂದ ಬಂದಿರೋದು ಎಂದು ಕೇಳಿ ಖುಷಿಪಟ್ಟ ಅಜ್ಜಿ- ಅಜ್ಜಿ ಮನೆ (ನಮಗೆ ಜೋಪಡಿ ಎನಿಸಿದರೂ ಅವರಿಗೆ ಅದುವೇ ಅರಮನೆ!) ಒಳಗೆ ಕರೆದು ಟೀ- ಕಾಫಿ ಕೊಡಲಾ ಎಂದರು! ಬೇಡ, ನಮ್ಮ ಪಯಣ ಬಾಳ ದೂರ ಸಾಗಬೇಕು. ಒಂದು ಲೋಟ ನೀರು ಕೊಡಿ ಸಾಕು ಎಂದರೂ ಕೇಳದೆ ಕೊನೆಗೆ ಅವರೇ ಬೆಳೆದಿದ್ದ ಶೇಂಗಾ (ಕಡಲೆಕಾಯಿ) ಮತ್ತು ಚೂರು ಬೆಲ್ಲ ಕೊಟ್ಟರು. ಅಲ್ಲೇ ಕೂತು ಅವರೊಂದಿಗಿನ ಮಾತಿನ ಸಿಹಿಯನ್ನೂ ಬೆರೆಸಿ ತಿಂದ ಶೇಂಗಾದ ರುಚಿ ಇನ್ನೂ ಆರಿಲ್ಲ… ಹಾಗೇ ನಮ್ಮ ರಾಜಕಾರಣಿಗಳ ಅಭಿವೃದ್ಧಿಯ ಬೊಗಳೆಗಳು ಮತ್ತು ವಾಸ್ತವದ ನೋವುಗಳ ವೈರುಧ್ಯ ತಂದ ತಳಮಳ ಕೂಡ ಹಾಗೇ ಇದೆ… ಈಗಲೂ…

(ಇದು ಚುನಾವಣಾ ಸಮೀಕ್ಷೆಯ ಪ್ರವಾಸದ ಒಂದು ಅನುಭವ. ಪುರುಸೊತ್ತಾದಾಗೆಲ್ಲಾ ಆ ಪಯಣದ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲೇ?)