ಹೊಳಗೋಡು ಬಾಬಣ್ಣನ ಮದ್ದಿನ ನಡಿಗೆ ಪವಾಡ

images

ಸಾಂದರ್ಭಿಕ ಚಿತ್ರ

ಅವು ಸ್ವಾತಂತ್ರ್ಯಪೂರ್ವದ ದಿನಗಳು. ಶಿವರಾತ್ರಿ ಕಳೆದು, ಯುಗಾದಿಗೆ ಹತ್ತಿರದ ಒಂದು ಬೇಸಿಗೆಯ ಬೆಳಿಗ್ಗೆ. ಸುತ್ತಲ ದಟ್ಟ ಕಾಡಿನ ನಡುವೆಯ ಗದ್ದೆ ಬಯಲಿನ ಕಣಿವೆಯಂಚಿನ ಮನೆಯಂಗಳದಲ್ಲಿ ರಾತ್ರಿ ಸುರಿದ ಮಳೆಯ ಘಮಲು. ಎಳೆಬಿಸಿಲಿನ ಲಾಸ್ಯಕ್ಕೆ ಮನೆಯ ಮಕ್ಕಳು ಅಂಗಳವಿಡೀ ಆಟ-ಹುಡುಗಾಟದಲ್ಲಿ ಮುಳುಗಿದ್ದಾರೆ.

ಕೂಡು ಕುಟುಂಬದ ದೊಡ್ಡವರು ಮನೆಯ ಚಡಿ(ಮುಂದಿನ ಕಟ್ಟೆ) ಮೇಲೆ ಕೂಡ ಬೀಡಿ ಸೇದುತ್ತಾ ಕಾಫಿ ಕುಡಿಯುತ್ತಾ ಹದ ಮಳೆಯ ಬಳಿಕ ಮಾಡಬೇಕಾದ ಗದ್ದೆಯ ಹೂಟಿ ಕೆಲಸದ ಮಾತು ತೆಗೆದಿದ್ದಾರೆ.

ನಾಕು ಮಾರು ದೂರದ ದಣಪೆ(ಮನೆಯ ಸುತ್ತಲ ಹೊರಬೇಲಿಯ ಗೇಟ್) ಸರಗೋಲು ಸರಿಸುತ್ತಲೇ ಮಕ್ಕಳು-ದೊಡ್ಡವರ ಕಣ್ಣುಗಳೆಲ್ಲಾ ಅತ್ತ ನೆಟ್ಟವು! ಕಂಬಳಿ ಕೊಪ್ಪೆ ಹಾಕಿಕೊಂಡಿದ್ದ ಮೂವರಲ್ಲಿ ಒಬ್ಬ ಸರಗೋಲು ತೆಗೆಯುತ್ತಿದ್ದರೆ, ಅವನ ಹಿಂದೆ ಉಳಿದಿಬ್ಬರು ಕವಲು ಕೊಂಬಿನ ಚಿಕ್ಕಿಮಿಕ (ಚುಕ್ಕಿ ಜಿಂಕೆ)ವನ್ನು ಒಬ್ಬೊಬ್ಬರು ಒಂದೊಂದು ಕಿವಿ ಹಿಡಿದುಕೊಂಡು ನಡೆಸಿಕೊಂಡು ದಣಪೆ ದಾಟಿಸುತ್ತಿದ್ದಾರೆ! ಅವರೆಲ್ಲರ ಹಿಂದೆ ಜೋಡು ನಳಿಗೆಯ ಬಂದೂಕು ಹೆಗಲೇರಿಸಿಕೊಂಡು ರಾಜಠೀವಿಯಲ್ಲಿ ಬರುತ್ತಿರುವವರು ಹೊಳಗೋಡು ಬಾಬು ಸಾಬರು!

ಊರಿನವರ ಬಾಯಲ್ಲಿ ಬಾಬಣ್ಣ ಎಂದೇ ರೂಢಿಯಾಗಿದ್ದ ಹೊಳಗೋಡು ಬಾಬು ಸಾಬರು, ಅವರ ಹೆಗಲೇರಿದ್ದ ಜೋಡು ನಳಿಗೆ ಬಂದೂಕು ನೋಡುತ್ತಿದ್ದಂತೆಯೇ ಕಟ್ಟೆಯ ಮೇಲೆ ಕೂತು ಕಾಫಿ ಗುಟುಕರಿಸುತ್ತಿದ್ದವರಿಗೆ ನಡೆದ ಹಕೀಕತ್ತು ಅರ್ಥವಾಗಿತ್ತು. “ಓಯ್ ಬಾಬಣ್ಣ ಇವತ್ತು ಬೆಳ್ ಬೆಳಿಗ್ಗೆನೇ ಗಡದ್ದಾಗೇ ಶಿಕಾರಿ ಮಾಡ್ಯಾರಲ, ರಾತ್ರಿ ಹದಮಳೆ ಬಿದ್ದುದ್ದೇ ಬಾಬಣ್ಣ ಕೋಳಿ ಕೂಗೋ ಮುಂಚೇನೇ ಗಿಡಕ್ಕೆ(ಕಾಡು) ಹತ್ತಿದ್ರೇನೋ..” ಎಂಬ ಅವರ ವಿಶ್ಲೇಷಣೆ ಮುಗಿಯುವುದರೊಳಗೆ ಕುರಿಮರಿಯಂತೆ ತಲೆ ತಗ್ಗಿಸಿಕೊಂಡು ಬರುತ್ತಿದ್ದ ಚಿಕ್ಕಿಮಿಕ ನಿದ್ದೆಯಲ್ಲಿ ನಡೆದಂತೆ ಅಂಗಳಕ್ಕೆ ಕಾಲಿಟ್ಟಿತ್ತು.

ಮಿಕದ ಆಚೀಚೆ ಕಿವಿಗಳನ್ನು ಹಿಡಿದು ಅದನ್ನು ನಡೆಸಿಕೊಂಡು ಬರುತ್ತಿದ್ದ ಗಾಮ್ಯ ಮತ್ತು ಬಸವಣ್ಣಿ ಮತ್ತು ಅವರ ಮಿಕದ ಮೆರವಣಿಗೆಯ ಸಾರಥಿಯಂತಿದ್ದ ಈರಭದ್ರರ ಕಣ್ಣಲ್ಲಿ ಆಗಲೇ ಬಾಡಿನ ಕುಣಿತ ಆರಂಭವಾಗಿ ಬಾಯಲ್ಲಿ ಬುಳುಬಳು ನೀರಾಡಲಾರಂಭಿಸಿದ್ದವು. ಕಟ್ಟೆಯ ಮೇಲೆ ಕೂತವರಿಂದ ಮಿಕದ ಆಗಮನದ ಸುದ್ದಿ ಕೇಳಿದ ಸಿದ್ದಯ್ಯನೋರು, ಹೊರಬರುತ್ತಲೇ ಎದುರಿಗೆ ನಿಂತಿದ್ದ ಮಿಕವನ್ನೂ, ಅದರ ಬದಿಗೆ ಎಲೆಯಡಿಕೆ ಜಗಿಯುತ್ತಾ ನಿಂತಿದ್ದ ಬಾಬಣ್ಣನನ್ನೂ ನೋಡಿ, “ಏನು ಬಾಬಣ್ಣ ಒಳ್ಳೇ ಶಿಕಾರಿನೇ ಆತಲ, ಹೋರಿ(ಗಂಡು ಜಿಂಕೆ) ಜೋರಾಗೈತೆ, ತೊಗಲುಗೊಂಬು ನೋಡ್ರೆ ಏನಿಲ್ಲಂದ್ರೂ ನಾಕಾಳು ಹೊರೆ(ನಾಲ್ವರು ಹೊರುವಷ್ಟು ಭಾರದ್ದು) ಇರಬೋದೇನೋ, ಅಲನಾ..” ಎನ್ನುತ್ತಲೇ ಬಾಬಣ್ಣಗೆ, ಮಿಕದ ಬಗ್ಗೆ ಮಾತಾಡ್ತಾನೆ ಹೊರತು ತಾನು ಅಂತಹ ಬಿಗಿ ಹೋರಿ ಹೊಡ್ದಿದ್ದು, ಅದನ್ನು ಅಲ್ಲಿಂದ ಇಲ್ಲಿವರೆಗೆ ನಡೆಸಿಕೊಂಡು ಬಂದಿದ್ದು ಇವನಿಗೆ ದೊಡ್ಡ ವಿಷಯಾನೇ ಅಲ್ಲ ಅನ್ನೋ ಥರ ನನ್ನ ಬಗ್ಗೆ ಚಕಾರವೆತ್ತಿಲ್ಲವಲ್ಲ ಎಂದು ಪಿಚ್ಚೆನಿಸಿತು.

ಬಾಬಣ್ಣನ ಮನದ ತಳಮಳ ಅರಿತವರಂತೆ ಸಿದ್ದಯ್ಯನೋರು, “ಅಲ್ಲೋ ಮಾರಾಯ ಇಂತಹ ಹೋರಿ ಹೊಡ್ದು, ಸುಮ್ನೆ ನಿಂತೀಯಲ್ಲ ಮಾರಾಯ, ಬಾರ ಕುತ್ಗ, ಕುಡಿಯಾಕೆ ನೀರ ಬೇಕೆನಾ..” ಎನ್ನುತ್ತಲೇ ನಡೆದುಕೊಂಡು ಮಿಕ ನೋಡಲು ಹೆಬ್ಬಾಗಿಲ ಮರೆಯಿಂದ ಇಣುಕುತ್ತಿದ್ದ ಮನೆಯೊಡತಿ ಒಳ ಹೋಗಿ ತಂಬಿಗೆ ನೀರು, ಬೆಲ್ಲ ತಂದು ಕಟ್ಟೆಯ ಮೇಲಿಟ್ಟರು. ಬಿಸಿ ಬಿಸಿ ಕಾಫಿ ತರಲೂ ಸಿದ್ದಯ್ನೋರು ಆದೇಶವಾಯ್ತು. ಅರ್ಧ ಲೋಟ ಬೆಲ್ಲ ಬಾಯಿಗೆ ಒಗೆದುಕೊಂಡು ನೀರಿನ ತಂಬಿಗೆ ಎತ್ತಿದ ಬಾಬಣ್ಣ ಗಟ-ಗಟ ನೀರು ಕುಡಿದು ಕೆಳಗಿಟ್ಟು ಒಂದು ನಿಟ್ಟುಸಿರು ಬಿಟ್ಟ.

“ಕುರ್ಕಿಗುಡ್ಡದ ಸವಳಿಂದ ಇಲ್ಲಿಗೆ ಬರೋದ್ರೊಳಗೆ ಇಷ್ಟು ದಣಿವಾದ್ರೆ ಹೆಂಗೋ ಮಾರಾಯ” ಎನ್ನುತ್ತಾ ಮಾತು ಆರಂಭಿಸಿದ ಬಾಬಣ್ಣ, ತನ್ನ ಕಣ್ಣೆದುರು ತೇಲುಗಣ್ಣಾಗಿ ನಿಂತಿದ್ದ ಬೇಟೆಯನ್ನು ಬೇಟೆಯಾಡಿದ ವಿವರ ಆರಂಭಿಸಿದ. ರಾತ್ರಿ ಮಳೆ ಬಂದಿತ್ತಲ್ಲ, ಹಂಗಾಗಿ ಇವ್ರುನ ಕರ್ಕೊಂಡು ಸುತ್ತರ್ಕೊ ಬರೋಣ ಅಂತಾ ಹೊಂಟಿದ್ದೆ, ಇಲ್ಲೇ ನಿಮ್ಮ ಕೆರೆ ಅಂಚಲ್ಲಿ ಗಿಡ (ಕಾಡು) ಹತ್ತಿ, ಕುರ್ಕಿ ಗುಡ್ಡದ ವಾರ್ಯಾಗೇ ಹಂಗೇ ಹೋಗ್ತಾ ಇದ್ವಿ, ಸಿಂಗೆ(ಸೀಗೆ)ಮಟ್ಟಿ ಕುಡಿ ಮೇಯ್ತ ಎರಡು ಜೋಡಿ ಮ್ಯಾಲೇ ಇದ್ವು, ಏನ್ ಹತ್ತು ಮಾರು ದೂರದಾಗೇ ನಿಂತ್ಕಂಡು ಈಡು(ಗುರಿಗೆ ಗುಂಡೇಟು ಹೊಡೆಯುವುದು) ಹೊಡೆದ್ನಾ. ಎದಿಗೇ ಗುಂಡು ಬಿತ್ತು. ಈಡಾಗಿ ಇನ್ನೇನು ಮಿಕ ನಲಕ್ಕೆ ಒರಗೋದ್ರೊಳಗೆ ಈ ಮುಂಡೇಗಂಡರು ಹೋಗಿ ಕೊಂಬು ಹಿಡ್ಕೊಂಡೇಬಿಟ್ರು..” ಎಂದು ಶಿಕಾರಿ ಆದ ಬಗೆ ವಿವರಿಸಿದರು.

“ಇಂತಪ್ಪ ಹೋರೀನಾ ಈ ನರಪೇತಲ ನನ್ಮಕ್ಳು ಹೊರದೌದನ.. ಹಂಗಾಗಿ, ನಾಕು ಮಾರು ದೂರದಾಗಿದ್ದ ಮದ್ದಿನ ಗಿಡದಿಂದ ಮದ್ದು ತಂದು ಈಡಿನ ಕುಣಿಗೆ ತುಂಬಿ ನಡಸಿಕೊಂಡೇ ಬಂದ್ವಿ.. ಇನ್ನೇನು ಈಗಲೇ ತೇಲುಗಣ್ಣಾಗೈತಿ, ಇನ್ನು ನಮ್ಮನೆವರೆಗೂ ಒಂದೂವರೆ ಮೈಲಿ ಇದನ್ನು ಕರ್ಕೊಂಡು ಹೋಗೋದಾಗಲ್ಲ. ಒಂಚೂರು ನಿಮ್ ರಾಮ ಹುಡುಗ, ಸೋಮ ಹುಡುಗುರನ ಕಳ್ಸ, ಇಲ್ಲೇ ನಿಮ್ಮ ಕಣದಂಚಲ್ಲೇ ಹಸಿಗೆ(ಮಾಂಸ ಸಿದ್ಧಗೊಳಿಸುವುದು) ಮಾಡಣ..” ಎಂದು ಬಾಬಣ್ಣ ಹೇಳುತ್ತಲೇ ಮಿಕದ ಕೊಂಬು, ಈಡು ತಾಗಿದ ಜಾಗಕ್ಕೆ ತುರುಕಿದ್ದ ಮದ್ದನ್ನೂ ತೂರಿಕೊಂಡು ಬರುತ್ತಿದ್ದ ರಕ್ತ, ಅದರ ಮೈಕಟ್ಟು ನೋಡಿ ಒಬ್ಬೊಬ್ಬರೂ ಒಂದು ವಿಶ್ಲೇಷಣೆಯಲ್ಲಿ ತೊಡಗಿದ್ದ ಸಿದ್ದಯ್ನೋರು ಮಕ್ಕಳಾದ ರಾಮ, ಸೋಮ ಹಸಿಗೆ ಮಾಡಲು ಕತ್ತಿ, ಕೊಡಲಿಗಳನ್ನು ಹುಡುಕತೊಡಗಿದರು…
……..

ಇದು ನನ್ನ ದೊಡ್ಡಪ್ಪ ರಾಮಪ್ಪ ನನಗೆ ಹೇಳಿದ ಹೊಳಗೋಡು ಬಾಬಣ್ಣನ ಶಿಕಾರಿ ಸಾಹಸದ ಒಂದು ಘಟನೆಯ ನಿರೂಪಣೆ. ಹೆಚ್ಚೂ ಕಡಿಮೆ ಇಡೀ ತ್ಯಾಗರ್ತಿ, ಆನಂದಪುರಂ ಸೀಮೆಯಲ್ಲೇ ಭಾರೀ ಶಿಕಾರಿದಾರ ಎಂದೇ ಹೆಸರಾಗಿದ್ದ ಬಾಬಣ್ಣ ನೀಚಡಿಯ ಶಾಮರಾಯರು, ಕೋವಿ ಪುಟ್ಟಣ್ಣರಂತೆ ಬರೀ ಗುರಿಗಾರಿಕೆ, ಪ್ರಾಣಿಗಳ ಚಲನವಲನ ಗುರುತಿಸುವ ಗ್ರಹಿಕೆಯಷ್ಟೇ ಅಲ್ಲದೆ, ತನ್ನದೇ ಆದ ಇತರೆ ನೈಪುಣ್ಯಗಳಿಗಾಗಿ ದಂತಕಥೆಯಾಗಿದ್ದವರು.

1950ರ ದಶಕದಲ್ಲಿ ತ್ಯಾಗರ್ತಿ ಸುತ್ತಮುತ್ತಲ ಬೆಳ್ಳಂದೂರು, ಕೋಟೆಕೊಪ್ಪ, ಗೌತಮಪುರ, ಚೋರಡಿ ಕಾಡುಗಳಲ್ಲಿ ನರಭಕ್ಷಕ ಚಿರತೆ, ಹುಲಿಗಳ ಹುಟ್ಟಡಗಿಸಲು ಬಂದಿದ್ದ ವಿಶ್ವಪ್ರಸಿದ್ದ ಬೇಟೆಗಾರ ಕೆನತ್ ಆಂಡರ್ಸನ್ ಜೊತೆಗಾರನಾಗಿ ಕೂಡ ಬಾಬಣ್ಣ ಒಂದೆರಡು ಬಾರಿ ಬೇಟೆಯಾಡಿದ್ದರಂತೆ. ಅದಲ್ಲಕ್ಕಿಮತ ಬಾಬಣ್ಣ ಮನೆಮಾತಾಗಿದ್ದು ತನ್ನ ಪವಾಡಸದೃಶ ಬೇಟೆಯ ಟ್ರಿಕ್ಕುಗಳಿಗಾಗಿ.

ಮೇಲಿನ ಘಟನೆಯಲ್ಲಿ ಕೂಡ ನೇರವಾಗಿ ಎದೆಗೆ ಏಟು ತಿಂದ ಭಾರೀ ಜಿಂಕೆಯನ್ನು ಕಾಡಿನ ನಡುವಿಂದ ಒಂದು ಮೈಲಿಗೂ ಹೆಚ್ಚು ದೂರದ ಸಂಪಳ್ಳಿಯ ಮನೆಗೆ ನಡೆಸಿಕೊಂಡು ಬಂದದ್ದು ಪವಾಡವೇ ಸರಿ! ಏಕೆಂದರೆ, ಎದೆಗೆ ಗುಂಡೇಟು ತಿಂದ ಯಾವುದೇ ಪ್ರಾಣಿ ಹೆಚ್ಚೆಂದರೆ ಐದು ನಿಮಿಷ ಕೂಡ ಬದುಕಲಾರದು. ಆದರೂ ಈ ಜಿಂಕೆ ನಡೆದುಕೊಂಡೇ ಬರಲು ಕಾರಣ, ಬಾಬಣ್ಣನ ಮದ್ದಿನ ಪವಾಡ!

ಹೌದು, ಬಾಬಣ್ಣ ಬರಿ ಬೇಟೆಯಷ್ಟೇ ಅಲ್ಲದೆ, ಓವಿ ವಿದ್ಯೆ ಎಂದು ಕರೆಯುವ ಕೆಲವು ಮಾಯಾವಿ ಮದ್ದು, ಗಿಡಮೂಲಿಕೆ ಬಳಕೆಯಲ್ಲೂ ಪ್ರವೀಣ. ಹಾಗಾಗಿ ಆತ ಶಿಕಾರಿ ಮಾಡಿದ ಪ್ರಾಣಿಯನ್ನು ಬಹಳಷ್ಟು ಬಾರಿ ಹೊತ್ತುಕೊಂಡು ಬರುವ ಹರಸಾಹಸ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಬೇಟೆಯಾದ ಹೊತ್ತಲ್ಲಿ ಜತೆಗೆ ಒಬ್ಬಿಬ್ಬರು ಮಾತ್ರವಿದ್ದು, ಅವರಿಂದ ಪ್ರಾಣಿಯನ್ನು ಹೊತ್ತ್ಯೊಯ್ಯುವುದು ಸಾಧ್ಯವಿಲ್ಲ ಎನಿಸಿದರೆ, ಕೂಡಲೇ ನಾಲ್ಕಾರು ಮಾರು ಕಾಡಿನಲ್ಲಿ ಅಲೆದು ತನಗೆ ಮಾತ್ರ ಗೊತ್ತಿರುವ ಯಾವುದೋ ಗಿಡದ ಎಲೆಯನ್ನು ಕಿತ್ತುಕೊಂಡು ಅಂಗೈಯಲ್ಲೇ ತಿಕ್ಕಿ ರಸ ಒಸರುವ ಎಲೆಯ ಮದ್ದನ್ನು ಪ್ರಾಣಿಗೆ ಗುಂಡು ತಾಗಿದ ಗಾಯಕ್ಕೆ ಉದುರಿ ಹೋಗದಂತೆ ತುರುಕಿದರೆ ಮುಗಿಯಿತು! ಏನೆಂದರೆ, ಬಾಬಣ್ಣ ಮದ್ದು ಹಾಕುವವರೆಗೆ ಪ್ರಾಣಿ ಕನಿಷ್ಟ ಉಸಿರಾಡುತ್ತಿರಬೇಕು!

ಇದೇ ತಂತ್ರದಲ್ಲೇ ಬಾಬಣ್ಣ ಎಷ್ಟೋ ಜಿಂಕೆ, ಕಡವೆ, ಕಾನುಕುರಿಗಳನ್ನು ನಡೆಸಿಕೊಂಡು ಬಂದಿದ್ದನ್ನು ಕಂಡವರು ನಮ್ಮ ದೊಡ್ಡಪ್ಪನಂತೆಯೇ ನಮ್ಮೂರಿನ ಹಲವರು ಈಗಲೂ ಇದ್ದಾರೆ. ಅಷ್ಟೇ ಅಲ್ಲ, ಬಾಬಣ್ಣನ ಇಂತಹ ಸಾಹಸಗಳನ್ನು ಬಹುತೇಕ ತ್ಯಾಗರ್ತಿ, ಗೌತಮಪುರ, ಚೆನ್ನಶೆಟ್ಟಿಕೊಪ್ಪ ಮುಂತಾದ ಆನಂದಪುರ ಹೋಬಳಿಯ ನೂರಾರು ಮಂದಿ ಈಗಲೇ ನೆನಪಿಸಿಕೊಳ್ಳುತ್ತಾರೆ. ಬಾಬಣ್ಣನ ಅಂತಹ ಪವಾಡಸದೃಶ ಸಾಹಸಗಳಲ್ಲಿ ಪ್ರಾಣಿಗಳನ್ನು ಕಾಡಿನಲ್ಲಿ ತಾನಿರುವಲ್ಲಿಗೇ ಕರೆದು ಬೇಟೆಯಾಡುವುದು ಕೂಡ ಮದ್ದಿನ ನಡಿಗೆಯ ಸಾಹಸದಷ್ಟೇ ಕುತೂಹಲಕರ!
————–

ಭೂತ ಬಂಗ್ಲೆ ಮತ್ತು ಕೆನತ್ ಆಂಡರ್ಸನ್

P1060058ಹೊಚ್ಚಿಕೊಂಡಿದ್ದ ಕರಿ ಕಂಬಳಿಯ ಸರಿಸಿ ಕಣ್ಣು ತೆರೆದರೆ ಸುತ್ತ ಕಗ್ಗತ್ತಲು! ಮೇಲೆ ಆಕಾಶವಿಡೀ ಅಗಣಿತ ತಾರಾಗಣ!! ಹೊಳೆವ ತಾರೆಗಳಲ್ಲಿ ಗೊತ್ತಿರುವ ಕೂರಿಗೆ ಸಾಲು, ಸಪ್ತಋಷಿ ಮಂಡಲಗಳನ್ನು ಹುಡುಕಿದೆ. ಆಗಲೇ ಅವೆಲ್ಲಾ ಸೂರ್ಯ ಕಂತುವ ದಿಕ್ಕಿಗೆ ವಾಲಿದ್ದವು. ಅಂದರೆ ರಾತ್ರಿ ಎರಡೋ- ಮೂರು ಗಂಟೆಯಾಗಿದೆ ಎಂದುಕೊಂಡೆ. ಅಷ್ಟರಲ್ಲೇ ಗೂಬೆ ಕೂಗಿದ ಸದ್ದು! ಸಣ್ಣಗೆ ಮೈ ನಡುಗಿತು. ಎಲ್ಲೋ ಮನದ ಮೂಲೆಯಲ್ಲಿ ಹುದುಗಿ ಹೋಗಿದ್ದ ಭೂತ ಬಂಗ್ಲೆಯ ನೆನಪು ದುತ್ತೆಂದು ಬಂತು… ನಡುಗುವ ಮೈ ಬೆವರತೊಡಗುತ್ತಿದ್ದಂತೆ ನಿಧಾನಕ್ಕೆ ಪಕ್ಕಕ್ಕೆ ನೋಡಿದೆ. ಮಲಗುವ ಮುಂಚೆ ಉರಿಯುತ್ತಿದ್ದ ಬೆಂಕಿ ಆರಿಹೋಗಿತ್ತು. ಆದರೆ, ಒಂದೆರಡು ಕೆಂಡಗಳು ಮಾತ್ರ ಮಿನುಗುತ್ತಿದ್ದವು. ಬೆಂಕಿಯ ಆಚೆ ಬದಿ ಮಲಗಿದ್ದ ಕೃಷ್ಣಣ್ಣ ಜೋರು ಗೊರಕೆ ಹೊಡೀತಿದ್ದ ಆಕಾಶಕ್ಕೆ ಮುಖಮಾಡಿ ನಕ್ಷತ್ರಗಳಿಗೇ ತಿದಿಯೊತ್ತುವಂತೆ!

ಅವನ ನಿದ್ರೆ, ಆರಿದ ಬೆಂಕಿ, ಆಕಾಶವಿಡೀ ಹರಡಿದ್ದ ತಾರೆಗಳ ರಾಶಿ,.. ಊಹೂಂ ಯಾವುದೂ ಮನಸ್ಸನ್ನು ಹಿಡಿದಿಟ್ಟುಕೊಳ್ಳದಾದವು!
ಭೂತ ಬಂಗ್ಲೆಯ ನೆನಪಾಗುತ್ತಿದ್ದಂತೆ ಅಜ್ಜಿ, ಅವ್ವ, ದೊಡ್ಡಣ್ಣ, ಕೃಷ್ಣಣ್ಣ, ಕುರಿ ಅಣ್ಣಪ್ಪ,.. ಹೀಗೆ ಎಲ್ಲ ವರ್ಷಗಳಿಂದ ಯಾವ-ಯಾವುದೋ ನೆಪದಲ್ಲೆಲ್ಲ ಹೇಳಿದ ಅದರ ರೋಚಕ ಕಥೆಗಳೇ ತಲೆ ತುಂಬ ಕುಣಿಯತೊಡಗಿ, ನಿದ್ದೆ ಎಂಬುದು ಬೆದರಿ ಹೋಯಿತು!

ಭತ್ತದ ಒಕ್ಕಲ ಕಣದಲ್ಲಿ ರಾಶಿ ಕಾಯಲು ಮನೆಯಾಳು ಕೃಷ್ಣಣ್ಣನ ಜತೆ ಮಲಗಿದ್ದ ನನಗೆ ಆಗಿನ್ನೂ ಹನ್ನೆರಡು ವರ್ಷ. ದೊಡ್ಡ ಬಯಲಿನ ನಡುವೆಯ ಕಣದ ಮೂಲೆಯಲ್ಲಿ ಮಾಗಿ ಚಳಿಯಲ್ಲಿ ಬೆಚ್ಚಗೆ ಬೆಂಕಿ ಕಾಯಿಸು‍ತ್ತಾ ಅಕ್ಕಪಕ್ಕದ ಕಬ್ಬಿನಗದ್ದೆಯಿಂದ ಕಬ್ಬು ಕದ್ದು ತಂದು ತಿನ್ನುತ್ತಾ ಕೃಷ್ಣಣ್ಣ ಹೇಳುತ್ತಿದ್ದ ಕಥೆ ಕೇಳುವುದೇ ಸಂಭ್ರಮ. ಕಣದ ಮಜಾಕ್ಕಾಗಿ ಮನೆಯವರ ಮಾತು ಕೇಳದೆ ಸಂಜೆಯಾಗುತ್ತಲೇ ಕಂಬಳಿ ಹೊದ್ದು ಕೃಷ್ಣಣ್ಣನೊಂದಿಗೆ ಕಣದ ಹಾದಿ ಹಿಡಿಯುವುದು ನನಗಾಗ ಅನುದಿನದ ಖುಷಿ, ಮನೆಯವರಿಗೆ ರಗಳೆ!

ಕಬ್ಬು, ಕಥೆ, ಕಣದ ಬಿಳಿಹುಲ್ಲಿನ ಬಣವೆಯಿಂದ ಬರುವ ಬೆಚ್ಚನೆ ಗಾಳಿ, ಬಯಲ ಕಮ್ಮನೆ ವಾಸನೆಗಳ ಸೆಳೆತದಲ್ಲಿ ಕಣಕ್ಕೆ ಹೊರಡುವಾಗ, ಕಣದ ಪಕ್ಕದ ಹೊಳೆಯಾಚೆಯ ಬಯಲ ಅಂಚಿನ ಭೂತ ಬಂಗ್ಲೆ, ಬೆಚ್ಚಿಬೀಳಿಸುವ ಅದರ ದೆವ್ವದ ನೆನಪು ಮರೆತೇಹೋಗಿರುತ್ತಿತ್ತು. ಹೀಗೆ ರಾತ್ರಿ ಎಲ್ಲೋ ಎಚ್ಚರಾದರೆ ಮಾತ್ರ ದಿಢೀರ್ ಮುತ್ತುವ ಬಂಗ್ಲೆಯ ಭಯಾನಕ ರೂಪಗಳು ಕೊರೆವ ಮಾಗಿ ಚಳಿಯಲ್ಲೂ ಮೈ ನೀರಾಗಿಸುತ್ತಿದ್ದವು.

ಅಷ್ಟಕ್ಕೂ ಅದು ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿದ್ದ ಕಾಡಂಚಿನ ಬಂಗ್ಲೆ. ಊರವರ ಬಾಯಲ್ಲಿ ಬ್ರಿಟಿಷ್ ಬಂಗ್ಲೆಯಾಗಿದ್ದರೂ ಅದರ ದೆವ್ವದ ನಂಟಿನ ಕಾರಣಕ್ಕಾಗಿ ಮಕ್ಕಳ ಬಾಯಲ್ಲಿ ಭೂತಬಂಗ್ಲೆಯಾಗಿತ್ತು. ಬರಮಂಡ ಗದ್ದೆ ಬಯಲಿನ ನಡುವೆ ಹರಿವ ಕಲ್ಲುಸಾರದ ಹೊಳೆ ಈಚೆ ಬದಿ ಸಂಪಳ್ಳಿ, ಕೋಟೆಕೊಪ್ಪ ಊರುಗಳಾದರೆ, ಆಚೆ ಬದಿ ದೆವ್ವ-ಭೂತ-ರಣಗಳ ಅಟ್ಟಹಾಸಕ್ಕೇ ನನ್ನ ವಾರಿಗೆಯವರ ಮನಸ್ಸಲ್ಲಿ ಕುಖ್ಯಾತಿ ಗಳಿಸಿದ್ದ ಕುಡಿಗೆರೆ!

ಹೊಳೆ ಈಚೆ ಬದಿಯಿಂದ ನಿಂತು ನೋಡಿದರೆ ಆಚೆ ಬದಿಯ ಕುಡಿಗೆರೆ ಯಾವ ಮನೆಗಳೂ ಕಾಣುತ್ತಿರಲಿಲ್ಲ. ಆದರೆ, ಊರಿನ ತುದಿಯಲ್ಲಿ ಹಸಿರು ಗಿಡ-ಮರಗಳ ನಡುವಿಂದ ಬಂಗ್ಲೆಯ ಮಂಗಳೂರು ಹೆಂಚಿನ ಕೆಂಪು ಬಣ್ಣ ಮಾತ್ರ ಅಲ್ಲಲ್ಲಿ ಹರಿದಂತೆ ಕಾಣುತ್ತಿತ್ತು! ಬೇಸಿಗೆಯಲ್ಲಿ ಅದರ ಅಕ್ಕ-ಪಕ್ಕದ ಮಾರ್ಗದಮರ(ಮೇ ಫ್ಲವರ್) ಹೂಬಿಟ್ಟಾಗ ಹೂವಿನ ಬಣ್ಣ, ಹೆಂಚಿನ ಬಣ್ಣ ಒಂದರೊಳಗೊಂದು ಬೆರೆತು ಬಂಗ್ಲೆ ಇದ್ದಕ್ಕಿಂತ ವಿಸ್ತಾರವಾಗಿ ಹರಡಿಕೊಂಡಂತೆ ಗೋಚರಿಸುತ್ತಿತ್ತು. ಆ ನೋಟ ಕಣ್ಣಿಗೆ ಬೀಳುತ್ತಲೇ ಹಗಲಲ್ಲೂ ಸಣ್ಣಗೆ ಬೆಚ್ಚುತ್ತಿದ್ದೆವು! ಹಾಗಿತ್ತು ದೊಡ್ಡವರು ಕಟ್ಟಿಕೊಟ್ಟಿದ್ದ ಬಂಗ್ಲೆಯ ದೆವ್ವ- ಭೂತಗಳ ಬಿಲ್ಡಪ್!

ಬ್ರಿಟಿಷರು ಸುಂಕ ವಸೂಲಿ, ಬೇಟೆ, ಪ್ರವಾಸಕ್ಕೆ ಬಂದಾಗ ಉಳಿದುಕೊಳ್ಳಲು ಈ ಬಂಗ್ಲೆ ಕಟ್ಟಿದ್ದರು. ಅವರು ದೇಶ ಬಿಟ್ಟು ಹೋದಮೇಲೆ ಬಂಗ್ಲೆ ಖಾಲಿ ಬಿದ್ದು, ಅನಾಥವಾಗಿ ಕೊಂಪೆಯಾದ್ದರಿಂದ ಈಗ ಅಲ್ಲಿ ರಣ, ದೆವ್ವ, ಭೂತಗಳೇ ವಾಸವಾಗಿವೆ. ಹಗಲು-ರಾತ್ರಿಯೆನ್ನದೆ ಬಂಗ್ಲೆಯೊಳಗೆ ವಿಚಿತ್ರವಾಗಿ ಸದ್ದು ಮಾಡುತ್ತವೆ. ರಾತ್ರಿ ಹೊತ್ತು, ಅದೂ ಅಮಾವಾಸೆ-ಹುಣ್ಣಿಮೆಯ ದಿನ ಕೈಯಲ್ಲಿ ದೊಂದಿ ಹಿಡಿದು ಭೂತಗಳು ಬಂಗ್ಲೆಯ ಸುತ್ತು ಕುಣಿಯುತ್ತವೆ. ದೆವ್ವ-ಭೂತಗಳನ್ನೆಲ್ಲ ಜೀತಕ್ಕಿಟ್ಟುಕೊಂಡಿರುವ ರಣವಂತೂ ದೊಂದಿ ಹಿಡಿದು ಬಂಗ್ಲೆಯಿಂದ ಹೊರಟು ಕುಡಿಗೆರೆಯ ಊರೊಳಗೆ ಹೂಂಕರಿಸುತ್ತಾ ಸುತ್ತುತ್ತದೆ. ಯಾರಾದರೂ ಮನೆಯ ಹೊರಗೆ ಅಂಗಳದಲ್ಲಿ, ಕಟ್ಟೆಯ ಮೇಲೆ ಮಲಗಿದ್ದರೆ ಅವತ್ತು ಅವರ ಕತೆ ಮುಗಿದಂತೆಯೇ… ಆದರೆ, ಕುಡಿಗೆರೆಯ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಅಲೆಯುವ ಅದು ಅಪ್ಪಿತಪ್ಪಿಯೂ ಹೊಳೆ ದಾಟಿ ಈಚೆ ಬದಿಗೆ ಬರುವುದಿಲ್ಲ. ಅದು ಈಕಡೆ ಸುಳಿಯದಂತೆ ನಮ್ಮೂರಿನ ಭೂತ ಕಾವಲು ಕಾಯುತ್ತೆ… ಹೀಗೆ ಒಂದೇ, ಎರಡೇ! ಭೂತ ಬಂಗ್ಲೆಯ ಮಹಿಮೆ ಬಣ್ಣಿಸುವ ಕಥೆಗಳು ಒಬ್ಬೊಬ್ಬರ ಬಾಯಲ್ಲಿ ಒಂದೊಂದು!

ನಮ್ಮಜ್ಜ ಮಾತ್ರ ಈ ಬಂಗ್ಲೆಯ ವರ್ತಮಾನದ ಭೂತಚೇಷ್ಠೆಯ ಕತೆಗಳಿಗೆ ಬದಲಾಗಿ, ಅವರ ಯೌವನದ ಕಾಲದಲ್ಲಿ ಈ ಬಂಗ್ಲೆಗೆ ಬಂದು ಉಳಿದುಕೊಳ್ಳುತ್ತಿದ್ದ ಬ್ರಿಟಿಷ್ ಅಧಿಕಾರಿಯ ಬೇಟೆಯ ಸಾಹಸ, ಅವರೊಂದಿಗೆ ಬೇಟೆಗೆ ಹೋಗುತ್ತಿದ್ದ ನಮ್ಮೂರಿನ ಹೊಳಗೋಡು ಸಾಬರು ಕಲಿತ ಬೇಟೆಯ ಪಾಠಗಳನ್ನು ಹೇಳುತ್ತಿದ್ದರು. ಆಗಲೂ ನಮಗೆ ಅಂತಹ ಬೇಟೆಗಾರ ಉಳಿದುಕೊಳ್ಳುತ್ತಿದ್ದ ಈ ಬಂಗ್ಲೆ ಮತ್ತಷ್ಟು ನಿಗೂಢವೆನಿಸುತ್ತಿತ್ತು!

ಕಣದಲ್ಲಿ ರಾತ್ರಿ ಬೆಚ್ಚಿಬಿದ್ದ ಬಳಿಕ ಮೂರ್ನಾಲ್ಕು ವರ್ಷಗಳಲ್ಲೇ ಹೈಸ್ಕೂಲು ಮುಗಿಸಿ ಕಾಲೇಜು ಓದಿಗೆ ಸಾಗರ ಪಟ್ಟಣ ಸೇರಿದ ಮೇಲೆ ನನಗೆ ಬಹುತೇಕ ಭೂತ ಬಂಗ್ಲೆ ಮರೆತೇ ಹೋಗಿತ್ತು. ಆ ಬಳಿಕ ಕಾಲೇಜಿನ ಬೇಸಿಗೆ ರಜೆಯಲ್ಲಿ ಮಾತ್ರ ಊರಿಗೆ ಹೋಗುತ್ತಿದ್ದ ನನಗೆ ಬಾಲ್ಯದ ದೆವ್ವ-ಭೂತದ ಕುತೂಹಲಗಳೆಲ್ಲಾ ಮುಗಿದು ಯೌವನದ ಹೊಸ ಜಗತ್ತು, ಸಾಹಿತ್ಯ, ವೈಚಾರಿಕತೆಯ ಹೊಸ ವಿಚಾರಗಳು ಹತ್ತಿರವಾಗುತ್ತಲೇ ಬಂಗ್ಲೆಯ ಬಗೆಗಿನ ಆಸಕ್ತಿಯೇ ಇಲ್ಲವಾಗಿತ್ತು. ಆ ನಡುವೆ ಬಂಗ್ಲೆಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಸಂಪೂರ್ಣ ರಿಪೇರಿ ಮಾಡಿ ಚಿಕ್ಕ ಗೆಸ್ಟ್ ಹೌಸ್ ಮಾಡಿದೆ ಎಂಬ ವಿಷಯ ವಾರಿಗೆಯವರಿಂದಲೇ ಕಿವಿಗೆ ಬಿದ್ದಿತ್ತು.

ಆದರೆ, ಎಂದೂ ಭೂತದ ಬಂಗ್ಲೆಯನ್ನು ನೋಡಿರದ ನನಗೆ, ಡಿಗ್ರಿ ದಿನಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಬೆಳ್ಳಂದೂರಿನ ನರಭಕ್ಷಕ’ ಕಥೆ ಓದಿದ ಮೇಲೆ ನಮ್ಮಜ್ಜ ಹೇಳಿದ್ದ ಬ್ರಿಟಿಷ್ ಬೇಟೆಗಾರ ಈ ಕೆನತ್ ಆಂಡರ್ಸನ್ನೇ ಇರಬಹುದು ಎನ್ನಿಸಿತ್ತು. ಕೇಳೋಣವೆಂದರೆ ಅಜ್ಜ ಆಗಲೇ ಬಾರದ ಲೋಕಕ್ಕೆ ಹೋಗಿ ಎರಡು ವರ್ಷವೇ ಆಗಿತ್ತು! ಕೊನೆಗೆ ಆಂಡರ್ಸನ್ ಉಳಿದುಕೊಳ್ಳುತ್ತಿದ್ದ ಬಂಗ್ಲೆಯನ್ನಾದರೂ ನೋಡಬೇಕು ಎನಿಸಿತ್ತು! ಆದರೆ, ನಾನು ಹೋಗಿ ಆ ಬಂಗ್ಲೆ ನೋಡಿದ್ದು ಐದಾರು ವರ್ಷಗಳ ಬಳಿಕ.

ಆಗಲೂ ಬೀಗ ಜಡಿದಿದ್ದ ಗೆಸ್ಟ್ ಹೌಸನ್ನು ಹೊರಗಿನಿಂದಲೇ ನೋಡಿ ಒಂದು ರೀತಿಯ ಖುಷಿ, ಸಣ್ಣ ನಿಗೂಢತೆಯನ್ನು ಅನುಭವಿಸಿ ಬಂದಿದ್ದೆ! ಮುಂದಿನ ಬಾಗಿಲ ಮೇಲೆ ಬರೆದಿದ್ದ ಬಂಗ್ಲೆ ನಿರ್ಮಾಣದ ಇಸವಿಯನ್ನೂ ಗಮನಿಸಿ ಆಂಡರ್ಸನ್ ಉಳಿದುಕೊಂಡಿದ್ದು ಇಲ್ಲೇ ಇರಬಹುದೆಂದು ಹೆಮ್ಮೆ ಪಟ್ಟಿದ್ದೆ! ಆ ಹೊತ್ತಿಗಾಗಲೇ ಭೂತಬಂಗ್ಲೆಯ ರೋಚಕ ಕಥೆಗಳೆಲ್ಲಾ ಕಳಚಿ, ನನ್ನ ತಲೆಯೊಳಗೆ ಬ್ರಿಟಿಷ್ ಬೇಟೆಗಾರನ ಬೇಟೆಯ ಸಾಹಸಗಳಲ್ಲಿ ಕಂಡ ತ್ಯಾಗರ್ತಿ, ಬೆಳ್ಳಂದೂರು, ಈ ಬಂಗ್ಲೆಯಂಚಿನ ಬಯಲು, ನರಭಕ್ಷಕ ಹುಲಿಗಳೆರಡರ ಕಿತ್ತಾಟ, ತಟ್ಟಿ ಮನೆಗೆ ನುಗ್ಗಿ ಗಂಡ-ಹೆಂಡತಿ ಇಬ್ಬರನ್ನೂ ಹೊತ್ತೊಯ್ದ ಹೆಬ್ಬುಲಿಗಳ ಚಿತ್ರಗಳು ತುಂಬಿದ್ದವು.

ಇತ್ತೀಚೆಗೆ ಮತ್ತೆ ‘ಬೆಳ್ಳಂದೂರಿನ ನರಭಕ್ಷಕ’ವನ್ನು ಓದುವಾಗ ನಮ್ಮೂರಿನ ಸುತ್ತಮುತ್ತಲ ಊರುಗಳು, 1900ರ ಆಸುಪಾಸಿನಲ್ಲಿ ಅಲ್ಲಿದ್ದ ಕಾಡು, ಕಾಡುಪ್ರಾಣಿಗಳೆಲ್ಲ ಕಣ್ಣಿಗೆ ಕಟ್ಟಿದಂತೆ ಆ ಹೊತ್ತಿನ ಆ ಜಗತ್ತು ಮನದೊಳಗೇ ಪುನರ್ ಸೃಷ್ಟಿಗೊಂಡಿತ್ತು. ಅದೇ ಅಂಡರ್ಸನ್ ಜಗತ್ತಿನ ಅಮಲಿನಲ್ಲೇ ಮತ್ತೆ ಗೆಸ್ಟ್ ಹೌಸಿಗೆ ಹೋದಾಗ ನಿಜಕ್ಕೂ ಹೊಸ ಅನುಭವ! ಹಳೆಯ ವಿನ್ಯಾಸದ ಕಟ್ಟಡವನ್ನು ಹಾಗೇ ಉಳಿಸಿಕೊಂಡು ಕೇವಲ ಕುಸಿದುಬಿದ್ದಿದ್ದ ಮೇಲ್ಛಾವಣಿಯನ್ನು ಮಾತ್ರ ನವೀಕರಿಸಿದ್ದು, ನೂರು ವರ್ಷದ ಹಿಂದಿನ ಬಂಗ್ಲೆ ಇದೀಗ ಗೆಸ್ಟ್ ಹೌಸ್ ಎಂದಾಗಿದೆ ಅಷ್ಟೆ!

ಆದರೆ, ಅಲ್ಲಿನ ಮೇಟಿಗಾಗಲೀ, ಕುಡಿಗೆರೆಯ ಹೊಸ ತಲೆಮಾರಿನವರಿಗಾಗಲೀ ಈ ಗೆಸ್ಟ್ ಹೌಸಿನ ಭೂತ ಬಂಗ್ಲೆ ಪುರಾಣವಾಗಲೀ, ಅಂಡರ್ಸನ್ ಎಂಬ ವಿಶ್ವವಿಖ್ಯಾತ ಲೇಖಕ, ವನ್ಯಜೀವಿ ತಜ್ಞ ತಮ್ಮೂರಿನಲ್ಲಿ ಓಡಾಡಿದ್ದರ ಬಗ್ಗೆಯಾಗಲೀ ಏನೊಂದು ಗೊತ್ತಿಲ್ಲ! ಮೇಟಿ ಬಳಿ ನಾನಾಗೇ ಎಲ್ಲವನ್ನೂ ಹೇಳಿದ ಬಳಿಕ ಅವರು ತೇಜಸ್ವಿಯವರ ಪುಸ್ತಕದ ಹೆಸರು ಕೇಳಿ, ಸಾಧ್ಯವಾದರೆ ನೀವೇ ಒಂದು ಪ್ರತಿ ತಂದುಕೊಡಿ ಓದುತ್ತೇನೆ ಎಂದರು!

ಅಲ್ಲಿಂದ ನೇರ ಸಂಪಳ್ಳಿಯ ಮನೆಗೆ ಹೋದವನು, ಸಂಜೆ ಒಂದು ಕಾಲದಲ್ಲಿ ಸ್ವತಃ ಫೇಮಸ್ ಬೇಟೆಗಾರನಾದ ನಮ್ಮ ದೊಡ್ಡಪ್ಪನ ಬಳಿ ಹೋಗಿ ಆ ಬ್ರಿಟಿಷ್ ಬೇಟೆಗಾರ, ಹೊಳಗೋಡು ಸಾಬರ ಬೇಟೆಯ ಬಗ್ಗೆ ಕೇಳಿದೆ. ದೊಡ್ಡಪ್ಪ 80ರ ಇಳಿ ವಯಸ್ಸಿನ್ನಲ್ಲೂ 20ರ ಹರಯದ ಉತ್ಸಾಹದಿಂದ ತಾನು ಕೇಳಿದ ಅಂಡರ್ಸನ್ ಸಾಹಸವನ್ನೂ, ತನ್ನ ಬೇಟೆಯ ಗುರು ಹೊಳಗೋಡು ಸಾಬರ ಬೇಟೆಯ ರೋಚಕ ಕಥೆಗಳ ಸುರುಳಿ ಬಿಚ್ಚತೊಡಗಿದ!
———————-

ಐಐಟಿಗಾಗಿ ಲಾಬಿ: ಶಿವಮೊಗ್ಗದ ಸದ್ದಿಲ್ಲ?

ಕೇಂದ್ರ ಸರ್ಕಾರ ಬಜೆಟ್‍ನಲ್ಲಿ ಕರ್ನಾಟಕದಲ್ಲಿ ಹೊಸ ಐಐಟಿ ಸ್ಥಾಪಿಸುವುದಾಗಿ ಘೋಷಿಸಿದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿರುಸಿನ ಪೈಪೋಟಿ ಆರಂಭವಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊಸ-ಹೊಸ ಅಭಿವೃದ್ಧಿ ಯೋಜನೆ, ಸಂಸ್ಥೆಗಳ ಸೆಳೆಯುವಲ್ಲಿ ಮುಂಚೂಣಿಯಲ್ಲಿದ್ದ ಶಿವಮೊಗ್ಗದಲ್ಲಿ ಮಾತ್ರ ಐಐಟಿ ಸ್ಥಾಪನೆಗೆ ಹಲವು ಪೂರಕ ಅಂಶಗಳಿದ್ದರೂ ಐಐಟಿಗಾಗಿನ ಲಾಬಿಯಲ್ಲಿ ಜಿಲ್ಲೆಯ ಹೆಸರೇ ಕೇಳಿಬರುತ್ತಿಲ್ಲ… ಏಕೆ?  ವಿವರ…http://echharike.blogspot.in/