ಬಾಬಣ್ಣನ ಮತ್ತೊಂದು ಪವಾಡ

16-img_1973

ಅದಿನ್ನೂ ಗೌರಿ ಹಬ್ಬದ ಹೊಳವು. ಮೂರು ತಿಂಗಳಿಂದ ಕಾನು ಬಯಲನ್ನು ಒಂದು ಮಾಡುವಂತೆ ಭೋರ್ಗರೆದ ಮಳೆ ಬಿಡುವು ನೀಡಿ, ಬಿಸಿಲ ಝಳ ನೆಲಕ್ಕೆ ತಾಗಿ ಜಡ್ಡುಗಟ್ಟಿದ ನೆಲದೆದೆಯಲ್ಲಿ ಬೆಚ್ಚನೆಯ ಬಸಿರು ಮೊಳೆವ ಕಾಲ. ಕಾಡಿನೆದೆಯಲ್ಲೂ ಸಣ್ಣಗೆ ಜೀವ ಜಗತ್ತು ಮೈಕೊಡವಿ ತಿಂಗಳುಗಳ ಜಡತೆ ಕಳಚಿ ಕೈಕಾಲು ಆಡಿಸುವ ಉಮೇದು ಪಡೆದಿತ್ತು.

ಹೊಳಗೋಡು ಬಾಬಣ್ಣ ಗದ್ದೆ ಬೇಸಾಯದ ಬಿಡುವು ಮಾಡಿಕೊಂಡು ಹಲವು ದಿನಗಳ ಬಳಿಕ ತೋಟಾ(ತೋಟಾಕೋವಿ) ಹೆಗಲಿಗೇರಿಸಿ ಹೊರಟ ಕಾವಿಕಲ್ಲಾಣಿಯತ್ತ ಮುಖ ಮಾಡಿ. ಜೊತೆಗೆ ಬಾಲದಂತೆ ಗಾಮ್ಯ ಮತ್ತವನ ಗೆಣೆಕಾರನೂ ಹೊರಟರು. ನಡು ಮಧ್ಯಾಹ್ನದ ಹೊತ್ತಾದ್ದರಿಂದ ಬಿಸಿಲು ಚೂರು ಚುರುಕಾಗೇ ಇತ್ತು. ಕಣ್ಣು ಹಾದೆಲ್ಲೆಲ್ಲಾ ಕಾಲುದಾರಿಯುದ್ದಕ್ಕೂ ಹಸಿರು ಹಾವಸೆಯ, ಹರಿವ ಜಲಬುಗ್ಗೆಯ ನೀರೇ. ನೀರದಾರಿಯಲ್ಲೇ ಹೆಜ್ಜೆ ಇಕ್ಕುತ್ತಾ ಹೊರಟರು ಮೂವರು.

ಮನೆಯ ಹಿತ್ತಿಲಿನಿಂದ ಹೊರಟು ಎರಡು ಫರ್ಲಾಂಗು ಕಾಡಿನ ಕಿರುದಾರಿಯಲ್ಲಿ ಸಾಗಿದ ಅವರು ಇನ್ನೇನು ಕಾವಿಕಲ್ಲಾಣಿ ಏರಬೇಕು ಎನ್ನುವ ಹೊತ್ತಿಗೆ ಆ ಕಾಲ್ದಾರಿ ತೊರೆದು ಗಿಡ(ಕಾನು) ನುಗ್ಗಿದರು. ದಟ್ಟ ಕುಮಸಲು ಮಟ್ಟಿ, ಕಾಂಗ್ರೆಸ್ ಗಿಡಗಳ ನಡುವೆ ಕಚ್ಚು ಕುಲ್ಡಿ ನೊಣ, ನೊರ್ಜುಗಳನ್ನು ಕೈಯಲ್ಲೇ ಜಾಡಿಸುತ್ತಾ ಹೆಚ್ಚೂ ಕಡಿಮೆ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ನಡುಬಗ್ಗಿಸಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ನಡೆದರು.

ಬಾಬಣ್ಣ ಮುಂದೆ ಕಣ್ಣುಗಳನ್ನು ಲಂಟಾನದ ಗೀಜಿನ ನಡುವೆ ಕಣ್ಣು ಹಾಯಿಸುವವರೆಗೆ ದೃಷ್ಟಿ ನೆಟ್ಟು, ಪ್ರಾಣಿಗಳ ಹೆಜ್ಜೆ ಸಪ್ಪಳ ಕೇಳಲು ಕಿವಿಯಗಲಿಸಿ ಚುರುಕುಗಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಇತ್ತ ಗಾಮ್ಯ ತನ್ನ ಚೋಟು ಬೀಡಿ ಬಾಯಲ್ಲಿ ಕಚ್ಚಿ, ಒಡೆಯನ ಹಿಂದೆ ಹಿಂದೆ ಪಾಲಿಸುತ್ತಿದ್ದ. ನಡುವೆ ಕಚ್ಚಿದ ಬೀಡಿಯ ಹೊಗೆ ಎದೆಯಲ್ಲಿ ಸಿಕ್ಕಿ, ಕೊಸಕ್ಕನೆ ಕೆಮ್ಮಿದ. ಬಾಬಣ್ಣ ಇನ್ನೇನು ಹಿಂತಿರುಗಿ ಗಾಮ್ಯಗೆ ಉಗಿಯಬೇಕು ಮಕಕ್ಕೆ ಎನ್ನುವಷ್ಟರಲ್ಲಿ ಹತ್ತೇ ಮಾರು ದೂರದಲ್ಲಿ ದಡಕ್ಕೆಂದ ಸದ್ದು ಕೇಳಿತು. ಬಾಬಣ್ಣ ಸರಸರನೆ ಸಾಗಿ ನೋಡುತ್ತಾರೆ; ಭರ್ಜರಿ ಕಡವೆಯ ಜೋಡಿಯೊಂದು ಕುಮಸಲು ಮಟ್ಟಿಯ ಮೇಲೇ ಜಿಗಿದು ಮರೆಯಾಯಿತು.

ಇದು ಈ ಗಾಮ್ಯನ ಕೆಮ್ಮು ಮಾಡಿದ ಎಡವಟ್ಟು. ಇಲ್ಲವಾಗಿದ್ರೆ ಜೋಡಿಯಾಗೇ ನಿಂತಿದ್ದ ಎರಡನ್ನೂ ಒಂದೇ ಈಡಿಗೆ ಹೊಡೆದುರುಳಿಸುತ್ತಿದ್ದೆ ಎಂದು ಹಣೆ ಚಚ್ಚಿಕೊಂಡು ಬಾಬಣ್ಣ, “ಥೂ ಲೌಡಿಮಗನೆ,.. ನಿನಗೇನಾತೊ, ಯಾವಾಗ್ನೋಡಿದ್ರೂ ಆ ಬೀಡಿ ಕಚ್ಚಕೊಂಡಿರ್ತಿಯಲ್ಲೊ. ನಿನ್ನ ಮನೆಹಾಳಾಗ… ರಂಡೇ ಮಗನೆ,.. ” ಎಂದು ವಾಚಾಮಗೋಚರ ಉಗಿದರು. ಅದನ್ನೂ ಗುಸುಗುಸು ದನಿಯಲ್ಲೇ !

ಆದರೆ, ಅವರಿಗೆ ಒಂದು ನಂಬಿಕೆ ಇತ್ತು. ಜೋಡಿ ಮಿಕ ಏನೇ ಆದರೂ ಬಹಳ ದೂರ ಹೋಗಲಾರವು. ಹೇಗಾದರೂ ಮಾಡಿ ಪತ್ತೆ ಮಾಡಲೇಬೇಕು ಎಂದು ಕಡವೆಗಳ ಹೆಜ್ಜೆ ಜಾಡು ಹಿಡಿದು ಸಾಗಿದರು. ಸದ್ಯ ಅವತ್ತು ಅವರ ಬೇಟೆನಾಯಿಗಳು ಜೊತೆಗಿರಲಿಲ್ಲ. ಕಾವಿಕಲ್ಲಾಣೆಯ ಬದಿಯಲ್ಲೇ ಇರುವ ಸಂಪಳ್ಳಿ ಮನೆಯ ನಾಯಿಗಳೂ ಇವರ ಸುಳಿವು ಹಿಡಿದು ಬಂದಿರಲಿಲ್ಲ. ಹಾಗಾಗಿ ಬಾಬಣ್ಣದ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇರಲಿಲ್ಲ. ಕಾವಿ ಕಲ್ಲಾಣೆಯನ್ನು ಏರಿ, ಇಳಿದು ಬಳುವಳಿಗುಡ್ಡದ ಕಾಲಿನ ಕಣಿವೆಯತ್ತ ಹೆಜ್ಜೆ ಹಾಕಿದರು. ದನಕರುಗಳ ಸದ್ದೂ ಇರಲಿಲ್ಲ. ಹಸಿ ನೆಲವಾದ್ದರಿಂದ ಕಡವೆ ಹೆಜ್ಜೆಗಳು ಅರ್ಧ ಫರ್ಲಾಂಗು ಆದರೂ ಅಚ್ಚಳಿಯದೇ ಮೂಡಿದ್ದವು. ಇನ್ನಷ್ಟು ದೂರು ಸಾಗಿದರೂ ಅವುಗಳನ್ನು ಪತ್ತೆ ಮಾಡುವುದು ಕಷ್ಟವೇನಿರಲಿಲ್ಲ.

ಆದರೆ, “ಕೈಯಲ್ಲೇ ವಿದ್ಯೆ ಇಟ್ಟುಕೊಂಡು ಸುಖಾಸುಮ್ಮನೆ ಅಲೆಯುವುದೇಕೆ ಮಾರಾಯ್ರೆ, ನೋಡಾಣ, ಮದ್ದು ಹೂಡಿ” ಎಂದ ಗಾಮ್ಯ ಅಂಜುತ್ತಲೇ. ತಿರುಗಿ ಉಗಿದಾರು ಎಂಬ ಅಂಜಿಕೆ ಅವನದ್ದು. ಮೇಲೆ ಮುಗಿಲು ದಟ್ಟೈಸುತ್ತಿದ್ದುದನ್ನು ಕಂಡು ಮಳೆ ಬಂದರೆ ಕೆಲಸ ಕೆಟ್ಟಂತೆಯೇ ಎಂದು ಎಣಿಸಿದ ಬಾಬಣ್ಣ ಗಾಮ್ಯನ ಸಲಹೆ ಸಮಯೋಚಿತವೆ ಎಂದುಕೊಂಡು, ಮಿಕದ ಹೆಜ್ಜೆಯನ್ನು ಸರಿಯಾಗಿ ಪರಾಂಬರಿಸಿ “ಇಲ್ಲೇ ಇರ್ರೋ, ಬಂದೆ..” ಎಂದು ತನ್ನ ಕಾಲಾಳುಗಳಿಗೆ ಹೇಳಿ ಮಟ್ಟಿ ನುಗ್ಗಿ ಹೋದರು.

ಐದೇ ನಿಮಿಷದಲ್ಲಿ ಕೈಯಲ್ಲಿ ಸೊಪ್ಪು ಹಿಡಿದು ಬಂದ ಬಾಬಣ್ಣ ಪ್ರಾಣಿಯ ಹೆಜ್ಜೆಯ ಮೇಲೆ ಸೊಪ್ಪು ಇಟ್ಟು ತನ್ನ ಕಾಲಿನ ಹೆಬ್ಬೆರಳಲ್ಲಿ ಮೆಟ್ಟಿ ಮುಗಿಲತ್ತ ಮುಖಮಾಡಿ ಮಂತ್ರದಂತೆ ಏನನ್ನೋ ಪಠಿಸಿದ. ಬಳಿಕ ಕಡವೆ ಹೋದ ದಿಕ್ಕಿಗೆ ನಳಿಕೆ ತೋಟಾವನ್ನು ನೇರ ಗುರಿಮಾಡಿ ಕಣ್ಣಮುಂದೆ ಯಾವುದೋ ಪ್ರಾಣಿ ಇದೆ ಎಂಬಂತೆ ಕಾದ. ಗಾಮ್ಯ ಮತ್ತು ಆತನ ಗೆಣೆಕಾರ ತುಸು ಹಿಂದಕ್ಕೆ ದೂರ ಸರಿದು ಮರದ ಮರೆಯಲ್ಲಿ ಅಡಗಿ ನಿಂತರು. ಒಂದು, ಎರಡು, ಮೂರು,… ಐದು ನಿಮಿಷವಾಯ್ತು, ಆರು, ಏಳು…. ಢಂ!

ಇಡೀ ಕಾಡೇ ಮೊಳಗಿತು ಗುಂಡಿನ ಸದ್ದಿಗೆ. ಗಾಮ್ಯ ದಢಕ್ಕನೆ ಜಿಗಿದು ನೋಡುತ್ತಾನೆ, ಗುಂಡು ಸಿಡಿದ ಹೊಗೆ, ಎದುರಿಗೆ ನಗುತ್ತಾ ನಿಂತಿದ್ದ ಬಾಬಣ್ಣ.. ಬಿಟ್ಟರೆ ಇನ್ನೇನು ಕಾಣಿಸುತ್ತಿಲ್ಲ. ಅರೆ! ಗುಂಡು ಹಾರಿದ್ದು ಕೈತಪ್ಪಿಯೇ? ಎಂದುಕೊಂಡ ಗಾಮ್ಯ, “ಒಡೆಯಾ ಏನಾತು? ಯಾಕ್ರೀ.. ” ಕಾಳಜಿ, ಭಯ ಮತ್ತು ನಿರಾಶೆ ಬೆರೆತ ದನಿಯಲ್ಲಿ.

“ಮುಂದೆ ಬಂದು ನೋಡಾ ಪುಕ್ಕಲು ಲೌಡಿಗಂಡ..” ಎಂದ ಬಾಬಣ್ಣ ಇನ್ನು ತನ್ನ ಕೆಲಸ ಮುಗಿಯಿತು ಎಂಬಂತೆ ನಿರಾಳನಾಗಿ ನಾಲ್ಕು ಹೆಜ್ಜೆ ಹಾಕಿ ಮುಂದೆ ನೆಲಕ್ಕೆ ಒರಗಿದ್ದ ಕಡವೆಯ ಬಳಿ ಸಾಗಿದ. ಅವರನ್ನು ಹಿಂಬಾಲಿಸಿದ ಗಾಮ್ಯ, ಕಡವೆಯ ಕಂಡು ಹೌಹಾರಿದ. ಭರ್ಜರಿ ನಾಕಾಳು ಹೋರಿ(ನಾಲ್ವರು ಹೊರುವಷ್ಟು ಭಾರದ್ದು) ಕಂಡು “ಭಾರೀ ಹೋರಿ ಕಣ್ಲಾ, ಒಂದೇ ಏಟಿಗೆ ಒರಗ್ತು ನೋಡು ಹೆಂಗೆ” ಎಂದು ಗೆಣೆಕಾರಗೆ ಹೇಳಿ, ಕೊಂಬು ಹಿಡಿದು ಅಲುಗಾಡಿಸಿ, ಆಗಷ್ಟೇ ಬಿಸಿಯುಸಿರುವ ಸೂಸುತ್ತಿದ್ದ ಮೂಗಿನ ಹೊಳ್ಳೆಗಳನ್ನು ಗಮನಿಸಿದ. ಬಾಯಲ್ಲಿ ಬುರುಬು ಬರಲಾರಂಭಿಸಿತ್ತು. ಗುಂಡೇಟು ನೇರ ಎದೆಯ ಪಕ್ಕೆಗೇ ಬಿದ್ದಿದ್ದರಿಂದ ರಕ್ತ ಚಿಲ್ಲನೆ ಚೀರುತ್ತಿತ್ತು.

ಗಾಮ್ಯ ಮಿಕವನ್ನು ಹೊರಳಿಸಿ, ಕಾಲು, ಕತ್ತು ಸರಿಸಿ ನೋಡುತ್ತಲೇ ಇದ್ದ. ಅಷ್ಟರಲ್ಲಿ, ಬಾಬಣ್ಣ, “ಲೇ,.. ಇನ್ನೂ ಏನ್ ನೋಡ್ತಿಯಾ, ಗುಡುಗು ಶುರುವಾತು, ಬೇಗೆ ದಂಡಿಗೆ ಕಡಿ, ಹೆಗಲು ಕೊಡ್ರಿ,.. ಹೊತ್ತಾತು..” ಎಂದ. ಬಾಬಣ್ಣ ಧಾವಂತ ಅರಿತ ಕಾಲಾಳುಗಳಿಬ್ಬರೂ ಬಾಡೂಟ, ಸೇಂದಿಯ ಮತ್ತಿನಲ್ಲಿ ಆಗಲೇ ಖದರುಗುಟ್ಟಿ ಲಗುಬಗೆಯಲ್ಲಿ ದಂಡಿಗೆ ಕಡಿದು, ಮಿಕದ ಕಾಲು ಕಟ್ಟಿ ದಂಡಿಗೆ ತೂರಿಸಿ ಹೆಗಲು ಕೊಟ್ಟರು…

ಕರೆದು ಹೊಡೆದರು ತೊಗಲುಗೊಂಬಿನ ಹೋರಿ!

1340485_orig

ಕೆನೆತ್ ಆ್ಯಂಡರ್ಸನ್ ನಮ್ಮೂರಿನ ಸುತ್ತಮುತ್ತಲ ಕಾಡುಗಳಿಗೆ ಕಾಲಿಡುವ ಹೊತ್ತಿಗೆ ಹೊಳಗೋಡು ಬಾಬಣ್ಣ ತನ್ನ ಯೌವನದ ಹೊಸ್ತಿಲಲ್ಲಿದ್ದ. ಮೀಸೆ ಮೂಡುವ ಮುನ್ನವೇ ಜೋಡು ನಳಿಗೆಯ ಬಂದೂಕು ಅವನ ಹೆಗಲೇರಿತ್ತು. ಸುತ್ತಲ ಅಡ್ಡೇರಿ, ಜಂಬೂರುಮನೆ, ಗೌತಮಪುರ, ಹಿರೇಹಾರಕ, ಬೆಳ್ಳಂದೂರುಗಳ ದಟ್ಟ ಕಾಡು, ಕಾಡಿನ ನಡುವೆ ಬಿರುಬೇಸಿಗೆಯಲ್ಲೂ ಜುಳುಜುಳಿಸುತ್ತಿದ್ದ ಸವಳು(ತೊರೆ) ನೀರುಗಳು ಆತನ ಬಂದೂಕಿಗೆ ಬಲಿಯಾಗಲೆಂದೇ ಕೊಬ್ಬಿದ ಕಾಡು ಪ್ರಾಣಿಗಳಿಗೆ ಆಸರೆಯಾಗಿದ್ದವು.

ಅದರಲ್ಲೂ ಜಂಬೂರುಮನೆ, ಸಂಪಳ್ಳಿಯ ಕಾಡ ನಡುವಿನ ಕೆರೆಗಳಂತೂ ಸದಾ ನೀರಿನಿಂದ ತುಂಬಿತುಳುಕುತ್ತಾ ಕಾಡುಕೋಣ, ಜಿಂಕೆ, ಕಡವೆಗಳಿಗೆ ನೀರಿನ ಆಸರೆಯಾಗುತ್ತಲೇ ಹುಲಿ-ಚಿರತೆಗಳ ಹಸಿವಿಂಗಿಸುವ ತಾಣಗಳೂ ಆಗಿದ್ದವು. ಬೇಸಿಗೆಯಲ್ಲಂತೂ ಕಾಡ ನಡುವಿನ ನೀರಿನ ತೊಟ್ಟಿಗಳಂತಿದ್ದ ಈ ಕೆರೆಗಳಿಗೆ ಹಾಡು ಹಗಲೇ ಪ್ರಾಣಿಗಳು ಮುತ್ತುವುದು ಮಾಮೂಲಿಯಾಗಿತ್ತು. ಒಮ್ಮೊಮ್ಮೆ ಸೀಳುನಾಯಿ, ಕತ್ತೆಕಿರುಬಗಳು ಅಟ್ಟಿಸಿಕೊಂಡು ಬಂದಾಗ ಅವುಗಳ ದಾಳಿಯಿಂದ ಪಾರಾಗಲು ಜಿಂಕೆ- ಕಾಡುಕುರಿಗಳು ಮಧ್ಯಾಹ್ನದ ಬಿಸಿಲಲ್ಲೇ ಕೆರೆಯ ನೀರಿಗೆ ಧುಮುಕುವುದು ಕೂಡ ಇತ್ತು.

ಹಾಗಾಗಿ, ಹೊಳಗೋಡು ಬಾಬಣ್ಣ ತನ್ನ ಬಂದೂಕು, ಶಿಕಾರಿಯ ಕೈಯಾಳು-ಕಾಲಾಳು, ನಾಯಿಗಳ ತನ್ನ ದಂಡು ಕಟ್ಟಿಕೊಂಡು ಮನೆ ಹಿತ್ತಲಿನಿಂದಲೇ ಆರಂಭವಾಗುತ್ತಿದ್ದ ಕಾಡಿನ ಮೇಲೆ ದಂಡೆತ್ತಿಹೋಗುವುದು ಬೇಸಿಗೆಯಲ್ಲಂತೂ ನಿತ್ಯದ ನೇಮವಾಗಿತ್ತು.

ಹಾಗೇ, ಸಂಕ್ರಾತಿಯ ಕಳೆದ ಮೂರನೇ ದಿನವೊಂದರಲ್ಲಿ ಸುತ್ತುಮುತ್ತಲ ಇಡೀ ಸೀಮೆಗೆ ಎತ್ತರದ, ದಟ್ಟ ಕಾಡಿನ ಬಳುವಳಿ ಬೆಟ್ಟದ ಅಂಚಿನಲ್ಲಿ ಜಿಂಕೆಗಳು ಸದಾ ಇರುವ ತಪ್ಪಲಿನತ್ತ ಹೊರಟ. ಸಾಗರ ಪೇಟೆಯ ತನ್ನ ಹತ್ತಿರದ ನೆಂಟರ ಮನೆಯ ಮದುವೆ ಮೂರು ದಿನವಿದ್ದು, ಅದಕ್ಕಾಗಿ ಕಾಡುಕೋಣವನ್ನೋ, ಜಿಂಕೆಯನ್ನೋ ಹೊಡೆದು ಮಾಂಸವನ್ನು ಹೊತ್ತೊಯ್ಯುವ ಧಾವಂತ ಬಾಬಣ್ಣನದ್ದು. ಹಾಗಾಗಿ ಗಾಮ್ಯ, ಬಸ್ಯಾರ ಜೊತೆ ಅವತ್ತು ಮರಿಗ್ಯಾ, ಸೋಮನನ್ನೂ ಬಾಬಣ್ಣ ತನ್ನ ದಂಡಿಗೆ ಸೇರಿಸಿಕೊಂಡೇ ಕಾಡಿನ ಮೇಲೆ ದಂಡೆದ್ದಿದ್ದ.

ಆದರೆ, ಅವತ್ತು ಲಂಟಾನದ ಪೊದೆ, ಕಾರೆ, ಸೀಗೆ ಹಡ್ಲು, ಕುಮಸಲು ಮಟ್ಟಿ, ಬಿದಿರು ಮೆಳೆ ಸುತ್ತಿ ಕಾವಿಕಲ್ಲಾಣೆ ಹತ್ತಿ ಇಳಿದು ಬಸವಳಿದರೂ ಒಂದೇ ಒಂದು ದೊಡ್ಡ ಪ್ರಾಣಿಯೂ ಕಣ್ಣಿಗೆ ಕಾಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ಮೊಲ, ಬರ್ಕಾ ಕಣ್ಣಿಗೆ ಬಿದ್ದರೂ ದೊಡ್ಡ ಮಿಕಗಳಿಗೆಂದೇ ಬರೋಬ್ಬರಿ ಈಡು ಮಾಡಿಕೊಂಡು ಬಂದಿದ್ದ ಬಾಬಣ್ಣ ಸುಮ್ಮನೇ ಪುಟಗೋಸಿಗಳ ಮೇಲೆ ಗುಂಡು ಹಾರಿಸಿ ಮದ್ದುಗುಂಡು ಲುಕ್ಸಾನು ಮಾಡಿಕೊಳ್ಳಲು ಸಿದ್ಧನಿರಲಿಲ್ಲ! ಅಲ್ಲದೆ, ಜೊತೆಯಲ್ಲಿರುವ ಗಾಮ್ಯ, ಬಸ್ಯಾರ ಬಾಯಿಚಪಲಕ್ಕಲ್ಲದೆ, ಎಂತಹದ್ದೇ ಸಂದರ್ಭದಲ್ಲೂ ಚಿಕ್ಕಪುಟ್ಟ ಪ್ರಾಣಿಗಳ ಮೇಲೆ ಬಾಬಣ್ಣ ಈಡು ಹಾರಿಸಿದ್ದೇ ಇಲ್ಲ.

ಬಳುವಳಿ ಬೆಟ್ಟದ ತಪ್ಪಲೆಲ್ಲಾ ಅಲೆದು ಸುಸ್ತಾದರೂ ಯಾವ ಪ್ರಾಣಿಯೂ ಕಣ್ಣಿಗೆ ಬೀಳಲೇ ಇಲ್ಲ. ಸರಿ ಮಾರಾಯ ಇನ್ನೇನು ಮಾಡೋದು, ಅತ್ಲಾಗೆ ಜಂಬೂರುಮನೆ ಕೆರೆ ಅಂಚಲ್ಲಾದ್ರೂ ಏನಾರ ಕಣ್ಣಿಗೆ ಬೀಳ್ಬೋದಾ ನೋಡ್ಕಂದು ಮನೆ ದಾರಿ ಹಿಡಿಯೋಣ ಬನ್ರೋ ಎಂದು ಬಾಬಣ್ಣ ತನ್ನ ದಂಡಿಗೆ ಆಜ್ಞೆ ಮಾಡಿದ. ಬಾಬಣ್ಣ ಮುಂದೆ ಹೋದಂತೆ ದಂಡು ಅವನ ಹಿಂಬಾಲಿಸಿತು. ಆದರೆ ಅಲ್ಲೂ ನಿರಾಶೆ ಕಾದಿತ್ತು. ಕೆರೆಯ ಏರಿಯ ಮೇಲಿಂದ ಸೀಗೆಮಟ್ಟಿ ಆಣೆ ಕಡೆ ಹೆಜ್ಜೆ ಹಾಕುತ್ತಾ ಇವತ್ತು ಯಾರ ಮುಖ ನೋಡಿ ಬಂದೆವು, ಮನೆಯಿಂದ ಹೊರಬೀಳುವಾಗ ಎದುರಿಗೆ ಯಾರು ಸಿಕ್ಕರು,.. ಎಂದೆಲ್ಲಾ ಶಕುನ ಲೆಕ್ಕಾಚಾರ ಮಾಡುತ್ತಿದ್ದ ತನ್ನ ದಂಡಿನ ಮಾತಿನ ಮಲ್ಲ ಬಸ್ಯಾಗೆ ಗದರಿ ಬಾಯಿ ಮುಚ್ಚಿಸಿದ ಬಾಬಣ್ಣಗೆ ಅವನ ಮಾತಿನಲ್ಲೂ ನಿಜವಿರಬಹುದೇ ಎನಿಸಿದರೂ, ಯಾರ ಮುಖ-ತಿಕದ ಮಾತಲ್ಲ ಇದು, ಆದ್ರೆ ಕಲಸೆ ಮಾರ್ಯನದ್ದೇ ಕೆಲಸವಿರಬಹುದು ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ.

ಏನೇನೋ ಮೋಡಿ, ಮಾಟದಲ್ಲಿ ಎತ್ತಿದಕೈ ಆದ ಮಾರ್ಯ ಮತ್ತು ಬಾಬಣ್ಣನ ನಡುವೆ ಶಿಕಾರಿ ಮೇಲುಗೈ ಸಾಧಿಸುವ ಪೈಪೋಟಿ. ಅದರ ಭಾಗವೇ ಒಬ್ಬರ ಮೇಲೊಬ್ಬರು ಮಾಟ-ಮೋಡಿ ಮಾಡಿಸಿ ಪ್ರಾಣಿಗಳು ಕಣ್ಣಿಗೆ ಬೀಳದಿರುವಂತೆ, ಬಿದ್ದರೂ ಈಡಿಗೆ ತಾಗದಂತೆ, ಈಡು ತಿಂದರೂ ಬಲಿ ಬೀಳದಂತೆ ಮಂತ್ರ ಹಾಕಿಸುವುದು, ಎದುರು ಪಾರ್ಟಿ ಮಾಡಿದ ಮೋಡಿ- ಮಾಟ ತೆಗೆಸುವುದು ಒಂದು ರೀತಿಯ ಅನೂಚಾನ ಆಚರಣೆಯೇ ಆಗಿಬಿಟ್ಟಿತ್ತು.

ಈ ಬಾರಿ ಕೂಡ ಮಾರ್ಯನೇ ಏನೋ ಮಾಡಿದ್ದಾನೆ ಎಂದುಕೊಂಡ ಬಾಬಣ್ಣ, ತುಸು ಇರ್ರಲೇ ಎಂದು ತನ್ನ ದಂಡಿಗೆ ಹೇಳಿ, ಒಂದು ಕುಮುಸಲು ಮಟ್ಟಿಯೊಳಗೆ ನುಸುಳಿ ಹೋದ. ಜೊತೆ ಬಂದವರ ಅರಿವಿಗೆ ಬರದಂತೆ ತನ್ನ ಅಂತಿಮ ಅಸ್ತ್ರವಾದ ಮದ್ದಿನ ಗಿಡದ ನಾಲ್ಕು ಎಲೆ ಕಿತ್ತುಕೊಂಡು ಬಂದ. ಬಂದವನೇ ನೋಡ್ರಲೇ, ಯಾವನ್ ಏನಾರಾ ಮಾಡ್ಲಿ, ನಡ್ರೋ ಚಿಕ್ಕಿಮಿಕನೋ, ಕೋಣನೋ ಯಾವುದಾದ್ರೂ ಹೆಜ್ಜೆ ಹುಡುಕ್ರೋ..ಎಂದ.

ಬಾಬಣ್ಣನ ಮಾತು ಕೇಳುತ್ತಲೇ ಅವನ ಮುಂದಿನ ಉದ್ದೇಶ ಗ್ರಹಿಸಿದ ದಂಡು, ಒಡೆಯನ ಆಜ್ಞೆಯಂತೆ ನಡುಬಗ್ಗಿಸಿ ನೆಲದಲ್ಲಿ ಎಲ್ಲಾದರೂ ಚಿಕ್ಕಿಮಿಕದ ಹೆಜ್ಜೆ ಗುರುತು ಮೂಡಿರಬಹುದೇ ಎಂದು ಶೋಧಿಸತೊಡಗಿದರು. ಆದರೆ, ತಾವು ತಿನ್ನಲಾರದ ಮತ್ತು ಇತರ ಎತ್ತು-ಎಮ್ಮೆಗಳ ಹೆಜ್ಜೆ ಗುರುತಿನೊಂದಿಗೆ ಪ್ರತ್ಯೇಕಿಸಲಾಗದ ಕಾಡುಕೋಣದ ಹೆಜ್ಜೆ ಗುರುತುಗಳನ್ನು ಹುಡುಕುವ ಯೋಚನೆಯನ್ನೂ ಮಾಡಲಿಲ್ಲ!

ಸೀಗೆಮಟ್ಟಿ ಆಣೆ ಇಳಿದು ಇನ್ನೇನು ಸಂಪಳ್ಳಿ ಕೆರೆ ಹತ್ತಿರ-ಹತ್ತಿರ ಬರುತ್ತಿರುವಾಗ ಗಾಮ್ಯ, ಅಣ್ಣಾ ಬಾರಣ್ಣ, ಲಗೂ ಬಾರಣ್ಣಾ ಎಂದು ಬಾಬಣ್ಣನ ಕರೆದ. ಬಾಬಣ್ಣ ದೌಡಾಯಿಸಿ ಗಾಮ್ಯನ ಕೈತೋರಿದ ಹೆಜ್ಜೆ ಗುರುತು ಪರಾಂಬರಿಸಿದ. ನೋಡ-ನೋಡುತ್ತಲೇ ಇದು ತೊಗಲುಗೊಂಬಿನ ಹೋರಿಯದ್ದೇ ಎಂದು ನಿಶ್ಚಯಿಸಿದ. ಅಂದರೆ, ಒಮ್ಮೆ ಕೊಂಬು ಉದುರಿಸಿ ಹೊಸ ಕೊಂಬು ಮೂಡಿರುವ ಭಾರೀ ಗಂಡು ಜಿಂಕೆಯ ಹೆಜ್ಜೆ ಗುರುತು ಬಾಬಣ್ಣಗೆ ಹುಮ್ಮಸ್ಸು ಮೂಡಿಸಿತು.

ತನ್ನ ಮಸಿಚೀಲ(ಮದ್ದುಗುಂಡಿನ ಚೀಲ)ದಿಂದ ಮದ್ದಿನ ಗಿಡದ ಎಲೆಯೊಂದನ್ನು ತೆಗೆದು ಒಮ್ಮೆ ಆಕಾಶದತ್ತ ಮುಖಮಾಡಿ ‘ಪಡೆದವನಿಗೆ’ ಒಂದು ಪಾರ್ಥನೆ ಸಲ್ಲಿಸಿ, ಎಲೆಯನ್ನು ಹೆಜ್ಜೆಯ ಗುರುತಿನ ಮೇಲಿಟ್ಟು ಅದನ್ನು ತನ್ನ ಕಾಲ ಹೆಬ್ಬೆರಳಿಂದ ಮೆಟ್ಟಿ ನಿಂತು ಹೆಜ್ಜೆ ಜಾಡಿನಲ್ಲಿ ಪ್ರಾಣಿ ಹೋದ ದಿಕ್ಕು ಗಮನಿಸಿ ಅತ್ತ ಮುಖಮಾಡಿ ಮನದಲ್ಲೇ ಏನೇನೋ ಜಪಿಸತೊಡಗಿದ.

ಬಾಬಣ್ಣನ ಹೆಜ್ಜೆ ಜಾಡಿನ ಮದ್ದಿನ ಬೇಟೆ ನಾಜೂಕು ಬಲ್ಲ ದಂಡಿನವರು ದೂರ ಸರಿದು ಒಂದೊಂದು ಮರದ ಮರೆಯಲ್ಲಿ ಮರೆಯಾದರು. ಅದಾಗಿ ಅರ್ಧ ಗಳಿಗೆಯಲ್ಲೇ ಬಾಬಣ್ಣನ ಜೋಡುನಳಿಗೆ ಬಂದೂಕು ಮೊಳಗಿತು… ಬಾಬಣ್ಣನ ಈಡಿನ ಸದ್ದಿನ ವೈಖರಿಯ ಗ್ರಹಿಸಿದ ದಂಡಿನವರು ಬೇಟೆ ನೆಲಕ್ಕೊರಗದೇ ಇರದು ಎಂದು ಮರದ ಮರೆಯಿಂದ ಹೊರಬಂದು ಬಾಬಣ್ಣನ ಸೇರಿಕೊಂಡರು. ನಾಲ್ಕು ಮಾರು ದೂರದಲ್ಲಿ ಲಂಟಾನದ ಪೊದೆಯ ನಡುವೆ ನೆಲಕ್ಕೊರಗಿದ್ದ ಮೂರು ಕವಲಿನ ತೊಗಲುಗೊಂಬಿನ ಜಿಂಕೆಯ ಎದೆ ಸೀಳಿ ರಕ್ತ ನೆಲಕ್ಕಿಳಿಯುತ್ತಿತ್ತು. ಗಂಟಲ ಗೊರ-ಗೊರ ಸದ್ದು ಹೊರತುಪಡಿಸಿ ಸುತ್ತೆಲ್ಲಾ ಬರೀ ಮೌನ…

****

ಪ್ರಾಣಿಯ ಹೆಜ್ಜೆ ಜಾಡಿನ ಮೇಲೆ ಮದ್ದಿನ ಸೊಪ್ಪು ಇಟ್ಟು, ಆ ಪ್ರಾಣಿಯನ್ನು ತಾನಿರುವ ಬಳಿಗೇ ಕರೆದು ಬೇಟೆಯಾಡುವ ಬಾಬಣ್ಣನ ವಿಸ್ಮಯಕಾರಿ ಶಿಕಾರಿ ವಿದ್ಯೆಯ ಕಂಡು-ಕೇಳಿದ ನಮ್ಮೂರಿನ ಜನರ ಬಾಯಲ್ಲಿ ಈಗಲೂ ಇಂತಹ ಹತ್ತಾರು ಘಟನೆಗಳು ನಾಟಿ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ಕತೆಗಳಾಗಿ ಮತ್ತೆ ಮತ್ತೆ ಮೆಲುಕಾಡುತ್ತವೆ.