ಬಾಬಣ್ಣನ ಮತ್ತೊಂದು ಪವಾಡ

16-img_1973

ಅದಿನ್ನೂ ಗೌರಿ ಹಬ್ಬದ ಹೊಳವು. ಮೂರು ತಿಂಗಳಿಂದ ಕಾನು ಬಯಲನ್ನು ಒಂದು ಮಾಡುವಂತೆ ಭೋರ್ಗರೆದ ಮಳೆ ಬಿಡುವು ನೀಡಿ, ಬಿಸಿಲ ಝಳ ನೆಲಕ್ಕೆ ತಾಗಿ ಜಡ್ಡುಗಟ್ಟಿದ ನೆಲದೆದೆಯಲ್ಲಿ ಬೆಚ್ಚನೆಯ ಬಸಿರು ಮೊಳೆವ ಕಾಲ. ಕಾಡಿನೆದೆಯಲ್ಲೂ ಸಣ್ಣಗೆ ಜೀವ ಜಗತ್ತು ಮೈಕೊಡವಿ ತಿಂಗಳುಗಳ ಜಡತೆ ಕಳಚಿ ಕೈಕಾಲು ಆಡಿಸುವ ಉಮೇದು ಪಡೆದಿತ್ತು.

ಹೊಳಗೋಡು ಬಾಬಣ್ಣ ಗದ್ದೆ ಬೇಸಾಯದ ಬಿಡುವು ಮಾಡಿಕೊಂಡು ಹಲವು ದಿನಗಳ ಬಳಿಕ ತೋಟಾ(ತೋಟಾಕೋವಿ) ಹೆಗಲಿಗೇರಿಸಿ ಹೊರಟ ಕಾವಿಕಲ್ಲಾಣಿಯತ್ತ ಮುಖ ಮಾಡಿ. ಜೊತೆಗೆ ಬಾಲದಂತೆ ಗಾಮ್ಯ ಮತ್ತವನ ಗೆಣೆಕಾರನೂ ಹೊರಟರು. ನಡು ಮಧ್ಯಾಹ್ನದ ಹೊತ್ತಾದ್ದರಿಂದ ಬಿಸಿಲು ಚೂರು ಚುರುಕಾಗೇ ಇತ್ತು. ಕಣ್ಣು ಹಾದೆಲ್ಲೆಲ್ಲಾ ಕಾಲುದಾರಿಯುದ್ದಕ್ಕೂ ಹಸಿರು ಹಾವಸೆಯ, ಹರಿವ ಜಲಬುಗ್ಗೆಯ ನೀರೇ. ನೀರದಾರಿಯಲ್ಲೇ ಹೆಜ್ಜೆ ಇಕ್ಕುತ್ತಾ ಹೊರಟರು ಮೂವರು.

ಮನೆಯ ಹಿತ್ತಿಲಿನಿಂದ ಹೊರಟು ಎರಡು ಫರ್ಲಾಂಗು ಕಾಡಿನ ಕಿರುದಾರಿಯಲ್ಲಿ ಸಾಗಿದ ಅವರು ಇನ್ನೇನು ಕಾವಿಕಲ್ಲಾಣಿ ಏರಬೇಕು ಎನ್ನುವ ಹೊತ್ತಿಗೆ ಆ ಕಾಲ್ದಾರಿ ತೊರೆದು ಗಿಡ(ಕಾನು) ನುಗ್ಗಿದರು. ದಟ್ಟ ಕುಮಸಲು ಮಟ್ಟಿ, ಕಾಂಗ್ರೆಸ್ ಗಿಡಗಳ ನಡುವೆ ಕಚ್ಚು ಕುಲ್ಡಿ ನೊಣ, ನೊರ್ಜುಗಳನ್ನು ಕೈಯಲ್ಲೇ ಜಾಡಿಸುತ್ತಾ ಹೆಚ್ಚೂ ಕಡಿಮೆ ನಾಲ್ಕು ಕಾಲಿನ ಪ್ರಾಣಿಗಳಂತೆಯೇ ನಡುಬಗ್ಗಿಸಿ ಹೆಜ್ಜೆ ಮೇಲೆ ಹೆಜ್ಜೆ ಹಾಕುತ್ತಾ ನಡೆದರು.

ಬಾಬಣ್ಣ ಮುಂದೆ ಕಣ್ಣುಗಳನ್ನು ಲಂಟಾನದ ಗೀಜಿನ ನಡುವೆ ಕಣ್ಣು ಹಾಯಿಸುವವರೆಗೆ ದೃಷ್ಟಿ ನೆಟ್ಟು, ಪ್ರಾಣಿಗಳ ಹೆಜ್ಜೆ ಸಪ್ಪಳ ಕೇಳಲು ಕಿವಿಯಗಲಿಸಿ ಚುರುಕುಗಾಗಿ ಹೆಜ್ಜೆ ಹಾಕುತ್ತಲೇ ಇದ್ದರು. ಇತ್ತ ಗಾಮ್ಯ ತನ್ನ ಚೋಟು ಬೀಡಿ ಬಾಯಲ್ಲಿ ಕಚ್ಚಿ, ಒಡೆಯನ ಹಿಂದೆ ಹಿಂದೆ ಪಾಲಿಸುತ್ತಿದ್ದ. ನಡುವೆ ಕಚ್ಚಿದ ಬೀಡಿಯ ಹೊಗೆ ಎದೆಯಲ್ಲಿ ಸಿಕ್ಕಿ, ಕೊಸಕ್ಕನೆ ಕೆಮ್ಮಿದ. ಬಾಬಣ್ಣ ಇನ್ನೇನು ಹಿಂತಿರುಗಿ ಗಾಮ್ಯಗೆ ಉಗಿಯಬೇಕು ಮಕಕ್ಕೆ ಎನ್ನುವಷ್ಟರಲ್ಲಿ ಹತ್ತೇ ಮಾರು ದೂರದಲ್ಲಿ ದಡಕ್ಕೆಂದ ಸದ್ದು ಕೇಳಿತು. ಬಾಬಣ್ಣ ಸರಸರನೆ ಸಾಗಿ ನೋಡುತ್ತಾರೆ; ಭರ್ಜರಿ ಕಡವೆಯ ಜೋಡಿಯೊಂದು ಕುಮಸಲು ಮಟ್ಟಿಯ ಮೇಲೇ ಜಿಗಿದು ಮರೆಯಾಯಿತು.

ಇದು ಈ ಗಾಮ್ಯನ ಕೆಮ್ಮು ಮಾಡಿದ ಎಡವಟ್ಟು. ಇಲ್ಲವಾಗಿದ್ರೆ ಜೋಡಿಯಾಗೇ ನಿಂತಿದ್ದ ಎರಡನ್ನೂ ಒಂದೇ ಈಡಿಗೆ ಹೊಡೆದುರುಳಿಸುತ್ತಿದ್ದೆ ಎಂದು ಹಣೆ ಚಚ್ಚಿಕೊಂಡು ಬಾಬಣ್ಣ, “ಥೂ ಲೌಡಿಮಗನೆ,.. ನಿನಗೇನಾತೊ, ಯಾವಾಗ್ನೋಡಿದ್ರೂ ಆ ಬೀಡಿ ಕಚ್ಚಕೊಂಡಿರ್ತಿಯಲ್ಲೊ. ನಿನ್ನ ಮನೆಹಾಳಾಗ… ರಂಡೇ ಮಗನೆ,.. ” ಎಂದು ವಾಚಾಮಗೋಚರ ಉಗಿದರು. ಅದನ್ನೂ ಗುಸುಗುಸು ದನಿಯಲ್ಲೇ !

ಆದರೆ, ಅವರಿಗೆ ಒಂದು ನಂಬಿಕೆ ಇತ್ತು. ಜೋಡಿ ಮಿಕ ಏನೇ ಆದರೂ ಬಹಳ ದೂರ ಹೋಗಲಾರವು. ಹೇಗಾದರೂ ಮಾಡಿ ಪತ್ತೆ ಮಾಡಲೇಬೇಕು ಎಂದು ಕಡವೆಗಳ ಹೆಜ್ಜೆ ಜಾಡು ಹಿಡಿದು ಸಾಗಿದರು. ಸದ್ಯ ಅವತ್ತು ಅವರ ಬೇಟೆನಾಯಿಗಳು ಜೊತೆಗಿರಲಿಲ್ಲ. ಕಾವಿಕಲ್ಲಾಣೆಯ ಬದಿಯಲ್ಲೇ ಇರುವ ಸಂಪಳ್ಳಿ ಮನೆಯ ನಾಯಿಗಳೂ ಇವರ ಸುಳಿವು ಹಿಡಿದು ಬಂದಿರಲಿಲ್ಲ. ಹಾಗಾಗಿ ಬಾಬಣ್ಣದ ನಿರೀಕ್ಷೆ ಹುಸಿಯಾಗುವ ಸಾಧ್ಯತೆ ಇರಲಿಲ್ಲ. ಕಾವಿ ಕಲ್ಲಾಣೆಯನ್ನು ಏರಿ, ಇಳಿದು ಬಳುವಳಿಗುಡ್ಡದ ಕಾಲಿನ ಕಣಿವೆಯತ್ತ ಹೆಜ್ಜೆ ಹಾಕಿದರು. ದನಕರುಗಳ ಸದ್ದೂ ಇರಲಿಲ್ಲ. ಹಸಿ ನೆಲವಾದ್ದರಿಂದ ಕಡವೆ ಹೆಜ್ಜೆಗಳು ಅರ್ಧ ಫರ್ಲಾಂಗು ಆದರೂ ಅಚ್ಚಳಿಯದೇ ಮೂಡಿದ್ದವು. ಇನ್ನಷ್ಟು ದೂರು ಸಾಗಿದರೂ ಅವುಗಳನ್ನು ಪತ್ತೆ ಮಾಡುವುದು ಕಷ್ಟವೇನಿರಲಿಲ್ಲ.

ಆದರೆ, “ಕೈಯಲ್ಲೇ ವಿದ್ಯೆ ಇಟ್ಟುಕೊಂಡು ಸುಖಾಸುಮ್ಮನೆ ಅಲೆಯುವುದೇಕೆ ಮಾರಾಯ್ರೆ, ನೋಡಾಣ, ಮದ್ದು ಹೂಡಿ” ಎಂದ ಗಾಮ್ಯ ಅಂಜುತ್ತಲೇ. ತಿರುಗಿ ಉಗಿದಾರು ಎಂಬ ಅಂಜಿಕೆ ಅವನದ್ದು. ಮೇಲೆ ಮುಗಿಲು ದಟ್ಟೈಸುತ್ತಿದ್ದುದನ್ನು ಕಂಡು ಮಳೆ ಬಂದರೆ ಕೆಲಸ ಕೆಟ್ಟಂತೆಯೇ ಎಂದು ಎಣಿಸಿದ ಬಾಬಣ್ಣ ಗಾಮ್ಯನ ಸಲಹೆ ಸಮಯೋಚಿತವೆ ಎಂದುಕೊಂಡು, ಮಿಕದ ಹೆಜ್ಜೆಯನ್ನು ಸರಿಯಾಗಿ ಪರಾಂಬರಿಸಿ “ಇಲ್ಲೇ ಇರ್ರೋ, ಬಂದೆ..” ಎಂದು ತನ್ನ ಕಾಲಾಳುಗಳಿಗೆ ಹೇಳಿ ಮಟ್ಟಿ ನುಗ್ಗಿ ಹೋದರು.

ಐದೇ ನಿಮಿಷದಲ್ಲಿ ಕೈಯಲ್ಲಿ ಸೊಪ್ಪು ಹಿಡಿದು ಬಂದ ಬಾಬಣ್ಣ ಪ್ರಾಣಿಯ ಹೆಜ್ಜೆಯ ಮೇಲೆ ಸೊಪ್ಪು ಇಟ್ಟು ತನ್ನ ಕಾಲಿನ ಹೆಬ್ಬೆರಳಲ್ಲಿ ಮೆಟ್ಟಿ ಮುಗಿಲತ್ತ ಮುಖಮಾಡಿ ಮಂತ್ರದಂತೆ ಏನನ್ನೋ ಪಠಿಸಿದ. ಬಳಿಕ ಕಡವೆ ಹೋದ ದಿಕ್ಕಿಗೆ ನಳಿಕೆ ತೋಟಾವನ್ನು ನೇರ ಗುರಿಮಾಡಿ ಕಣ್ಣಮುಂದೆ ಯಾವುದೋ ಪ್ರಾಣಿ ಇದೆ ಎಂಬಂತೆ ಕಾದ. ಗಾಮ್ಯ ಮತ್ತು ಆತನ ಗೆಣೆಕಾರ ತುಸು ಹಿಂದಕ್ಕೆ ದೂರ ಸರಿದು ಮರದ ಮರೆಯಲ್ಲಿ ಅಡಗಿ ನಿಂತರು. ಒಂದು, ಎರಡು, ಮೂರು,… ಐದು ನಿಮಿಷವಾಯ್ತು, ಆರು, ಏಳು…. ಢಂ!

ಇಡೀ ಕಾಡೇ ಮೊಳಗಿತು ಗುಂಡಿನ ಸದ್ದಿಗೆ. ಗಾಮ್ಯ ದಢಕ್ಕನೆ ಜಿಗಿದು ನೋಡುತ್ತಾನೆ, ಗುಂಡು ಸಿಡಿದ ಹೊಗೆ, ಎದುರಿಗೆ ನಗುತ್ತಾ ನಿಂತಿದ್ದ ಬಾಬಣ್ಣ.. ಬಿಟ್ಟರೆ ಇನ್ನೇನು ಕಾಣಿಸುತ್ತಿಲ್ಲ. ಅರೆ! ಗುಂಡು ಹಾರಿದ್ದು ಕೈತಪ್ಪಿಯೇ? ಎಂದುಕೊಂಡ ಗಾಮ್ಯ, “ಒಡೆಯಾ ಏನಾತು? ಯಾಕ್ರೀ.. ” ಕಾಳಜಿ, ಭಯ ಮತ್ತು ನಿರಾಶೆ ಬೆರೆತ ದನಿಯಲ್ಲಿ.

“ಮುಂದೆ ಬಂದು ನೋಡಾ ಪುಕ್ಕಲು ಲೌಡಿಗಂಡ..” ಎಂದ ಬಾಬಣ್ಣ ಇನ್ನು ತನ್ನ ಕೆಲಸ ಮುಗಿಯಿತು ಎಂಬಂತೆ ನಿರಾಳನಾಗಿ ನಾಲ್ಕು ಹೆಜ್ಜೆ ಹಾಕಿ ಮುಂದೆ ನೆಲಕ್ಕೆ ಒರಗಿದ್ದ ಕಡವೆಯ ಬಳಿ ಸಾಗಿದ. ಅವರನ್ನು ಹಿಂಬಾಲಿಸಿದ ಗಾಮ್ಯ, ಕಡವೆಯ ಕಂಡು ಹೌಹಾರಿದ. ಭರ್ಜರಿ ನಾಕಾಳು ಹೋರಿ(ನಾಲ್ವರು ಹೊರುವಷ್ಟು ಭಾರದ್ದು) ಕಂಡು “ಭಾರೀ ಹೋರಿ ಕಣ್ಲಾ, ಒಂದೇ ಏಟಿಗೆ ಒರಗ್ತು ನೋಡು ಹೆಂಗೆ” ಎಂದು ಗೆಣೆಕಾರಗೆ ಹೇಳಿ, ಕೊಂಬು ಹಿಡಿದು ಅಲುಗಾಡಿಸಿ, ಆಗಷ್ಟೇ ಬಿಸಿಯುಸಿರುವ ಸೂಸುತ್ತಿದ್ದ ಮೂಗಿನ ಹೊಳ್ಳೆಗಳನ್ನು ಗಮನಿಸಿದ. ಬಾಯಲ್ಲಿ ಬುರುಬು ಬರಲಾರಂಭಿಸಿತ್ತು. ಗುಂಡೇಟು ನೇರ ಎದೆಯ ಪಕ್ಕೆಗೇ ಬಿದ್ದಿದ್ದರಿಂದ ರಕ್ತ ಚಿಲ್ಲನೆ ಚೀರುತ್ತಿತ್ತು.

ಗಾಮ್ಯ ಮಿಕವನ್ನು ಹೊರಳಿಸಿ, ಕಾಲು, ಕತ್ತು ಸರಿಸಿ ನೋಡುತ್ತಲೇ ಇದ್ದ. ಅಷ್ಟರಲ್ಲಿ, ಬಾಬಣ್ಣ, “ಲೇ,.. ಇನ್ನೂ ಏನ್ ನೋಡ್ತಿಯಾ, ಗುಡುಗು ಶುರುವಾತು, ಬೇಗೆ ದಂಡಿಗೆ ಕಡಿ, ಹೆಗಲು ಕೊಡ್ರಿ,.. ಹೊತ್ತಾತು..” ಎಂದ. ಬಾಬಣ್ಣ ಧಾವಂತ ಅರಿತ ಕಾಲಾಳುಗಳಿಬ್ಬರೂ ಬಾಡೂಟ, ಸೇಂದಿಯ ಮತ್ತಿನಲ್ಲಿ ಆಗಲೇ ಖದರುಗುಟ್ಟಿ ಲಗುಬಗೆಯಲ್ಲಿ ದಂಡಿಗೆ ಕಡಿದು, ಮಿಕದ ಕಾಲು ಕಟ್ಟಿ ದಂಡಿಗೆ ತೂರಿಸಿ ಹೆಗಲು ಕೊಟ್ಟರು…

ಕರೆದು ಹೊಡೆದರು ತೊಗಲುಗೊಂಬಿನ ಹೋರಿ!

1340485_orig

ಕೆನೆತ್ ಆ್ಯಂಡರ್ಸನ್ ನಮ್ಮೂರಿನ ಸುತ್ತಮುತ್ತಲ ಕಾಡುಗಳಿಗೆ ಕಾಲಿಡುವ ಹೊತ್ತಿಗೆ ಹೊಳಗೋಡು ಬಾಬಣ್ಣ ತನ್ನ ಯೌವನದ ಹೊಸ್ತಿಲಲ್ಲಿದ್ದ. ಮೀಸೆ ಮೂಡುವ ಮುನ್ನವೇ ಜೋಡು ನಳಿಗೆಯ ಬಂದೂಕು ಅವನ ಹೆಗಲೇರಿತ್ತು. ಸುತ್ತಲ ಅಡ್ಡೇರಿ, ಜಂಬೂರುಮನೆ, ಗೌತಮಪುರ, ಹಿರೇಹಾರಕ, ಬೆಳ್ಳಂದೂರುಗಳ ದಟ್ಟ ಕಾಡು, ಕಾಡಿನ ನಡುವೆ ಬಿರುಬೇಸಿಗೆಯಲ್ಲೂ ಜುಳುಜುಳಿಸುತ್ತಿದ್ದ ಸವಳು(ತೊರೆ) ನೀರುಗಳು ಆತನ ಬಂದೂಕಿಗೆ ಬಲಿಯಾಗಲೆಂದೇ ಕೊಬ್ಬಿದ ಕಾಡು ಪ್ರಾಣಿಗಳಿಗೆ ಆಸರೆಯಾಗಿದ್ದವು.

ಅದರಲ್ಲೂ ಜಂಬೂರುಮನೆ, ಸಂಪಳ್ಳಿಯ ಕಾಡ ನಡುವಿನ ಕೆರೆಗಳಂತೂ ಸದಾ ನೀರಿನಿಂದ ತುಂಬಿತುಳುಕುತ್ತಾ ಕಾಡುಕೋಣ, ಜಿಂಕೆ, ಕಡವೆಗಳಿಗೆ ನೀರಿನ ಆಸರೆಯಾಗುತ್ತಲೇ ಹುಲಿ-ಚಿರತೆಗಳ ಹಸಿವಿಂಗಿಸುವ ತಾಣಗಳೂ ಆಗಿದ್ದವು. ಬೇಸಿಗೆಯಲ್ಲಂತೂ ಕಾಡ ನಡುವಿನ ನೀರಿನ ತೊಟ್ಟಿಗಳಂತಿದ್ದ ಈ ಕೆರೆಗಳಿಗೆ ಹಾಡು ಹಗಲೇ ಪ್ರಾಣಿಗಳು ಮುತ್ತುವುದು ಮಾಮೂಲಿಯಾಗಿತ್ತು. ಒಮ್ಮೊಮ್ಮೆ ಸೀಳುನಾಯಿ, ಕತ್ತೆಕಿರುಬಗಳು ಅಟ್ಟಿಸಿಕೊಂಡು ಬಂದಾಗ ಅವುಗಳ ದಾಳಿಯಿಂದ ಪಾರಾಗಲು ಜಿಂಕೆ- ಕಾಡುಕುರಿಗಳು ಮಧ್ಯಾಹ್ನದ ಬಿಸಿಲಲ್ಲೇ ಕೆರೆಯ ನೀರಿಗೆ ಧುಮುಕುವುದು ಕೂಡ ಇತ್ತು.

ಹಾಗಾಗಿ, ಹೊಳಗೋಡು ಬಾಬಣ್ಣ ತನ್ನ ಬಂದೂಕು, ಶಿಕಾರಿಯ ಕೈಯಾಳು-ಕಾಲಾಳು, ನಾಯಿಗಳ ತನ್ನ ದಂಡು ಕಟ್ಟಿಕೊಂಡು ಮನೆ ಹಿತ್ತಲಿನಿಂದಲೇ ಆರಂಭವಾಗುತ್ತಿದ್ದ ಕಾಡಿನ ಮೇಲೆ ದಂಡೆತ್ತಿಹೋಗುವುದು ಬೇಸಿಗೆಯಲ್ಲಂತೂ ನಿತ್ಯದ ನೇಮವಾಗಿತ್ತು.

ಹಾಗೇ, ಸಂಕ್ರಾತಿಯ ಕಳೆದ ಮೂರನೇ ದಿನವೊಂದರಲ್ಲಿ ಸುತ್ತುಮುತ್ತಲ ಇಡೀ ಸೀಮೆಗೆ ಎತ್ತರದ, ದಟ್ಟ ಕಾಡಿನ ಬಳುವಳಿ ಬೆಟ್ಟದ ಅಂಚಿನಲ್ಲಿ ಜಿಂಕೆಗಳು ಸದಾ ಇರುವ ತಪ್ಪಲಿನತ್ತ ಹೊರಟ. ಸಾಗರ ಪೇಟೆಯ ತನ್ನ ಹತ್ತಿರದ ನೆಂಟರ ಮನೆಯ ಮದುವೆ ಮೂರು ದಿನವಿದ್ದು, ಅದಕ್ಕಾಗಿ ಕಾಡುಕೋಣವನ್ನೋ, ಜಿಂಕೆಯನ್ನೋ ಹೊಡೆದು ಮಾಂಸವನ್ನು ಹೊತ್ತೊಯ್ಯುವ ಧಾವಂತ ಬಾಬಣ್ಣನದ್ದು. ಹಾಗಾಗಿ ಗಾಮ್ಯ, ಬಸ್ಯಾರ ಜೊತೆ ಅವತ್ತು ಮರಿಗ್ಯಾ, ಸೋಮನನ್ನೂ ಬಾಬಣ್ಣ ತನ್ನ ದಂಡಿಗೆ ಸೇರಿಸಿಕೊಂಡೇ ಕಾಡಿನ ಮೇಲೆ ದಂಡೆದ್ದಿದ್ದ.

ಆದರೆ, ಅವತ್ತು ಲಂಟಾನದ ಪೊದೆ, ಕಾರೆ, ಸೀಗೆ ಹಡ್ಲು, ಕುಮಸಲು ಮಟ್ಟಿ, ಬಿದಿರು ಮೆಳೆ ಸುತ್ತಿ ಕಾವಿಕಲ್ಲಾಣೆ ಹತ್ತಿ ಇಳಿದು ಬಸವಳಿದರೂ ಒಂದೇ ಒಂದು ದೊಡ್ಡ ಪ್ರಾಣಿಯೂ ಕಣ್ಣಿಗೆ ಕಾಣಿಸಲಿಲ್ಲ. ಅಲ್ಲೊಂದು ಇಲ್ಲೊಂದು ಮೊಲ, ಬರ್ಕಾ ಕಣ್ಣಿಗೆ ಬಿದ್ದರೂ ದೊಡ್ಡ ಮಿಕಗಳಿಗೆಂದೇ ಬರೋಬ್ಬರಿ ಈಡು ಮಾಡಿಕೊಂಡು ಬಂದಿದ್ದ ಬಾಬಣ್ಣ ಸುಮ್ಮನೇ ಪುಟಗೋಸಿಗಳ ಮೇಲೆ ಗುಂಡು ಹಾರಿಸಿ ಮದ್ದುಗುಂಡು ಲುಕ್ಸಾನು ಮಾಡಿಕೊಳ್ಳಲು ಸಿದ್ಧನಿರಲಿಲ್ಲ! ಅಲ್ಲದೆ, ಜೊತೆಯಲ್ಲಿರುವ ಗಾಮ್ಯ, ಬಸ್ಯಾರ ಬಾಯಿಚಪಲಕ್ಕಲ್ಲದೆ, ಎಂತಹದ್ದೇ ಸಂದರ್ಭದಲ್ಲೂ ಚಿಕ್ಕಪುಟ್ಟ ಪ್ರಾಣಿಗಳ ಮೇಲೆ ಬಾಬಣ್ಣ ಈಡು ಹಾರಿಸಿದ್ದೇ ಇಲ್ಲ.

ಬಳುವಳಿ ಬೆಟ್ಟದ ತಪ್ಪಲೆಲ್ಲಾ ಅಲೆದು ಸುಸ್ತಾದರೂ ಯಾವ ಪ್ರಾಣಿಯೂ ಕಣ್ಣಿಗೆ ಬೀಳಲೇ ಇಲ್ಲ. ಸರಿ ಮಾರಾಯ ಇನ್ನೇನು ಮಾಡೋದು, ಅತ್ಲಾಗೆ ಜಂಬೂರುಮನೆ ಕೆರೆ ಅಂಚಲ್ಲಾದ್ರೂ ಏನಾರ ಕಣ್ಣಿಗೆ ಬೀಳ್ಬೋದಾ ನೋಡ್ಕಂದು ಮನೆ ದಾರಿ ಹಿಡಿಯೋಣ ಬನ್ರೋ ಎಂದು ಬಾಬಣ್ಣ ತನ್ನ ದಂಡಿಗೆ ಆಜ್ಞೆ ಮಾಡಿದ. ಬಾಬಣ್ಣ ಮುಂದೆ ಹೋದಂತೆ ದಂಡು ಅವನ ಹಿಂಬಾಲಿಸಿತು. ಆದರೆ ಅಲ್ಲೂ ನಿರಾಶೆ ಕಾದಿತ್ತು. ಕೆರೆಯ ಏರಿಯ ಮೇಲಿಂದ ಸೀಗೆಮಟ್ಟಿ ಆಣೆ ಕಡೆ ಹೆಜ್ಜೆ ಹಾಕುತ್ತಾ ಇವತ್ತು ಯಾರ ಮುಖ ನೋಡಿ ಬಂದೆವು, ಮನೆಯಿಂದ ಹೊರಬೀಳುವಾಗ ಎದುರಿಗೆ ಯಾರು ಸಿಕ್ಕರು,.. ಎಂದೆಲ್ಲಾ ಶಕುನ ಲೆಕ್ಕಾಚಾರ ಮಾಡುತ್ತಿದ್ದ ತನ್ನ ದಂಡಿನ ಮಾತಿನ ಮಲ್ಲ ಬಸ್ಯಾಗೆ ಗದರಿ ಬಾಯಿ ಮುಚ್ಚಿಸಿದ ಬಾಬಣ್ಣಗೆ ಅವನ ಮಾತಿನಲ್ಲೂ ನಿಜವಿರಬಹುದೇ ಎನಿಸಿದರೂ, ಯಾರ ಮುಖ-ತಿಕದ ಮಾತಲ್ಲ ಇದು, ಆದ್ರೆ ಕಲಸೆ ಮಾರ್ಯನದ್ದೇ ಕೆಲಸವಿರಬಹುದು ಎಂದು ಮನದಲ್ಲೇ ಲೆಕ್ಕಾಚಾರ ಹಾಕಿದ.

ಏನೇನೋ ಮೋಡಿ, ಮಾಟದಲ್ಲಿ ಎತ್ತಿದಕೈ ಆದ ಮಾರ್ಯ ಮತ್ತು ಬಾಬಣ್ಣನ ನಡುವೆ ಶಿಕಾರಿ ಮೇಲುಗೈ ಸಾಧಿಸುವ ಪೈಪೋಟಿ. ಅದರ ಭಾಗವೇ ಒಬ್ಬರ ಮೇಲೊಬ್ಬರು ಮಾಟ-ಮೋಡಿ ಮಾಡಿಸಿ ಪ್ರಾಣಿಗಳು ಕಣ್ಣಿಗೆ ಬೀಳದಿರುವಂತೆ, ಬಿದ್ದರೂ ಈಡಿಗೆ ತಾಗದಂತೆ, ಈಡು ತಿಂದರೂ ಬಲಿ ಬೀಳದಂತೆ ಮಂತ್ರ ಹಾಕಿಸುವುದು, ಎದುರು ಪಾರ್ಟಿ ಮಾಡಿದ ಮೋಡಿ- ಮಾಟ ತೆಗೆಸುವುದು ಒಂದು ರೀತಿಯ ಅನೂಚಾನ ಆಚರಣೆಯೇ ಆಗಿಬಿಟ್ಟಿತ್ತು.

ಈ ಬಾರಿ ಕೂಡ ಮಾರ್ಯನೇ ಏನೋ ಮಾಡಿದ್ದಾನೆ ಎಂದುಕೊಂಡ ಬಾಬಣ್ಣ, ತುಸು ಇರ್ರಲೇ ಎಂದು ತನ್ನ ದಂಡಿಗೆ ಹೇಳಿ, ಒಂದು ಕುಮುಸಲು ಮಟ್ಟಿಯೊಳಗೆ ನುಸುಳಿ ಹೋದ. ಜೊತೆ ಬಂದವರ ಅರಿವಿಗೆ ಬರದಂತೆ ತನ್ನ ಅಂತಿಮ ಅಸ್ತ್ರವಾದ ಮದ್ದಿನ ಗಿಡದ ನಾಲ್ಕು ಎಲೆ ಕಿತ್ತುಕೊಂಡು ಬಂದ. ಬಂದವನೇ ನೋಡ್ರಲೇ, ಯಾವನ್ ಏನಾರಾ ಮಾಡ್ಲಿ, ನಡ್ರೋ ಚಿಕ್ಕಿಮಿಕನೋ, ಕೋಣನೋ ಯಾವುದಾದ್ರೂ ಹೆಜ್ಜೆ ಹುಡುಕ್ರೋ..ಎಂದ.

ಬಾಬಣ್ಣನ ಮಾತು ಕೇಳುತ್ತಲೇ ಅವನ ಮುಂದಿನ ಉದ್ದೇಶ ಗ್ರಹಿಸಿದ ದಂಡು, ಒಡೆಯನ ಆಜ್ಞೆಯಂತೆ ನಡುಬಗ್ಗಿಸಿ ನೆಲದಲ್ಲಿ ಎಲ್ಲಾದರೂ ಚಿಕ್ಕಿಮಿಕದ ಹೆಜ್ಜೆ ಗುರುತು ಮೂಡಿರಬಹುದೇ ಎಂದು ಶೋಧಿಸತೊಡಗಿದರು. ಆದರೆ, ತಾವು ತಿನ್ನಲಾರದ ಮತ್ತು ಇತರ ಎತ್ತು-ಎಮ್ಮೆಗಳ ಹೆಜ್ಜೆ ಗುರುತಿನೊಂದಿಗೆ ಪ್ರತ್ಯೇಕಿಸಲಾಗದ ಕಾಡುಕೋಣದ ಹೆಜ್ಜೆ ಗುರುತುಗಳನ್ನು ಹುಡುಕುವ ಯೋಚನೆಯನ್ನೂ ಮಾಡಲಿಲ್ಲ!

ಸೀಗೆಮಟ್ಟಿ ಆಣೆ ಇಳಿದು ಇನ್ನೇನು ಸಂಪಳ್ಳಿ ಕೆರೆ ಹತ್ತಿರ-ಹತ್ತಿರ ಬರುತ್ತಿರುವಾಗ ಗಾಮ್ಯ, ಅಣ್ಣಾ ಬಾರಣ್ಣ, ಲಗೂ ಬಾರಣ್ಣಾ ಎಂದು ಬಾಬಣ್ಣನ ಕರೆದ. ಬಾಬಣ್ಣ ದೌಡಾಯಿಸಿ ಗಾಮ್ಯನ ಕೈತೋರಿದ ಹೆಜ್ಜೆ ಗುರುತು ಪರಾಂಬರಿಸಿದ. ನೋಡ-ನೋಡುತ್ತಲೇ ಇದು ತೊಗಲುಗೊಂಬಿನ ಹೋರಿಯದ್ದೇ ಎಂದು ನಿಶ್ಚಯಿಸಿದ. ಅಂದರೆ, ಒಮ್ಮೆ ಕೊಂಬು ಉದುರಿಸಿ ಹೊಸ ಕೊಂಬು ಮೂಡಿರುವ ಭಾರೀ ಗಂಡು ಜಿಂಕೆಯ ಹೆಜ್ಜೆ ಗುರುತು ಬಾಬಣ್ಣಗೆ ಹುಮ್ಮಸ್ಸು ಮೂಡಿಸಿತು.

ತನ್ನ ಮಸಿಚೀಲ(ಮದ್ದುಗುಂಡಿನ ಚೀಲ)ದಿಂದ ಮದ್ದಿನ ಗಿಡದ ಎಲೆಯೊಂದನ್ನು ತೆಗೆದು ಒಮ್ಮೆ ಆಕಾಶದತ್ತ ಮುಖಮಾಡಿ ‘ಪಡೆದವನಿಗೆ’ ಒಂದು ಪಾರ್ಥನೆ ಸಲ್ಲಿಸಿ, ಎಲೆಯನ್ನು ಹೆಜ್ಜೆಯ ಗುರುತಿನ ಮೇಲಿಟ್ಟು ಅದನ್ನು ತನ್ನ ಕಾಲ ಹೆಬ್ಬೆರಳಿಂದ ಮೆಟ್ಟಿ ನಿಂತು ಹೆಜ್ಜೆ ಜಾಡಿನಲ್ಲಿ ಪ್ರಾಣಿ ಹೋದ ದಿಕ್ಕು ಗಮನಿಸಿ ಅತ್ತ ಮುಖಮಾಡಿ ಮನದಲ್ಲೇ ಏನೇನೋ ಜಪಿಸತೊಡಗಿದ.

ಬಾಬಣ್ಣನ ಹೆಜ್ಜೆ ಜಾಡಿನ ಮದ್ದಿನ ಬೇಟೆ ನಾಜೂಕು ಬಲ್ಲ ದಂಡಿನವರು ದೂರ ಸರಿದು ಒಂದೊಂದು ಮರದ ಮರೆಯಲ್ಲಿ ಮರೆಯಾದರು. ಅದಾಗಿ ಅರ್ಧ ಗಳಿಗೆಯಲ್ಲೇ ಬಾಬಣ್ಣನ ಜೋಡುನಳಿಗೆ ಬಂದೂಕು ಮೊಳಗಿತು… ಬಾಬಣ್ಣನ ಈಡಿನ ಸದ್ದಿನ ವೈಖರಿಯ ಗ್ರಹಿಸಿದ ದಂಡಿನವರು ಬೇಟೆ ನೆಲಕ್ಕೊರಗದೇ ಇರದು ಎಂದು ಮರದ ಮರೆಯಿಂದ ಹೊರಬಂದು ಬಾಬಣ್ಣನ ಸೇರಿಕೊಂಡರು. ನಾಲ್ಕು ಮಾರು ದೂರದಲ್ಲಿ ಲಂಟಾನದ ಪೊದೆಯ ನಡುವೆ ನೆಲಕ್ಕೊರಗಿದ್ದ ಮೂರು ಕವಲಿನ ತೊಗಲುಗೊಂಬಿನ ಜಿಂಕೆಯ ಎದೆ ಸೀಳಿ ರಕ್ತ ನೆಲಕ್ಕಿಳಿಯುತ್ತಿತ್ತು. ಗಂಟಲ ಗೊರ-ಗೊರ ಸದ್ದು ಹೊರತುಪಡಿಸಿ ಸುತ್ತೆಲ್ಲಾ ಬರೀ ಮೌನ…

****

ಪ್ರಾಣಿಯ ಹೆಜ್ಜೆ ಜಾಡಿನ ಮೇಲೆ ಮದ್ದಿನ ಸೊಪ್ಪು ಇಟ್ಟು, ಆ ಪ್ರಾಣಿಯನ್ನು ತಾನಿರುವ ಬಳಿಗೇ ಕರೆದು ಬೇಟೆಯಾಡುವ ಬಾಬಣ್ಣನ ವಿಸ್ಮಯಕಾರಿ ಶಿಕಾರಿ ವಿದ್ಯೆಯ ಕಂಡು-ಕೇಳಿದ ನಮ್ಮೂರಿನ ಜನರ ಬಾಯಲ್ಲಿ ಈಗಲೂ ಇಂತಹ ಹತ್ತಾರು ಘಟನೆಗಳು ನಾಟಿ ಗದ್ದೆ, ಕಬ್ಬಿನ ಗದ್ದೆಗಳಲ್ಲಿ ಕತೆಗಳಾಗಿ ಮತ್ತೆ ಮತ್ತೆ ಮೆಲುಕಾಡುತ್ತವೆ.

ಹೊಳಗೋಡು ಬಾಬಣ್ಣನ ಮದ್ದಿನ ನಡಿಗೆ ಪವಾಡ

images

ಸಾಂದರ್ಭಿಕ ಚಿತ್ರ

ಅವು ಸ್ವಾತಂತ್ರ್ಯಪೂರ್ವದ ದಿನಗಳು. ಶಿವರಾತ್ರಿ ಕಳೆದು, ಯುಗಾದಿಗೆ ಹತ್ತಿರದ ಒಂದು ಬೇಸಿಗೆಯ ಬೆಳಿಗ್ಗೆ. ಸುತ್ತಲ ದಟ್ಟ ಕಾಡಿನ ನಡುವೆಯ ಗದ್ದೆ ಬಯಲಿನ ಕಣಿವೆಯಂಚಿನ ಮನೆಯಂಗಳದಲ್ಲಿ ರಾತ್ರಿ ಸುರಿದ ಮಳೆಯ ಘಮಲು. ಎಳೆಬಿಸಿಲಿನ ಲಾಸ್ಯಕ್ಕೆ ಮನೆಯ ಮಕ್ಕಳು ಅಂಗಳವಿಡೀ ಆಟ-ಹುಡುಗಾಟದಲ್ಲಿ ಮುಳುಗಿದ್ದಾರೆ.

ಕೂಡು ಕುಟುಂಬದ ದೊಡ್ಡವರು ಮನೆಯ ಚಡಿ(ಮುಂದಿನ ಕಟ್ಟೆ) ಮೇಲೆ ಕೂಡ ಬೀಡಿ ಸೇದುತ್ತಾ ಕಾಫಿ ಕುಡಿಯುತ್ತಾ ಹದ ಮಳೆಯ ಬಳಿಕ ಮಾಡಬೇಕಾದ ಗದ್ದೆಯ ಹೂಟಿ ಕೆಲಸದ ಮಾತು ತೆಗೆದಿದ್ದಾರೆ.

ನಾಕು ಮಾರು ದೂರದ ದಣಪೆ(ಮನೆಯ ಸುತ್ತಲ ಹೊರಬೇಲಿಯ ಗೇಟ್) ಸರಗೋಲು ಸರಿಸುತ್ತಲೇ ಮಕ್ಕಳು-ದೊಡ್ಡವರ ಕಣ್ಣುಗಳೆಲ್ಲಾ ಅತ್ತ ನೆಟ್ಟವು! ಕಂಬಳಿ ಕೊಪ್ಪೆ ಹಾಕಿಕೊಂಡಿದ್ದ ಮೂವರಲ್ಲಿ ಒಬ್ಬ ಸರಗೋಲು ತೆಗೆಯುತ್ತಿದ್ದರೆ, ಅವನ ಹಿಂದೆ ಉಳಿದಿಬ್ಬರು ಕವಲು ಕೊಂಬಿನ ಚಿಕ್ಕಿಮಿಕ (ಚುಕ್ಕಿ ಜಿಂಕೆ)ವನ್ನು ಒಬ್ಬೊಬ್ಬರು ಒಂದೊಂದು ಕಿವಿ ಹಿಡಿದುಕೊಂಡು ನಡೆಸಿಕೊಂಡು ದಣಪೆ ದಾಟಿಸುತ್ತಿದ್ದಾರೆ! ಅವರೆಲ್ಲರ ಹಿಂದೆ ಜೋಡು ನಳಿಗೆಯ ಬಂದೂಕು ಹೆಗಲೇರಿಸಿಕೊಂಡು ರಾಜಠೀವಿಯಲ್ಲಿ ಬರುತ್ತಿರುವವರು ಹೊಳಗೋಡು ಬಾಬು ಸಾಬರು!

ಊರಿನವರ ಬಾಯಲ್ಲಿ ಬಾಬಣ್ಣ ಎಂದೇ ರೂಢಿಯಾಗಿದ್ದ ಹೊಳಗೋಡು ಬಾಬು ಸಾಬರು, ಅವರ ಹೆಗಲೇರಿದ್ದ ಜೋಡು ನಳಿಗೆ ಬಂದೂಕು ನೋಡುತ್ತಿದ್ದಂತೆಯೇ ಕಟ್ಟೆಯ ಮೇಲೆ ಕೂತು ಕಾಫಿ ಗುಟುಕರಿಸುತ್ತಿದ್ದವರಿಗೆ ನಡೆದ ಹಕೀಕತ್ತು ಅರ್ಥವಾಗಿತ್ತು. “ಓಯ್ ಬಾಬಣ್ಣ ಇವತ್ತು ಬೆಳ್ ಬೆಳಿಗ್ಗೆನೇ ಗಡದ್ದಾಗೇ ಶಿಕಾರಿ ಮಾಡ್ಯಾರಲ, ರಾತ್ರಿ ಹದಮಳೆ ಬಿದ್ದುದ್ದೇ ಬಾಬಣ್ಣ ಕೋಳಿ ಕೂಗೋ ಮುಂಚೇನೇ ಗಿಡಕ್ಕೆ(ಕಾಡು) ಹತ್ತಿದ್ರೇನೋ..” ಎಂಬ ಅವರ ವಿಶ್ಲೇಷಣೆ ಮುಗಿಯುವುದರೊಳಗೆ ಕುರಿಮರಿಯಂತೆ ತಲೆ ತಗ್ಗಿಸಿಕೊಂಡು ಬರುತ್ತಿದ್ದ ಚಿಕ್ಕಿಮಿಕ ನಿದ್ದೆಯಲ್ಲಿ ನಡೆದಂತೆ ಅಂಗಳಕ್ಕೆ ಕಾಲಿಟ್ಟಿತ್ತು.

ಮಿಕದ ಆಚೀಚೆ ಕಿವಿಗಳನ್ನು ಹಿಡಿದು ಅದನ್ನು ನಡೆಸಿಕೊಂಡು ಬರುತ್ತಿದ್ದ ಗಾಮ್ಯ ಮತ್ತು ಬಸವಣ್ಣಿ ಮತ್ತು ಅವರ ಮಿಕದ ಮೆರವಣಿಗೆಯ ಸಾರಥಿಯಂತಿದ್ದ ಈರಭದ್ರರ ಕಣ್ಣಲ್ಲಿ ಆಗಲೇ ಬಾಡಿನ ಕುಣಿತ ಆರಂಭವಾಗಿ ಬಾಯಲ್ಲಿ ಬುಳುಬಳು ನೀರಾಡಲಾರಂಭಿಸಿದ್ದವು. ಕಟ್ಟೆಯ ಮೇಲೆ ಕೂತವರಿಂದ ಮಿಕದ ಆಗಮನದ ಸುದ್ದಿ ಕೇಳಿದ ಸಿದ್ದಯ್ಯನೋರು, ಹೊರಬರುತ್ತಲೇ ಎದುರಿಗೆ ನಿಂತಿದ್ದ ಮಿಕವನ್ನೂ, ಅದರ ಬದಿಗೆ ಎಲೆಯಡಿಕೆ ಜಗಿಯುತ್ತಾ ನಿಂತಿದ್ದ ಬಾಬಣ್ಣನನ್ನೂ ನೋಡಿ, “ಏನು ಬಾಬಣ್ಣ ಒಳ್ಳೇ ಶಿಕಾರಿನೇ ಆತಲ, ಹೋರಿ(ಗಂಡು ಜಿಂಕೆ) ಜೋರಾಗೈತೆ, ತೊಗಲುಗೊಂಬು ನೋಡ್ರೆ ಏನಿಲ್ಲಂದ್ರೂ ನಾಕಾಳು ಹೊರೆ(ನಾಲ್ವರು ಹೊರುವಷ್ಟು ಭಾರದ್ದು) ಇರಬೋದೇನೋ, ಅಲನಾ..” ಎನ್ನುತ್ತಲೇ ಬಾಬಣ್ಣಗೆ, ಮಿಕದ ಬಗ್ಗೆ ಮಾತಾಡ್ತಾನೆ ಹೊರತು ತಾನು ಅಂತಹ ಬಿಗಿ ಹೋರಿ ಹೊಡ್ದಿದ್ದು, ಅದನ್ನು ಅಲ್ಲಿಂದ ಇಲ್ಲಿವರೆಗೆ ನಡೆಸಿಕೊಂಡು ಬಂದಿದ್ದು ಇವನಿಗೆ ದೊಡ್ಡ ವಿಷಯಾನೇ ಅಲ್ಲ ಅನ್ನೋ ಥರ ನನ್ನ ಬಗ್ಗೆ ಚಕಾರವೆತ್ತಿಲ್ಲವಲ್ಲ ಎಂದು ಪಿಚ್ಚೆನಿಸಿತು.

ಬಾಬಣ್ಣನ ಮನದ ತಳಮಳ ಅರಿತವರಂತೆ ಸಿದ್ದಯ್ಯನೋರು, “ಅಲ್ಲೋ ಮಾರಾಯ ಇಂತಹ ಹೋರಿ ಹೊಡ್ದು, ಸುಮ್ನೆ ನಿಂತೀಯಲ್ಲ ಮಾರಾಯ, ಬಾರ ಕುತ್ಗ, ಕುಡಿಯಾಕೆ ನೀರ ಬೇಕೆನಾ..” ಎನ್ನುತ್ತಲೇ ನಡೆದುಕೊಂಡು ಮಿಕ ನೋಡಲು ಹೆಬ್ಬಾಗಿಲ ಮರೆಯಿಂದ ಇಣುಕುತ್ತಿದ್ದ ಮನೆಯೊಡತಿ ಒಳ ಹೋಗಿ ತಂಬಿಗೆ ನೀರು, ಬೆಲ್ಲ ತಂದು ಕಟ್ಟೆಯ ಮೇಲಿಟ್ಟರು. ಬಿಸಿ ಬಿಸಿ ಕಾಫಿ ತರಲೂ ಸಿದ್ದಯ್ನೋರು ಆದೇಶವಾಯ್ತು. ಅರ್ಧ ಲೋಟ ಬೆಲ್ಲ ಬಾಯಿಗೆ ಒಗೆದುಕೊಂಡು ನೀರಿನ ತಂಬಿಗೆ ಎತ್ತಿದ ಬಾಬಣ್ಣ ಗಟ-ಗಟ ನೀರು ಕುಡಿದು ಕೆಳಗಿಟ್ಟು ಒಂದು ನಿಟ್ಟುಸಿರು ಬಿಟ್ಟ.

“ಕುರ್ಕಿಗುಡ್ಡದ ಸವಳಿಂದ ಇಲ್ಲಿಗೆ ಬರೋದ್ರೊಳಗೆ ಇಷ್ಟು ದಣಿವಾದ್ರೆ ಹೆಂಗೋ ಮಾರಾಯ” ಎನ್ನುತ್ತಾ ಮಾತು ಆರಂಭಿಸಿದ ಬಾಬಣ್ಣ, ತನ್ನ ಕಣ್ಣೆದುರು ತೇಲುಗಣ್ಣಾಗಿ ನಿಂತಿದ್ದ ಬೇಟೆಯನ್ನು ಬೇಟೆಯಾಡಿದ ವಿವರ ಆರಂಭಿಸಿದ. ರಾತ್ರಿ ಮಳೆ ಬಂದಿತ್ತಲ್ಲ, ಹಂಗಾಗಿ ಇವ್ರುನ ಕರ್ಕೊಂಡು ಸುತ್ತರ್ಕೊ ಬರೋಣ ಅಂತಾ ಹೊಂಟಿದ್ದೆ, ಇಲ್ಲೇ ನಿಮ್ಮ ಕೆರೆ ಅಂಚಲ್ಲಿ ಗಿಡ (ಕಾಡು) ಹತ್ತಿ, ಕುರ್ಕಿ ಗುಡ್ಡದ ವಾರ್ಯಾಗೇ ಹಂಗೇ ಹೋಗ್ತಾ ಇದ್ವಿ, ಸಿಂಗೆ(ಸೀಗೆ)ಮಟ್ಟಿ ಕುಡಿ ಮೇಯ್ತ ಎರಡು ಜೋಡಿ ಮ್ಯಾಲೇ ಇದ್ವು, ಏನ್ ಹತ್ತು ಮಾರು ದೂರದಾಗೇ ನಿಂತ್ಕಂಡು ಈಡು(ಗುರಿಗೆ ಗುಂಡೇಟು ಹೊಡೆಯುವುದು) ಹೊಡೆದ್ನಾ. ಎದಿಗೇ ಗುಂಡು ಬಿತ್ತು. ಈಡಾಗಿ ಇನ್ನೇನು ಮಿಕ ನಲಕ್ಕೆ ಒರಗೋದ್ರೊಳಗೆ ಈ ಮುಂಡೇಗಂಡರು ಹೋಗಿ ಕೊಂಬು ಹಿಡ್ಕೊಂಡೇಬಿಟ್ರು..” ಎಂದು ಶಿಕಾರಿ ಆದ ಬಗೆ ವಿವರಿಸಿದರು.

“ಇಂತಪ್ಪ ಹೋರೀನಾ ಈ ನರಪೇತಲ ನನ್ಮಕ್ಳು ಹೊರದೌದನ.. ಹಂಗಾಗಿ, ನಾಕು ಮಾರು ದೂರದಾಗಿದ್ದ ಮದ್ದಿನ ಗಿಡದಿಂದ ಮದ್ದು ತಂದು ಈಡಿನ ಕುಣಿಗೆ ತುಂಬಿ ನಡಸಿಕೊಂಡೇ ಬಂದ್ವಿ.. ಇನ್ನೇನು ಈಗಲೇ ತೇಲುಗಣ್ಣಾಗೈತಿ, ಇನ್ನು ನಮ್ಮನೆವರೆಗೂ ಒಂದೂವರೆ ಮೈಲಿ ಇದನ್ನು ಕರ್ಕೊಂಡು ಹೋಗೋದಾಗಲ್ಲ. ಒಂಚೂರು ನಿಮ್ ರಾಮ ಹುಡುಗ, ಸೋಮ ಹುಡುಗುರನ ಕಳ್ಸ, ಇಲ್ಲೇ ನಿಮ್ಮ ಕಣದಂಚಲ್ಲೇ ಹಸಿಗೆ(ಮಾಂಸ ಸಿದ್ಧಗೊಳಿಸುವುದು) ಮಾಡಣ..” ಎಂದು ಬಾಬಣ್ಣ ಹೇಳುತ್ತಲೇ ಮಿಕದ ಕೊಂಬು, ಈಡು ತಾಗಿದ ಜಾಗಕ್ಕೆ ತುರುಕಿದ್ದ ಮದ್ದನ್ನೂ ತೂರಿಕೊಂಡು ಬರುತ್ತಿದ್ದ ರಕ್ತ, ಅದರ ಮೈಕಟ್ಟು ನೋಡಿ ಒಬ್ಬೊಬ್ಬರೂ ಒಂದು ವಿಶ್ಲೇಷಣೆಯಲ್ಲಿ ತೊಡಗಿದ್ದ ಸಿದ್ದಯ್ನೋರು ಮಕ್ಕಳಾದ ರಾಮ, ಸೋಮ ಹಸಿಗೆ ಮಾಡಲು ಕತ್ತಿ, ಕೊಡಲಿಗಳನ್ನು ಹುಡುಕತೊಡಗಿದರು…
……..

ಇದು ನನ್ನ ದೊಡ್ಡಪ್ಪ ರಾಮಪ್ಪ ನನಗೆ ಹೇಳಿದ ಹೊಳಗೋಡು ಬಾಬಣ್ಣನ ಶಿಕಾರಿ ಸಾಹಸದ ಒಂದು ಘಟನೆಯ ನಿರೂಪಣೆ. ಹೆಚ್ಚೂ ಕಡಿಮೆ ಇಡೀ ತ್ಯಾಗರ್ತಿ, ಆನಂದಪುರಂ ಸೀಮೆಯಲ್ಲೇ ಭಾರೀ ಶಿಕಾರಿದಾರ ಎಂದೇ ಹೆಸರಾಗಿದ್ದ ಬಾಬಣ್ಣ ನೀಚಡಿಯ ಶಾಮರಾಯರು, ಕೋವಿ ಪುಟ್ಟಣ್ಣರಂತೆ ಬರೀ ಗುರಿಗಾರಿಕೆ, ಪ್ರಾಣಿಗಳ ಚಲನವಲನ ಗುರುತಿಸುವ ಗ್ರಹಿಕೆಯಷ್ಟೇ ಅಲ್ಲದೆ, ತನ್ನದೇ ಆದ ಇತರೆ ನೈಪುಣ್ಯಗಳಿಗಾಗಿ ದಂತಕಥೆಯಾಗಿದ್ದವರು.

1950ರ ದಶಕದಲ್ಲಿ ತ್ಯಾಗರ್ತಿ ಸುತ್ತಮುತ್ತಲ ಬೆಳ್ಳಂದೂರು, ಕೋಟೆಕೊಪ್ಪ, ಗೌತಮಪುರ, ಚೋರಡಿ ಕಾಡುಗಳಲ್ಲಿ ನರಭಕ್ಷಕ ಚಿರತೆ, ಹುಲಿಗಳ ಹುಟ್ಟಡಗಿಸಲು ಬಂದಿದ್ದ ವಿಶ್ವಪ್ರಸಿದ್ದ ಬೇಟೆಗಾರ ಕೆನತ್ ಆಂಡರ್ಸನ್ ಜೊತೆಗಾರನಾಗಿ ಕೂಡ ಬಾಬಣ್ಣ ಒಂದೆರಡು ಬಾರಿ ಬೇಟೆಯಾಡಿದ್ದರಂತೆ. ಅದಲ್ಲಕ್ಕಿಮತ ಬಾಬಣ್ಣ ಮನೆಮಾತಾಗಿದ್ದು ತನ್ನ ಪವಾಡಸದೃಶ ಬೇಟೆಯ ಟ್ರಿಕ್ಕುಗಳಿಗಾಗಿ.

ಮೇಲಿನ ಘಟನೆಯಲ್ಲಿ ಕೂಡ ನೇರವಾಗಿ ಎದೆಗೆ ಏಟು ತಿಂದ ಭಾರೀ ಜಿಂಕೆಯನ್ನು ಕಾಡಿನ ನಡುವಿಂದ ಒಂದು ಮೈಲಿಗೂ ಹೆಚ್ಚು ದೂರದ ಸಂಪಳ್ಳಿಯ ಮನೆಗೆ ನಡೆಸಿಕೊಂಡು ಬಂದದ್ದು ಪವಾಡವೇ ಸರಿ! ಏಕೆಂದರೆ, ಎದೆಗೆ ಗುಂಡೇಟು ತಿಂದ ಯಾವುದೇ ಪ್ರಾಣಿ ಹೆಚ್ಚೆಂದರೆ ಐದು ನಿಮಿಷ ಕೂಡ ಬದುಕಲಾರದು. ಆದರೂ ಈ ಜಿಂಕೆ ನಡೆದುಕೊಂಡೇ ಬರಲು ಕಾರಣ, ಬಾಬಣ್ಣನ ಮದ್ದಿನ ಪವಾಡ!

ಹೌದು, ಬಾಬಣ್ಣ ಬರಿ ಬೇಟೆಯಷ್ಟೇ ಅಲ್ಲದೆ, ಓವಿ ವಿದ್ಯೆ ಎಂದು ಕರೆಯುವ ಕೆಲವು ಮಾಯಾವಿ ಮದ್ದು, ಗಿಡಮೂಲಿಕೆ ಬಳಕೆಯಲ್ಲೂ ಪ್ರವೀಣ. ಹಾಗಾಗಿ ಆತ ಶಿಕಾರಿ ಮಾಡಿದ ಪ್ರಾಣಿಯನ್ನು ಬಹಳಷ್ಟು ಬಾರಿ ಹೊತ್ತುಕೊಂಡು ಬರುವ ಹರಸಾಹಸ ಮಾಡುವ ಪ್ರಮೇಯವೇ ಇರುತ್ತಿರಲಿಲ್ಲ. ಬೇಟೆಯಾದ ಹೊತ್ತಲ್ಲಿ ಜತೆಗೆ ಒಬ್ಬಿಬ್ಬರು ಮಾತ್ರವಿದ್ದು, ಅವರಿಂದ ಪ್ರಾಣಿಯನ್ನು ಹೊತ್ತ್ಯೊಯ್ಯುವುದು ಸಾಧ್ಯವಿಲ್ಲ ಎನಿಸಿದರೆ, ಕೂಡಲೇ ನಾಲ್ಕಾರು ಮಾರು ಕಾಡಿನಲ್ಲಿ ಅಲೆದು ತನಗೆ ಮಾತ್ರ ಗೊತ್ತಿರುವ ಯಾವುದೋ ಗಿಡದ ಎಲೆಯನ್ನು ಕಿತ್ತುಕೊಂಡು ಅಂಗೈಯಲ್ಲೇ ತಿಕ್ಕಿ ರಸ ಒಸರುವ ಎಲೆಯ ಮದ್ದನ್ನು ಪ್ರಾಣಿಗೆ ಗುಂಡು ತಾಗಿದ ಗಾಯಕ್ಕೆ ಉದುರಿ ಹೋಗದಂತೆ ತುರುಕಿದರೆ ಮುಗಿಯಿತು! ಏನೆಂದರೆ, ಬಾಬಣ್ಣ ಮದ್ದು ಹಾಕುವವರೆಗೆ ಪ್ರಾಣಿ ಕನಿಷ್ಟ ಉಸಿರಾಡುತ್ತಿರಬೇಕು!

ಇದೇ ತಂತ್ರದಲ್ಲೇ ಬಾಬಣ್ಣ ಎಷ್ಟೋ ಜಿಂಕೆ, ಕಡವೆ, ಕಾನುಕುರಿಗಳನ್ನು ನಡೆಸಿಕೊಂಡು ಬಂದಿದ್ದನ್ನು ಕಂಡವರು ನಮ್ಮ ದೊಡ್ಡಪ್ಪನಂತೆಯೇ ನಮ್ಮೂರಿನ ಹಲವರು ಈಗಲೂ ಇದ್ದಾರೆ. ಅಷ್ಟೇ ಅಲ್ಲ, ಬಾಬಣ್ಣನ ಇಂತಹ ಸಾಹಸಗಳನ್ನು ಬಹುತೇಕ ತ್ಯಾಗರ್ತಿ, ಗೌತಮಪುರ, ಚೆನ್ನಶೆಟ್ಟಿಕೊಪ್ಪ ಮುಂತಾದ ಆನಂದಪುರ ಹೋಬಳಿಯ ನೂರಾರು ಮಂದಿ ಈಗಲೇ ನೆನಪಿಸಿಕೊಳ್ಳುತ್ತಾರೆ. ಬಾಬಣ್ಣನ ಅಂತಹ ಪವಾಡಸದೃಶ ಸಾಹಸಗಳಲ್ಲಿ ಪ್ರಾಣಿಗಳನ್ನು ಕಾಡಿನಲ್ಲಿ ತಾನಿರುವಲ್ಲಿಗೇ ಕರೆದು ಬೇಟೆಯಾಡುವುದು ಕೂಡ ಮದ್ದಿನ ನಡಿಗೆಯ ಸಾಹಸದಷ್ಟೇ ಕುತೂಹಲಕರ!
————–

ಭೂತ ಬಂಗ್ಲೆ ಮತ್ತು ಕೆನತ್ ಆಂಡರ್ಸನ್

P1060058ಹೊಚ್ಚಿಕೊಂಡಿದ್ದ ಕರಿ ಕಂಬಳಿಯ ಸರಿಸಿ ಕಣ್ಣು ತೆರೆದರೆ ಸುತ್ತ ಕಗ್ಗತ್ತಲು! ಮೇಲೆ ಆಕಾಶವಿಡೀ ಅಗಣಿತ ತಾರಾಗಣ!! ಹೊಳೆವ ತಾರೆಗಳಲ್ಲಿ ಗೊತ್ತಿರುವ ಕೂರಿಗೆ ಸಾಲು, ಸಪ್ತಋಷಿ ಮಂಡಲಗಳನ್ನು ಹುಡುಕಿದೆ. ಆಗಲೇ ಅವೆಲ್ಲಾ ಸೂರ್ಯ ಕಂತುವ ದಿಕ್ಕಿಗೆ ವಾಲಿದ್ದವು. ಅಂದರೆ ರಾತ್ರಿ ಎರಡೋ- ಮೂರು ಗಂಟೆಯಾಗಿದೆ ಎಂದುಕೊಂಡೆ. ಅಷ್ಟರಲ್ಲೇ ಗೂಬೆ ಕೂಗಿದ ಸದ್ದು! ಸಣ್ಣಗೆ ಮೈ ನಡುಗಿತು. ಎಲ್ಲೋ ಮನದ ಮೂಲೆಯಲ್ಲಿ ಹುದುಗಿ ಹೋಗಿದ್ದ ಭೂತ ಬಂಗ್ಲೆಯ ನೆನಪು ದುತ್ತೆಂದು ಬಂತು… ನಡುಗುವ ಮೈ ಬೆವರತೊಡಗುತ್ತಿದ್ದಂತೆ ನಿಧಾನಕ್ಕೆ ಪಕ್ಕಕ್ಕೆ ನೋಡಿದೆ. ಮಲಗುವ ಮುಂಚೆ ಉರಿಯುತ್ತಿದ್ದ ಬೆಂಕಿ ಆರಿಹೋಗಿತ್ತು. ಆದರೆ, ಒಂದೆರಡು ಕೆಂಡಗಳು ಮಾತ್ರ ಮಿನುಗುತ್ತಿದ್ದವು. ಬೆಂಕಿಯ ಆಚೆ ಬದಿ ಮಲಗಿದ್ದ ಕೃಷ್ಣಣ್ಣ ಜೋರು ಗೊರಕೆ ಹೊಡೀತಿದ್ದ ಆಕಾಶಕ್ಕೆ ಮುಖಮಾಡಿ ನಕ್ಷತ್ರಗಳಿಗೇ ತಿದಿಯೊತ್ತುವಂತೆ!

ಅವನ ನಿದ್ರೆ, ಆರಿದ ಬೆಂಕಿ, ಆಕಾಶವಿಡೀ ಹರಡಿದ್ದ ತಾರೆಗಳ ರಾಶಿ,.. ಊಹೂಂ ಯಾವುದೂ ಮನಸ್ಸನ್ನು ಹಿಡಿದಿಟ್ಟುಕೊಳ್ಳದಾದವು!
ಭೂತ ಬಂಗ್ಲೆಯ ನೆನಪಾಗುತ್ತಿದ್ದಂತೆ ಅಜ್ಜಿ, ಅವ್ವ, ದೊಡ್ಡಣ್ಣ, ಕೃಷ್ಣಣ್ಣ, ಕುರಿ ಅಣ್ಣಪ್ಪ,.. ಹೀಗೆ ಎಲ್ಲ ವರ್ಷಗಳಿಂದ ಯಾವ-ಯಾವುದೋ ನೆಪದಲ್ಲೆಲ್ಲ ಹೇಳಿದ ಅದರ ರೋಚಕ ಕಥೆಗಳೇ ತಲೆ ತುಂಬ ಕುಣಿಯತೊಡಗಿ, ನಿದ್ದೆ ಎಂಬುದು ಬೆದರಿ ಹೋಯಿತು!

ಭತ್ತದ ಒಕ್ಕಲ ಕಣದಲ್ಲಿ ರಾಶಿ ಕಾಯಲು ಮನೆಯಾಳು ಕೃಷ್ಣಣ್ಣನ ಜತೆ ಮಲಗಿದ್ದ ನನಗೆ ಆಗಿನ್ನೂ ಹನ್ನೆರಡು ವರ್ಷ. ದೊಡ್ಡ ಬಯಲಿನ ನಡುವೆಯ ಕಣದ ಮೂಲೆಯಲ್ಲಿ ಮಾಗಿ ಚಳಿಯಲ್ಲಿ ಬೆಚ್ಚಗೆ ಬೆಂಕಿ ಕಾಯಿಸು‍ತ್ತಾ ಅಕ್ಕಪಕ್ಕದ ಕಬ್ಬಿನಗದ್ದೆಯಿಂದ ಕಬ್ಬು ಕದ್ದು ತಂದು ತಿನ್ನುತ್ತಾ ಕೃಷ್ಣಣ್ಣ ಹೇಳುತ್ತಿದ್ದ ಕಥೆ ಕೇಳುವುದೇ ಸಂಭ್ರಮ. ಕಣದ ಮಜಾಕ್ಕಾಗಿ ಮನೆಯವರ ಮಾತು ಕೇಳದೆ ಸಂಜೆಯಾಗುತ್ತಲೇ ಕಂಬಳಿ ಹೊದ್ದು ಕೃಷ್ಣಣ್ಣನೊಂದಿಗೆ ಕಣದ ಹಾದಿ ಹಿಡಿಯುವುದು ನನಗಾಗ ಅನುದಿನದ ಖುಷಿ, ಮನೆಯವರಿಗೆ ರಗಳೆ!

ಕಬ್ಬು, ಕಥೆ, ಕಣದ ಬಿಳಿಹುಲ್ಲಿನ ಬಣವೆಯಿಂದ ಬರುವ ಬೆಚ್ಚನೆ ಗಾಳಿ, ಬಯಲ ಕಮ್ಮನೆ ವಾಸನೆಗಳ ಸೆಳೆತದಲ್ಲಿ ಕಣಕ್ಕೆ ಹೊರಡುವಾಗ, ಕಣದ ಪಕ್ಕದ ಹೊಳೆಯಾಚೆಯ ಬಯಲ ಅಂಚಿನ ಭೂತ ಬಂಗ್ಲೆ, ಬೆಚ್ಚಿಬೀಳಿಸುವ ಅದರ ದೆವ್ವದ ನೆನಪು ಮರೆತೇಹೋಗಿರುತ್ತಿತ್ತು. ಹೀಗೆ ರಾತ್ರಿ ಎಲ್ಲೋ ಎಚ್ಚರಾದರೆ ಮಾತ್ರ ದಿಢೀರ್ ಮುತ್ತುವ ಬಂಗ್ಲೆಯ ಭಯಾನಕ ರೂಪಗಳು ಕೊರೆವ ಮಾಗಿ ಚಳಿಯಲ್ಲೂ ಮೈ ನೀರಾಗಿಸುತ್ತಿದ್ದವು.

ಅಷ್ಟಕ್ಕೂ ಅದು ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾಗಿದ್ದ ಕಾಡಂಚಿನ ಬಂಗ್ಲೆ. ಊರವರ ಬಾಯಲ್ಲಿ ಬ್ರಿಟಿಷ್ ಬಂಗ್ಲೆಯಾಗಿದ್ದರೂ ಅದರ ದೆವ್ವದ ನಂಟಿನ ಕಾರಣಕ್ಕಾಗಿ ಮಕ್ಕಳ ಬಾಯಲ್ಲಿ ಭೂತಬಂಗ್ಲೆಯಾಗಿತ್ತು. ಬರಮಂಡ ಗದ್ದೆ ಬಯಲಿನ ನಡುವೆ ಹರಿವ ಕಲ್ಲುಸಾರದ ಹೊಳೆ ಈಚೆ ಬದಿ ಸಂಪಳ್ಳಿ, ಕೋಟೆಕೊಪ್ಪ ಊರುಗಳಾದರೆ, ಆಚೆ ಬದಿ ದೆವ್ವ-ಭೂತ-ರಣಗಳ ಅಟ್ಟಹಾಸಕ್ಕೇ ನನ್ನ ವಾರಿಗೆಯವರ ಮನಸ್ಸಲ್ಲಿ ಕುಖ್ಯಾತಿ ಗಳಿಸಿದ್ದ ಕುಡಿಗೆರೆ!

ಹೊಳೆ ಈಚೆ ಬದಿಯಿಂದ ನಿಂತು ನೋಡಿದರೆ ಆಚೆ ಬದಿಯ ಕುಡಿಗೆರೆ ಯಾವ ಮನೆಗಳೂ ಕಾಣುತ್ತಿರಲಿಲ್ಲ. ಆದರೆ, ಊರಿನ ತುದಿಯಲ್ಲಿ ಹಸಿರು ಗಿಡ-ಮರಗಳ ನಡುವಿಂದ ಬಂಗ್ಲೆಯ ಮಂಗಳೂರು ಹೆಂಚಿನ ಕೆಂಪು ಬಣ್ಣ ಮಾತ್ರ ಅಲ್ಲಲ್ಲಿ ಹರಿದಂತೆ ಕಾಣುತ್ತಿತ್ತು! ಬೇಸಿಗೆಯಲ್ಲಿ ಅದರ ಅಕ್ಕ-ಪಕ್ಕದ ಮಾರ್ಗದಮರ(ಮೇ ಫ್ಲವರ್) ಹೂಬಿಟ್ಟಾಗ ಹೂವಿನ ಬಣ್ಣ, ಹೆಂಚಿನ ಬಣ್ಣ ಒಂದರೊಳಗೊಂದು ಬೆರೆತು ಬಂಗ್ಲೆ ಇದ್ದಕ್ಕಿಂತ ವಿಸ್ತಾರವಾಗಿ ಹರಡಿಕೊಂಡಂತೆ ಗೋಚರಿಸುತ್ತಿತ್ತು. ಆ ನೋಟ ಕಣ್ಣಿಗೆ ಬೀಳುತ್ತಲೇ ಹಗಲಲ್ಲೂ ಸಣ್ಣಗೆ ಬೆಚ್ಚುತ್ತಿದ್ದೆವು! ಹಾಗಿತ್ತು ದೊಡ್ಡವರು ಕಟ್ಟಿಕೊಟ್ಟಿದ್ದ ಬಂಗ್ಲೆಯ ದೆವ್ವ- ಭೂತಗಳ ಬಿಲ್ಡಪ್!

ಬ್ರಿಟಿಷರು ಸುಂಕ ವಸೂಲಿ, ಬೇಟೆ, ಪ್ರವಾಸಕ್ಕೆ ಬಂದಾಗ ಉಳಿದುಕೊಳ್ಳಲು ಈ ಬಂಗ್ಲೆ ಕಟ್ಟಿದ್ದರು. ಅವರು ದೇಶ ಬಿಟ್ಟು ಹೋದಮೇಲೆ ಬಂಗ್ಲೆ ಖಾಲಿ ಬಿದ್ದು, ಅನಾಥವಾಗಿ ಕೊಂಪೆಯಾದ್ದರಿಂದ ಈಗ ಅಲ್ಲಿ ರಣ, ದೆವ್ವ, ಭೂತಗಳೇ ವಾಸವಾಗಿವೆ. ಹಗಲು-ರಾತ್ರಿಯೆನ್ನದೆ ಬಂಗ್ಲೆಯೊಳಗೆ ವಿಚಿತ್ರವಾಗಿ ಸದ್ದು ಮಾಡುತ್ತವೆ. ರಾತ್ರಿ ಹೊತ್ತು, ಅದೂ ಅಮಾವಾಸೆ-ಹುಣ್ಣಿಮೆಯ ದಿನ ಕೈಯಲ್ಲಿ ದೊಂದಿ ಹಿಡಿದು ಭೂತಗಳು ಬಂಗ್ಲೆಯ ಸುತ್ತು ಕುಣಿಯುತ್ತವೆ. ದೆವ್ವ-ಭೂತಗಳನ್ನೆಲ್ಲ ಜೀತಕ್ಕಿಟ್ಟುಕೊಂಡಿರುವ ರಣವಂತೂ ದೊಂದಿ ಹಿಡಿದು ಬಂಗ್ಲೆಯಿಂದ ಹೊರಟು ಕುಡಿಗೆರೆಯ ಊರೊಳಗೆ ಹೂಂಕರಿಸುತ್ತಾ ಸುತ್ತುತ್ತದೆ. ಯಾರಾದರೂ ಮನೆಯ ಹೊರಗೆ ಅಂಗಳದಲ್ಲಿ, ಕಟ್ಟೆಯ ಮೇಲೆ ಮಲಗಿದ್ದರೆ ಅವತ್ತು ಅವರ ಕತೆ ಮುಗಿದಂತೆಯೇ… ಆದರೆ, ಕುಡಿಗೆರೆಯ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಅಲೆಯುವ ಅದು ಅಪ್ಪಿತಪ್ಪಿಯೂ ಹೊಳೆ ದಾಟಿ ಈಚೆ ಬದಿಗೆ ಬರುವುದಿಲ್ಲ. ಅದು ಈಕಡೆ ಸುಳಿಯದಂತೆ ನಮ್ಮೂರಿನ ಭೂತ ಕಾವಲು ಕಾಯುತ್ತೆ… ಹೀಗೆ ಒಂದೇ, ಎರಡೇ! ಭೂತ ಬಂಗ್ಲೆಯ ಮಹಿಮೆ ಬಣ್ಣಿಸುವ ಕಥೆಗಳು ಒಬ್ಬೊಬ್ಬರ ಬಾಯಲ್ಲಿ ಒಂದೊಂದು!

ನಮ್ಮಜ್ಜ ಮಾತ್ರ ಈ ಬಂಗ್ಲೆಯ ವರ್ತಮಾನದ ಭೂತಚೇಷ್ಠೆಯ ಕತೆಗಳಿಗೆ ಬದಲಾಗಿ, ಅವರ ಯೌವನದ ಕಾಲದಲ್ಲಿ ಈ ಬಂಗ್ಲೆಗೆ ಬಂದು ಉಳಿದುಕೊಳ್ಳುತ್ತಿದ್ದ ಬ್ರಿಟಿಷ್ ಅಧಿಕಾರಿಯ ಬೇಟೆಯ ಸಾಹಸ, ಅವರೊಂದಿಗೆ ಬೇಟೆಗೆ ಹೋಗುತ್ತಿದ್ದ ನಮ್ಮೂರಿನ ಹೊಳಗೋಡು ಸಾಬರು ಕಲಿತ ಬೇಟೆಯ ಪಾಠಗಳನ್ನು ಹೇಳುತ್ತಿದ್ದರು. ಆಗಲೂ ನಮಗೆ ಅಂತಹ ಬೇಟೆಗಾರ ಉಳಿದುಕೊಳ್ಳುತ್ತಿದ್ದ ಈ ಬಂಗ್ಲೆ ಮತ್ತಷ್ಟು ನಿಗೂಢವೆನಿಸುತ್ತಿತ್ತು!

ಕಣದಲ್ಲಿ ರಾತ್ರಿ ಬೆಚ್ಚಿಬಿದ್ದ ಬಳಿಕ ಮೂರ್ನಾಲ್ಕು ವರ್ಷಗಳಲ್ಲೇ ಹೈಸ್ಕೂಲು ಮುಗಿಸಿ ಕಾಲೇಜು ಓದಿಗೆ ಸಾಗರ ಪಟ್ಟಣ ಸೇರಿದ ಮೇಲೆ ನನಗೆ ಬಹುತೇಕ ಭೂತ ಬಂಗ್ಲೆ ಮರೆತೇ ಹೋಗಿತ್ತು. ಆ ಬಳಿಕ ಕಾಲೇಜಿನ ಬೇಸಿಗೆ ರಜೆಯಲ್ಲಿ ಮಾತ್ರ ಊರಿಗೆ ಹೋಗುತ್ತಿದ್ದ ನನಗೆ ಬಾಲ್ಯದ ದೆವ್ವ-ಭೂತದ ಕುತೂಹಲಗಳೆಲ್ಲಾ ಮುಗಿದು ಯೌವನದ ಹೊಸ ಜಗತ್ತು, ಸಾಹಿತ್ಯ, ವೈಚಾರಿಕತೆಯ ಹೊಸ ವಿಚಾರಗಳು ಹತ್ತಿರವಾಗುತ್ತಲೇ ಬಂಗ್ಲೆಯ ಬಗೆಗಿನ ಆಸಕ್ತಿಯೇ ಇಲ್ಲವಾಗಿತ್ತು. ಆ ನಡುವೆ ಬಂಗ್ಲೆಯನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದು ಸಂಪೂರ್ಣ ರಿಪೇರಿ ಮಾಡಿ ಚಿಕ್ಕ ಗೆಸ್ಟ್ ಹೌಸ್ ಮಾಡಿದೆ ಎಂಬ ವಿಷಯ ವಾರಿಗೆಯವರಿಂದಲೇ ಕಿವಿಗೆ ಬಿದ್ದಿತ್ತು.

ಆದರೆ, ಎಂದೂ ಭೂತದ ಬಂಗ್ಲೆಯನ್ನು ನೋಡಿರದ ನನಗೆ, ಡಿಗ್ರಿ ದಿನಗಳಲ್ಲಿ ಪೂರ್ಣಚಂದ್ರ ತೇಜಸ್ವಿಯವರ ‘ಬೆಳ್ಳಂದೂರಿನ ನರಭಕ್ಷಕ’ ಕಥೆ ಓದಿದ ಮೇಲೆ ನಮ್ಮಜ್ಜ ಹೇಳಿದ್ದ ಬ್ರಿಟಿಷ್ ಬೇಟೆಗಾರ ಈ ಕೆನತ್ ಆಂಡರ್ಸನ್ನೇ ಇರಬಹುದು ಎನ್ನಿಸಿತ್ತು. ಕೇಳೋಣವೆಂದರೆ ಅಜ್ಜ ಆಗಲೇ ಬಾರದ ಲೋಕಕ್ಕೆ ಹೋಗಿ ಎರಡು ವರ್ಷವೇ ಆಗಿತ್ತು! ಕೊನೆಗೆ ಆಂಡರ್ಸನ್ ಉಳಿದುಕೊಳ್ಳುತ್ತಿದ್ದ ಬಂಗ್ಲೆಯನ್ನಾದರೂ ನೋಡಬೇಕು ಎನಿಸಿತ್ತು! ಆದರೆ, ನಾನು ಹೋಗಿ ಆ ಬಂಗ್ಲೆ ನೋಡಿದ್ದು ಐದಾರು ವರ್ಷಗಳ ಬಳಿಕ.

ಆಗಲೂ ಬೀಗ ಜಡಿದಿದ್ದ ಗೆಸ್ಟ್ ಹೌಸನ್ನು ಹೊರಗಿನಿಂದಲೇ ನೋಡಿ ಒಂದು ರೀತಿಯ ಖುಷಿ, ಸಣ್ಣ ನಿಗೂಢತೆಯನ್ನು ಅನುಭವಿಸಿ ಬಂದಿದ್ದೆ! ಮುಂದಿನ ಬಾಗಿಲ ಮೇಲೆ ಬರೆದಿದ್ದ ಬಂಗ್ಲೆ ನಿರ್ಮಾಣದ ಇಸವಿಯನ್ನೂ ಗಮನಿಸಿ ಆಂಡರ್ಸನ್ ಉಳಿದುಕೊಂಡಿದ್ದು ಇಲ್ಲೇ ಇರಬಹುದೆಂದು ಹೆಮ್ಮೆ ಪಟ್ಟಿದ್ದೆ! ಆ ಹೊತ್ತಿಗಾಗಲೇ ಭೂತಬಂಗ್ಲೆಯ ರೋಚಕ ಕಥೆಗಳೆಲ್ಲಾ ಕಳಚಿ, ನನ್ನ ತಲೆಯೊಳಗೆ ಬ್ರಿಟಿಷ್ ಬೇಟೆಗಾರನ ಬೇಟೆಯ ಸಾಹಸಗಳಲ್ಲಿ ಕಂಡ ತ್ಯಾಗರ್ತಿ, ಬೆಳ್ಳಂದೂರು, ಈ ಬಂಗ್ಲೆಯಂಚಿನ ಬಯಲು, ನರಭಕ್ಷಕ ಹುಲಿಗಳೆರಡರ ಕಿತ್ತಾಟ, ತಟ್ಟಿ ಮನೆಗೆ ನುಗ್ಗಿ ಗಂಡ-ಹೆಂಡತಿ ಇಬ್ಬರನ್ನೂ ಹೊತ್ತೊಯ್ದ ಹೆಬ್ಬುಲಿಗಳ ಚಿತ್ರಗಳು ತುಂಬಿದ್ದವು.

ಇತ್ತೀಚೆಗೆ ಮತ್ತೆ ‘ಬೆಳ್ಳಂದೂರಿನ ನರಭಕ್ಷಕ’ವನ್ನು ಓದುವಾಗ ನಮ್ಮೂರಿನ ಸುತ್ತಮುತ್ತಲ ಊರುಗಳು, 1900ರ ಆಸುಪಾಸಿನಲ್ಲಿ ಅಲ್ಲಿದ್ದ ಕಾಡು, ಕಾಡುಪ್ರಾಣಿಗಳೆಲ್ಲ ಕಣ್ಣಿಗೆ ಕಟ್ಟಿದಂತೆ ಆ ಹೊತ್ತಿನ ಆ ಜಗತ್ತು ಮನದೊಳಗೇ ಪುನರ್ ಸೃಷ್ಟಿಗೊಂಡಿತ್ತು. ಅದೇ ಅಂಡರ್ಸನ್ ಜಗತ್ತಿನ ಅಮಲಿನಲ್ಲೇ ಮತ್ತೆ ಗೆಸ್ಟ್ ಹೌಸಿಗೆ ಹೋದಾಗ ನಿಜಕ್ಕೂ ಹೊಸ ಅನುಭವ! ಹಳೆಯ ವಿನ್ಯಾಸದ ಕಟ್ಟಡವನ್ನು ಹಾಗೇ ಉಳಿಸಿಕೊಂಡು ಕೇವಲ ಕುಸಿದುಬಿದ್ದಿದ್ದ ಮೇಲ್ಛಾವಣಿಯನ್ನು ಮಾತ್ರ ನವೀಕರಿಸಿದ್ದು, ನೂರು ವರ್ಷದ ಹಿಂದಿನ ಬಂಗ್ಲೆ ಇದೀಗ ಗೆಸ್ಟ್ ಹೌಸ್ ಎಂದಾಗಿದೆ ಅಷ್ಟೆ!

ಆದರೆ, ಅಲ್ಲಿನ ಮೇಟಿಗಾಗಲೀ, ಕುಡಿಗೆರೆಯ ಹೊಸ ತಲೆಮಾರಿನವರಿಗಾಗಲೀ ಈ ಗೆಸ್ಟ್ ಹೌಸಿನ ಭೂತ ಬಂಗ್ಲೆ ಪುರಾಣವಾಗಲೀ, ಅಂಡರ್ಸನ್ ಎಂಬ ವಿಶ್ವವಿಖ್ಯಾತ ಲೇಖಕ, ವನ್ಯಜೀವಿ ತಜ್ಞ ತಮ್ಮೂರಿನಲ್ಲಿ ಓಡಾಡಿದ್ದರ ಬಗ್ಗೆಯಾಗಲೀ ಏನೊಂದು ಗೊತ್ತಿಲ್ಲ! ಮೇಟಿ ಬಳಿ ನಾನಾಗೇ ಎಲ್ಲವನ್ನೂ ಹೇಳಿದ ಬಳಿಕ ಅವರು ತೇಜಸ್ವಿಯವರ ಪುಸ್ತಕದ ಹೆಸರು ಕೇಳಿ, ಸಾಧ್ಯವಾದರೆ ನೀವೇ ಒಂದು ಪ್ರತಿ ತಂದುಕೊಡಿ ಓದುತ್ತೇನೆ ಎಂದರು!

ಅಲ್ಲಿಂದ ನೇರ ಸಂಪಳ್ಳಿಯ ಮನೆಗೆ ಹೋದವನು, ಸಂಜೆ ಒಂದು ಕಾಲದಲ್ಲಿ ಸ್ವತಃ ಫೇಮಸ್ ಬೇಟೆಗಾರನಾದ ನಮ್ಮ ದೊಡ್ಡಪ್ಪನ ಬಳಿ ಹೋಗಿ ಆ ಬ್ರಿಟಿಷ್ ಬೇಟೆಗಾರ, ಹೊಳಗೋಡು ಸಾಬರ ಬೇಟೆಯ ಬಗ್ಗೆ ಕೇಳಿದೆ. ದೊಡ್ಡಪ್ಪ 80ರ ಇಳಿ ವಯಸ್ಸಿನ್ನಲ್ಲೂ 20ರ ಹರಯದ ಉತ್ಸಾಹದಿಂದ ತಾನು ಕೇಳಿದ ಅಂಡರ್ಸನ್ ಸಾಹಸವನ್ನೂ, ತನ್ನ ಬೇಟೆಯ ಗುರು ಹೊಳಗೋಡು ಸಾಬರ ಬೇಟೆಯ ರೋಚಕ ಕಥೆಗಳ ಸುರುಳಿ ಬಿಚ್ಚತೊಡಗಿದ!
———————-

ಸಂತೆ ನೆರೆದರೂ ಗಂಟು ಸಿಗಲಿಲ್ಲ!

moonlight-leaf

ದೊಡ್ಡ ಗುಂಪಲ್ಲಿ ಬರುತ್ತಿರುವ ಸೂಚನೆ ನೀಡುತ್ತಲೇ ನಮ್ಮ ಕುತೂಹಲವನ್ನು ಸ್ಫೋಟಿಸುತ್ತಿದ್ದ ಅವುಗಳ ಆಗಮನ ಅಂತೂ ಆಯಿತು. ನಾನು, ಅಣ್ಣಪ್ಪಣ್ಣ ಇಬ್ಬರೂ ಬಾಗಿ- ಬಾಗಿ ಕತ್ತು ನೀಚಿ ನೋಡಿ ಕತ್ತು ನೋವು ಬರುವಂತಾಗಿಬಿಟ್ಟಿತ್ತು. ಆದರೆ, ಒಮ್ಮೆ ಅವುಗಳ ದಂಡು ಕಂಡು ಎಲ್ಲ ನೋವೂ, ನಿರಾಶೆಗಳೂ ದೂರಾಗಿ, ನಾಟಕದ ಪರದೆ ಹಿಂದಿನಿಂದ ಪಾತ್ರದಾರಿಗಳು ರಂಗ ಪ್ರವೇಶಿಸಿದಂತೆ ಒಂದೊಂದೇ ಪ್ರತ್ಯಕ್ಷವಾಗುತ್ತಲೂ, ನಾವು ಅವುಗಳನ್ನು ಎಣಿಸುತ್ತಾ, ಅವುಗಳ ಆಕಾರದ ಮೇಲೆ ದೊಡ್ಡವು, ಮರಿ ಎಂದು ಅಂದಾಜಿಸತೊಡಗಿದೆವು. ಸುಮಾರು ಅರ್ಧ ಗಂಟೆ ಕಳೆದ ಮೇಲೆ ಅವುಗಳ ರೈಲು ಬೋಗಿಯಂತಹ ದಂಡಿನ ಯಾತ್ರೆ ಮುಕ್ತಾಯವಾಯಿತು. ಕಡಿಮೆ ಎಂದರೂ 30-35 ಹಂದಿಗಳಿದ್ದವು! ಅದರಲ್ಲೂ ಕೆಲವು ದಡಿಯಾ, ಕೆಲವು ಕುಳ್ಳಗೆ ಅಗಲಕ್ಕೆ ಬೆಳೆದಿದ್ದವು… ಅದಕ್ಕಿಂತ ಆಶ್ಚರ್ಯವೆನಿಸಿದ್ದೆಂದರೆ, ಒಂದೆರಡು ಬೂದು- ಬಿಳಿ ಹಂದಿಗಳೂ ಇದ್ದದ್ದು! ಜೊತೆಗೆ ಒಂದು ಕಂದು ಬಣ್ಣದ್ದು! ಅಲ್ಲಿಯವರೆಗೆ ಹಂದಿಗಳೆಂದರೆ ಕಪ್ಪಗೆ ಇರುತ್ತವೆ ಎಂದುಕೊಂಡಿದ್ದ ನನಗೆ ಬಿಳಿ- ಕಂದು ಹಂದಿ ನೋಡಿ, ವಿಚಿತ್ರ ಎನಿಸಿತು. ಮರುಕ್ಚಣವೇ ಯಾವುದೋ ದೆವ್ವ ಬೇರೆ- ಬೇರೆ ಪ್ರಾಣಿಗಳ ರೂಪದಲ್ಲಿ ಬಂದು ನಮ್ಮೂರಿನ ಕೆನತ್ ಆಂಡರ್ಸನ್ ಸಹಚರನೊಬ್ಬನಿಗೆ ಕಾಡಿಸಿದ ಕತೆ ನೆನಪಾಯಿತು. ಅರೆ,.. ಹೌದಲ್ಲ, ಇವು ನಿಜವಾದ ಹಂದಿಗಳೇ ಅಲ್ಲವಿರಬಹುದು, ನಮ್ಮೂರಿನ ಕೆರೆ ಎಂದರೆ ಮೊದಲೇ ಭೂತ- ದೆವ್ವಗಳ ಕಾಯಂ ಅಡ್ಡೆ,.. ಎಂದು ನೆನಪಾಗುತ್ತಲೇ ಮೈ ಜುಮ್ಮೆಂದಿತು.

ಅತ್ತ ಹಂದಿಯ ಹಿಂಡಿನಲ್ಲಿದ್ದ ಮರಿಗಳು ಚಿನ್ನಾಟ ಆಡುತ್ತಿದ್ದರೆ, ದೊಡ್ಡವು ಕೂಡ ಪರಸ್ಪರ ಕಚ್ಚುತ್ತಾ, ಒಂದನ್ನು ಇನ್ನೊಂದು ತಿವಿಯುತ್ತಾ ಕೆರೆಯ ನೀರಿಗಿಳಿದವು. ದೊಡ್ಡವು ನೀರಿಗಿಳಿದರೆ, ಚಿಕ್ಕ ಮರಿಗಳು ಮಾತ್ರ ದಂಡೆಯಲ್ಲೇ ಗಡ್ಡೆಗಳಿಗಾಗಿ ಉತ್ತುತ್ತಿದ್ದವು. ಹಂದಿಗಳೆಂದರೆ ಯಾವ ತಮಾಷೆ- ಮೋಜು ಇಲ್ಲದೆ ತಲೆ ಕೆಳಗೆ ಹಾಕಿಕೊಂಡು ಮುಸುಗುಡುತ್ತಾ ಹೋಗುವ ನೀರಸ ಪ್ರಾಣಿಗಳೆಂದುಕೊಂಡಿದ್ದ ನನಗೆ ಅವೂ ಇಷ್ಟೊಂದು ಮೋಜು ಮಾಡುತ್ತವಲ್ಲ ಎಂದು ಗೊತ್ತಾಗಿದ್ದೇ ಆಗ! ನಾನು ಹೀಗೆ ಅವುಗಳ ಮೋಜು- ಮಜಾ ಸವಿಯುತ್ತಿದ್ದರೆ, ಅಣ್ಣಪ್ಪಣ್ಣನ ಕೋವಿ ಸಿಡಿಯುವ ತವಕದಲ್ಲಿ ಗುರಿ ಕಾದಿತ್ತು… ನಮ್ಮಿಂದ ಸುಮಾರು 300 ಅಡಿ ದೂರದಲ್ಲಿ ಅವುಗಳ ಗುಂಪಿದ್ದರಿಂದ ಇನ್ನೂ ಹತ್ತಿರಕ್ಕೆ ಬರಲಿ, ಅದರಲ್ಲೂ ಭಾರೀ ಗಾತ್ರದ್ದಾಗಿದ್ದ ಬಿಳಿ ಒಂಟಿಗ ಸಿಗುತ್ತಾ ಎಂದು ಅವನು ಗುರಿ ಹಿಡಿಯುವುದು, ಬದಲಿಸುವುದು, ಕಾಯುವುದು ಮಾಡುತ್ತಿದ್ದ. ಬೆಳದಿಂಗಳ ರಾತ್ರಿಯ ನೀರವತೆಯಲ್ಲಿ ಹಂದಿ ಹಿಂಡಿನ ಗದ್ದಲ ಸೇರಿ ಇಡೀ ಕೆರೆಯಂಗಳ ಸಂತೆಯಂತಾಗಿತ್ತು. ಮೂರು ಎಕರೆ ವಿಸ್ತೀರ್ಣದ ಕೆರೆಯಂಗಳದಲ್ಲಿ ಒಂದು ತುದಿಯಿಂದ ಮತ್ತೊಂದು ತುದಿಯ ವರೆಗೂ ಈ ಹಿಂಡುಗಳೇ ಹರಡಿಬಿಟ್ಟಿದ್ದವು. ನೀರಲ್ಲಿ ಓಡುವುದು, ಒಂದನ್ನೊಂದು ಅಟ್ಟಿಸಿಕೊಂಡು ಕಚ್ಚಾಡುವುದು, ಕಿರ್ರೋ-ಪರ್ರೋ, ಗುರ್- ಗುಟುರ್ ಎನ್ನುತ್ತಾ ಗದ್ದಲದ ಪೈಪೋಟಿಯೇ ಅಲ್ಲಿ ನಡೆದಿತ್ತು. ಅಷ್ಟರಲ್ಲಿ ಮತ್ತೊಂದು ದಿಕ್ಕಿನಿಂದ ಐದಾರು ಹಂದಿಗಳ ಮತ್ತೊಂದು ಗುಂಪು ಕೆರೆಯಂಗಳಕ್ಕೆ ಇಳಿಯಿತು. ಆ ಗುಂಪು ಇಳಿಯುತ್ತಲೇ ಈ ಗುಂಪಿನ ಕೆಲವು ನಾಯಕ ಹಂದಿಗಳು ಒಂದು ಗುಟುರು ಹಾಕಿ ತಾವಿದ್ದೇವೆ ಹುಷಾರ್ ಎಂಬಂತೆ ಸೂಚನೆ ಕೊಟ್ಟವು. ಅದು ಅರ್ಥವಾಯಿತು ಎಂಬಂತೆ ಬಂದ ಹೊಸ ಗುಂಪು ಈ ಬಿಗ್ ಫ್ಯಾಮಿಲಿ ಕಡೆ ಬರದೆ ತುಸು ದೂರದಲ್ಲೇ ತಮ್ಮ ಚಟುವಟಿಕೆ ಸೀಮಿತಗೊಳಿಸಿಕೊಂಡವು. ಇದನ್ನೆಲ್ಲಾ ನೋಡುತ್ತಾ ನನಗೆ ಇದೇನು ನಾನು ಕನಸು ಕಾಣುತ್ತಿದ್ದೇನೋ, ನಿಜವಾಗಿಯೂ ನಡೆಯುತ್ತಿದೆಯೋ ಎಂಬಂತಹ ಸ್ಥಿತಿ.

ಅದಕ್ಕೆ ಸರಿಯಾಗಿ, ಕೆರೆಯಂಗಳಕ್ಕೆ ಸದ್ದಿಲ್ಲದೆ ಇಳಿದ ಏಳೆಂಟು ಜಿಂಕೆಗಳಿದ್ದ ಗುಂಪು ಮತ್ತಷ್ಟು ಕುತೂಹಲ ಮೂಡಿಸಿತು. ಆ ಗುಂಪಲ್ಲಿ ಎರಡು ಹೋರಿಗಳಿದ್ದು, ಉದ್ದನೆ ಕೊಂಬುಗಳಿದ್ದವು. ಕೊಂಬಿನ ಹರೆಗಳನ್ನು ಬಳುಕಿಸುತ್ತಾ ಅವು ಮುಂದಾಳುಗಳಾಗಿ ನಡೆಯುತ್ತಿದ್ದರೆ, ಹಿಂದೆ ಮೂರು ಬೋಳಿ(ಹೆಣ್ಣು ಜಿಂಕೆ)ಗಳು ಹಿಂಬಾಲಿಸುತ್ತಿದ್ದವು. ಅವುಗಳಿಗೂ- ಹಂದಿಗಳಿಗೂ ಮಾತ್ರ ಯಾವುದೇ ಭಿನ್ನಾಭಿಪ್ರಾಯಗಳಿದ್ದಂತೆ ಇರಲಿಲ್ಲ. ತಮ್ಮ ಪಾಡಿಗೆ ತಾವು ಬಂದು ನೀರು ಕುಡಿದು, ತಲೆ ಎತ್ತಿ ಒಮ್ಮೆ ಆಚೀಚೆ ಹಂದಿ ಹಿಂಡುಗಳ ಗಲಾಟೆಯನ್ನು ನೋಡಿ, ಗರುಕೆ ಹುಲ್ಲನ್ನು ನಿರ್ಭಯವಾಗಿ ಮೇಯತೊಡಗಿದವು. ಜಿಂಕೆಗಳ ಗುಂಪು ನಮ್ಮ ನೇರವಾಗಿ ಎದುರಿಗೇ ಮೇಯುತ್ತಿದ್ದವು, ಎಷ್ಟು ಸಮೀಪದಲ್ಲಿದ್ದವೆಂದರೆ, ಬೆಳದಿಂಗಳಲ್ಲಿ ಅವುಗಳ ಮೈಮೇಲಿನ ಚುಕ್ಕಿಗಳು ಸ್ಪಷ್ಟವಾಗಿ ಕಾಣುತ್ತಿದ್ದವು. ನನಗೋ ಜಿಂಕೆಗಳ ಕಂಡಿದ್ದೇ ಖುಷಿ. ಆದರೆ, ಅಣ್ಣನ ಬಂದೂಕು ಈಗ ಹಂದಿಯ ಕಡೆಯಿಂದ ಜಿಂಕೆಯೆಡೆಗೆ ತಿರುಗಿತ್ತು. ಆದರೆ, ಜಿಂಕೆಗಳು ಇದ್ದಕ್ಕಿಂತ ಒಮ್ಮೆ ಬೆದರಿ ಚದುರಿದವು. ನಮ್ಮನ್ನು ಗಮಿಸಿಬಿಟ್ಟಿರಬೇಕು ಎಂದು ನಾವಂದುಕೊಂಡು ಅಯ್ಯೋ ಇನ್ನು ಮುಗೀತು, ಇವು ಓಡುತ್ತವೆ, ಇವನ್ನು ಕಂಡು ಹಂದಿಗಳೂ ಓಡುತ್ತವೆ… ಇವತ್ತು ಬರಿ ಜಾಗರಣೆ ಅಷ್ಟೇ ಎಂದು ಅಣ್ಣಗೆ ಚಿಂತೆ. ನನಗೋ ಇನ್ನಷ್ಟು ಹೊತ್ತು ಇವುಗಳ ಆಟ ನೋವುವುದೂ ಮಿಸ್ ಆಯ್ತಲ್ಲ ಅಂತ ಬೇಸರ. ಥೂ… ಮಾರಾಯ… ಎಂದುಕೊಂಡು ಮತ್ತೆ ಮೌನ… ಅಷ್ಟ್ರರಲ್ಲಿ ಜಿಂಕೆಗಳು ನಮ್ಮತ್ತ ನೋಡದೆ, ಕಾಡಿನ ತುದಿ ಕಡೆ ನೋಡುತ್ತಾ ಬೆದರಿದಂತೆ ಕಂಡವು. ಹಾಗೇ ಜಿಂಕೆಗಳು ಬೆದರಿದಾಗ ಹೊಮ್ಮಿಸುವ ಎಚ್ಚರಿಕೆಯ ಸದ್ದನ್ನೂ ಹೊಮ್ಮಿಸಿದವು. ಅತ್ತ ಕಡೆ ಯಾವ ಪ್ರಾಣಿಯೂ ಕಾಣದೇ ಇದ್ದರೂ, ಯಾವುದೋ ಪ್ರಾಣಿ ದರಗೆಲೆಗಳ ಮೇಲೆ ಹೆಜ್ಜೆ ಹಾಕುತ್ತಿದ್ದ ಸದ್ದು ಕ್ಷೀಣವಾಗಿ ಕೇಳಿತು. ಅಣ್ಣ ಅದು ಯಾವುದಾದರೂ ಹುಲಿಯೋ- ಚಿರತೆಯೋ ಇರಬಹುದು, ಇಷ್ಟೊಂದು ಪ್ರಾಣಿಗಳು ಕೆರೆಯಂಗಳದಲ್ಲಿ ನಿತ್ಯ ನೆರೆಯುವ ಸೂಚನೆ ತಿಳಿದ ಅದು ಬೇಟೆಗೆ ಹೊಂಚುತ್ತಿರಬಹುದು ಎಂದುಕೊಂಡು ಮತ್ತಷ್ಟು ಚುರುಕಾದ. ಇದು ನಿರ್ಣಾಯಕ, ಈಗ ಬಿಟ್ಟರೆ, ಆ ಪ್ರಾಣಿ ಏನಾದರೂ ಈ ಯಾವುದಾದರೂ ಪ್ರಾಣಿಯ ಮೇಲೆ ದಾಳಿ ಮಾಡಿದರೆ ಅಲ್ಲಿಗೆ ಎಲ್ಲವೂ ಮುಗಿದಂತೆ, ಕೈಬೀಸಿಕೊಂಡು ಮನೆಗೆ ಹೋಗುವುದಷ್ಟೇ ಉಳಿಯುತ್ತದೆ ಎಂದುಕೊಂಡ ಆತ, ನನ್ನನ್ನೊಮ್ಮೆ ಕೇಳಿದ; “ನೋಡು, ಈಗ ಬಿಟ್ಟರೆ ಆಗಲ್ಲ, ದೊಡ್ಡದು ಸಣ್ಣದು ಅಂತ ಕಾಯೋಕಾಗಲ್ಲ, ಯಾವುದು ಹತ್ತಿರ ಸಿಕ್ಕುತ್ತೋ ಅದಕ್ಕೆ ಹೊಡೀತೀನಿ..” ಆಯ್ತ ಎಂದ.

ನಾನು,.. ಏನೂ ಹೇಳದೆ, ಎದುರಿನ ಜೀವ ಲೋಕದ ಅಚ್ಚರಿಗಳ ನಡುವೆ ಕಳೆದುಹೋದಂತಾಗಿದ್ದೆ. ಇರುವುದರಲ್ಲೇ ತುಸು ಹತ್ತಿರಕ್ಕೆ ಕಾಣಿಸುತ್ತಿದ್ದ ಜಿಂಕೆ ಹೋರಿಯೊಂದಕ್ಕೆ ಗುರಿ ಮಾಡುತ್ತಿರುವಷ್ಟರಲ್ಲೇ ಕಾಡಿನ ತುದಿಯತ್ತ ಹೋಗಿದ್ದ ಹಂದಿ ಮರಿಯೊಂದು ಚಿರ್ರೋ ಎಂದು ಕೂಗುತ್ತಾ ಕೆರೆಯ ನೀರಿನತ್ತ ನುಗ್ಗಿಬಂತು. ಅಷ್ಟೇ.. ಸಾಕಾಯ್ತು ಇಡೀ ಕೆರೆಯನ್ನೇ ಒಮ್ಮೆ ಹಿಡಿದು ಎತ್ತಿ ಕೊಡವಿದಂತೆ ಝರರ್ರರ್ರ… ಸದ್ದಾಯಿತು. ನೀರಿಗಿಳಿದ, ದಡದಲ್ಲಿದ್ದ ಜಿಂಕೆ- ಹಂದಿಗಳೆಲ್ಲಾ ಹಂದಿ ಮರಿ ಬೆದರಿದ ದಿಕ್ಕಿನ ವಿರುದ್ಧ ದಿಕ್ಕಿನತ್ತಾ ಭರ್ರನೆ ನುಗ್ಗಿದವು. ಕೆಲ ಕ್ಷಣದ ಬಳಿಕ ಕೆಲವು ಹಂದಿಗಳು ಮತ್ತೊಂದು ಬದಿಯಲ್ಲಿ ಮತ್ತೆ ನೀರಿಗಿಳಿದವು. ಆದರೆ, ಜಿಂಕೆ ಹಿಂಡು ಮಾತ್ರ ಪರಾರಿಯಾಯಿತು. ಆದರೆ, ಈಗ ಹಂದಿಗಳಿರುವ ಜಾಗ ನಮ್ಮಿಂದ ತೀರಾ ದೂರ. ಇನ್ನೇನು ಮಾಡುವುದು ಸಾಧ್ಯವಿಲ್ಲ ಎಂದುಕೊಂಡು ನಾವು ಮರಸು ಬಿಟ್ಟು ನಿಧಾನಕ್ಕೆ ಕೆಳಗಿಳಿದು ಕೆರೆಯ ದಂಡೆಯ ಆಚೆ ಬದಿಯಿಂದ ಅರ್ಧ ಸುತ್ತು ಹಾಕಿ ಬಂದು ಈಗ ಹಂದಿಗಳಿರುವ ಕಡೆ ಸಾಗಲು ಹೆಜ್ಜೆ ಹಾಕಿದೆವು. ಕೆರೆಯ ಏರಿಯ ಕೆಳಗಿನ ಗದ್ದೆ ಬಯಲಿಗೆ ಇಳಿಯುತ್ತಿದ್ದಂತೆ ಅಲ್ಲೂ ಮೂರು ಹಂದಿಗಳು ನಮ್ಮ ಸುಳಿವರಿತು ಪೇರಿ ಕಿತ್ತವು. ನನಗೆ ಇದೇನಿದು ಇವತ್ತು ಎಲ್ಲಿ ಹೋದರೂ ಇಷ್ಟೊಂದು ಪ್ರಾಣಿಗಳು ಕಾಣುತ್ತಿವೆಯಲ್ಲ ಎಂಬ ಅಚ್ಚರಿ… ಈ ಪ್ರಾಣಿಗಳ ಆಟ, ಜಿಂಕೆಗಳ ವಿಹಾರ, ಹಂದಿಗಳ ಗದ್ದಲ, ಇದೀಗ ಮತ್ತೆ ಮೂರು ಹಂದಿಗಳು ಓಡಿದ್ದು,.. ಎಲ್ಲಾ ಸೇರಿ ನಾನು ಯಾವುದೋ ಪ್ರಾಣಿಗಳ ರಾಜ್ಯದಲ್ಲಿರುವಂತೆ ನನಗೆ ಅನಿಸತೊಡಗಿತ್ತು. ಶಾಲೆಯಲ್ಲಿ ಆನಂದಪುರಂ ಟೆಂಟಿಗೆ ಕರೆದುಕೊಂಡು ಹೋಗಿ ತೋರಿಸಿದ್ದ ಪ್ರಾಣಿಗಳ ಸಿನೆಮಾದಂತೆಯೇ ಇಲ್ಲಿ ಇಲ್ಲವೂ ನಡೆಯುತ್ತಿರುವ ನೆನಪು ನನಗೆ..!

ಗದ್ದೆ ದಾಟಿ ಆಚೆ ಬದಿಯಿಂದ (ನಾವು ಮೊದಲು ಕೂತ ಜಾಗಕ್ಕೆ ಎದುರು ಭಾಗದಲ್ಲಿ ಈಗ ನಾವಿದ್ದೆವು) ಹಂದಿಗಳನ್ನು ಸಮೀಪಿಸುತ್ತಿದ್ದೆವು. ಅಣ್ಣಪ್ಪಣ್ಣ ಮುಂದೆ, ನಾನು ಆತನ ಹಿಂದೆ,.. ನನ್ನ ಕೈಯಲ್ಲಿ ಬಂದೂಕಿನ ಮದ್ದುಗುಂಡುಗಳ ಪುಟ್ಟ ಚೀಲ ಮತ್ತು ಕತ್ತಿ,… ಆತನ ಕೈಯಲ್ಲಿ ಬರೋಬ್ಬರಿ ನಾಲ್ಕು ಗುಂಟುಗಳನ್ನು ಹೊತ್ತ ಈಡುಗೋವಿ…! ಒಂದೇ ಒಂದು ಕಡ್ಡಿ ಮುರಿದ ಸದ್ದಾದರೂ ಹಂದಿಗಳು ನಮಗೆ ಚಳ್ಳೇ ಹಣ್ಣು ತಿನ್ನಿಸುವುದು ಗ್ಯಾರಂಟಿ. ಹಾಗಾಗಿ ಸದ್ದಾಗದಂತೆ, ಸರಸರನೆ ಹಜ್ಜೆ ಹಾಕುತ್ತಾ ಆತ ನಡೆಯುತ್ತಲೇ ಇದ್ದ. ನನಗೆ ಆ ಜಾಗವೆಲ್ಲ ಅಷ್ಟೊಂದು ಪರಿಚಯವಿರಲಿಲ್ಲ, ಬೆಳದಿಂಗಳಿದ್ದರೂ ಗಿಡಮರಗಳ ನೆರಳು, ಮುಳ್ಳು- ಬೊಡ್ಡೆಗಳ ದಾರಿ,.. ಆದರೆ, ಆಗ ಕಾಲಿಗೆ ಮುಳ್ಳು ನಾಟಿದರೂ ನಿಲ್ಲುವಂತಿರಲಿಲ್ಲ… ಹಾಗೆ ನೂರು ಅಡಿ ಕ್ರಮಿಸುತ್ತಲೇ ಅವ ನಿಲ್ಲುವಂತೆ ನನಗೆ ಸನ್ನೆ ಮಾಡಿದ. ನಾನು ನಿಂತೆ.. ಆತ ಗುರಿ ಹಿಡಿದುಕೊಂಡು ನಿಧಾನಕ್ಕೆ ಕೂತುಕೊಂಡೇ ಮುಂದೆ ಸರಿಯುತ್ತಿದ್ದ… ಕೆರೆಯಲ್ಲಿ ತಾವರೆ ಗಡ್ಡೆ ಕೀಳುತ್ತಿದ್ದ ಒಂಟಿಗ ಹಂದಿ ಆತನ ಗುರಿ! ಇನ್ನೇನು ಆತನ ಬಂದೂಕಿನ ಕುದುರೆ ಅದುಮಬೇಕು,… ಅನ್ನುವಷ್ಟರಲ್ಲಿ ಹಿಂದಿನಿಂದ ದೊಪ್ಪನೆ ಸದ್ದಾಯಿತು! ಹಂದಿ ಹಾರಿ ಜಿಗಿದು ಓಡಿದವು…. ಬಂದೂಕಿನ ಕುದುರೆಯನ್ನೇನೋ ಅದುಮಿದ… ಗುಂಡೂ ಸಿಡಿಯಿತು. ಆದರೆ, ಬಡಿದದ್ದು ಮಾತ್ರ ಹಂದಿಗಲ್ಲ…! ಎದುರಿನ ಮರಕ್ಕೋ, ಕಲ್ಲಾರೆಯ ಅಂಚಿಗೋ ಬಡಿದಿರಲೂ ಬಹುದು…!!

ಏಕೆಂದರೆ, ಗುರಿ ಇಟ್ಟು ಅವನು ಇನ್ನೇನು ಗುಂಡು ಹಾರಿಸುತ್ತಾನೆ ಎನ್ನುವಷ್ಟರಲ್ಲಿ ನನಗೆ ನನ್ನದೇ ಕಲ್ಪನೆಯಲ್ಲಿ ಬೇರೆಯದೇ ಘಟನೆಗಳು ನಡೆಯತೊಡಗಿದ್ದವು; ಅವನು ಗುಂಡು ಹಾರಿಸುವುದು,… ಅದು ಹಂದಿಯನ್ನು ಸಂಪೂರ್ಣ ಸಾಯಿಸದೇ ಅರೆಜೀವ ಮಾಡಿಬಿಡುವುದು, ಅದು ಗಾಯಗೊಂಡು ನಮ್ಮತ್ತ ನುಗ್ಗುವುದು, ಆಗ,..!? ಅವನ ಕೈಯಲ್ಲಿ ಬಂದೂಕಿದೆ,.. ಅವನೇನೋ ಪಾರಾಗುತ್ತಾನೆ.. ನಾನು? ನನ್ನ ಕೈಯಲ್ಲಿ ಏನಿದೆ? ಬರಿ ಒಂದು ಕತ್ತಿ, ಹಂದಿಯೇನಾದರೂ ನೇರವಾಗಿ ನುಗ್ಗಿದರೆ, ಅವನು ತಪ್ಪಸಿಕೊಂಡು ನಾನು ಅದರ ಬಾಯಿಗೆ ಸಿಗುವುದು ಗ್ಯಾರಂಟಿ… ಅಯ್ಯಪ್ಪ, ಮೊದಲೇ ನನಗೆ ಹಂದಿಯೆಂದರೆ ಭಯ,.. ಸರಿ, ನಿಧಾನಕ್ಕೆ ಗುಂಡು ಹಾರುವ ಮೊದಲೇ ಹತ್ತಿರದಲ್ಲಿದ್ದ ನೇರಲೇ ಮರ ಏರಿ ಬಿಡುವ ಎಂದುಕೊಂಡು ನಾನು ಅವನಿಗೆ ಗೊತ್ತಾಗದಂತೆ ಮರವೇರತೊಡತೊಡಗಿದೆ. ಇನ್ನೇನು ಮೇಲಿನ ಹರೆಯನ್ನು ಹತ್ತಬೇಕು,.. ಅಷ್ಟರಲ್ಲಿ ಕಾಲು ಜಾರಿತು… ದೊಪ್ಪನೆ ಕೆಳಗೆ ಬಿದ್ದೆ!!!

ನಾನು ದೊಪ್ಪನೆ ಬಿದ್ದ ಸದ್ದು ಕೇಳಿ ಅವನೂ ಭಯಬಿದ್ದು, ಅಚಾನಕ್ಕಾಗಿ ಬಂದೂಕಿನ ಕುದುರೆ ಅದುಮಿಬಿಟ್ಟಿದ್ದ! ಗುಂಡು ಗುರಿ ತಪ್ಪಿತ್ತು,.. ಹಂದಿ ಸಲೀಸಾಗಿ ಮಾಯವಾಯಿತು,… ಆಮೇಲಿನದ್ದೇನಿದ್ದರೂ ವಾಚಾಮಗೋಚರ ಶಾಪ… ಇನ್ನೆಂದೂ ನೀನು ನನ್ನೊಂದಿಗೆ ಬರಬೇಡ ಎಂಬ ಕಟ್ಟಾಜ್ಞೆ ಕೇಳಿಸಿಕೊಂಡು ಇಳಿರಾತ್ರಿಯ ಹೊತ್ತಲ್ಲಿ ಮನೆ ಹಾದಿ ಹಿಡಿದೆ. ಮನೆ ತಲುಪುವವರೆಗೂ ಅಣ್ಣಪ್ಪಣ್ಣನ ಸಿಟ್ಟು, ಶಾಪ ಮುಗಿದಿರಲಿಲ್ಲ…


(ಮೊದಲರ್ಧ ಬರೆದು ತುಂಬಾ ದಿನಗಳ ನಂತರ ಈ ಭಾಗ ಸೇರಿಸಿದ್ದೇನೆ. ಈ ದೀರ್ಘ ವಿಳಂಬಕ್ಕೆ ಕ್ಷಮೆ ಇರಲಿ, ನಾನೀಗ ನಮ್ಮೂರು ಸಂಪಳ್ಳಿಗೆ ಹತ್ತಿರದ ಶಿರಾಳಕೊಪ್ಪಕ್ಕೆ ಸ್ಥಳಾಂತರಗೊಂಡಿರುವುದರಿಂದ ಆ ಬ್ಯುಸಿಯಲ್ಲಿ ಬರವಣಿಗೆ ಮಾಡಲಾಗಿರಲಿಲ್ಲ,.. ಇನ್ನು ಯಥಾ ಪ್ರಕಾರ ಬರಹ ಮುಂದುವರಿಯಲಿದೆ,.. ಸೋಮಾರಿತನ ಬ್ರೇಕ್ ಹಾಕದಿದ್ದರೆ,.. ಇನ್ನು ನಿರಂತರ…)

ರೋಚಕ ರಾತ್ರಿಯ ಬೇಟ

12

 

 

 

 

 

 

 ಮೊನ್ನೆ ಊರಿಗೆ ಹೋದಾಗ ನಮ್ಮ ಮನೆ ಪಕ್ಕದ ಕೆರೆ ದುರಸ್ತಿ ಆಗಿ, ಹೂಳೆತ್ತಿ ಅಂತಿಮವಾಗಿ ಮೋರಿ ಕಟ್ಟುತ್ತಿದ್ದರು. ನೋಡೋಣ ಕೆಲಸ ಹೇಗೆ ಮಾಡಿದ್ದಾರೆ ಎಂದುಕೊಂಡು ಹೋದರೆ, ಬಿಡುಗಡೆಯಾದ ಹಣದಲ್ಲಿ ಅರ್ಧ ಕೂಡ ಕರ್ಚಾಗಿಲ್ಲ ಎಂಬುದು ಮೇಲ್ನೋಟಕ್ಕೇ ಗೊತ್ತಾಯಿತು. ರಾಜಕಾರಣಿಗಳ ಕುಮ್ಮಕ್ಕಿನ ಕಥೆ ಕೇಳಿಸಿಕೊಳ್ಳುತ್ತ ಮುಂದೆ ಹೋದಂತೆ ಕೆರೆಯ ಅಂಗಳದ ಸುತ್ತ ಹೂಳೆತ್ತಿದ ಮಣ್ಣನ್ನು ಕಟ್ಟೆ ಕಟ್ಟಿ, ಕಂದಕ ತೋಡಿರುವುದು ನೋಡಿ ಆಶ್ಚರ್ಯವಾಯ್ತು. ಅರೆ ಕೆರೆ ಇರುವುದೇ ಮನುಷ್ಯರೂ ಸೇರಿ ಎಲ್ಲರೂ ಬಳಸಲು, ಎಲ್ಲರೂ ಅಂದ್ರೆ ಅದರಲ್ಲಿ ಜಾನುವಾರು, ಕಾಡು ಪ್ರಾಣಿಗಳೂ ಸೇರುತ್ತವೆ. ಅದರಲ್ಲೂ ನಮ್ಮ ಈ ಕರೆ ಇರುವುದೇ ಕಾಡಿನ ನಡುವೆ, ಹಾಗಿರುವಾಗ ಅಲ್ಲಿಗೆ ಕಾಡಿನ ಜಿಂಕೆ, ಕಾಡುಕುರಿ, ಸೀಳುನಾಯಿ, ಕೆಲವೊಮ್ಮೆ ಕರಡಿ, ಮೊಲ, ಹಂದಿ, ಕಾಡುಕುರಿ,.. ಹೀಗೆ ಸಕಲ ಜೀವಜಂತುಗಳೂ ನೀರಿನ ದಾಹ ತೀರಿಸಿಕೊಳ್ಳಲು ಬರುವುದು ವಾಡಿಕೆ. ಬೇಸಿಗೆಯಲ್ಲಂತೂ ಸುತ್ತಲ ಹತ್ತಾರು ಮೈಲಿ ದೂರದಲ್ಲಿ ಈ ಕೆರೆಯೊಂದನ್ನು ಬಿಟ್ಟು ಇನ್ನೆಲ್ಲೂ ಕಾಡುಪ್ರಾಣಿಗಳಿಗೆ ನೀರೇ ಸಿಗದು. ಹಾಗಿರುವಾಗ ಹೀಗೆ ಕಂದಕ ತೆಗೆದು ಕಟ್ಟೆ ಕಟ್ಟಿದರೆ ಕಾಡುಪ್ರಾಣಿಗಳು, ಜಾನುವಾರುಗಳ ಗತಿ ಏನು ಯೋಚಿಸಿದೆ….

ಕಾಡುಪ್ರಾಣಿಗಳು ನೀರು ಕುಡಿಯಲು ಕೆರೆಗೆ ಬರುವುದನ್ನು ನೆನೆದು 20 ವರ್ಷದ ಹಿಂದಿನ ಒಂದು ರೋಚಕ ರಾತ್ರಿಯ ನೆನಪು ಬಿಚ್ಚಿಕೊಳ್ಳತೊಡಗಿತು….

ಆಗ ನಾನಿನ್ನೂ ಆರನೇ ಕ್ಲಾಸಲ್ಲಿದ್ದೆ ಅನ್ನಿಸುತ್ತೆ,.. ಅಜ್ಜಿ ಮನೆಯಲ್ಲಿದ್ದು ಓದುತ್ತಿದ್ದವನಿಗೆ ಬೇಸಿಗೆ ರಜೆ ಎಂದರೆ ಊರಿಗೆ ಹೋಗಿ ಕಾಡುಸುತ್ತುತ್ತಾ, ಹಣ್ಣು- ಜೇನು- ಕಾಡಿನ ಹಕ್ಕಿಗಳ ಮೊಟ್ಟೆ ಬೇಯಿಸಿ ತಿನ್ನುತ್ತಾ ಕಾಲ ಕಳೆಯುವುದೇ ಮೋಜು.. ಒಂದು ದಿನ ಮಧ್ಯಾಹ್ನ ಕೆರೆಯ ತಾವರೆ ಬೀಜ ತಿನ್ನಲು ಹೋದಾಗ ಅಣ್ಣಪ್ಪಣ್ಣ ಜಿಂಕೆ- ಕಾಡು ಹಂದಿಗಳು ನೆಲವನ್ನು ಉತ್ತಿದ್ದು ಕಂಡು ರಾತ್ರಿ ಬಂದು ಕಾದರೆ ಒಳ್ಳೆ ಬೇಟೆ ಮಾಡಬಹುದು ಎಂದು ಐಡಿಯಾ ಮಾಡಿದ. ಸರಿ ನನಗೂ ಒಂದು ಕೈ ನೋಡಿಬಿಡೋಣ. ಈ ರಜೆಯಲ್ಲಾದರೂ ಈ ಮರಸು (ರಾತ್ರಿ ಬೇಟಿಯಾಡುವವರು ಮರದ ಮರೆಯಲ್ಲಿ ಎತ್ತರದಲ್ಲಿ ಹಲಗೆ ಬಳಸಿ ಮಾಡುವ ಜಾಗ) ಕಾಯುವ ಮಜಾ ಅನುಭವಿಸಿಬಿಡುವ ಎಂದುಕೊಂಡೆ. ಸಂಜೆಯಾಗುತ್ತಲೇ ಮತ್ತೆ ಕೆರೆಗೆ ಹೋಗಿ, ಕೆರೆಯಂಚಿನ ಪೊದೆ ನೋಡಿ ಅದಕ್ಕೆ ಎರಡು ಹಲಗೆ ಹಾಕಿ ಮಲಗಲು- ಕೂರಲು ಅನುಕೂಲವಾಗುಂತೆ ಜಾಗ ಮಾಡಿಬಂದೆವು. ರಾತ್ರಿ ಎಂಟು ಗಂಟೆ ಸುಮಾರಿಗೆ ಊಟ ಮಾಡಿಕೊಂಡು ಹೆಡ್ ಬ್ಯಾಟರಿ ಕಟ್ಟಿಕೊಂಡು ಅಣ್ಣ ರೆಡಿಯಾದ. ನಾನು ಉಮೇದಿನಲ್ಲಿ ತಲೆಗೆ ಟವೆಲ್ ಕಟ್ಟಿಕೊಂಡು ಮದ್ದುಗುಂಡಿನ ಚೀಲ ಬಗಲಿಗೇರಿಸಿದೆ. ಅವ ಕೋವಿಗೆ ಈಡು(ಬುಲೆಟ್, ಮಸಿ ಎಲ್ಲವನ್ನೂ ತುಂಬಿ ಲೋಡ್ ಮಾಡುವುದು) ಮಾಡಿಕೊಂಡು ಹೆಗಲಿಗೇರಿಸಿದ. ಇಬ್ಬರೂ ಹೊರೆಟೆವು. ನಾನು, ದೊಡ್ಡಪ್ಪನ ಮನೆಗೆ ಹೋಗಿ ಬರುತ್ತೇನೆ ಎಂದು ಹೋದವ ಅಲ್ಲೇ ಊಟ ಮಾಡಿ ಮರಸು ಕಾಯಲು ಹೊರಟಿದ್ದೆನಾದ್ದರಿಂದ ನಮ್ಮ ಮನೆಯವರಿಗೆ ನಾನು ಈ ಸಾಹಸಕ್ಕೆ ಹೋಗುತ್ತಿರುವುದು ಗೊತ್ತಾಗದಂತೆ ಗುಟ್ಟಾಗಿ ನೋಡಿಕೊಂಡಿದ್ದೆ. ಏಕೆಂದರೆ, ನಾನು ಇಂತಹದ್ದಕ್ಕೆಲ್ಲ ಹೋಗುವುದು ಗೊತ್ತಾಗಿದ್ದರೆ ಅಪ್ಪ ಸರಿಯಾಗಿ ಭಾರಿಸುವುದು ಗ್ಯಾರಂಟಿಯಾಗಿತ್ತು.

ಸರಿ ಇಬ್ಬರೂ ಕೆರೆಯ ಬಳಿ ಹೋದೆವು. ಕೆರೆಯ ದಾರಿಯಲ್ಲಿ ಅವನಿಗೆ ಇವತ್ತು ಎಷ್ಟು ಜಿಂಕೆ- ಹಂದಿಗಳು ಬರಬಹುದು, ಬಂದರೆ ಹೇಗೆ ಅವನ್ನು ಉಡಾಯಿಸಬೇಕು ಎಂಬ ಯೋಚನೆಯಾದರೆ, ನನಗೆ ಹಬ್ಬಿದ ಬೆಳದಿಂಗಳ ನಡುವೆ ರಾತ್ರಿ ಹೊತ್ತಲ್ಲಿ ಕೆರೆ ಅಂಚಲ್ಲಿ ಕೂತು ಪ್ರಾಣಿಗಳನ್ನು ಸಾಕ್ಷಾತ್ ನೋಡುವ, ಬೇಟೆಯನ್ನು ಕಣ್ಣಾರೆ ಕಾಣುವ ಖುಷಿ, ಒಳಗೊಳಗೇ ಸಣ್ಣ ಭಯ… ಏಕೆಂದರೆ, ನನಗೆ ಹಂದಿ ಎಂದರೆ ಭಯ. ಅದರಲ್ಲೂ ಅದಕ್ಕೆ ಗುಂಡು ಹೊಡೆಯುವವನ ಜೊತೆಯಲ್ಲೇ ಇರುವುದು, ರಾತ್ರಿ ಹೊತ್ತಲ್ಲಿ…! ಅಬ್ಬಾ… ಆದರೂ ಒಂಥರಾ ಕೆಟ್ಟ ಕುತೂಹಲ ಬೇರೆ. ಸರಿ ನಾವು ಸಿದ್ಧಪಡಿಸಿದ ಪೊದೆ ತಲುಪಿಯಾಯಿತು…

ಪೊದೆ ಬಳಿ ಹೋಗುತ್ತಲೇ ಒಮ್ಮೆ ಕಾಲಿನಿಂದ ನೆಲವನ್ನು ಬಡಿದು, ಏನಾದರೂ ಹಾವು- ಹಪ್ಪರೆ ಇದ್ದರೆ ದೂರ ಹೋಗಲಿ ಎಂದು ಸದ್ದುಮಾಡಿದೆವು. ನಂತರ ಪೊದೆ ಏರಿ ಕೂತಾಯಿತು. ಅದೂ ಸದ್ದು ಮಾಡದೆ ಕೂರಬೇಕು. ಮಾತಾಡುವುದು ಕೂಡ ಗುಸು-ಗುಸು ಅಷ್ಟೆ. ಸುಮ್ಮನೆ ಕೂತರೂ ಆ ಪೊದೆ ಬೇರೆ ಕಟ-ಕಟ ಎನ್ನುತ್ತಲೇ ಇರುತ್ತದೆ. ಗಾಳಿ ಬಂದರೂ ಸದ್ದು ಮಾಡುವ ಅದರ ಮೇಲೆ ಇಬ್ಬರು ಕೂತು ಅತ್ತ- ಇತ್ತ ನೋಡುತ್ತಾ ಹೊರಳಾಡುತ್ತಿದ್ದರೆ ಇನ್ನೆಷ್ಟು ಸದ್ದಾಗದೆ ಇರದೆ..? !

ಒಂದು ಗಂಟೆ ಕಳೆಯಿತು…. ಚಂದ್ರ ಬೆಳಗುತ್ತಾ ಮೇಲೇರುತ್ತಲೇ ಇದ್ದಾನೆ. ನಿಧಾನಕ್ಕೆ ಮನೆಯ ಕಡೆಯ ಮಾತು- ಹಾಡು, ಸದ್ದೆಲ್ಲಾ ಅಡಗಿತು,.. ಮಿಣುಕು ಹುಳದಂತೆ ಹೊಳೆಯುತ್ತಿದ್ದ ಬೆಳಕೂ ಆರಿದವು. ಕೊಟ್ಟಿಯ ದನಗಳ ಕೊರಳ ಘಂಟೆ, ಲೊಡಗ, ಲೊಟ್ಟೆಗಳ ಸದ್ದು, ದೂರದ ಕಬ್ಬಿನ ಗದ್ದೆಯ ಕಡೆಯಿಂದ ಗೂಬೆಯ ಗುಟುರು,… ಪಕ್ಕದ ಊರಿನ ಕಡೆಯಿಂದ ಏನೆಲ್ಲಾ ರೀಮಿಕ್ಸ್ ಸದ್ದು,.. ಬಹುದೂರದ ಸಾಗರ ರಸ್ತೆಯ ‘ಕೌಲುಮರದ ಉಬ್ಬಿ’ನ (ಅಪ್) ಏರನ್ನು ಏದುಸಿರು ಬಿಡುತ್ತಾ ಏರುತ್ತಿದ್ದ ಲಾರಿಗಳ ಗೋಳಿನ ದನಿ,… ಹೀಗೆ ಸದ್ದುಗಳ ಹಿನ್ನೆಲೆಯ ನಡುವೆ ನಮ್ಮ ಕಾಯುವಿಕೆ ಮುಂದುವರಿಯಿತು.

11 ಗಂಟೆ ಸುಮಾರಿಗೆ ನನಗೆ ನಿದ್ದೆ ಬರಲಾರಂಭಿಸಿತು. ಆದರೆ, ಏನುಮಾಡುವುದು ನಿದ್ದೆಯ ಮಂಪರಿದ್ದರೂ ಕಣ್ಣು ಮುಚ್ಚಿದರೆ ನಿದ್ದೆ ಹಾರುತ್ತದೆ… ಎಲ್ಲಾದರೂ ಜಿಂಕೆಗಳು ಬಂದರೆ? ನಾನು ಎಚ್ಚರಾಗುವುದರಲ್ಲಿ ಓಡಿಹೋದರೆ? ಎನ್ನೋದು ಒಂದು ಯೋಚನೆಯಷ್ಟೆ. ಅದಕ್ಕಿಂತ ಕಾಡುತ್ತಿದ್ದದ್ದು ಮಲಗಿದ್ದಾಗ ಎಲ್ಲಾದರೂ ಅಣ್ಣ ಪ್ರಾಣಿ ಎಂದು ಯಾವುದಕ್ಕಾದರೂ ಗುಂಡು ಹಾರಿಸಿ, ಅದು ಹುಲಿಯೋ, ಚಿರತೆಯೋ ಆಗಿದ್ದು, ಮೈಮೇಲೆ ಜಿಗಿದರೆ…!!

ಅಬ್ಬಬ್ಬ ಹೀಗೆ ನೆನಪಿಸಿಕೊಳ್ಳುತ್ತಲೇ ಸಣ್ಣಗೆ ಬೆವರತೊಡಗಿದ್ದೆ. ಈ ನಡುವೆ ರಾತ್ರಿ ಏರುತ್ತಿದ್ದಂತೆ ಊರಿನ ಕಡೆಯ ಸದ್ದುಗಳೆಲ್ಲಾ ಮಾಸುತ್ತಾ, ನಮ್ಮ ಸುತ್ತಮುತ್ತಲ ಕಾಡಿನ ನಡುವಿನ ಸದ್ದುಗಳು ರಂಗೇರತೊಡಗಿದ್ದವು. ಪಕ್ಕದ ಮರದಲ್ಲಿ ಕೂತಿದ್ದ ಯಾವುದೋ ಹಕ್ಕಿ ಜರುಗಿದ್ದಕ್ಕೆ ಮುರಿದ ಒಣ ಕಡ್ಡಿ ಬಿದ್ದ ಸದ್ದು, ಆಚೆ ಬದಿಯ ಪೊದೆಯಂಚಲ್ಲಿ ಕಪ್ಪೆ ನೀರಿಗೆ ಜಿಗಿದ ಸದ್ದು, ಮತ್ತೊಂದೆಡೆ ಕಾಡಿನ ಕಡೆಯಿಂದ ಬರುತ್ತಿದ್ದ ಹಂದಿಯ ಗುಟುರು,… ಹೀಗೆ ಸದ್ದುಗಳಿಗೆ ಕಿವಿಯಾಗಿ ನಿದ್ದೆ ಮಂಪರಿಗೆ ಜಾರುತ್ತಿರುವಾಗಲೇ… ನಾವಿದ್ದ ಪೊದೆಯಿಂದ ನಾಲ್ಕೇ ಮಾರು ದೂರದಲ್ಲಿ ಸಟ- ಸಟ ಸದ್ದಾಗತೊಡಗಿತು,…! ಅಣ್ಣ ನಿಧಾನಕ್ಕೆ ಅತ್ತ ಕೋವಿ ಗುರಿ ಮಾಡುತ್ತಾ ಏನದು ಎಂದು ಕಣ್ಣಲ್ಲೇ ಶೋಧಿಸತೊಡಗಿದ…. ಲಂಟಾನ ಪೊದೆ, ಎತ್ತರದ ಮರದ ನಡುವಿನ ಬೆಳದಿಂಗಳ ನೆರಳ ನಡುವೆ ಏನೋ ಸರಿದಾಡುತ್ತಿದೆ ಎಂಬುದಂತೂ ಗೋಚರ.. ಆದರೆ ಏನದು? .. ದನಕರು ಇದ್ದರೂ ಇರಬಹುದು, ನಾಯಿ ಇದ್ದರೂ ಇರಬಹುದು, ನರಿ, ಹಂದಿ, ಜಿಂಕೆ,… ಯಾವುದು?!…

ಇನ್ನೇನು ಅದು ಮತ್ತಷ್ಟು ಸಮೀಪಿಸುತ್ತಿದೆ ಎನ್ನುವಾಗ, ಅವ ಹಿಂದಕ್ಕೆ ಬಾಗಿ ಹೊರಳಿದ. ನಾವಿದ್ದ ಪೊದೆ ಲಟಕ್ಕೆಂದು ಸದ್ದು ಮಾಡಿತು,.. ಅತ್ತ ಡಬಾರ್ ಎಂದು ಸದ್ದಿನೊಂದಿಗೆ ಆ ಪ್ರಾಣಿ ದಿಕ್ಕೆಟ್ಟು ಓಡಿತು.. ಅದು ಓಡುವ ರಭಸ ಹೇಗಿತ್ತೆಂದರೆ.. ನಮ್ಮಿಂದು ಬಹುದೂರ ಸಾಗುವವರೆಗೆ ಅದರ ಕರಪುಟದ ಸದ್ದು, ಓಟಕ್ಕೆ ಮುರಿಯುತ್ತಿದ್ದ ಲಂಟಾನದ ಸದ್ದು ಕೇಳುತ್ತಲೇ ಇತ್ತು. … ಇಬ್ಬರೂ ಪೊದೆಯನ್ನು ಶಪಿಸುತ್ತಾ ಏನಿರಬಹುದು ಅದು ಎಂದು ಚರ್ಚಿಸತೊಡಗಿದೆವು… ಗುಸುಗುಸು ಎನ್ನುತ್ತಲೇ…!!

ನಮ್ಮ ಮಾತು ಮುಂದುವರಿದಿರುವಾಗಲೇ ನಮ್ಮ ಎದುರಿನ ಬದಿಯ ಕೆರೆಯಂಗಳದ ಕೋಡಿಯ ಕಡೆಯಿಂದ ದಡ-ಬಡ ಸದ್ದಾಗತೊಡಗಿತು. ಏನೋ ಪ್ರಾಣಿಗಳು ಬರುತ್ತಿವೆ.. ಎಂಬುದಂತೂ ನಿಜ.. ಯಾವುದಿರಬಹುದು. ಒಂದಂತೂ ಅಲ್ಲ, ನಾಲ್ಕಾರು ಪ್ರಾಣಿಗಳೇ ಬರುತ್ತಿರುವ ಸದ್ಗ್ದು, ಲಂಟಾನ ಮುರಿಯುತ್ತಿವೆ, ನೆಲ ಜಾಡಿಸುತ್ತಿವೆ,.. ಒಂದಕ್ಮೊಂದು ಗುದ್ದಾಡುತ್ತಿವೆ,… ಹಾಗೆಲ್ಲಾ ಮಾಡುತ್ತ ಕೆರೆಯತ್ತಲೇ ಹೆಜ್ಜೆ ಹಾಕುತ್ತಿವೆ…..

ಏನಿರಬಹುದು.. ಕುತೂಹಲ.. ನಿರೀಕ್ಷೆ,… ನನಗೋ ಸಣ್ಣ ಭಯ- ಅಳುಕು….

(ಮುಂದುವರಿಯಲಿದೆ)